ಪ್ರಧಾನ ಸುದ್ದಿ

ಶಿಕ್ಷಣ ಇಲಾಖೆ ಜಾಣಕುರುಡು

ಶಿಕ್ಷಣ ಇಲಾಖೆ ಜಾಣಕುರುಡು
Published On :

ಕ.ಪ್ರ.ವಾರ್ತೆ | ಬೆಂಗಳೂರು | ಜೂ.22
ಶಿಕ್ಷಣ ಇಲಾಖೆಗೆ ತನ್ನ ಗೌರವ ಉಳಿಸಿಕೊಳ್ಳಬೇಕೆಂಬ ಇರಾದೆ ಇದ್ದಂತಿಲ್ಲ. ಮಾನ-ಮರ್ಯಾದೆ ಎಂಬ ಶಬ್ದಗಳ ಅರ್ಥ ಗೊತ್ತಿಲ್ಲದಂತೆ ವರ್ತಿಸುತ್ತಿದೆ.
ಪ್ರತಿ ವರ್ಷವೂ ಒಂದಲ್ಲ ಒಂದು ಪ್ರಶ್ನೆಪತ್ರಿಕೆ ಬಹಿರಂಗವಾಗುತ್ತದೆ. ಒಂದಷ್ಟು ದಿನ ಮಾತನಾಡಿ ಮತ್ತೆ ಎಲ್ಲರೂ ರಗ್ಗು, ಕಂಬಳಿ ಹೊದ್ದುಕೊಂಡು ಗೊರಕೆ ಹೊಡೆಯುತ್ತಾರೆ. ಪರೀಕ್ಷಾ ನೀತಿಸಂಹಿತೆ ಜಾರಿ ಮಾಡುತ್ತೇವೆ ಎನ್ನುವುದೆಲ್ಲ ಬಾಯಿ ಮಾತಾಗೇ ಉಳಿಯುತ್ತದೆ. ಪ್ರತಿ ವರ್ಷವೂ ಇದೇ ಶಿವಕುಮಾರ್ ಎಂಬ ವ್ಯಕ್ತಿಯ ಅಕ್ರಮ ಜಾಲವೇ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡುತ್ತದೆ. ಆದರೆ ಶಿಕ್ಷಣ ಇಲಾಖೆ ಮಾತ್ರ ತಲೆಕೆಡಿಸಿಕೊಂಡಿಲ್ಲ. ಇಲಾಖೆಗೆ ಗೌರವ ಉಳಿಸಿಕೊಳ್ಳಬೇಕೆಂಬ ಜ್ಞಾನೋದಯವೂ ಆಗಿಲ್ಲ.
ಲಕ್ಷಗಟ್ಟಲೆ ವಿದ್ಯಾರ್ಥಿಗಳನ್ನು ಆತಂಕಕ್ಕೆ ತಳ್ಳಿ ಮೋಜು ಅನುಭವಿಸುವುದೇ ಇವರಿಗೆ ಖಯಾಲಿಯಾಗಿದೆ. 2012ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನದ ಮೂರು ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದಾದ ಬಳಿಕ 2013ರಲ್ಲಿಯೂ ತುಮಕೂರಿನಲ್ಲಿ ಇದೇ ಶಿವಕುಮಾರ್ ಪ್ರಶ್ನೆಪತ್ರಿಕೆ ಬಹಿರಂಗ ಮಾಡಿದ್ದ. ಇದಕ್ಕೂ ಮುಂಚೆ ಈತ ಒಟ್ಟು 4 ಪ್ರಕರಣಗಳಲ್ಲಿ ಸಿಕ್ಕಿಬಿದ್ದಿದ್ದಾನೆ. ಇವೆಲ್ಲ ವಿಚಾರ ಗೊತ್ತಿದ್ದರೂ ಈ ಬಾರಿ ಮೂರೂಮುಕ್ಕಾಲು ಲಕ್ಷ ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯುತ್ತಿದ್ದರೂ ಶಿಕ್ಷಣ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಜರುಗಿಸಿಯೇ ಇಲ್ಲ.
ಈತ ನಿವೃತ್ತ ಶಿಕ್ಷಕನಾಗಿರುವುದರಿಂದ ಇಲಾಖೆಯ ಒಳ ಹೊರವುಗಳನ್ನು ತಿಳಿದಿದ್ದಾನೆ. ಇಲಾಖೆಯ ಕೆಲ ಭ್ರಷ್ಟರು ಈತನ ಜತೆ ಕೈ ಸೇರಿಸಿದ್ದಾರೆ. ಈ ಸಂಬಂಧದ ಕೆಲ ಆರೋಪಿಗಳು ಇವತ್ತಿಗೂ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಅಧಿಕಾರ ಅನುಭವಿಸುತ್ತಿದ್ದಾರೆ. ಇದಲ್ಲದೇ ಖಜಾನೆ ಮೂಲಕ ಪ್ರಶ್ನೆ ಪತ್ರಿಕೆ ಬಹಿರಂಗವಾಗುತ್ತಿರುವುದು ಕೂಡ ಹೊಸತಲ್ಲ. 2012ರಲ್ಲಿ ಕಡೂರು ಖಜಾನೆಯಿಂದ ದ್ವಿತೀಯ ಪಿಯು ವಿಜ್ಞಾನ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲಾಗಿತ್ತು. ಇದರಿಂದ ಆರೋಪಿ, ಪ್ರಕರಣದ ರೂಪಗಳ್ಯಾವುದೂ ಶಿಕ್ಷಣ ಇಲಾಖೆಗೆ ಹೊಸತಲ್ಲ. ಅಕ್ರಮಗಳನ್ನು ಇಲಾಖೆಯಿಂದ ದೂರವಿಡುವ ಇಚ್ಛಾಶಕ್ತಿಯೇ ಅಧಿಕಾರಿಗಳಲ್ಲಿ ಇಲ್ಲದಿರುವಾಗ ಈ ರೀತಿಯ ಅಕ್ರಮಗಳು ನಡೆಯುತ್ತಲೇ ಇರುತ್ತವೆ.
ಡಾಬಾದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ: 2013ರ ದ್ವಿತೀಯ ಪಿಯು ಪರೀಕ್ಷೆ ಸಂದರ್ಭದಲ್ಲಿ ಗಣಿತ ವಿಷಯದ ಪ್ರಶ್ನೆಪತ್ರಿಕೆಯನ್ನು ತುಮಕೂರಿನ ಬಳಿಯ ಡಾಬಾವೊಂದರಲ್ಲಿ ಇದೇ ಶಿವಕುಮಾರ್ ಸೋರಿಕೆ ಮಾಡಿದ್ದ. ಆದರೆ ಅದು ಪರೀಕ್ಷೆಗೆ ತಯಾರಿಸಿದ್ದ 4 ಪ್ರಶ್ನೆಪತ್ರಿಕೆಗಳಲ್ಲಿ ಒಂದಾಗಿತ್ತು. ಆ ಸಂದರ್ಭದಲ್ಲಿ ಆತನ ವಿರುದ್ಧ ಗೂಂಡಾ ಕಾಯಿದೆ ಬಳಸಿ ಹೊರಗೆ ಬರದಂತೆ ಮಾಡುತ್ತೇವೆ ಎಂದು ಅಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದ್ದರು. ಅವರು ಅಧಿಕಾರದಿಂದ ಇಳಿದಂತೆ ಭರವಸೆಗಳು ಮಾಯವಾಗಿ ಹೋದವು. ನಂತರ ಬಂದವರು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಬಾರಿಯ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿಲ್ಲ ಎಂಬ ಖುಷಿಯಲ್ಲಿಯೇ ಮೈಮರೆತು ಬಿಟ್ಟರು.
ಈ ಆರೋಪಿಗೆ ಇಲಾಖೆಯಿಂದ ಪ್ರಶ್ನೆ ಪತ್ರಿಕೆ ಕದಿಯುವುದು ಗೊತ್ತು, ಅದರ ಜತೆ ಕಾನೂನು ಕಟ್ಟಳೆಗಳಿಂದ ತಪ್ಪಿಸಿಕೊಳ್ಳುವುದು ಗೊತ್ತು. ಇದೆಲ್ಲದರ ಜತೆ ಇಲಾಖೆಯ ನೆರವು ಇಲ್ಲದಿದ್ದರೆ ಇಷ್ಟು ಸುಲಭವಾಗಿ ಆರೋಪಿ ಶಿವಕುಮಾರ್ ರಾಜಾರೋಷವಾಗಿ ಪ್ರತಿವರ್ಷ ಅಕ್ರಮ ನಡೆಸಲು ಆಗುತ್ತಿರಲಿಲ್ಲ. ಎಂತಹ ವಿಚಿತ್ರವೆಂದರೆ ಈ ಶಿವಕುಮಾರ್ ವಿರುದ್ಧ ಸಿಐಡಿ ತನಿಖೆ ನಡೆಯುತ್ತಿದ್ದರೂ ಆತ ತಲೆಕೆಡಿಸಿಕೊಳ್ಳದೇ ಅಕ್ರಮ ಮುಂದುವರಿಸಿದ್ದಾನೆ. ಇದರರ್ಥ ಆತನ ಬೆಂಬಲಕ್ಕೆ ಎಂತಹ ಪ್ರಭಾವಿಗಳು ಇದ್ದಾರೆ ಎನ್ನುವುದು ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದು ಹೇಗೆ ವಾರ್ಷಿಕ ಕಾಯಕವೋ ಅದೇ ರೀತಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಈ ಜಾಲದ ನೀಚ ಕೆಲಸವಾಗಿದೆ.
ಇನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದಂತೆ ಪರೀಕ್ಷಾ ನೀತಿ ಸಂಹಿತೆ ಜಾರಿಗೆ ಬರಲೇ ಇಲ್ಲ. ಪರೀಕ್ಷೆಗೆ ಮುಂಚೆ ಇಂತಹ ಆರೋಪಿಗಳನ್ನು ಬಂಧಿಸುವ ಕೆಲಸವೂ ನಡೆಯಲಿಲ್ಲ.

ಪ್ರಥಮ ಚುಂಬನ ದಂತ ಭಗ್ನ!
ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಡವಿದೆ. ಆರಂಭದಲ್ಲಿ ಎರಡು ಬಾರಿ ಪರೀಕ್ಷೆಯನ್ನು ಮುಂದೂಡಿ ಶಿಕ್ಷಣ ಇಲಾಖೆ ಟೀಕೆಗೆ ಒಳಗಾಗಿತ್ತು. ಇದಾದ ಮೇಲೆ 150ಕ್ಕೂ ಅಧಿಕ ವಿದ್ಯಾರ್ಥಿಗಳ ಮಾಧ್ಯಮವೇ ಬದಲಾಗಿರುವ ಬಗ್ಗೆ ಆರೋಪ ಬಂತು. ಇದಕ್ಕೂ ಇಲಾಖೆಯ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಪರೀಕ್ಷೆ ಮಾಡಲೇಬೇಕೆಂಬ ಹಠದಲ್ಲಿ ಸೂಕ್ತ ತಯಾರಿ ಮಾಡಿಕೊಳ್ಳದೇ ವಿಫಲವಾಗಬೇಕಾಯಿತು. ಈಗ ಶಿಕ್ಷಕ ಸಮುದಾಯದ ಟೀಕೆಗೆ ಉತ್ತರಿಸಲೂ ಆಗದ ಪರಿಸ್ಥಿತಿಗೆ ಬಂದು ತಲುಪಿದೆ.

ಶಿಕ್ಷಣ ಸಚಿವ ಕಿಮ್ಮನೆ ಮೌನ
ಅರ್ಹತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ವರದಿಯಾದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು ಸಂಪರ್ಕಿಸಲು 'ಕನ್ನಡಪ್ರಭ' ಸತತ ಪ್ರಯತ್ನ ನಡೆಸಿತು. ಅವರ ಆಪ್ತ ಸಹಾಯಕರು ಸೇರಿದಂತೆ ಯಾರನ್ನೇ ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ. ಸಚಿವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, 'ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ' ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಮರುಪರೀಕ್ಷೆ: ಸ್ಪಷ್ಟತೆ ಇಲ್ಲ
ಪ್ರಶ್ನೆಪತ್ರಿಕೆ ಬಯಲಾಗಿರುವುದು ಜಗತ್ತಿಗೇ ತಿಳಿದಿದೆ. ಆದರೆ ಶಿಕ್ಷಣ ಇಲಾಖೆಗೆ ಈ ಬಗ್ಗೆ ಯಾವುದೇ ಖಾತ್ರಿಯಾಗಿಲ್ಲವಂತೆ. ಈ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ. ಇದಲ್ಲದೇ ಪ್ರಶ್ನೆಪತ್ರಿಕೆ ಆರೋಪಿಗೆ ಶಿವಕುಮಾರ್‌ಗೆ ಮಾತ್ರ ದೊರೆತಿದೆ, ಅಭ್ಯರ್ಥಿಗಳಿಗೆ ದೊರೆತಿಲ್ಲ ಎಂಬ ಸಮರ್ಥನೆಯನ್ನೂ ನೀಡಿದ್ದಾರೆ.

- ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.