ಪ್ರಧಾನ ಸುದ್ದಿ

ನಿರೀಕ್ಷೆಯ ಬೆಟ್ಟ ಏರಲು ಕನಿಷ್ಠ ಹತ್ತು ವರ್ಷದ ಅಧಿಕಾರ ಅಗತ್ಯ

ನಿರೀಕ್ಷೆಯ ಬೆಟ್ಟ ಏರಲು ಕನಿಷ್ಠ ಹತ್ತು ವರ್ಷದ ಅಧಿಕಾರ ಅಗತ್ಯ
Published On :

ಕ್ರಿಕೆಟ್‌ನಲ್ಲಿ ಫಸ್ಟ್ ಇನಿಂಗ್ಸ್‌ನಲ್ಲೇ ಶತಕ, ದ್ವಿಶತಕ ಗಳಿಸಿದವರಿದ್ದಾರೆ. ಆದರೆ ನಮ್ಮ ಕ್ಯಾಪ್ಟನ್ ಮೋದಿ ಮೊದಲ ಬಾರಿಗೇ ತ್ರಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ. ಅತ್ಯಲ್ಪ ಮೊತ್ತಕ್ಕೆ ಕುಸಿದ ಪ್ರಮುಖ ಎದುರಾಳಿಗಳಿಗೆ ಪ್ರತಿಪಕ್ಷದ ಸ್ಥಾನವೂ ದೊರಕದಂಥ ಪರಿಸ್ಥಿತಿ! ಇಂಥ ಬದಲಾವಣೆಯ ಬಿರುಗಾಳಿ ಭಾರತೀಯ ಚುನಾವಣೆಯ ಇತಿಹಾಸದಲ್ಲಿ ಹಿಂದೆಂದೂ ಬೀಸಿರಲಿಲ್ಲ. ಆದರೆ ಇವೆಲ್ಲದರ ನಡುವೆಯೂ ಪ್ರಧಾನಿ ಮೋದಿ, ಸೋತವರನ್ನು ಸಣ್ಣವರೆನ್ನುವಂತೆ ನೋಡದೆ, ಎಲ್ಲರೂ ಜೊತೆಯಾಗಿ ಹೆಜ್ಜೆಯಿಡೋಣ ಎನ್ನುತ್ತಿದ್ದಾರೆ. ಪರಿವರ್ತನೆ ಎನ್ನುವುದು ಎಷ್ಟು ದೊಡ್ಡದಾಗಿರುತ್ತದೋ ಅದನ್ನು ಸುತ್ತಿಕೊಳ್ಳುವ ಆಪೇಕ್ಷೆಗಳೂ ಅಷ್ಟೇ ದೊಡ್ಡದಾಗುತ್ತವೆ.
ಹೀಗಾಗಿ, ಮೋದಿ ನೇತೃತ್ವದ ಸರ್ಕಾರದ ಮೇಲೆ ಜನರ ನಿರೀಕ್ಷೆ ಎಷ್ಟೊಂದು ಹೆಚ್ಚಿದೆಯೆಂದರೆ, ಭಾರತೀಯರ ನಿರೀಕ್ಷೆಯ ಬೆಟ್ಟವೇರಲು ನಾವು ಕನಿಷ್ಠ ಹತ್ತು ವರ್ಷಗಳಾದರೂ ಕೆಲಸ ಮಾಡಬೇಕಾಗುತ್ತದೆ! ಆದರೆ, ಈ ದಾರಿಯಲ್ಲಿ ಪಯಣಿಸಲು ಮಾನಸಿಕವಾಗಿ ಸಿದ್ಧರಾಗುವುದೂ ಅತ್ಯವಶ್ಯಕ. ಈ ಕಾರಣಕ್ಕಾಗಿಯೇ ಬಿಜೆಪಿ, ಪಕ್ಷದ ಸಂಸದರನ್ನು ಚೊಚ್ಚಲ ಅಧಿವೇಶನಕ್ಕೆ ಸಜ್ಜುಗೊಳಿಸಲು ಹರ್ಯಾಣದ ಸೂರಜ್‌ಕುಂಡ್‌ನಲ್ಲಿ ಎರಡು ದಿನಗಳ ಕಾರ್ಯಾಗಾರ ನಡೆಸಿತು. ಚುನಾವಣಾ ರ್ಯಾಲಿಗಳಲ್ಲಿ ಗಂಟೆಗಟ್ಟಲೇ ಸ್ಫೂರ್ತಿ ನೀಡುವಂತೆ ಮಾತನಾಡುತ್ತಿದ್ದ ಮೋದಿಯವರು ಈ ಕಾರ್ಯಾಗಾರವನ್ನು ಉದ್ಘಾಟಿಸಿದ ನಂತರ ಇಲ್ಲಿ ಎಷ್ಟು ಹೊತ್ತು ಮಾತನಾಡಿರಬಹುದು ಊಹಿಸಿ?
ಹೆಚ್ಚೆಂದರೆ ಹತ್ತು ನಿಮಿಷ! ಆದರೆ ಅದು ನೀಡಿದ ಸ್ಫೂರ್ತಿ ಕಡಿಮೆಯೇನೂ ಇರಲಿಲ್ಲ. 'ಉತ್ತಮ ಸಂಸದೀಯ ಪಟುವಾಗಬೇಕಾದರೆ ವಿಷಯ ಪರಿಣತರಾಗಬೇಕು, ಹಾಗಾಗಲು ನಿರಂತರ ಅಧ್ಯಯನ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಆಚಾರ, ವಿಚಾರ ಶುದ್ಧವಾಗಿಟ್ಟುಕೊಳ್ಳಿ. ಕೆಲಸದಲ್ಲಿ ಗೊಂದಲ ಕಾಡಿದರೆ ಹಿರಿಯರಿಂದ ತಿಳಿದುಕೊಳ್ಳಿ. ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ನಾನೂ ಹಿರಿಯರಿಂದ ಮಾರ್ಗದರ್ಶನ ಪಡೆಯುತ್ತಿದ್ದೇನೆ' ಎಂದು ಮೋದಿ ಎಲ್ಲರಿಗೂ ಕಿವಿಮಾತು ಹೇಳಿದರು.
ಹಿಂದುತ್ವವೆಂದರೆ : Beyond a Billion Ballots ಪುಸ್ತಕದ ಲೇಖಕ ಮತ್ತು ಬಿಜೆಪಿಯ ನ್ಯಾಷನಲ್ ಗುಡ್ ಗವರ್ನೆನ್ಸ್ ಸೆಲ್‌ನ ಉಸ್ತುವಾರಿ ಹೊತ್ತಿರುವ ವಿನಯ್ ಸಹಸ್ರಬುದ್ಧೆ ಎರಡನೆಯ ದಿನದ ಮೊದಲ ಕ್ಲಾಸ್ ತೆಗೆದುಕೊಂಡರು. ಅವರು ಹೇಳಿದ್ದನ್ನು ಸಮಗ್ರವಾಗಿ ಇಷ್ಟು ಮಾತಿನಲ್ಲಿ ಕಟ್ಟಿಕೊಡಬಹುದು: 'ಒಂದು ರಾಜಕೀಯ ಪಕ್ಷ ರಾಷ್ಟ್ರೀಯ ಏಕತೆಗೆ ಬದ್ಧವಾಗಿರಲೇಬೇಕು.    
ಎಲ್ಲರೂ ಸೆಕ್ಯುಲರಿಸಂ ಬಗ್ಗೆ ಮಾತನಾಡಿದರೆ, ಬಿಜೆಪಿ ಸಕಾರಾತ್ಮಕ ಜಾತ್ಯತೀತತೆಯಲ್ಲಿ ನಂಬಿಕೆಯಿಟ್ಟಿದೆ. ಕೇವಲ ಒಂದು ಕೋಮಿಗೆ ಸೀಮಿತವಾದ ಜಾತ್ಯತೀತತೆಯಲ್ಲ ಇದು. ಎಲ್ಲ ಧರ್ಮವನ್ನು, ಆಚರಣೆಗಳನ್ನು, ಸಮಾನವಾಗಿ ಕಾಣುವಂಥದ್ದು. ನಾವು ಸಾಂಸ್ಕೃತಿಕ ರಾಷ್ಟ್ರೀಯವಾದ ಎಂದ ಕೂಡಲೇ, ಅದರಲ್ಲಿ ಕೇಸರಿ ಬಣ್ಣವೇ ಕೆಲವರಿಗೆ ಕಾಣುತ್ತದೆ. ಇದರಂತೆಯೇ ಹಿಂದುತ್ವ ಎಂಬ ಪರಿಕಲ್ಪನೆಯೂ ಅಪಾರ್ಥಕ್ಕೊಳಗಾಗಿರುವುದೇ ಹೆಚ್ಚು. ಹಿಂದುತ್ವವೆಂದರೆ ಭಾರತೀಯತೆ, ಅಂದರೆ ಎಲ್ಲರನ್ನೂ ಒಳಗೊಳ್ಳುವಿಕೆ ಎಂದರ್ಥ. ಭಾರತೀಯತೆ ಅಂದರೆ ಕೇವಲ ಜಾತಿ, ಮತ, ಲಿಂಗ, ಪ್ರಾದೇಶಿಕತೆ ಅಲ್ಲ'.
ವಿನಯ್ ಅವರ ಮಾತನ್ನು ಸರಳವಾಗಿ ಹೇಳಬೇಕೆಂದರೆ ಭಾರತೀಯ ಮೌಲ್ಯಗಳು ಎಲ್ಲೆಡೆ ಒಂದೇ. ಉದಾಹರಣೆಗೆ ಆಂಧ್ರದಲ್ಲಿ ನಿಮಗೆ ರಾಮಯ್ಯ ಸಿಗುತ್ತಾನೆ. ಕರ್ನಾಟಕಕ್ಕೆ ಬಂದರೆ ರಾಮಣ್ಣ, ಉತ್ತರದಲ್ಲಿ ರಾಮ್‌ಜೀ/ ರಾಮ್ ಭಾಯ್, ಪಂಜಾಬ್‌ನಲ್ಲಿ ರಾಮ್‌ಸಿಂಗ್! ಅಂದರೆ ಜನರ ಹೆಸರು ಬದಲಾಗಿರಬಹುದು, ಆದರೆ ಪರಂಪರೆಯ ಕುರಿತಾದ ಗೌರವ ಬದಲಾಗುವುದಿಲ್ಲ.
ಹಿಂದುಗಳಲ್ಲಿ ಮದುವೆಯಲ್ಲಿ ಮೆಹೆಂದಿ ಹಾಕಿಕೊಳ್ಳುವ ಪರಿಪಾಠವಿದೆ. ಆದರೆ ಇದು ನಮ್ಮ ಧರ್ಮಕ್ಕಷ್ಟೇ ಸೀಮಿತವಾಗಿಲ್ಲ. ಭಾರತೀಯ ಮುಸಲ್ಮಾನರೂ  ಮೆಹಂದಿ ಹಾಕಿಕೊಳ್ಳುತ್ತಾರೆ. ಪ್ರಪಂಚದ ಬೇರೆ ಯಾವುದೇ ಇಸ್ಲಾಂ ದೇಶಗಳಲ್ಲಿ ಈ ಪದ್ಧತಿ ನಿಷಿದ್ಧ! ಅಂದರೆ ಯಾವ ರಾಜ್ಯದವರೇ ಆಗಿರಲಿ, ಯಾವ ಧರ್ಮದವರೇ ಇರಲಿ ಅವರು ಭಾರತೀಯ ಪರಂಪರೆಯ ಭಾಗವೇ. ಇದನ್ನೇ ನಾವು ಒನ್ ಪೀಪಲ್ ಒನ್ ನೇಷನ್ ಎನ್ನುವುದು.
ಬಾಂಧವ್ಯದಲ್ಲಿ ಲಕ್ಷ್ಮಣರೇಖೆ ಇರಲಿ
ವಾರ್ತಾ ಪ್ರಸಾರ ಮತ್ತು ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾಧ್ಯಮಗಳ ಜೊತೆಗೆ ಸಂಸದರ ಸಂಬಂಧ ಹೇಗಿರಬೇಕು ಎಂಬ ಕಿವಿಮಾತು ಹೇಳಿದರು. ಆಡಳಿತ ಪಕ್ಷ ಅಂದಾಕ್ಷಣ ಮಾಧ್ಯಮಗಳಿಂದ ದೂರವಿರಬೇಕಾಗಿಲ್ಲ. ಪತ್ರಕರ್ತರೊಂದಿಗೆ ಮಧುರ ಸಂಬಂಧವಿಟ್ಟುಕೊಳ್ಳಿ. ಒಂದು ಘಟನೆ ನಡೆದರೆ ಸೂಕ್ತ ಮಾಹಿತಿ ನೀಡಿ. ಸರಿಯಾದ ಸಂಪರ್ಕ ವ್ಯವಸ್ಥೆ ಇಟ್ಟುಕೊಳ್ಳಿ. ತಾವು ಆರಿಸಿ ಕಳುಹಿಸದವರು ಏನು ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ತಿಳಿಯಬೇಕಾದರೆ ಮಾಧ್ಯಮಗಳ ಮೂಲಕವೇ ಆಗಬೇಕು. ಆದರೆ ಇದೇ ವೇಳೆಯಲ್ಲೇ ಮಾಧ್ಯಮ-ಸಂಸದರ ಸಂಬಂಧಕ್ಕೊಂದು ಸೂಕ್ಷ್ಮ ಲಕ್ಷ್ಮಣ ರೇಖೆ ಕೂಡ ಇರಬೇಕು ಎಂಬ ಅವರ ಮಾತಿನಲ್ಲಿ ಅವರ ಸ್ಥಾನದ ಹೊಣೆಗಾರಿಕೆಯ ವಿವೇಕ ಇತ್ತು.  
ಸಾಮಾಜಿಕ ತಾಣಗಳ ಸಮರ್ಥ ಬಳಕೆಯ ಬಗ್ಗೆ ಇಂಧನ ಸಚಿವ ಪಿಯೂಶ್ ಗೋಯೆಲ್ ಹೊಂದಿದ್ದ ತಿಳಿವಳಿಕೆ ಅವರ ಮಾತಿನಲ್ಲಿ ಸ್ಪಷ್ಟವಾಗಿ ಹೊಮ್ಮಿತು. ದೇಶದಲ್ಲಿ 21 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಇವರಲ್ಲಿ 7 ಕೋಟಿ ಜನ ಸ್ಮಾರ್ಟ್ ಫೋನ್ ಬಳಕೆದಾರರು. 2016ರಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ 30ಕೋಟಿ ತಲುಪುತ್ತದೆ. ಅದು ಇನ್ನೈದು ವರ್ಷಗಳಲ್ಲಿ ದೇಶದ ಸಂಪರ್ಕ ಮತ್ತು ಜನಾಭಿಪ್ರಾಯ ರೂಪಿಸುವಲ್ಲಿ ಬಹಳ ಪರಿಣಾಮ ಮಾಡುತ್ತದೆ. ಹಾಗಾಗಿ ಸಂಸದರೂ ಇಂಟರ್ನೆಟ್ ಬಳಕೆಯಲ್ಲಿ, ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಬೇಕಾದ ಅಗತ್ಯ ಇದೆ ಎಂದು ಗೋಯಲ್ ಹೇಳಿದ್ದನ್ನು ಯುವ ಸಂಸದರು ಅನುಮೋದಿಸಿದರು. ಇದಕ್ಕೊಂದು ಉತ್ತಮ ಉದಾಹರಣೆ ಮೋದಿಯವರೇ. ಈ ಬಾರಿಯ ಚುನಾವಣೆಯಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ತಿಂಗಳುಗಟ್ಟಲೇ ಟ್ರೆಂಡಿಂಗ್ ಟಾಪಿಕ್ ಆಗಿದ್ದರು.  ಯುವ ಜನತೆಯನ್ನು ಯಶಸ್ವಿಯಾಗಿ ತಲುಪಲು ಜಾಲತಾಣಗಳನ್ನು  ಬಳಸಿಕೊಂಡರು.  ಅವರ ಫೇಸ್‌ಬುಕ್ ಅಕೌಂಟ್‌ನಲ್ಲಿ 1.8 ಕೋಟಿಯಷ್ಟು ಫಾಲೋವರ್ಸ್ ಇದ್ದಾರೆ. ಟ್ವಿಟರ್‌ನಲ್ಲಿ ಜಗತ್ತಿನ ಮಹಾನಾಯಕರ ಪೈಕಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರಲ್ಲಿ ಮೋದಿ ಇರುವುದು 2ನೇ ಸ್ಥಾನದಲ್ಲಿ! ಹೀಗಾಗಿ ನಮಗೆ ಮೋದಿಗಿಂತ ಬೇರೆ ರೋಲ್ ಮಾಡಲ್ ಬೇಡವೇ ಬೇಡ.


ಸಾಮಾಜಿಕ ಜಾಲತಾಣ ಬಳಸಿ

ಈಗ ಭಾರತದಲ್ಲಿ 21 ಕೋಟಿ ಅಂತರ್ಜಾಲ ಬಳಕೆದಾರರಿದ್ದಾರೆ. ಇವರಲ್ಲಿ ಈಗ 7 ಕೋಟಿ ಜನ ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. 2016ರಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಮೂವತ್ತು ಕೋಟಿ ತಲುಪುತ್ತದೆ. ಈ ಬದಲಾವಣೆ ಇನ್ನೈದು ವರ್ಷಗಳಲ್ಲಿ ದೇಶದ ಸಂಪರ್ಕ ಮತ್ತು ಜನಾಭಿಪ್ರಾಯ ರೂಪಿಸುವಲ್ಲಿ ಬಹಳ ದೊಡ್ಡ ಪರಿಣಾಮ ಮಾಡುತ್ತದೆ. ಹಾಗಾಗಿ ಸಂಸದರೂ ಇಂಟರ್ನೆಟ್ ಬಳಕೆಯಲ್ಲಿ, ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಬೇಕಾದ ಅಗತ್ಯ ಇದೆ ಎಂದರು ಸಚಿವ ಪಿಯೂಶ್ ಚಾವ್ಲಾ.

-ಪ್ರತಾಪ್ ಸಿಂಹ
ಸಂಸದರ
ಸಾಕ್ಷಾತ್ ವರದಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.