ಪ್ರಧಾನ ಸುದ್ದಿ

ವೀಸಾ ಮುಗಿದರೂ ವಿದೇಶಿಯರ ವಾಸ!

Published On :

ಬೆಂಗಳೂರು: ವೀಸಾ ಅವಧಿ ಮುಗಿದರೂ ಸ್ವದೇಶಕ್ಕೂ ಮರಳದೆ ರಾಜ್ಯದಲ್ಲಿ ಬಿಡಾರ ಹೂಡಿರುವ ವಿದೇಶಿಯರು ಸಂಖ್ಯೆ ಬರೋಬ್ಬರಿ 3973...! ಆಶ್ಚರ್ಯ ಎಂದರೆ, ವಿಶ್ವದ ದೊಡ್ಡಣ್ಣ ಅಮೆರಿಕದ್ದೇ ಇದರಲ್ಲಿ ದೊಡ್ಡ ಪಾಲು.
421 ಅಮೆರಿಕನ್ನರು ವೀಸಾ ಅವಧಿ ಮುಗಿದರೂ ಅನಧಿಕೃತವಾಗಿ ಇಲ್ಲಿದ್ದಾರೆ. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಐವರು ವರ್ಷಗಳಿಂದ ನಾಪತ್ತೆಯಾಗಿದ್ದಾರೆ. ಉಳಿದಂತೆ ಭಯೋತ್ಪಾದಕ ಚಟುವಟಿಕೆಗಳಿಗೆ ಕುಖ್ಯಾತಿಯಾಗಿರುವ ಅಫ್ಘಾನಿಸ್ತಾನದ 117 ಜನ, ಬಾಂಗ್ಲಾದೇಶದ 159, ಚೀನಾ 59, ಇರಾನ್ 346, ಇರಾಕ್ 104, ಯೆಮನ್ 326, ಸೌದಿ ಅರೇಬಿಯಾದ 39 ಜನ ರಾಜ್ಯದಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದಾರೆ.
ಮಾದಕ ದ್ರವ್ಯ ವಸ್ತುಗಳ ಮಾರಾಟ ಹಾಗೂ ಬಳಕೆಗೆ ಕುಖ್ಯಾತಿ ಪಡೆದಿರುವ ಆಫ್ರಿಕಾ ರಾಷ್ಟ್ರಗಳಾದ ಕಾಂಗೋ 275, ನೈಜೀರಿಯಾ 155, ಉಗಾಂಡಾ 66, ಕ್ಯಾಮರೂನ್ 58, ಐವರಿಕೋಸ್ಟ್ 234, ಕೀನ್ಯಾ 37, ಮಂಗೋಲಿಯಾ 26, ನಮೀಬಿಯಾ 48, ರವಾಂಡ 76, ಸುಡಾನ್ 181, ತಂಜಾನಿಯಾದ 77 ಜನ ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಉಳಿದಿಕೊಂಡಿದ್ದಾರೆ. ವ್ಯಾಸಂಗ ಹಾಗೂ ವ್ಯಾಪಾರ ಹೆಸರಿನಲ್ಲಿ ಬರುವ ಆಫ್ರಿಕಾ ರಾಷ್ಟ್ರಗಳ ವಿದ್ಯಾರ್ಥಿಗಳು ಬೆಂಗಳೂರು ಸೇರಿ ರಾಜ್ಯದಲ್ಲಿ ಅಕ್ರಮ ಚಟುವಟಿಕೆಗಳಿಗೆ ತೊಡಗುತ್ತಿದ್ದಾರೆ.
ವ್ಯಾಪಾರ, ಶಿಕ್ಷಣ ವೀಸಾ ಅವಧಿ ಮುಗಿದ ನಂತರ ಸ್ವದೇಶಕ್ಕೆ ಮರಳದೆ, ವೀಸಾ ವಿಸ್ತರಿಸಿಕೊಳ್ಳದೆ ಅಕ್ರಮವಾಗಿ ನೆಲೆಸಿದ್ದಾರೆ. ಗಾಂಜಾ, ಕೊಕೇನ್, ಚರಸ್, ಹೆರಾಯಿನ್ ಮುಂತಾದ ಮಾದಕ ವಸ್ತುಗಳನ್ನು ಪ್ರತಿಷ್ಠಿತ ಕಾಲೇಜು, ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪೂರೈಸುತ್ತಾರೆ. ಬಿಬಿಎಂ, ಎಂಬಿಎ, ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಮಾಡಲು ನಗರಕ್ಕೆ ಆಗಮಿಸುತ್ತಾರೆ. ಕೆಲವರು ಶಿಕ್ಷಣ ಜತೆಗೆ ಅಕ್ರಮ ಚಟುವಟಿಕೆ ನಡೆಸಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ. ಇದೇ ಕಾರಣಕ್ಕೆ ಬೆಂಗಳೂರಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿದೇಶಿಯರ ಪೈಕಿ ಆಫ್ರಿಕಾ ರಾಷ್ಟ್ರದವರೆ ಹೆಚ್ಚು.
ಅಮೆರಿಕನ್ನರೇ ಹೆಚ್ಚು!: ಬಿಗಿ ವೀಸಾ ನೀತಿಯಿಂದ ಹಲವು ಬಾರಿ ಭಾರತದಿಂದ ಟೀಕೆಗೆ ಗುರಿಯಾಗಿರುವ ಅಮೆರಿಕದ 421 ಜನ ಹಾಗೂ ಇಂಗ್ಲೆಂಡಿನ 119 ಜನ ಅನಧಿಕೃತವಾಗಿ ವಾಸವಿರುವುದು ಅಚ್ಚರಿ. ಪ್ರವಾಸ, ವ್ಯಾಪಾರ ಹಾಗೂ ಆಯುರ್ವೇದ ಚಿಕಿತ್ಸೆಗೆಂದು ರಾಜ್ಯಕ್ಕೆ ಆಗಮಿಸುವ ಇವರು, ವೀಸಾ ಅವಧಿ ವಿಸ್ತರಿಸಿಕೊಂಡಿಲ್ಲ. ತಮ್ಮ ದೇಶಕ್ಕೂ ವಾಪಸಾಗಿರುವ ಮಾಹಿತಿ ಇಲ್ಲ. ಸಾಮಾನ್ಯವಾಗಿ ವಿದೇಶಿಯರು ಬಂದ ಬಳಿಕ ಅವರು ಉಳಿದುಕೊಳ್ಳವ ವಿಳಾಸದ ಮಾಹಿತಿ ನೀಡಬೇಕು. ವಿಳಾಸ ಬದಲಿಸಿದರು ವಿದೇಶಿಯರ ನೋಂದಣಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಬೇಕು. ಯಾವುದೇ ಮಾಹಿತಿ ನೀಡದೆ ವರ್ಷಾನುಗಟ್ಟಲೆ ರಾಜ್ಯದಲ್ಲಿ ಉಳಿದುಕೊಂಡವರ ಬಗ್ಗೆ ಮಾಹಿತಿ ಇಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಕಾರಣವಿಲ್ಲದೇ ವಿದೇಶಿಯರ ವಿಚಾರಣೆ ನಡೆಸಿದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎನ್ನುವ ಭಯದಿಂದ ಪೊಲೀಸರು ಈ ವಿಚಾರದಲ್ಲಿ ಮೂಗು ತೂರಿಸಲು ಮುಂದಾಗುವುದಿಲ್ಲ.
ನಿಯಮವೇನು?: ಪ್ರವಾಸ, ಶಿಕ್ಷಣ, ವ್ಯಾಪಾರ, ಉದ್ಯೋಗ, ಚಿಕಿತ್ಸೆ, ಸಂಬಂಧಿಕರ ಭೇಟಿ ಹೀಗೆ ಹಲವು ಕಾರಣಗಳಿಂದ ವಿದೇಶಿಯರು ಕರ್ನಾಟಕಕ್ಕೆ ಆಗಮಿಸುತ್ತಾರೆ. ಯಾವ ಕಾರಣಕ್ಕೆ ಇಲ್ಲಿಗೆ ಬರಲಾಗಿದೆ. ಉಳಿದುಕೊಳ್ಳುವ ವಿಳಾಸ, ಹೊಟೇಲ್, ಕ್ಲಬ್, ಓಡಾಡುವ ಸ್ಥಳಗಳು, ಊರುಗಳು ಹೀಗೆ ಎಲ್ಲಾ ಮಾಹಿತಿ ನೋಂದಣಾಧಿಕಾರಿಗೆ ನೀಡಬೇಕು. 8 ವಾರಗಳಿಗಿಂತಲೂ ಹೆಚ್ಚು ಕಾಲ ನೀಡಿರುವ ವಿಳಾಸ ಬಿಟ್ಟು ಬೇರೆ ಕಡೆ ಉಳಿದುಕೊಳ್ಳಬೇಕು ಎಂದಾದಲ್ಲಿ ನೋಂದಣಿ ಕಚೇರಿಯಲ್ಲಿ ಮತ್ತೆ ಮಾಹಿತಿ ನೀಡಬೇಕು.
ವೀಸಾ ನಿಯಮ ಸಡಿಲ: ವಿದೇಶಿಯರ ಆಗಮನಕ್ಕೆ ಬೆಂಗಳೂರು ವಿಮಾನ ನಿಲ್ದಾಣವೇ ಹೆಬ್ಬಾಗಿಲು. ಈ ಹಿಂದೆ ಭಾರತಕ್ಕೆ ಆಗಮಿಸುವ ಮುನ್ನವೇ ವಿದೇಶಿಯರು ಆಯಾ ದೇಶಗಳಿಂದ ಅರ್ಜಿ ಸಲ್ಲಿಸಿ ವೀಸಾ ಪಡೆದುಕೊಳ್ಳಬೇಕಿತ್ತು.
ತಿಂಗಳ ಹಿಂದಷ್ಟೇ ಭಾರತ ತನ್ನ ವೀಸಾ ನೀತಿ ಸಡಿಲಗೊಳಿಸಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ ಸೇರಿದಂತೆ ಕೆಲ ರಾಷ್ಟ್ರಗಳು ಹೊರತುಪಡಿಸಿ ಉಳಿದ ರಾಷ್ಟ್ರಗಳ ನಾಗರಿಕರು ಭಾರತಕ್ಕೆ ಆಗಮಿಸಿದ ಬಳಿಕ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ ವೀಸಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪತ್ತೆ ಕಾರ್ಯ ಕಷ್ಟ: ಅವಧಿ ಮುಗಿದ ಬಳಿಕ ಅನಧಿಕೃತವಾಗಿ ಉಳಿದುಕೊಳ್ಳುವವಿದೇಶಿಯರಿಗೆ ಅವರು ನೀಡಿರುವ ವಿಳಾಸಗಳಿಗೆ ನೋಟಿಸ್ ಕಳುಹಿಸಲಾಗುತ್ತದೆ. ನೋಟಿಸ್ ನೀಡಿದ ಬಳಿಕ ಯಾವುದೇ ಪ್ರತಿಕ್ರಿಯೆ ಬರದಿದ್ದರೆ ಅವರ ವಿರುದ್ಧ ಲುಕ್ ಔಟ್ ಸರ್ಕ್ಯೂಲರ್ ಜಾರಿ ಮಾಡಲಾಗುತ್ತದೆ. ಪತ್ತೆಯಾಗುವ ವಿದೇಶಿಯರನ್ನು ವಶಕ್ಕೆ ಪಡೆದು ಅವಧಿ ಮುಗಿದ ಬಳಿಕ ವಾಸದ ಶುಲ್ಕ, ಶುಲ್ಕ ಪಾವತಿಸದ ವಿದೇಶಿಯರ ವಿರುದ್ಧ ವಿದೇಶಿಯರ ಕಾಯ್ದೆ ಕಲಂ 14 ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಷ್ಟೆಲ್ಲಾ ಕಟ್ಟು ನಿಟ್ಟಿನ ಕ್ರಮಗಳ ನಡುವೆಯೂ 3973 ವಿದೇಶಿಯರು ಎಲ್ಲಿ ಹೋದರೂ ಎನ್ನುವುದು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.
ಅವಧಿ ಮೀರಿ ಉಳಿದರೆ ಶಿಕ್ಷೆ: ವೀಸಾ ಅವಧಿ ಮುಗಿದು ಅನಧಿಕೃತವಾಗಿಭಾರತದಲ್ಲಿ ಉಳಿದುಕೊಳ್ಳುವ ವಿದೇಶಿಯರಿಗೆ 'ವಿದೇಶಿಯರ ಕಾಯ್ದೆ 1946' ಪ್ರಕಾರ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಭಾರತದಿಂದ ಉಚ್ಚಾಟನೆ ಮಾಡಲಾಗುತ್ತದೆ.

ಮಂಜುನಾಥ ನಾಗಲೀಕರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.