ಪ್ರಧಾನ ಸುದ್ದಿ

ಮಾದಪ್ಪನ ಊರಲ್ಲಿ ಅಧಿಕಾರಿಗಳ ಪವಾಡ!

ಮಾದಪ್ಪನ ಊರಲ್ಲಿ ಅಧಿಕಾರಿಗಳ ಪವಾಡ!
Published On :

ನಿರ್ಮಾಣವಾಗದ ಅಂಗನವಾಡಿಗೆ ಪೂರ್ಣ ಬಿಲ್, ದಾರಿಯೇ ಇಲ್ಲದ ಕುಗ್ರಾಮಕ್ಕೆ ಬೋರ್‌ ವೆಲ್ ಲಾರಿ ಹೋದದ್ದು ಹೇಗೆ? ವಿದ್ಯುತ್ ಸಂಪರ್ಕ ಇಲ್ಲದ ಊರಿಗೆ ವೈರಿಂಗ್ ಹೆಸರಲ್ಲಿ ಬಿಲ್ ಪಾವತಿ...
ಕೊಳ್ಳೇಗಾಲ:
ದಲಿತರೇ ವಾಸಿಸದ, ಅಸ್ತಿತ್ವದಲ್ಲೇ ಇಲ್ಲದ ಗ್ರಾಮಗಳಲ್ಲಿ ದಲಿತರಿಗಾಗಿ ಕಿರು ನೀರು ಸರಬರಾಜು ಯೋಜನೆ, ವಿದ್ಯುತ್ ಸಂಪರ್ಕವೇ ಇಲ್ಲದ ಕುಗ್ರಾಮಗಳಿಗೆ ವೈರಿಂಗ್...!
ಹೌದು, ಇದು ಪವಾಡ ಪುರುಷ ಮಾದಪ್ಪನ ನೆಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪವಾಡ!
ಲಾರಿ ಬಿಡಿ, ದ್ವಿಚಕ್ರ ವಾಹನವೂ ಸಂಚರಿಸಲಾಗದ ಕುಗ್ರಾಮಗಳಿಗೆ ಬೋರ್‌ವೆಲ್ ತೋಡಿಸುವ ಮೂಲಕ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನಲ್ಲಿ ಜಿ. ಪಂ. ಅಧಿಕಾರಿಗಳು ಪವಾಡ ಸೃಷ್ಟಿಸಿದ್ದಾರೆ! ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕುಗ್ರಾಮಗಳಾದ ತುಳಸಿಕೆರೆ, ತೊಕೆರೆ, ಮೆದುಗಿನಾಣೆ, ಮೆಂದರೆ, ನಾಗಮಲೈ, ಕೊಕ್ಕಬರೆ, ದೊಡ್ಡಡಾಣೆ, ಇಂಡಿಗನತ್ತ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಜನರ ಅರಿವಿಗೆ ಬಾರದೆ ಈ ಪವಾಡಗಳು ನಡೆಯುತ್ತಿವೆ.
ಅರಣ್ಯದಲ್ಲಿರುವ ಈ ಕುಗ್ರಾಮಗಳಿಗೆ ನಡೆದು ಸಾಗಬೇಕು. ಹೆರಿಗೆ ನೋವು ಕಾಣಿಸಿಕೊಂಡಾದ ಗರ್ಭಿಣಿಯರನ್ನು, ಅನಾರೋಗ್ಯಕ್ಕೊಳಗಾದವರನ್ನು 'ನ್ಯಾಣೆ' ಕಟ್ಟಿ ಹೊತ್ತು ಹೋಗಬೇಕಾದ ಪರಿಸ್ಥಿತಿ ಇದೆ. ಈ ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲ. ಆದರೂ ಅಧಿಕಾರಿಗಳು ಕಡತಗಳಲ್ಲಿ ಇಲ್ಲಿ ಬೋರ್ ಕೊರೆಸಿದ್ದಾರೆ(?). ಈ ಮೂಲಕ ಸರ್ಕಾರದ ಬೊಕ್ಕಸದಿಂದ ಲಕ್ಷಾಂತರ ರುಪಾಯಿ ಗುಳುಂ ಮಾಡಿದ್ದಾರೆ. ಈ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.
ಇಲ್ಲದ ಅಂಗನವಾಡಿ
ತಮ್ಮಡಿಗೇರಿ ಎಂಬ ಬಡಾವಣೆಯನ್ನೇ ದೊಡ್ಡ ಗ್ರಾಮ ಎಂಬಂತೆ ನಮೂದಿಸಿ ಬರಪರಿಹಾರ ಯೋಜನೆಯಡಿ ಗುತ್ತಿಗೆದಾರ ಮುತ್ತುಕುಮಾರಗೆ 3.38 ಲಕ್ಷ ಪಾವತಿಸಲಾಗಿದೆ. ನಿರ್ಮಾಣವೇ ಆಗದ ಅಂಗನವಾಡಿ ಕಟ್ಟಡಕ್ಕೆ ಕಕ್ಕೆಹೊಲದಲ್ಲಿ ಇದೇ ಗುತ್ತಿಗೆದಾರನಿಗೆ 5 ಲಕ್ಷ, ಮ.ಬೆಟ್ಟ ಸಮೀಪದ ಕೊಂಗನೂರು ಗ್ರಾಮದಲ್ಲಿ ಗುತ್ತಿಗೆದಾರ ರಾಜುಗೆ 3.90ಲಕ್ಷ ಅನುದಾನ ಪಾವತಿಸಲಾಗಿದೆ.

ಎಲ್ಲ ಬೇಡಗಂಪಣರು
ಕಾಡೋಲ ಗ್ರಾಮದಲ್ಲಿ 40 ಕುಟುಂಬ ವಾಸವಿದೆ. ಇವರಲ್ಲಿ ಶೇ. 99ರಷ್ಟು ಬೇಡಗಂಪಣ ಲಿಂಗಾಯಿತರು. ಶೇ.1ರಷ್ಟು ಗಿರಿಜನರು. ಆದರೆ ದಲಿತರ ಬೀದಿಯಲ್ಲಿ(ಎಸ್ಸಿ) 2012ರ ಡಿ. 21 ಹಾಗೂ ಡಿ.18ರಂದು ಬರಪರಿಹಾರ ಯೋಜನೆಯಡಿ ಕಿರು ನೀರು ಸರಬರಾಜು ಯೋಜನೆಗಾಗಿ 2.24 ಲಕ್ಷ ಪಾವತಿಸಲಾಗಿದೆ. ಕಾಮಗಾರಿ ನಿರ್ವಹಿಸಿದ್ದನ್ನು ಜಿಪಂ ಎಂಜಿನಿಯರ್ ಶೆಟ್ಟಿ, ಜೂನಿಯರ್ ಎಂಜಿನಿಯರ್‌ನ ಸತೀಶಚಂದ್ರ ದೃಢೀಕರಿಸಿ ಗುತ್ತಿಗೆದಾರ ಜಿ.ಮಹದೇವಸ್ವಾಮಿ ಅವರಿಗೆ ಬಿಲ್ ಪಾವತಿಸಲಾಗಿದೆ.

ಇಲ್ಲದ ಗ್ರಾಮಕ್ಕೆ ಯೋಜನೆ
ಇನ್ನೊಂದು ವಿಚಾರವೆಂದರೆ ಅಸ್ತಿತ್ವದಲ್ಲೇ ಇರದ ಗ್ರಾಮ ಗಳಲ್ಲಿನ ಯೋಜನೆಗಾಗಿ ಲಕ್ಷಾಂತರ ವೆಚ್ಚ ಮಾಡಲಾಗಿದೆ. ಹೊಸಕೋಟೆ ಎಂಬ ಊರೇ ಇಲ್ಲದಿದ್ದರೂ ಇಲ್ಲಿ ಬೋರ್ ವೆಲ್‌ಗಾಗಿ 1.70 ಲಕ್ಷ ವೆಚ್ಚಿಸಲಾಗಿದೆ. ಇಂಥವೇ ಪವಾಡಗಳು ಇಲ್ಲದ ಊರುಗಳ ಹೆಸರಲ್ಲಿ ಅಸಂಖ್ಯಾತ ನಡೆದಿವೆ!

ಬೋರ್ ಲಾರಿ ಪವಾಡ
ತುಳಸಿಕೆರೆಗೆ ಬೋರ್‌ಲಾರಿ ತೆರಳುವುದು ಅಸಾಧ್ಯದ ಮಾತು. ಹಾಗಿದ್ದರೂ ಗ್ರಾಮದಲ್ಲಿ 2012ರ ಮಾ.3ರಲ್ಲಿ ಗುತ್ತಿಗೆದಾರ ಮಾದೇಶಗೆ ಬೋರ್ ಕೊರೆಸಲು 1.33ಲಕ್ಷ ಅನುದಾನ ಪಾವತಿಯಾಗಿದೆ. ಅದೇ ವರ್ಷ ಡಿ.28ರಲ್ಲಿ ಗ್ರಾಮದಲ್ಲಿ ಕಿರು ನೀರು ಸರಬರಾಜು ಕಾಮಗಾರಿಗೆ 1.52 ಲಕ್ಷ ಪಾವತಿಯಾಗಿದೆ. ಜಿಪಂ ಅಧಿಕಾರಿಗಳ ಈ ಪವಾಡದ ಕುರಿತು ಸಮಗ್ರ ತನಿಖೆಯಾದರೆ ಈ ಹಿಂದೆ ನಡೆದ ಇನ್ನಷ್ಟು ಪವಾಡಗಳೂ ಬೆಳಕಿಗೆ ಬರುವ ಸಾಧ್ಯತೆ ಇದೆ.

ವೈರಿಂಗ್
ರಸ್ತೆ, ಕರೆಂಟ್ ಇಲ್ಲದ ತೊಕೆರೆ ಗ್ರಾಮದಲ್ಲಿ ಕಿರು ನೀರು ಸರಬರಾಜು ಯೋಜನೆ ವೈರಿಂಗ್‌ಗಾಗಿ ಎಲೆಕ್ಟ್ರಿಕಲ್ ರವಿ ಕುಮಾರ ಅವರಿಗೆ ಫೆ.24ರಂದು 30 ಸಾವಿರ ಪಾವತಿಸಲಾಗಿದೆ.


-ಎನ್. ನಾಗೇಂದ್ರಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.