ಭಾವಿ ಶಿಕ್ಷಕರೊಂದಿಗೆ ಇಲಾಖೆಯ ಕಪಿಚೇಷ್ಟೆ

ಬೆಂಗಳೂರು: ರಾಜ್ಯದ 3,77,277 ಭಾವಿ ಶಿಕ್ಷಕರೊಂದಿಗೆ ಶಿಕ್ಷಣ ಇಲಾಖೆ ಕಪಿ ಚೇಷ್ಟೆ ಮಾಡುತ್ತಿದೆ. ಮರು ಪರೀಕ್ಷೆ ಎನ್ನುವುದನ್ನು ಪ್ರತಿಷ್ಠೆಯ ವಿಚಾರವನ್ನಾಗಿಸಿಕೊಂಡು ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಸಚಿವರು ಪರೀಕ್ಷೆಯ ಪಾವಿತ್ರ್ಯವನ್ನು ಹಾಳು ಮಾಡುತ್ತಿದ್ದಾರೆ.
ಬಹಿರಂಗಗೊಂಡ ಪ್ರಶ್ನೆಪತ್ರಿಕೆ ನೋಡಿ ಪಾಸಾದ ಅಭ್ಯರ್ಥಿಗಳು ಮುಂದೆ ಶಿಕ್ಷಕರಾದರೆ ಅವರು ತಯಾರಿಸುವ ಪ್ರಶ್ನೆಪತ್ರಿಕೆಗಳ ಪಾವಿತ್ರ್ಯದ ಪ್ರಶ್ನೆ ಉದ್ಭವಿಸದೇ?
'ನನಗೆ ಈ ಶಿವಕುಮಾರ್ ಎಂಬಾತ ಪ್ರಶ್ನೆ ಪತ್ರಿಕೆ ನೀಡಿದ್ದಾನೆ, ನಾನು ಆತನಿಗೆ 1 ಲಕ್ಷ ಕೊಟ್ಟಿದ್ದೇನೆ. ನಾನು ಕೂಡ ನನ್ನ ಸ್ನೇಹಿತರೊಂದಿಗೆ ಈ ಪತ್ರಿಕೆಗಳನ್ನು ಹಂಚಿಕೊಂಡಿದ್ದೇನೆ. ದಯಮಾಡಿ ಇದನ್ನು ಪರಿಶೀಲಿಸಿ ಮರುಪರೀಕ್ಷೆ ನಡೆಸಿ. ಇಲ್ಲವಾದಲ್ಲಿ ನನ್ನಂತಹ 'ಪ್ರತಿಭಾನ್ವಿತ' ವಿದ್ಯಾರ್ಥಿಗೆ ಅನ್ಯಾಯವಾಗುತ್ತದೆ' ಎಂದು ಯಾವೊಬ್ಬ ಅಭ್ಯರ್ಥಿಯು ಸರ್ಕಾರಕ್ಕೆ ಬಂದು ದೂರು ನೀಡುವುದಿಲ್ಲ.
ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಲಂಚದ ವಾಸನೆ ಮುಟ್ಟಿಸಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದಾಗಿ ಆರೋಪಿ ಶಿವಕುಮಾರ್ ಒಪ್ಪಿಕೊಂಡಿದ್ದಾನೆ. ಇದರರ್ಥ ಎಲ್ಲದಕ್ಕೂ ಸುಮ್ಮನಿರುವ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳುವಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಕೇವಲ ಬಂಧಿತ 10 ಅಭ್ಯರ್ಥಿಗಳಿಗೆ ಸೀಮಿತವಾಗಿಲ್ಲ. ಸಿಸಿಬಿ ಪೊಲೀಸರು ಹೇಳುವ ಪ್ರಕಾರ ದೊಡ್ಡ ಪ್ರಮಾಣದಲ್ಲಿಯೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದಾಗ್ಯೂ ನಾಳೆ ಒಂದು ಕೋಟಿ ಮಕ್ಕಳಿಗೆ ಪಾಠ ಹೇಳುವ ಈ ಅಭ್ಯರ್ಥಿಗಳನ್ನು ಯಾವ ಮಾನದಂಡದಲ್ಲಿ ಶಿಕ್ಷಣ ಇಲಾಖೆ ಅಳೆಯಲು ಹೋಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಲಾಭ ಪಡೆದ ಸಾವಿರಾರು ದಡ್ಡ ಅಭ್ಯರ್ಥಿಗಳನ್ನು ಪಾಠ ಮಾಡಲು ಕಳುಹಿಸಿದರೆ ಭವಿಷ್ಯದ ನಾಗರಿಕರನ್ನು ಹೇಗೆ ರೂಪಿಸಲು ಸಾಧ್ಯವಿದೆ.
ಇಲಾಖೆಯೇ ಹೇಳುವಂತೆ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟ ಹೆಚ್ಚಿಸಲು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಈ ರೀತಿ ಅಧಿಕಾರಿಗಳೇ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಗುಣಮಟ್ಟ ಹೆಚ್ಚಿಸಲು ಹೇಗೆ ಸಾಧ್ಯ?
ಸಚಿವರೇ ಇದು ಪ್ರತಿಷ್ಠೆಯ ವಿಚಾರವಲ್ಲ: ಮಾಧ್ಯಮಗಳು ಆರೋಪ ಮಾಡುತ್ತಿವೆ, ಪ್ರತಿಪಕ್ಷ ಸದಸ್ಯರೆದುರು ಸೋಲು ಒಪ್ಪಿಕೊಳ್ಳಬೇಕಾಗುತ್ತದೆ, ನನ್ನ ಅವಧಿಯಲ್ಲೊಂದು ಮರುಪರೀಕ್ಷೆಯಾಯಿತು ಎನ್ನುವುದನ್ನು ಪ್ರತಿಷ್ಠೆಯ ವಿಚಾರವನ್ನಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಟಿಇಟಿ ಪರೀಕ್ಷೆ ಬರೆದ ಮೂರೂವರೆ ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯವಿಲ್ಲಿದೆ. ಈ ವರ್ಷದಲ್ಲಿ ನಡೆಯಲಿರುವ 16 ಸಾವಿರ ಶಿಕ್ಷಕರ ನೇಮಕದ ಗುಣಮಟ್ಟಕ್ಕೆ ಇದೇ ಪರೀಕ್ಷೆ ಆಧಾರವಾಗಿರುತ್ತದೆ.
ಇನ್ನು 'ಪ್ರಾಮಾಣಿಕ' ಅಧಿಕಾರಿಗಳ ಮಾತನ್ನು ಕೇಳಿಕೊಂಡು, '3.77 ಲಕ್ಷ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸುವುದು ಹುಡುಗಾಟದ ಮಾತಲ್ಲ' ಎಂಬ ಸಚಿವರ ಉಡಾಫೆ ಉತ್ತರ ಕೂಡ ಶೋಭೆ ನೀಡುವುದಿಲ್ಲ. ಎಲ್ಲದಕ್ಕೂ ಮಿಗಿಲಾಗಿ ಆರೋಪಿಯೇ ತಪ್ಪನ್ನು ಒಪ್ಪಿಕೊಂಡು ಸೋರಿಕೆಯ ಅಗಾಧತೆಯನ್ನು ಬಹಿರಂಗಪಡಿಸಿರುವಾಗ ಮತ್ಯಾವ ಸೀಮೆಯ ತನಿಖೆಗೆ ಶಿಕ್ಷಣ ಇಲಾಖೆ ಕಾದಿದೆ? ಇನ್ನು ಸಚಿವರು ಬಯಸಿದಂತೆ ಯಾವುದೇ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗಳು ಈ ಬಗ್ಗೆ ದೂರು ನೀಡುವುದಿಲ್ಲ. ಮತ್ತೊಂದು ಬಾರಿ ಪರೀಕ್ಷೆ ನಡೆಸುವ ಕರ್ಮ ನಮಗೇಕೆ ಎಂದು ಸುಮ್ಮನಾಗುತ್ತಾರೆ. ಶಿಕ್ಷಣ ಇಲಾಖೆಯ ಇಂತಹ ಬೇಜವಾಬ್ದಾರಿ ಹಾಗೂ ಪ್ರಾಮಾಣಿಕ ಅಧಿಕಾರಗಳಿಂದ ಮರು ಪರೀಕ್ಷೆ ಬಗ್ಗೆ ದೂರು ಬರಲಿ ಎಂದು ಕಾದು ನೋಡುವುದು ದೊಡ್ಡ ಮೂರ್ಖತನವಾಗುತ್ತದೆ.
ಕೇಂದ್ರ ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯ?
ಪ್ರಶ್ನೆ ಪತ್ರಿಕೆ ವಿತರಣೆಗೆ ಸಂಬಂಧಿಸಿದಂತೆ ಟಿಇಟಿ ನಡೆಸಿದ ಕೇಂದ್ರೀಯ ಪ್ರವೇಶ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಪ್ರಶ್ನೆ ಪತ್ರಿಕೆ ಮುದ್ರಣ ಮಾಡಿರುವ ಸಂಸ್ಥೆಯಿಂದ ಜಿಲ್ಲಾ ಖಜಾನೆಗೆ ರವಾನೆ ಮಾಡುವಾಗ ಯಾವೊಬ್ಬ ಸರ್ಕಾರಿ ಅಧಿಕಾರಿಯೂ ಹಾಜರಿರಲಿಲ್ಲ ಎಂದು ಘಟಕದ ವಿಶೇಷಾಧಿಕಾರಿ ಹೇಳುತ್ತಾರೆ. ಇದಕ್ಕೆ ಸಿಬ್ಬಂದಿಗಳ ಕೊರತೆ ಎಂಬ ನೆಪ ನೀಡಿದ್ದಾರೆ. ಆದರೆ ಈ ನಿರ್ಲಕ್ಷ್ಯ ಉದ್ದೇಶಪೂರ್ವಕವೋ ಅಥವಾ ಪ್ರಸಕ್ತ ಘಟನೆಯಿಂದ ತಪ್ಪಿಸಿಕೊಳ್ಳಲು ನೀಡುತ್ತಿರುವ ಹೇಳಿಕೆಯೋ ಎನ್ನುವುದು ತನಿಖೆಯಿಂದ ತಿಳಿಯಬೇಕಿದೆ.
ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


