ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ಸಂಚು

ಬೆಂಗಳೂರು: ಕಾಂಗ್ರೆಸ್ನ ಪ್ರಮುಖ ಮುಖಂಡರೇ ವಿಶ್ವಕರ್ಮ ಸಮಾಜವನ್ನು ಕೆಳಕ್ಕೆ ತಳ್ಳಿದ್ದು, ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಆರೋಪಿಸಿದ್ದಾರೆ.
ಮಹಾಸಭಾ ಭಾನುವಾರ ಆಯೋಜಿಸಿದ್ದ ರಾಜಕೀಯ ವಂಚನೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಪ್ರಮುಖರೇ ನನ್ನನ್ನು ಮುಗಿಸುವ ಹಂತಕ್ಕೆ ಬಂದಿದ್ದಾರೆ. ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ವಿಶ್ವಕರ್ಮ ಸಮುದಾಯದ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳುವ ಅಧಿಕಾರವನ್ನೇ ಮುಖಂಡರು ಕಿತ್ತುಕೊಂಡಿದ್ದಾರೆ ಎಂದರು.
15 ವರ್ಷಗಳಿಂದ 35 ಲಕ್ಷ ವಿಶ್ವಕರ್ಮ ಸಮಾಜದ ಮಂದಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ನಾನು ಕೂಡಾ ಕಾಂಗ್ರೆಸ್ಗಾಗಿ ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಆದರೆ ರಾಜಕೀಯ ಶಕ್ತಿ ನೀಡುತ್ತೇನೆಂದು ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನನ್ನ ಕೈ ಬಿಟ್ಟು ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ವಿಶ್ವಕರ್ಮ ಸಮಾಜವನ್ನು ಧಾರೆ ಎರೆದಿದ್ದು, ಜನರು ಪಕ್ಷದ ಮೇಲೆ ನಿರೀಕ್ಷೆಯಿಟ್ಟಿದ್ದಾರೆ. ಪ್ರತಿ ಚುನಾವಣೆಯಲ್ಲಿ ನಾನು ಕಾಂಗ್ರೆಸ್ಗೆ ಬೆಂಬಲವಾಗಿ ನಿಂತಿದ್ದೇನೆ. ಉಡುಪಿಯಲ್ಲಿ ಜಯಪ್ರಕಾಶ್ ಹೆಗ್ಡೆ ಸಂಸದರಾಗಲು ಕಾರಣನಾಗಿದ್ದೇನೆ. ಆದರೆ ವಿಧಾನ ಪರಿಷತ್ತಿನ 9 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೂ ವಿಶ್ವಕರ್ಮರನ್ನು ಆರಿಸಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ವಿಶ್ವಕರ್ಮರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಲು ಯಾವುದೇ ಶಾಸಕರು ಅಥವಾ ಮುಖಂಡರು ಮುಂದೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಪಕ್ಷ ವಿರೋಧಿಯಲ್ಲ: ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ನಂಜುಂಡಿ, ಯಾರ ವಿರುದ್ಧವೂ ನಾನು ಪೈಪೋಟಿಗೆ ನಿಂತಿಲ್ಲ. ಮುಂದಿನ ದಿನಗಳಲ್ಲೂ ಸಾಕಷ್ಟು ಅವಕಾಶವಿದ್ದು, ಸಮುದಾಯಕ್ಕೆ ಹೀಗೆಯೇ ಅನ್ಯಾಯ ಮಾಡಿದರೆ ಜನರು ಪಕ್ಷದ ಬೆಂಬಲಕ್ಕೆ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಅಥವಾ ಸರ್ಕಾರದ ವಿರುದ್ಧ ಹೋರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಬಾರಿ ರಾಜಕೀಯ ಅವಕಾಶ ನೀಡಲು ಮನವಿ ಮಾಡಲಾಗುವುದು. ಸಮುದಾಯವನ್ನು ತುಳಿಯಲು ಯತ್ನಿಸಿದವರನ್ನು ಪಕ್ಷವೇ ಕಂಡುಹಿಡಿದು ಮನ ಪರಿವರ್ತಿಸಬೇಕು ಎಂದರು. ವಿಶ್ವಕರ್ಮ ಸಮುದಾಯಕ್ಕೆ ಹಣ ಅಥವಾ ಅಧಿಕಾರ ಬೇಕಾಗಿಲ್ಲ. ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೂಡಾ ನೀಡಬೇಕಿಲ್ಲ. ಸೂಕ್ತ ರಾಜಕೀಯ ಸ್ಥಾನ ನೀಡಲಿ. ಮತ್ತೊಮ್ಮೆ ಸಮುದಾಯವನ್ನು ಕಡೆಗಣಿಸುವ ಘಟನೆ ಮರುಕಳಿಸಿದರೆ ನಾನು ಪಕ್ಷದೊಂದಿಗಿದ್ದರೂ ಜನರು ಬೆಂಬಲಿವುದಿಲ್ಲ ಎಂದು ಎಚ್ಚರಿಸಿದರು. ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಶ್ರೀ ಭಾಸ್ಕರ ಸ್ವಾಮೀಜಿ, ಶ್ರೀ ಮೌನೇಶ್ವರ ಸ್ವಾಮೀಜಿ ಹಾಜರಿದ್ದರು.
ಸಭೆಯಲ್ಲಿ ನಿರ್ಣಯ
ಕೆ.ಪಿ. ನಂಜುಂಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ಬಳಿ ಮನವಿ ಮಾಡಲು ವಿಶ್ವಕರ್ಮ ಸಂಪನ್ಮೂಲ ಮಠದ ಶ್ರೀ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 67 ಪೀಠಾಧಿಪತಿಗಳು ಸೇರಿದಂತೆ 35 ಲಕ್ಷ ಜನರು ಕಾಂಗ್ರೆಸ್ಗೆ ಪ್ರತಿ ಚುನಾವಣೆಯಲ್ಲಿ ಬೆಂಬಲಿಸಿದ್ದಾರೆ. ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಸಹಕಾರ ನೀಡುತ್ತದೆ ಎಂಬ ಕಾರಣಕ್ಕೆ ಸಮುದಾಯ ಬೆಂಬಲ ನೀಡುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಪ್ರಭಾವದಿಂದ ರಾಜಕೀಯ ಸ್ಥಾನಮಾನ ದೊರೆಯಲಿಲ್ಲ. ಈ ಅನ್ಯಾಯವನ್ನು ಹೈಕಮಾಂಡ್ಗೆ ತಿಳಿಸಿ ಚರ್ಚಿಸಲು ನಿರ್ಧರಿಸಲಾಗಿದೆ. ರಾಜ್ಯ ಉಸ್ತುವಾರಿ ಹೊಣೆ ಹೊತ್ತಿರುವ ದಿಗ್ವಿಜಯ ಸಿಂಗ್ ಮೂಲಕ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಡಲಾಗುವುದು ಎಂದು ನೀಲಕಂಠ ಸ್ವಾಮೀಜಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


