ಪ್ರಧಾನ ಸುದ್ದಿ

ಖಾಸಗಿಗೆ ಬಿತ್ತು ಮೂಗುದಾರ

Published On :

-ರಾಜೀವ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.3

ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ 2006ರ ವೃತ್ತಿಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಕಾಯಿದೆಗೆ ಹೊಸ ರೂಪ ನೀಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಚಿಂತಿಸಿದೆ.
ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಶುಲ್ಕವನ್ನು ಹೆಚ್ಚಿಸಲು ಸಾಧ್ಯವೇ ಇಲ್ಲ ಎಂದು ಪಟ್ಟುಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಗ್ರೀವಾಜ್ಞೆ ಮೂಲಕ 2006ರ ಕಾಯಿದೆಗೆ ಮರುಜೀವ ನೀಡಲು ನಿರ್ಧರಿಸಿದ್ದಾರೆ. ಕಳೆದ ಸಚಿವ ಸಂಪುಟ ಸಭೆಗೂ ಮುಂಚೆ ನಡೆದಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ಈ ಹಿಂದಿನ ಶುಲ್ಕ ಹಾಗೂ ಸೀಟು ಹಂಚಿಕೆ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿಲಾಗಿತ್ತು. ಆದ್ದರಿಂದ 2006 ಕಾಯಿದೆಯನ್ನು ತಡೆಹಿಡಿಯಲು ನಿರ್ಧರಿಸಲಾಗಿತ್ತು.
ಆದರೆ ಎರಡು ದಿನದ ಬಳಿಕ ಶಿಕ್ಷಣ ಸಂಸ್ಥೆಗಳ ಒಕ್ಕೂಟದಲ್ಲೇ ಒಡಕು ಏರ್ಪಟ್ಟು, ಒಪ್ಪಂದಕ್ಕೆ ಸಹಿ ಹಾಕದಿರಲು ನಿರ್ಣಯಿಸಿದ್ದವು. ಇದರಿಂದ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿದ್ದು, 2006ರ ಕಾಯಿದೆಯನ್ನೇ ತಿದ್ದುಪಡಿ ಮೂಲಕ ಜಾರಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಶುಲ್ಕ, ಸೀಟು ಹಂಚಿಕೆ ಹಾಗೂ ಪ್ರವೇಶ ಪರೀಕ್ಷೆಯ ನಿಯಮಗಳನ್ನು ಬದಲಿಸಿ ವಿದ್ಯಾರ್ಥಿ ಸ್ನೇಹಿಯಾಗಿ ನಿಯಮ ರೂಪಿಸಲು ನಿರ್ಧರಿಸಲಾಗಿದೆ. ಈ ಪ್ರಸ್ತಾಪಕ್ಕೂ ಖಾಸಗಿ ಕಾಲೇಜುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಸುಗ್ರೀವಾಜ್ಞೆ ಮೂಲಕ ಎಲ್ಲ ಬಾಯಿ ಮುಚ್ಚಿಸಲು ಮುಖ್ಯಮಂತ್ರಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಇದೆ ಕಾರಣದಿಂದ ಇವತ್ತಿನವರೆಗೂ ಶುಲ್ಕ ನಿಯಂತ್ರಣ ಹಾಗೂ ಪ್ರವೇಶ ಮೇಲ್ವಿಚಾರಣೆ ಸಮಿತಿಯನ್ನು ರದ್ದುಗೊಳಿಸಲಾಗಿಲ್ಲ.
ಇದೇ ಶುಲ್ಕದಲ್ಲಿ ತಿದ್ದುಪಡಿ ನಿಯಮ: ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ನಿಯಂತ್ರಣ ಸಮಿತಿ ಎದುರು ಮಂಡಿಸಿರುವಷ್ಟು ಶುಲ್ಕವನ್ನು ಅಂತಿಮಗೊಳಿಸಲು ಸಾಧ್ಯವಿಲ್ಲ, ಇದಲ್ಲದೇ ಅವರು ನೀಡಿರುವ ವರದಿ ಸಮರ್ಪಕವಾಗಿಲ್ಲ ಎನ್ನುವುದು ಸರ್ಕಾರದ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಗರಿಷ್ಠ 50 ಸಾವಿರ ಶುಲ್ಕವನ್ನು ನಿಗದಿ ಮಾಡಿ, ಉಳಿದಂತೆ ಕಾಲೇಜುಗಳ ಮೂಲಭೂತ ಸೌಲಭ್ಯ ಪರಿಗಣಿಸಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.
ಇದರೊಂದಿಗೆ ಶೇ.75ರಷ್ಟು ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿರಿಸಬೇಕು ಹಾಗೂ ಒಂದೇ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಈ ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಒಂದೊಮ್ಮೆ ಒಪ್ಪಂದಕ್ಕೆ ಸಹಿ ಹಾಕಲು ಖಾಸಗಿ ಶಿಕ್ಷಣ ಸಂಸ್ಥೆಗಳು ನಿರಾಕರಿಸಿದರೆ ಸುಗ್ರೀವಾಜ್ಞೆ ಮೂಲಕ ಕಾಯಿದೆಯನ್ನೇ ಜಾರಿಗೆ ತರುವುದು ಸರ್ಕಾರದ ಆಲೋಚನೆಯಾಗಿದೆ. ಕಾಯಿದೆಯ ಹಿಂದಿನ ರೂಪದಂತೆ ಶುಲ್ಕದಲ್ಲಿ ಅತಿಯಾದ ಹೆಚ್ಚಳವಾಗುವುದಿಲ್ಲ. ಅಲ್ಲದೇ ಕಾಮೆಡ್-ಕೆ ಹಾಗೂ ಸರ್ಕಾರಿ ಸಿಇಟಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳ ಪ್ರವೇಶಕ್ಕೂ ಸರ್ಕಾರದ ಸಿಇಟಿಯೇ ಅಂತಿಮವಾಗುತ್ತದೆ. ಈ ಸುಗ್ರೀವಾಜ್ಞೆಯಿಂದ ಒಪ್ಪಂದವಿಲ್ಲದೇ ಪ್ರವೇಶ ಪ್ರಕ್ರಿಯೆ ನಡೆಸಬಹುದಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲ: ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಕೆಲವು ಕಾಲೇಜುಗಳು ಮುಂದಾದರೆ, ಇನ್ನು ಕೆಲವು ಕಾಲೇಜುಗಳು ಸುತಾರಾಂ ಒಪ್ಪುತ್ತಿಲ್ಲ. ಇದರಿಂದ ಖಾಸಗಿ ಕಾಲೇಜುಗಳ ಒಕ್ಕೂಟದಲ್ಲಿಯೇ ಬಿರುಕು ಮೂಡಿದ್ದ, ಸರ್ಕಾರದ ನಿರ್ಧಾರಗಳಿಗೆ ಕೆಲ ಕಾಲೇಜುಗಳು ಬೆಂಬಲ ಸೂಚಿಸಿವೆ. ಬೆಂಗಳೂರಿನ ಕೆಲ ಪ್ರತಿಷ್ಠಿತ ಕಾಲೇಜುಗಳ ಮಾತ್ರ ಶೇ.30ರ ಶುಲ್ಕ ಹೆಚ್ಚಳದ ರಂಪಾಟದಲ್ಲಿ ತೊಡಗಿವೆ.

ವೈದ್ಯ ಶಿಕ್ಷಣ ಕಾರ್ಯದರ್ಶಿ ರಶ್ಮಿಗೆ ರಜೆಯ ಸಜೆ?
ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಪ್ರಕ್ರಿಯೆ ಹಾಗೂ ಒಪ್ಪಂದ ಕುರಿತ ರಂಪಾಟದಲ್ಲಿ ವೈದ್ಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ವಿ.ರಶ್ಮಿ ಅವರನ್ನು ರಜೆ ಮೇಲೆ ಹೋಗುವಂತೆ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ಮೂಲಗಳು ಖಚಿತಪಡಿಸಿವೆ. ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಹಾಗೂ ಕಾಯಿದೆ ತಿದ್ದುಪಡಿ ವಿಚಾರದಲ್ಲಿ  ಅಲ್ಪಸಂಖ್ಯಾತ ಕಾಲೇಜುಗಳ ಸೀಟು ಹಾಗೂ ಕೌನ್ಸೆಲಿಂಗ್ ನಿಮಯಗಳ ಬಗ್ಗೆ ರಶ್ಮಿ ಅವರು ವಿದ್ಯಾರ್ಥಿಗಳ ಪರ ನಿಲುವು ಹೊಂದಿದ್ದರು. ಆದರೆ ಸರ್ಕಾರದ ಕೆಲ ಹಿತಾಸಕ್ತಿಗಳಿಗೆ ಇದು ಇಷ್ಟವಿರಲಿಲ್ಲ. ಇದೇ ಕಾರಣದಿಂದ ಒತ್ತಾಯದ ಮೇರೆಗೆ ಅವರನ್ನು ರಜೆಯ ಮೇಲೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಕಿದ್ವಾಯಿ ಹಾಗೂ ವಿಮ್ಸ್ ಕಾರ್ಯದರ್ಶಿಗಳ ಅಕ್ರಮ ಕುರಿತ ವಿಚಾರಣೆಯು ಈ ಸೂಚನೆಗೆ ಕಾರಣ ಎಂದು ತಿಳಿದುಬಂದಿದೆ. ಶೀಘ್ರದಲ್ಲಿಯೇ ವರ್ಗಾವಣೆ ಮಾಡುವ ಸಾಧ್ಯತೆಯೂ ಇದೆ.

ಸುಗ್ರೀವಾಜ್ಞೆಯ ಮುಖ್ಯಾಂಶ
- 50 ಸಾವಿರಕ್ಕಿಂತಲೂ ಅಧಿಕ ಶುಲ್ಕ ಆಗುವುದಿಲ್ಲ.
- ರಾಜ್ಯದ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಸೀಟುಗಳು
- ಎಲ್ಲ ಸೀಟುಗಳ ಪ್ರವೇಶ ಪ್ರಕ್ರಿಯೆಗೆ ಒಂದೇ ಪ್ರವೇಶ ಪರೀಕ್ಷೆ
- ಖಾಸಗಿ ಶಿಕ್ಷಣ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಪ್ರವೇಶ ಪ್ರಕ್ರಿಯೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.