ಮರಿ ವೀರಪ್ಪನ್ ಮೆಟ್ಟೂರಲ್ಲಿ ಸೆರೆ

ಚಾಮರಾಜನಗರ: ನರಹಂತಕ, ಕಾಡುಗಳ್ಳ ವೀರಪ್ಪನ್ ಹತನಾದ ದಶಕಗಳ ಬಳಿಕ ಚಾಮರಾಜನಗರ ಜಿಲ್ಲೆಯ ಅಂಚಿನ ಕಾಡಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿದ್ದೆಗೆಡಿಸಿದ್ದ ಮರಿವೀರಪ್ಪನ್ ಶರವಣನನ್ನು ಬುಧವಾರ ಬೆಳಗ್ಗೆ ತಮಿಳುನಾಡಿನ ಮೆಟ್ಟೂರು ಪೊಲೀಸರು ಬಂಧಿಸಿದ್ದಾರೆ.
ಮೆಟ್ಟೂರು ಬಳಿ ಈತನನ್ನು ಸೆರೆ ಹಿಡಿದ ಪೊಲೀಸರು ನಂತರ ಸ್ಥಳೀಯ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಜು. 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಒಂದು ವರ್ಷದಿಂದ ಶರವಣ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಮಹದೇಶ್ವರ ಬೆಟ್ಟ ವನ್ಯಧಾಮ ಸೇರಿದಂತೆ ಬಿಆರ್ಟಿ ಹಾಗೂ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ನೆಲೆಸಿ ತನ್ನದೇ ಆದ ತಂಡ ರಚಿಸಿದ್ದ. ಮರಗಳ್ಳತನ ಹಾಗೂ ಬೇಟೆ ನಾಯಿಗಳನ್ನು ಇಟ್ಟುಕೊಂಡು ವನ್ಯಜೀವಿ ಬೇಟೆಯಲ್ಲಿ ತೊಡಗಿದ್ದ. ಪೊಲೀಸರಿಗೆ ತಲೆನೋವಾಗಿದ್ದ ಈತನ ಬಂಧನಕ್ಕೆ ಬಲೆ ಬೀಸುತ್ತಿದ್ದಂತೆ ಇಲ್ಲಿಂದ ಕಾಲ್ಕಿತ್ತು ಹುಟ್ಟೂರು ತಮಿಳುನಾಡಿನ ಮೆಟ್ಟೂರು ತಾಲೂಕಿನ ಓನಂಜಕೊರೈ ಎಂಬಲ್ಲಿ ವಾಸವಾಗಿದ್ದ.
ಚಾಮರಾಜನಗರ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಶರವಣ ಬಂಧಿಸಲು ಕಾರ್ಯಾಚರಣೆ ತೀವ್ರಗೊಳಿಸುವ ಮೂಲಕ ತಮಿಳುನಾಡಿನ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನೆರವನ್ನೂ ಕೋರಿದ್ದರು.
ಭಯಂಕರ ಕಾಡುಗಳ್ಳನಲ್ಲ: ಶರವಣನ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಮತ್ತು ಕಳ್ಳತನ ಆರೋಪದಡಿ ತಮಿಳುನಾಡಿನಲ್ಲಿ ಪ್ರಕರಣಗಳು ದಾಖಲಾಗಿವೆ. ಈತನೇನೂ ಭಯಂಕರ ಕಾಡುಗಳ್ಳನಲ್ಲ. ಇಲ್ಲಿ ಸಾಮಾನ್ಯರಂತಿದ್ದ. ಈಗ ಬಂಧಿಸಲಾಗಿದ್ದು, ಕರ್ನಾಟಕ ಪೊಲೀಸರಿಗೆ ಬೇಕಾದ ಸಹಕಾರ ನೀಡುವುದಾಗಿ ಸೆಲಂ ಎಸ್ಪಿ ಶಕ್ತಿವೇಲು 'ಕನ್ನಡಪ್ರಭ' ಕ್ಕೆ ತಿಳಿಸಿದ್ದಾರೆ.
ಗುಂಡಿನ ಕಾಳಗ ನಡೆದಿತ್ತು: ಏ.20ರಂದು ಕಾಡುಗಳ್ಳರ ಗುಂಪಿಗೂ ಅರಣ್ಯ ಇಲಾಖಾಧಿಕಾರಿಗಳ ಗುಂಪಿನ ನಡುವೆ ಗುಂಡಿನ ಕಾಳಗ ನಡೆದಿತ್ತು. ಆಗ ಶರವಣ ಅರಣ್ಯಾಧಿಕಾರಿಗಳ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ. ಮಹದೇಶ್ವರ ಬೆಟ್ಟದ ಅಧಿಕಾರಿಗಳು ಮೇ 24ರಂದು ಗಾಳಿಯಲ್ಲಿ ಗುಂಡು ಹಾರಿಸಿ ಇಬ್ಬರು ದಂತಚೋರರನ್ನು ಬಂಧಿಸಿದ್ದರು. ಈ ವೇಳೆ ಕಾಡುಗಳ್ಳರ 5 ಮಂದಿ ತಂಡ ಗುಂಡು ಹಾರಿಸಿ ಪರಾರಿಯಾಗಿದ್ದರು. ಬಳಿಕ ಎಸ್ಟಿಪಿಎಫ್ ಕಮಾಂಡೋ ಕರೆಸಿ ಕಾರ್ಯಾಚರಣೆ ನಡೆಸಿ ಶರವಣ ಬಂಧನಕ್ಕೆ ಜಾಲ ಬೀಸಿದ್ದರು.
ತಂಡದಲ್ಲಿ ಯಾರಿದ್ದರು?: ಶರವಣನ್ ತಂಡಕ್ಕೆ ರಾವಣನ್ ಉಪನಾಯಕ. ಶರವಣನ್ ಎಂಬ ಹೆಸರಿನ 15 ಬೇಟೆ ನಾಯಿಗಳನ್ನು ಸಾಕಿಕೊಂಡಿದ್ದ. ಅಲ್ಲದೆ ಕಾರೆಕಾಡು ಗ್ರಾಮದ ರಾಮರಾಜು, ಮೇಲುಸ್ವಾಮಿ, ತಂಗರಾಜು, ರಮೇಶ್, ಮಂಜರಿ, ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ಸೆಟು ಗೋವಿಂದರಾಜು, ಅಂಬಿಕಾ ಪಟ್ಟಿ ಗ್ರಾಮದ ಗೋವಿಂದರಾಜು ಹಾಗೂ ತಮಿಳುನಾಡಿನ ಪೆನ್ನಾಗರಂ ತಾಲೂಕಿನ ಗೋವಿಂದರಾಜು ಒಳಗೊಂಡಂತೆ 11 ಮಂದಿ ತಂಡವಿದ್ದು, ಇವರ ನಾಯಕ ಶರವಣಎಂದು ವಿಚಾರಣೆ ವೇಳೆ ಕರ್ನಾಟಕದ ಅರಣ್ಯಾಧಿಕಾರಿಗಳು ದೃಢಪಡಿಸಿದ್ದರು.
7 ಪ್ರಕರಣ ದಾಖಲು: ಶರವಣ ವಿರುದ್ಧ ಮಹದೇಶ್ವರ ಬೆಟ್ಟ ಠಾಣೆಯಲ್ಲಿ ಸೋಲಿಗ ಮಹಿಳೆ ಮೇಲೆ ಹಲ್ಲೆ, ಅರಣ್ಯ ಇಲಾಖೆಯಲ್ಲಿ ಆನೆ ದಂತ ಅಪಹರಣ, ಅಕ್ರಮ ಮಾರಾಟ, ಅತಿಕ್ರಮಣ ಅರಣ್ಯ ಪ್ರವೇಶ, ಮರಗಳ್ಳತನ ಸೇರಿದಂತೆ 7 ಪ್ರಕರಣಗಳು ದಾಖಲಾಗಿವೆ.
ದೇವರಾಜು ಕಪ್ಪಸೋಗೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


