ಪವಾಡ ನಡೆದಿಲ್ಲ ಅಕ್ಷತಾ ಬದುಕಿಲ್ಲ

ಬಿಜಾಪುರ: ಕೊನೆಗೂ ಪವಾಡ ನಡೆಯಲೇ ಇಲ್ಲ. ಎಲ್ಲರ ಹರಕೆ, ಪ್ರಾರ್ಥನೆ ಹೊರತಾಗಿಯೂ ಅಕ್ಷತಾ ಜೀವಂತವಾಗಿ ಮೇಲೆ ಬರಲೇ ಇಲ್ಲ.
ಮಂಗಳವಾರ ಸಂಜೆ ಬಿಜಾಪುರದ ನಾಗಠಾಣಾ ಗ್ರಾಮದ ತೋಟದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ನಾಲ್ಕು ವರ್ಷದ ಅಕ್ಷತಾ ಗುರುವಾರ ರಾತ್ರಿ ಶವವಾಗಿ ಹೊರಬಂದಿದ್ದಾಳೆ. 52 ಗಂಟೆಗಳ ಸತತ ರಕ್ಷಣಾ ಕಾರ್ಯಾಚರಣೆಯ ಹೊರತಾಗಿಯೂ ಅಕ್ಷತಾಳನ್ನು ಜೀವಂತವಾಗಿ ಹೊರತರುವ ಪ್ರಯತ್ನ ವಿಫಲವಾಗಿದೆ.
ರಾತ್ರಿ 10.50ರ ಸುಮಾರಿಗೆ ಸುರಂಗಮಾರ್ಗದ ಮೂಲಕ ಕೊಳವೆ ಬಾವಿ ತಲುಪಿದ ರಕ್ಷಣಾ ಕಾರ್ಯಕರ್ತರು ಬಾಲಕಿ ರಕ್ಷಿತಾಳ ಮೃತದೇಹದೊಂದಿಗೆ ಹೊರಬಂದಿದ್ದಾರೆ. ಊದಿಕೊಂಡಿದ್ದ ಸ್ವರೂಪದಲ್ಲಿದ್ದ ಅಕ್ಷತಾಳ ಮೃತ ದೇಹವನ್ನು ನೇರವಾಗಿ ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶವ ಪರೀಕ್ಷೆ ಬಳಿಕ ಪೋಷಕರಿಗೆ ಒಪ್ಪಿಸಲಾಗುವುದು ಎಂದು ಜಿಲ್ಲಾ ಸರ್ಜನ್ ಆರ್.ಎಂ. ಸಜ್ಜನ್ ತಿಳಿಸಿದ್ದಾರೆ.
ಆಸೆ ಕೈಬಿಟ್ಟಾಗಿತ್ತು: ಅಕ್ಷತಾ ಬದುಕುಳಿಯುವ ಆಸೆಯನ್ನು ಬುಧವಾರ ಸಂಜೆಯ ಹೊತ್ತಿಗಾಗಲೇ ಕೈಬಿಡಲಾಗಿತ್ತು. ಆಕೆ ಬದುಕುಳಿಯಬೇಕಾದರೆ ಪವಾಡವೇ ನಡೆಯಬೇಕು ಎಂದು ಅಧಿಕಾರಿಗಳ ಅಭಿಪ್ರಾಯವಾಗಿತ್ತು. ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಕೂಡ ಬಾಲಕಿ ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ಗುರುವಾರ ಸಂಜೆಯ ಹೊತ್ತಿಗೆ ರಕ್ಷಣಾ ಪಡೆಯ ಸದಸ್ಯರು ಸುರಂಗ ಮಾರ್ಗ ತೋಡಿ ಕೊಳವೆ ಬಾವಿ ಸಮೀಪಿಸುತ್ತಿದ್ದಂತೆ ದುರ್ವಾಸನೆ ಹೊರ ಬರುತ್ತಿತ್ತು.
ಫಲಿಸದ ಪ್ರಾರ್ಥನೆ
ನಾಯಿಯಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಅಕ್ಷತಾ ಜೀವಂತವಾಗಿ ಮೇಲೆದ್ದು ಬರಲಿ ಎಂದು ರಾಜ್ಯಾದ್ಯಂತ ಜಾತಿ, ಧರ್ಮ ಭೇದ ಮರೆತು ಸಾರ್ವಜನಿಕರು ಪ್ರಾರ್ಥನೆ ನಡೆಸಿದ್ದರು. ಆದರೆ, ಇದ್ಯಾವುದೂ ಫಲ ನೀಡಲೇ ಇಲ್ಲ. ಅಕ್ಷತಾ ಜೀವಂತವಾಗಿ ಮೇಲೆ ಬರಲೇ ಇಲ್ಲ. ಅಕ್ಷತಾ ತಲೆಕೆಳಗಾಗಿ ಬಿದ್ದಿದ್ದರಿಂದ ಕೊಳವೆ ಬಾವಿಯೊಳಗೆ ಬಿದ್ದ ಕೆಲವೇ ಗಂಟೆಯಲ್ಲಿ ಆಕೆ ಶವವಾಗಿದ್ದಳು ಎನ್ನುವುದು ಬಹುತೇಕರ ಅಭಿಪ್ರಾಯ. ಇದರ ಜತೆಗೆ, ಕಲ್ಲು, ಮಣ್ಣುಗಳೂ ಕೂಡ ಆಕೆಯ ಮೇಲೆ ಬಿದ್ದಿದ್ದರಿಂದ ಆಮ್ಲಜನಕ ಪೂರೈಕೆ ಅಸಾಧ್ಯವಾಗಿತ್ತು.
ಅರ್ಧಗಂಟೆ ಹೋರಾಟ
ಅಕ್ಷತಾ ರುಂಡ ಕಲ್ಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಕಲ್ಲಿನಿಂದ ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಅರ್ಧ ಗಂಟೆಗಿಂತ ಹೆಚ್ಚು ಸಮಯ ಒದ್ದಾಡಬೇಕಾಯಿತು. ಒಳಗೆ ಬಿದ್ದಾಗ ಆದ ಗಾಯದಿಂದಾಗಿ ಮುಖ, ಕೈ ಕಾಲು ಊದಿಕೊಂಡಿತ್ತು.
ಇಂದು ಅಂತ್ಯಸಂಸ್ಕಾರ
ಬಾಲಕಿಯನ್ನು ಮೇಲೆತ್ತಿದ ತಕ್ಷಣ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಂದ ಹುಟ್ಟೂರಾದ ಗುಲ್ಬರ್ಗಾ ಜಿಲ್ಲೆ ಜೀವರ್ಗಿ ತಾಲೂಕಿನ ವಸ್ತಾರೆ ಗ್ರಾಮಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಬೆಳಗ್ಗೆ 10 ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಮುಗಿಲು ಮುಟ್ಟಿದ ಆಕ್ರಂದನ
ಅಕ್ಷತಾ ಮೃತ ದೇಹ ನೋಡಿ ತಾಯಿ, ತಂದೆಗಳು, ಬಂಧುಗಳು ಗೋಳಾಡುತ್ತಿದ್ದ ದೃಶ್ಯ ಎಂಥ ಕಲ್ಲು ಹೃದಯವನ್ನೂ ಕಲಕುವಂತಿತ್ತು.
52 ಗಂಟೆ ಕಾರ್ಯಾಚರಣೆ
ಅಕ್ಷತಾ ಕೊಳವೆ ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಜಿಲ್ಲಾಡಳಿತ, ಎಸ್ಪಿ ಮತ್ತಿತರರು ತಕ್ಷಣ ಬಾವಿಗೆ ಆಕ್ಸಿಜನ್ ಬಿಟ್ಟು ಕಾರ್ಯಾಚರಣೆ ಆರಂಭಿಸಿದ್ದರು. ಕೊಳವೆ ಬಾವಿ ಪಕ್ಕದಲ್ಲಿ 35 ಅಡಿ ಆಳದ ಕಾಲುವೆ ತೋಡಿ ಅದಕ್ಕೆ 10 ಅಡಿ ವ್ಯಾಸದ ಸುರಂಗ ಮಾರ್ಗ ತೋಡಿ, ಕೊಳವೆ ಬಾವಿ ತಲುಪಿದ್ದರು. ಪುಣೆ, ಸಾಂಗ್ಲಿಯಿಂದ ಆಗಮಿಸಿದ್ದ ವಿಪತ್ತು ಪರಿಹಾರ ತಂಡದ 50 ಸದಸ್ಯರು, ಹಟ್ಟಿ ಚಿನ್ನದ ಗಣಿಯ 10 ಕಾರ್ಮಿಕರ ತಂಡ, ಐದು ಜೆಸಿಬಿ, ಐದು ಹಿಟಾಚಿ ವಾಹನಗಳ ಮೂಲಕ ಸತತ ಕಾರ್ಯಾಚರಣೆ ನಡೆಸಿದ್ದರು.
ಮಂಗಳವಾರ
- ಸಂಜೆ 6.30ಕ್ಕೆ ಬಾವಿಗೆ ಬಿದ್ದ ಅಕ್ಷತಾ
-ರಾತ್ರಿ 10ಕ್ಕೆ ರಕ್ಷಣಾ ಕಾರ್ಯ ಆರಂಭ
- ರಾತ್ರಿ 11ಕ್ಕೆ ಗುಂಡಿ ಅಗೆತ ಆರಂಭ
ಬುಧವಾರ
- ಬೆಳಗ್ಗೆ 7ಕ್ಕೆ ಹಟ್ಟಿ ಗಣಿ ತಜ್ಞರ ಆಗಮನ
- 11ಕ್ಕೆ ವಿಪತ್ತು ನಿರ್ವಹಣಾ ತಂಡ ಆಗಮನ
- ಮಧ್ಯಾಹ್ನ 3ಕ್ಕೆ ರೊಬೋಟ್ನೊಂದಿಗೆ ಮಣಿಕಂಠ ಆಗಮನ
- ಬೆಳಗ್ಗೆ 4ಕ್ಕೆ ರೊಬೋಟ್ ಕಾರ್ಯಾಚರಣೆ ಸ್ಥಗಿತ
- ರಾತ್ರಿ 11ಕ್ಕೆ ಶವದೊಂದಿಗೆ ಹೊರಬಂದ ರಕ್ಷಣಾ ಕಾರ್ಯಕರ್ತರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


