ಸಿಎಂಯಿಂದಲೇ ಅಕ್ರಮಕ್ಕೆ 'ಉಡುಗೊರೆ'!

ಬೆಂಗಳೂರು: ಅಕ್ರಮ, ಹಗರಣಗಳಲ್ಲಿ ಭಾಗಿಯಾದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವ ಬದಲಾಗಿ, ಮತ್ತದೇ ಸ್ಥಾನಕ್ಕೆ ನೇಮಿಸಲು ಮುಂದಾಗಿದೆ. ಈ ಮೂಲಕ ಅಕ್ರಮಕ್ಕೆ 'ಉಡುಗೊರೆ' ನೀಡುವ ಪರಿಪಾಠಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಾಂದಿ ಹಾಡಿರುವುದು ಅಚ್ಚರಿಯಾದರೂ ಸತ್ಯ.
ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿನ ಮೌಲ್ಯಮಾಪನ ಕುಲಸಚಿವ ಪ್ರೊ. ಆರ್.ಕೆ. ಸೋಮಶೇಖರ್ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿರುವ ಕುರಿತು ಸರ್ಕಾರವೇ ನೇಮಿಸಿದ್ದ ಸವದತ್ತಿ ಸಮಿತಿ ವರದಿ ನೀಡಿತ್ತು. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮಶೇಖರ್ ಅವರನ್ನು ಮತ್ತೆ ಕುಲಸಚಿವ ಹುದ್ದೆಗೆ ನೇಮಿಸಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿಶ್ವವಿದ್ಯಾಲಯದಲ್ಲಿ ಕೇಳಿ ಬಂದ ಅನೇಕ ಆರೋಪಗಳ ಹಿನ್ನೆಲೆಯಲ್ಲಿ ಮೌಲ್ಯಮಾಪನ ಕುಲಸಚಿವರ ಹುದ್ದೆಯಿಂದ ಸೋಮಶೇಖರ್ ನಿರ್ಗಮಿಸಿದ್ದರು. ಅವರ ಮೇಲೆ ಅಂಕಪಟ್ಟಿ ತಿದ್ದುಪಡಿ ಪ್ರಕರಣ ಮತ್ತು ವಿವಿ ಅನುದಾನ ದುರ್ಬಳಕೆಯಂತಹ ಗಂಭೀರ ಆರೋಪಗಳು ಕೇಳಿ ಬಂದಿದ್ದವು.
ಈ ಆರೋಪಗಳ ಹಿನ್ನೆಲೆಯಲ್ಲಿ ಸೋಮಶೇಖರ್ ಅವರನ್ನು ಮೌಲ್ಯಮಾಪನ ಕುಲಸಚಿವ ಹುದ್ದೆಯಿಂದ ಕೆಳಗಿಳಿಸಬೇಕೆಂಬ ಅಭಿಪ್ರಾಯ ಕೇಳಿ ಬಂದಾಗಲೂ ಸರ್ಕಾರ ಮೌನ ಮುರಿದಿರಲಿಲ್ಲ. ಈ ವಿಚಾರವಾಗಿ ವಿದ್ಯಾರ್ಥಿ ಸಂಘಟನೆಗಳು ಹೋರಾಟ ತೀವ್ರಗೊಳಿಸಿದಾಗ ಸೋಮಶೇಖರ್ ಹುದ್ದೆಯಿಂದ ನಿರ್ಗಮಿಸಿದ್ದರು.
ನಂತರ, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸರ್ಕಾರ ಸವದತ್ತಿ ಸಮಿತಿ ನೇಮಿಸಿತ್ತು. ಈ ಸಮಿತಿಯೂ ಮೂರು ತಿಂಗಳ ಹಿಂದೆ ವರದಿ ನೀಡಿ ಅಂದಿನ ಕುಲಸಚಿವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅಂಕಪಟ್ಟಿ ತಿದ್ದುಪಡಿಗೆ ವಿದ್ಯಾರ್ಥಿಗಳು ಸೋಮಶೇಖರ್ ಖಾತೆಗೆ ಹಣ ಸಂದಾಯ ಮಾಡಿದ್ದಾರೆ. ವಿವಿಯ ಲಕ್ಷಾಂತರ ರು. ಅನುದಾನ ದುರ್ಬಳಕೆ ಮಾಡಿಕೊಂಡಿದ್ದರೆಂದು ಬಹಿರಂಗಗೊಳಿಸಿತ್ತು.
ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿರುವ ಈ ಎಲ್ಲಾ ಅಕ್ರಮಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಮುಖ್ಯಮಂತ್ರಿ ಅವರು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಪತ್ರ ಬರೆದು, ಬೆಂಗಳೂರು ಅಥವಾ ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಸಚಿವ ಹುದ್ದೆಗೆ ಸೋಮಶೇಖರ್ ಅವರನ್ನು ನೇಮಿಸುವಂತೆ ಸೂಚಿಸಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


