ಪ್ರಧಾನ ಸುದ್ದಿ

ರೊಚ್ಚಿಗೆದ್ದ ರೈತರಿಂದ ಮಹಿಕೋ ಕಂಪನಿ ಪೀಠೋಪಕರಣ ಧ್ವಂಸ

Published On :

ರಾಣಿಬೆನ್ನೂರು: ಕಳಪೆ ಹತ್ತಿ ಬೀಜದಿಂದ ನಷ್ಟ ಅನುಭವಿಸಿದರೂ ಪರಿಹಾರ ನೀಡದ್ದಕ್ಕೆ ಆಕ್ರೋಶಗೊಂಡ ರೈತರು ಗುರುವಾರ ತಾಲೂಕಿನ ಕಮದೋಡ ಗ್ರಾಮದಲ್ಲಿರುವ ಮಹಿಕೋ ಕಂಪನಿ ಬೀಜೋತ್ಪಾದನಾ ಕೇಂದ್ರಕ್ಕೆ ಮುತ್ತಿಗೆ ಹಾಕಿ, ಕಿಟಕಿ ಗಾಜು, ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಪೊಲೀಸರು 64 ರೈತರನ್ನು ಬಂಧಿಸಿದ್ದಾರೆ.
ಮಹಿಕೋ ಕಂಪನಿಗೆ ಸೇರಿದ ಕನಕ, ನಿಕ್ಕಿಪ್ಲಸ್, ನೀರಜ್ ಸೇರಿ ವಿವಿಧ ರೀತಿಯ ಬಿಟಿ ಹತ್ತಿಯನ್ನು ಬಿತ್ತಿ ಹಾನಿಗೊಳಗಾದ ರಾಜ್ಯದ ತುಮಕೂರು, ಬಳ್ಳಾರಿ, ಶಿವಮೊಗ್ಗ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊನ್ನಾಳಿ, ಹಗರಿಬೊಮ್ಮನಹಳ್ಳಿ ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ರೈತರು ಕಮದೋಡ ಗ್ರಾಮದ ಹತ್ತಿರವಿರುವ ಮಹಿಕೋ ಕಂಪನಿ ಬೀಜೋತ್ಪಾದನಾ ಕೇಂದ್ರದ ಎದುರು ಸೇರಿ ಕಂಪನಿಯ ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.
ಗೋವಿನಜೋಳ ಬೀಜದ ಮೂಟೆಗೆ ಬೆಂಕಿ: ರಾಜ್ಯ ರೈತ ಸಂಘದ ಮುಖಂಡರಾದ ತುಮಕೂರಿನ ಕೆಂಕೆರಿ ಸತೀಶ, ಬಳ್ಳಾರಿಯ ಹುಸೇನಸಾಬ, ಬೆಂಗಳೂರಿನ ಹೊನ್ನೂರು ಮುನಿಯಪ್ಪ, ದಾವಣಗೆರೆಯ ಹನುಮೇಶ ಮಲ್ಲಶೆಟ್ಟಿ ನೇತೃತ್ವದಲ್ಲಿ ಕಂಪನಿಯ ಆವರಣದೊಳಗೆ ನುಗ್ಗಿದ ರೈತರು, ಕಂಪನಿಯ ಪ್ಯಾಕಿಂಗ್ ವಿಭಾಗದಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗಾಗಿ ಸಿದ್ಧಪಡಿಸಿಟ್ಟಿದ್ದ ಹತ್ತಿ, ಗೋವಿನಜೋಳ ಬೀಜದ ಪ್ಯಾಕೆಟ್‌ಗಳನ್ನು ತುಂಬಿದ್ದ ಮೂಟೆ ಹೊತ್ತು ತಂದು ಕಂಪನಿಯ ಆಡಳಿತ ಕಚೇರಿ ಗೇಟಿನೆದುರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕಂಪನಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಮುಖ್ಯ ಕಚೇರಿಯ ಒಳನುಗ್ಗಲು ಮುಂದಾದರು. ಆಗ ಪೊಲೀಸರು ಪ್ರತಿಭಟನಾನಿರತ ರೈತ ಮುಖಂಡರ ಮನವೊಲಿಕೆಗೆ ಮುಂದಾದರು. ಒಳಗೆ ಪ್ರವೇಶಿಸದಂತೆ ಬಾಗಿಲಿಗೆ ಅಡ್ಡಗಟ್ಟಿದರು. ಇದರಿಂದ ರೊಚ್ಚಿಗೆದ್ದ ರೈತರು, ಆಡಳಿತ ಕಚೇರಿಯ ಕಿಟಕಿಯ ಗಾಜು, ಕಂಪನಿಗೆ ಸೇರಿದ್ದ ವಾಹನದ ಮೇಲೆ ಕಲ್ಲು ಎಸೆದರು. ಭದ್ರತಾ ಕೊಠಡಿಯ ಪೀಠೋಪಕರಣ ಧ್ವಂಸ ಮಾಡಿದರು. ಆದರೂ ಪೊಲೀಸರು ಶಾಂತಿಯುತ ರೀತಿಯಿಂದ ಪ್ರತಿಭಟಿಸುವಂತೆ ರೈತರಲ್ಲಿ ಮನವಿ ಮಾಡಿದರು. ಇದನ್ನು ಧಿಕ್ಕರಿಸಿ ಕಂಪನಿಯ ಆಸ್ತಿ ಹಾನಿಗೊಳಿಸುತ್ತಿದ್ದ 64 ಜನ ರೈತರನ್ನು ಪೊಲೀಸರು ಬಂಧಿಸಿದರು.
ಚನ್ನಗಿರಿ ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ನಾಗರಾಜ, ದಾವಣಗೆರೆಯ ರೈತ ಸಂಘದ ಮುಖಂಡ ಜಯರುದ್ದೀನ್, ಬಸವರಾಜ ಎಚ್, ಹರಿಹರ ತಾಲೂಕು ರೈತ ಸಂಘದ ಅಧ್ಯಕ್ಷ ಆಳೂರು ನಾಗರಾಜ, ಗೋಕಾಕ ತಾಲೂಕು ಅಧ್ಯಕ್ಷ ಬುಳಪ್ಪ ಬಾವಿಕಟ್ಟಿ, ಹಾವೇರಿ ಜಿಲ್ಲಾ ರೈತ ಸಂಘದ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎಸ್ಪಿ ಎನ್. ಶಶಿಕುಮಾರ್ ಮಾತನಾಡಿ, ಪ್ರತಿಭಟನೆ ನೆಪದಲ್ಲಿ ಕಂಪನಿಯ ಆಸ್ತಿಗೆ ಹಾನಿ ಮಾಡಲು ಯತ್ನಿಸಿರುವ 64 ರೈತರನ್ನು ಬಂಧಿಸಲಾಗಿದೆ. ಕಂಪನಿ ರೈತರ ವಿರುದ್ಧ ಕೇಸು ದಾಖಲಿಸಿದಲ್ಲಿ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ರೈತರ ಹೇಳಿಕೆ ಗಮನಿಸಿದಾಗ ಪರಿಹಾರ ನೀಡುವಲ್ಲಿ ತಡವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಈ ವಿಷಯದ ಕುರಿತು ಕಂಪನಿಯ ಆಡಳಿತ ಮಂಡಳಿ ಹಾಗೂ ಸರ್ಕಾರದ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು.
-ಪಿ.ವೈ. ರಾವ್, ಮಹಿಕೋ ಬೀಜೋತ್ಪಾದನಾ ವಿಭಾಗದ ಪ್ಲಾಂಟ್ ಇನ್‌ಚಾರ್ಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.