ಪ್ರಧಾನ ಸುದ್ದಿ

'ಗುಹೆ'ಯಿಂದ ನಿರ್ಗಮಿಸಿದ ಸಿಂಹ

Published On :

ಬೆಂಗಳೂರು: ಗುಹೆಯಲ್ಲಿ ಸಿಂಹ ಇದ್ದರೆ ಯಾರೂ ಅತ್ತ ತಲೆ ಹಾಕಲ್ಲ. ಇದು ಕಾಡಿನ ಸ್ಥಿತಿ. ಈ ಗುಹೆ ಹಾಗಲ್ಲ, ಇಲ್ಲಿ ಸಿಂಹ ಇದ್ದರೆ ಎಲ್ಲರೂ ಪ್ರೀತಿಯ ಆ ಗುಹೆಯತ್ತ ನಡೆಯುತ್ತಾರೆ. ಆದರೆ, ಇನ್ನು ಮುಂದೆ ಗುಹೆಗೆ ಹೋಗುವವರಿಗೆ ಸಿಂಹ ಕಾಣುವುದಿಲ್ಲ. ಸಿಂಹ ಮತ್ತೆ ಎಂದಿಗೂ ತಿರುಗಿ ಬಾರದ ಲೋಕಕ್ಕೆ ಗುಹೆಯಿಂದ ನಿರ್ಗಮಿಸಿದೆ.
ಈಗ ಆ 'ಗುಹೆ' ಒಂಟಿ. ಒಂದು ಕಾಲದಲ್ಲಿ ಸಿಂಹ ಗುಹೆಯಲ್ಲಿದ್ದರೂ ಅಲ್ಲಿಗೆ ಹೋಗುವವರು ಭಯ ಪಡಬೇಕಿರಲಿಲ್ಲ. ಯಾಕೆಂದರೆ ಆ ಸಿಂಹ ಎಲ್ಲರನ್ನೂ ಪ್ರಿತಿಯಿಂದ ಬರ ಮಾಡಿಕೊಳ್ಳುತ್ತಿತ್ತು. ಗರ್ಜಿಸುವುದಾಗಲಿ, ಯಾರನ್ನಾದರೂ ಹೆದರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಆ 'ಗುಹೆ' ಮನುಷ್ಯ ಪ್ರೀತಿಗೆ ಸನಿಹವಾಗಿತ್ತು. ಜಯನಗರದ ರಾಗಿಗುಡ್ಡ ರಸ್ತೆಯಲ್ಲಿರುವ ಸೇವಾಕ್ಷೇತ್ರ ಆಸ್ಪತ್ರೆಯಿಂದ ಮತ್ತೆ ತನ್ನ ಒಡೆಯ ಮರಳಬಹುದು ಎಂದು ಕಾಯುತ್ತಿದ್ದ ಗುಹೆಗೆ ಸಿಂಹ ತೀರಾ ನಿರಾಸೆ ಮೂಡಿಸಿದೆ. ಅವರೇ ಸಿ.ಆರ್. ಸಿಂಹ. ಶನಿವಾರ ಬೆಳ್ಳಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಆವರಣ ಎಂದಿನಂತೆ ಇರಲಿಲ್ಲ. ಸಿನಿಮಾ, ಕಿರುತೆರೆ, ರಂಗಭೂಮಿ ಸೇರಿದಂತೆ ನೂರಾರು ಮಂದಿ ಅಲ್ಲಿ ಸೇರಿದ್ದರು. ಎಲ್ಲರ ಮುಖದಲ್ಲೂ ದುಃಖ ಮುಡುಗಟ್ಟಿತ್ತು. ಜನ ಜಾತ್ರೆಯ ನಡುವೆ ಸಿಂಹ ಚಿರನಿದ್ರೆಯಲ್ಲಿತ್ತು. ರಂಗ'ವೇದಿಕೆ'ಯಲ್ಲಿ ಮೌನವಾಗಿ ಮಲಗಿದ್ದ ಸಿಂಹ ಪಕ್ಕದಲ್ಲೇ ಒಂದೆರಡು ಅರ್ಥಪೂರ್ಣ ಸಾಲುಗಳಿದ್ದವು. ಸಿಂಹ ಗರ್ಜಿಸಿ ಅಪಾರ ಜನರನ್ನು ಮೆಚ್ಚಿಸಿದ 'ತುಘಲಕ್‌' ನಾಟಕದ ಎರಡು ಭಾವ ಚಿತ್ರಗಳ ನಡುವೆ ನಗು ಮುಖದ ಮತ್ತೊಂದು ಚಿತ್ರ. ಅದರ ಕೆಳಗೆ ಹೀಗಿತ್ತು...
ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಕನಸುಗಳಿಲ್ಲದ ದಾರಿಯಲ್ಲಿ ನಡೆಯುವುದಾದರೂ ಹೇಗೆ?
ಇಂಥ ಸಾಲುಗಳನ್ನು ಹೊತ್ತುಕೊಂಡ ಬ್ಯಾನರ್ ಪಕ್ಕದಲ್ಲೇ ಬೆಳಗ್ಗೆ 10 ಗಂಟೆಯಿಂದ ಮಲಗಿದ್ದ ಸಿಂಹ, ಮಧ್ಯಾಹ್ನ 2.50ರ ಹೊತ್ತಿಗೆ ಜಾಗ ಖಾಲಿ ಮಾಡಿತ್ತು. ಸಿಂಹನನ್ನು ಹೊತ್ತ ವಾಹನ ಟೌನ್ ಹಾಲ್ ಸರ್ಕಲ್  ಬಳಸಿಕೊಂಡು ಸೀದಾ ಬನಶಂಕರಿಯ ಚಿತಾಗಾರದತ್ತ ಸಾಗಿತು.
ನಿಜ, ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು, ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗದು. ಆದರೆ, ಅಪಾರ ಅಭಿಮಾನಿಗಳನ್ನು, ಆತ್ಮೀಯರನ್ನು, ಬಂಧು- ಬಳಗವನ್ನು ಬಿಟ್ಟು ಹೀಗೆ ದಿಢೀರ್ ಅಂತ ಮೌನವಾಗಿ ಸಿಂಹ ಹೊರಟಿದ್ದಾದರೂ ಯಾವ ದಾರಿಯಲ್ಲಿ?
ದೃಶ್ಯ ದೃಷ್ಟಿಕೋನ: ಸಿ.ಆರ್. ಸಿಂಹ ಅವರಿಗೆ ದೃಶ್ಯ ದೃಷ್ಟಿ ಕೋನ ಯಾವ ಮಟ್ಟಕ್ಕಿತ್ತು ಎನ್ನುವುದು ಅವರ ನಟನೆಯಲ್ಲಿ ಮಾತ್ರವಲ್ಲ, ಗುಹೆಯ ನಿರ್ಮಾಣದಲ್ಲೂ ನೋಡಬಹುದು. ತಾನು ವಾಸಿಸುತ್ತಿದ್ದ 'ಗುಹೆ'ಯ ನಿರ್ಮಾಣದ ಯೋಜನೆ ರೂಪಿಸಿದ್ದು ಅರ್ಕಿಟೆಕ್ಟ್ ಜಯಸಿಂಹ. ಆದರೆ, ಒಬ್ಬ ನಟನಾಗಿ ಸಿಂಹ ತನ್ನ ಗುಹೆಯ ಪರಿಕಲ್ಪನೆಯನ್ನು ಅನಾವರಣಗೊಳಿಸಿಕೊಂಡಿದ್ದರ ಹಿಂದೆ ಅದ್ಭುತವಾದ ದೃಶ್ಯ ಕಲ್ಪನೆ ಅಡಗಿದೆ. ಕಲಾತ್ಮಕ ಲೋಕ, ಸಿನಿಮಾ ಅಭಿರುಚಿ, ಸಂಸ್ಕಾರ- ಸಂಸ್ಕೃತಿ, ವಾಸ್ತು ಶಾಸ್ತ್ರ ಈ ಎಲ್ಲವನ್ನೂ ಮೇಳೈಸಿಕೊಂಡಂತೆ ನಿರ್ಮಾಣವಾಗಿದ್ದ ಅವರ ಗುಹೆ ಕಲಾತ್ಮಕಕ ಬದುಕಿಗೆ ಒಂದು ನಿದರ್ಶನ.

ಸಿ.ಆರ್. ಸಿಂಹ ಅಂತ್ಯಕ್ರಿಯೆ
ಶನಿವಾರ ಸಂಜೆ 5 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಹಿರಿಯ ನಟ ಸಿ.ಆರ್. ಸಿಂಹ ಅವರ ಅಂತ್ಯಕ್ರಿಯೆ ನಡೆಯಿತು. ಇದಕ್ಕೂ ಮುನ್ನ ಸಂಸ ಬಯಲು ರಂಗಮಂದಿರಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಚಿರನಿದ್ರೆಯಲ್ಲಿದ್ದ ಸಿಂಹ ಅವರ ಪಾರ್ಥಿವ ಶರೀರದ ಪಕ್ಕದಲ್ಲೇ ಅವರ ಸೋದರ ನಟ ಶ್ರೀನಾಥ್, ಹಿರಿಯ ನಟಿ ಜಯಂತಿ, ಪುತ್ರ ಋತ್ವಿಕ್ ಸಿಂಹ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಹಿತಿ ಯು.ಆರ್. ಅನಂತಮೂರ್ತಿ ದಂಪತಿ, ರಂಗಕರ್ಮಿ ಕಪ್ಪಣ್ಣ, ನಿರ್ದೇಶಕ ಟಿ.ಎಸ್. ನಾಗಾಭರಣ ದಂಪತಿ, ಮಾಜಿ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಹಿರಿಯ ನಟ ಶಿವರಾಂ, 'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್ ಸೇರಿದಂತೆ ಚಿತ್ರರಂಗದ ನಟ, ನಟಿಯರು ಆಗಮಿಸಿ ಸಿ.ಆರ್. ಸಿಂಹ ಅವರ ಅಂತಿಮ ದರ್ಶನ ಪಡೆದರು. ಮೇಯರ್ ಕಟ್ಟೆ ಸತ್ಯನಾರಾಯಣ ಹಾಗೂ ಶಾಸಕ ರವಿಸುಬ್ರಹ್ಮಣ್ಯ ಅವರು ಬೆಳಗ್ಗೆಯೇ ಸಿ.ಆರ್. ಸಿಂಹ ಅವರ ಮನೆಗೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.