ಪ್ರಧಾನ ಸುದ್ದಿ

ಆದಾಯಪತ್ರದ ಸ್ಪಷ್ಟೀಕರಣವೂ ಓಳು!

Published On :

ಕನ್ನಡಪ್ರಭ ವಾರ್ತೆ  ಬೆಂಗಳೂರು  ಮಾ.2
ತಹಸೀಲ್ದಾರ್ಗಳು ನೀಡುವ ಆದಾಯ, ಜಾತಿ ಪ್ರಮಾಣಪತ್ರವಷ್ಟೇ ಅಲ್ಲ, ನೀಡುವ ಸ್ಪಷ್ಟೀಕರಣವೂ ಸುಳ್ಳು!
ತಹಸೀಲ್ದಾರ್ಗಳು ನೀಡುವ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳು ಸುಳ್ಳಿನ ಕಂತೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ 'ಕನ್ನಡಪ್ರಭ'ಕ್ಕೆ ದೊರೆತಿದೆ. ರಾತ್ರಿ ಕಳೆಯುವುದರಲ್ಲಿ ಜಾತಿಯನ್ನೇ ಬದಲಿಸುವ ತಹಸೀಲ್ದಾರ್ಗಳು ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳುವುದರಲ್ಲಿ ಮಾತ್ರ ಎಡವಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಶೂನ್ಯ ಆದಾಯ ಪ್ರಮಾಣ ಪತ್ರ ನೀಡಲಾಗಿದೆ ಹಾಗೂ ಮೇಘನಾ ಆರ್. ಎಂಬ ವಿದ್ಯಾರ್ಥಿನಿಗೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಲಾಗಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು. 'ತಮ್ಮ ಕಚೇರಿಯಲ್ಲಿ ಪತ್ರಿಕೆ ವರದಿ ಮಾಡಿದಂತೆ ಯಾವುದೆ ಲೋಪದೋಷಗಳು ಮತ್ತು ಪ್ರಮಾದಗಳು ಜರುಗಿರುವುದಿಲ್ಲ' ಎಂಬ ಕಾಟಾಚಾರದ ಸ್ಪಷ್ಟನೆಯೊಂದನ್ನು ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್ ಕಚೇರಿ ನೀಡಿದೆ. ಈ ಸ್ಪಷ್ಟೀಕರಣದೊಂದಿಗೆ ಜ.21, 2013ರಂದು ವಿತರಿಸಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳ ಪಟ್ಟಿ ಲಗತ್ತಿಸಲಾಗಿದೆ ಎಂಬ ಮತ್ತೊಂದು ಸುಳ್ಳನ್ನು ಹೇಳಿದ್ದಾರೆ.
ಶಿಕ್ಷಣ ಹಕ್ಕು ಕಾಯಿದೆಯ ಮೀಸಲು ಹಾಗೂ ಸರ್ಕಾರದ ಇತರ ಸವಲತ್ತುಗಳನ್ನು ಪಡೆಯಲು ರಾಜ್ಯಾದ್ಯಂತ ಈ ರೀತಿಯ ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡುತ್ತಿರುವ ಬಗ್ಗೆ ಈಗಾಗಲೆ ಲೋಕಾಯುಕ್ತರು ಸ್ವಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಸಿಇಟಿ ಕೌನ್ಸೆಲಿಂಗ್ ಸಂದರ್ಭದಲ್ಲಿಯೂ ಬೆಂಗಳೂರಿನ ಕೆಲ ತಹಶೀಲ್ದಾರ್ ಕಚೇರಿಗಳ ಮೇಲೆ ಸಿಐಡಿ ತನಿಖೆಯ ತೂಗುಕತ್ತಿಯಿದೆ.
ಏನಿದು ಶೂನ್ಯ ಆದಾಯ ಪ್ರಮಾಣಪತ್ರ?: ಬೆಂಗಳೂರಿನ ಮಹಾಲಕ್ಷ್ಮಿಪುರಂ ನಿವಾಸಿ ಚಂದ್ರಶೇಖರ್ ಅವರು ತಮ್ಮ ಮಗಳಾದ ಸಂಜನಾ ಹೆಸರಿನಲ್ಲಿ ಜಾತಿ ಆದಾಯ ಪ್ರಮಾಣಪತ್ರ ಕೋರಿದ್ದಾರೆ. ಅವರ ವಿಳಾಸ ಹಾಗೂ ಆದಾಯವನ್ನು ಪರಿಶೀಲಿಸಿ ಜ.21,2013ರಂದು ಬೆಂಗಳೂರು ಉತ್ತರ ತಹಸೀಲ್ದಾರ್ ಆದಾಯ ಮತ್ತು ಜಾತಿ ಪ್ರಮಾಣಪತ್ರ ನೀಡಿದ್ದಾರೆ. ಪ್ರಮಾಣಪತ್ರದ ಕೋಡ್ ಸಂಖ್ಯೆ- ಎನ್130458808 ಹಾಗೂ ಆದೇಶ ಸಂಖ್ಯೆ-ಜಾಆಪವಿವ/ಸಿಟಿಸರ್ಕಲ್/3335/2012-13 ಎಂದು ಈ ಪ್ರಮಾಣಪತ್ರದಲ್ಲಿ ದಾಖಲಾಗಿದೆ. ಸಂಬಂಧಪಟ್ಟ ತಹಸೀಲ್ದಾರ್ ಸ್ಪಷ್ಟನೆ ನೀಡಿರುವ ಪ್ರಕಾರ ಈ ದಿನಾಂಕದಲ್ಲಿ ತಾಲೂಕು ಕಚೇರಿಯಿಂದ ಶೂನ್ಯ ಆದಾಯದ ಯಾವುದೆ ಪ್ರಮಾಣಪತ್ರ ವಿತರಣೆಯಾಗಿಲ್ಲ.
ಆದರೆ ಈ ಪ್ರಮಾಣಪತ್ರದ ಕೊನೆಯ ಸಾಲು ಹೀಗಿದೆ, 'ಈಕೆಯ ತಂದೆ ಸಾರ್ವಜನಿಕ ಉದ್ಯಮದಲ್ಲಿ ತತ್ಸಮಾನ ಹುದ್ದೆ ಹೊಂದಿಲ್ಲ, ಖಾಸಗಿ ನಿಯೋಜಕರ ಕೈಕೆಳಗೆ 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ(11,400-21,600) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲ, ಆಕೆಯ ಪೋಷಕರ ಆದಾಯ 3.50ಲಕ್ಷ ಮೀರಿಲ್ಲ, ಆಕೆಯ ಪಾಲಕರು 20 ಎಕರೆ ಪ್ಲಾಂಟೇಷನ್ಗಿಂತ ಅಧಿಕ ಕೃಷಿ ಭೂಮಿ ಹೊಂದಿಲ್ಲ ಎಂದು ಪ್ರಮಾಣೀಕರಿಸಿದೆ. ಆಕೆ ಕ್ಷತ್ರಿ ಜಾತಿಗೆ ಸೇರಿದ್ದು ವಾರ್ಷಿಕ ಆದಾಯ 0(ಮಾತ್ರ) ಎಂದು ಪ್ರಮಾಣೀಕರಿಸಲಾಗಿದೆ'.
ಯಾವುದೆ ವ್ಯಕ್ತಿಗೆ ಶೂನ್ಯ ಆದಾಯವಿರಲು ಸಾಧ್ಯವೇ ಅಥವಾ ಕೇವಲ 6 ವರ್ಷದ ಮಗುವಿನ ಹೆಸರಲ್ಲಿ ಶೂನ್ಯ ಆದಾಯ ಪ್ರಮಾಣಪತ್ರ ನೀಡಲು ತಹಸೀಲ್ದಾರ್ಗಳಿಗೆ ಕಾನೂನು ಅವಕಾಶ ನೀಡುತ್ತದೆಯೇ ಎನ್ನುವುದನ್ನು ಸರ್ಕಾಕ ಹೇಳಬೇಕು.
ಒಬ್ಬಳಿಗೆ ಎರಡು ಪ್ರಮಾಣಪತ್ರ: ಮೇಘನಾ ಆರ್. ಎನ್ನುವ ವಿದ್ಯಾರ್ಥಿನಿ ತಿಗಳ ಜಾತಿಗೆ ಸೇರಿರುತ್ತಾಳೆ ಹಾಗೂ ಆಕೆಯ ಒಟ್ಟು ಆದಾಯ 36 ಸಾವಿರ ಎಂದು ನಾವು ನೀಡಿರುವ ಪ್ರಮಾಣಪತ್ರ ನಿಜವೆಂಬ ಒಂದು ಸತ್ಯವನ್ನು ತಹಸೀಲ್ದಾರ್ಕಚೇರಿ ಒಪ್ಪಿಕೊಂಡಿದೆ. ಆದರೆ ಈಕೆ ಆಗಸ್ಟ್8, 2013ರಂದು ಇಲ್ಲಿಂದ ಆದಾಯ ಪ್ರಮಾಣಪತ್ರ ಪಡೆಯುವ ಮುಂಚೆ ಮಾರ್ಚ್ 1ರಂದು ಬೆಂಗಳೂರು ದಕ್ಷಿಣದಿಂದಲೂ ಪಡೆದ ಆದಾಯ ಪ್ರಮಾಣದಲ್ಲಿ ರೆಡ್ಡಿ ಹಾಗೂ ರು. 3 ಲಕ್ಷ ಎಂದು ದಾಖಲಿಸಲಾಗಿದೆ. ಬೆಂಗಳೂರು ಉತ್ತರ ತಹಶೀಲ್ದಾರ್ ಅವರನ್ನು ಭೇಟಿಯಾದ ಕೂಡಲೆ ಜಾತಿ ಜತೆಗೆ ಆದಾಯದಲ್ಲಿ 2.64 ಲಕ್ಷ ಕುಸಿತವಾಗಿದೆ. ಎರಡೂವರೆ ಲಕ್ಷಕ್ಕೂ ಹೆಚ್ಚಿನ
ಆದಾಯ ಕಡಿತಗೊಂಡು ಯಾರ ಜೇಬಿಗೆ ಸಂದಾಯವಾಯಿತು ಎನ್ನುವುದು ವಿಚಾರಣೆಯಿಂದ ಗೊತ್ತಾಗಬೇಕಿದೆ.

ರಾಜೀವ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.