ಪ್ರಧಾನ ಸುದ್ದಿ

ಅಮ್ಮ ಭವಾನಿ!

ಅಮ್ಮ ಭವಾನಿ!
Published On :

ನಮ್ಮ ಮನೆಗಳಲ್ಲಿ ಅವಳಿದ್ದಾಳೆ.  ಮನೆಯೆಂದರೇ ಅವಳು. ಆಕೆ ತಾಯಿ, ಪತ್ನಿ, ಮಗಳು, ಮೊಮ್ಮಗಳು, ಗೆಳತಿ, ದಾದಿ, ಶಕ್ತಿ. ಆಕೆ ನಮ್ಮ ನಿಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತವಳು. ನಾವು ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸಿದವಳು. ಅಂಥ ಹೆಂಗರುಳು ಸಾಧಿಸಿದ ಮಹತ್ತುಗಳನ್ನು ನಾವು ಕಾಣದೆ ಹೋಗಿಬಿಟ್ಟೆವಾ? ಸ್ತ್ರೀ ಅಂದರೆ ಐಶ್ವರ್ಯ ರೈ, ಸೋನಿಯಾ ಗಾಂಧಿ, ಸುನೀತಾ ವಿಲಿಯಮ್ಸ್‌ಗಳಷ್ಟೇ ಕಾಣಬೇಕೆ? ನಮ್ಮ ಸುತ್ತಮುತ್ತ ಕಣ್ಬಿಟ್ಟು ನೋಡಿದರೆ ಎಷ್ಟೊಂದು ಕಡೆ ಮೌನವಾಗಿ ಮಹತ್ವದ್ದನ್ನು ಸಾಧಿಸಿದ ಹೆಂಗಳೆಯರಿದ್ದಾರೆ! ಇಂದು ವಿಶ್ವ ಮಹಿಳಾ ದಿನ. ನಮ್ಮೀ ವಿಶೇಷ ಪುಟಗಳು ಅಂಥ ಕನ್ನಡತಿಯರಿಗೇ ಅರ್ಪಿತ.


ಅಮ್ಮ ಭವಾನಿ!
ಈ ಮಹಾತಾಯಿಯನ್ನು ಕಂಡಕೂಡಲೆ 'ಬಳ್ಳಿಗೆ ಕಾಯಿ ಭಾರವೆ? ತಾಯಿಗೆ ಮಗು ಭಾರವೇ?...' ಎಂಬ ಹಾಡೊಂದು ಕಾಡಿಹೋಗುತ್ತದೆ!
ಕೈ, ಕಾಲಿನಲ್ಲಿ ಶಕ್ತಿಯೇ ಇಲ್ಲ. ಸಾಲದ್ದಕ್ಕೆ ಕುಬ್ಜತನ ಬೇರೆ. ವಯಸ್ಸು 19 ಮತ್ತು 20. ಈ ಇಬ್ಬರು ಮಕ್ಕಳನ್ನು ಎತ್ತಿಕೊಂಡು ತಾಯಿಯೊಬ್ಬಳು ಎಂಜಿನಿಯರಿಂಗ್ ಕಾಲೇಜಿನ ಮೊದಲ ಫ್ಲೋರ್‌ನಲ್ಲಿರುವ ಕ್ಲಾಸಿಗೆ ಬಿಟ್ಟು ಬರುತ್ತಾಳೆ. ನಿತ್ಯವೂ ಎಲ್‌ಕೆಜಿ ಮಕ್ಕಳ ರೀತಿಯಲ್ಲಿ ಸ್ನಾನ, ಊಟ, ಬಟ್ಟೆ ಹಾಕುವುದು ಸೇರಿದಂತೆ ಮಕ್ಕಳಸೇವೆ ಮಾಡುವ ಆ ಮಹಾತಾಯಿಯ ಹೆಸರು ಭವಾನಿ.
ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2 ಮತ್ತು 4ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ  ಜಯಂತ್ ಹಾಗೂ ರೇಖಾ, ಭವಾನಿಯವರ ಮಕ್ಕಳು. ಸಹೋದರ, ಸಹೋದರಿ ಜೆನಟಿಕ್ ಸಂಬಂಧದ ಎಂಪಿಎಸ್ -4 ಎಂಬ ಕಾಯಿಲೆಗೆ ಹುಟ್ಟಿನಿಂದಲೇ ತುತ್ತಾದವರು. ಇಂಗ್ಲೆಂಡ್ ವೈದ್ಯರೂ ಇವರಿಬ್ಬರನ್ನು ಪರೀಕ್ಷಿಸಿದ್ದಾರೆ. ಆಗ ಅವರು ಹೇಳಿದ್ದಿಷ್ಟು; 'ಜೆನಟಿಕ್ ಸಂಬಂಧದ ಈ ಕಾಯಿಲೆ ಮಕ್ಕಳ ಕೈ, ಕಾಲುಗಳಲ್ಲಿ ಶಕ್ತಿ ಕುಂದಿಸುತ್ತದೆ. ದೇಹ ಬೆಳವಣಿಗೆ ಕಾಣದೆ, ಕುಬ್ಜವಾಗುತ್ತದೆ. ಕ್ರಮೇಣ ನಿಶ್ಶಕ್ತಿ, ಹೇಳಿಕೊಳ್ಳಲಾಗದ ನೂರೆಂಟು ದೈಹಿಕ ಸಮಸ್ಯೆಗಳು ಹಿಂಸೆ ತಂದೊಡ್ಡುತ್ತವೆ. ಸದ್ಯಕ್ಕಂತೂ ಇದಕ್ಕೆ ಔಷಧಿಗಳಿಲ್ಲ. ಈ ಇಬ್ಬರು ಮಕ್ಕಳ ಬುದ್ಧಿಶಕ್ತಿ ಇತರರಿಗಿಂತಲೂ ವಿಶೇಷವಾಗಿರುತ್ತದೆ. ಚೆನ್ನಾಗಿ ಓದಿಸಿ'. ಈ ಕಾರಣಕ್ಕಾಗಿಯೇ ಭವಾನಿ ತಮ್ಮಿಬ್ಬರು ಮಕ್ಕಳಿಗೆ ಎಂಜಿನಿಯರ್ ಓದಿಸುತ್ತಿದ್ದಾರೆ!
ಮಂಡ್ಯದ ಕಲ್ಲಹಳ್ಳಿ ಬಡಾವಣೆಯ ಕೃಷ್ಣಪ್ಪ ಮತ್ತು ಭವಾನಿ ದಂಪತಿ ಯಾವತ್ತೂ ಈ ಮಕ್ಕಳನ್ನು ಅಂಗವಿಕಲರ ಥರ ಕಂಡಿಲ್ಲ. ಮಕ್ಕಳ ಭವಿಷ್ಯವನ್ನು ರೂಪಿಸಲು ಭವಾನಿ ನಡೆಸಿರುವ ಹೋರಾಟ ಬಂಡೆಯ ರೂಪದ್ದು. ತಂದೆ ಹೈಸ್ಕೂಲ್ ಮೇಸ್ಟ್ರು. ಆರೋಗ್ಯ, ದೇಹದ ಯಾತನೆಗಳ ಬಗ್ಗೆ ಯಾವತ್ತೂ ಚಿಂತಿಸಿದ ಜೀವವಲ್ಲ ಅದು. ಕೂತಲ್ಲಿ, ನಿಂತಲ್ಲಿ ಮಲಗುವಾಗಲೂ ತನ್ನಿಬ್ಬರು ಮಕ್ಕಳನ್ನು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಅಂದುಕೊಂಡವರು. ಭವಾನಿಯವರ ಆದರ್ಶದ ಮಾತುಗಳನ್ನು ನೀವು ಕೇಳಲೇಬೇಕು; 'ನನ್ನ ಮಕ್ಕಳಿಗೆ ಅನುಕಂಪ, ಕಣ್ಣೀರು ಬೇಡ. ಭಿಕ್ಷೆಯಂತೂ ಬೇಡವೇ ಬೇಡ. ಅವಕಾಶ ಬೇಕು. ಸರ್ಕಾರದ ಯಾವುದೇ ನೆರವು ಇಲ್ಲಿಯ ತನಕ ಸಿಕ್ಕಿಲ್ಲ. ನಮ್ಮ ಮಕ್ಕಳಿಗಿಂತಲೂ ವಿಚಿತ್ರವಾಗಿ ನರಳುವ, ಬುದ್ಧಿ ಹೀನ, ದೇಹದ ಯಾವುದೇ ಭಾಗಗಳೂ ಸರಿಯಲ್ಲದ ಮಕ್ಕಳನ್ನು ನಾನು ಕಂಡಿದ್ದೇನೆ. ಹೀಗಾಗಿ ನಮ್ಮ ಮಕ್ಕಳು ದೇವರು ಕೊಟ್ಟ ವರವೇ ಹೊರತು ಶಾಪವಲ್ಲ. ದೇವರು ಆತ್ಮಸ್ಥೈರ್ಯವನ್ನು ಮಕ್ಕಳ ಮೂಲಕ ನನಗೆ ಕಲಿಸಿದ್ದಾನೆ. ಅದೇ ದೊಡ್ಡ ಭಾಗ್ಯ'. ಈ ಮಕ್ಕಳಿಗೆ 20 ವರ್ಷಗಳಿಂದ ಸಾಕಷ್ಟು ವೈದ್ಯರಿಗೆ ತೋರಿಸಿದ್ದಾರೆ. ಈಗ ಒಬ್ಬರಿಗೆ 2.50 ಕೋಟಿ ರು. ವೆಚ್ಚ ಮಾಡಿ ಔಷಧಿ ಕೊಡಿಸಬೇಕಾಗಿದೆ. ಇಬ್ಬರಿಗೂ ಸೇರಿ 5 ಕೋಟಿ ಹಣ ಎಲ್ಲಿಂದ ತರುವುದು ಎಂಬ ಚಿಂತೆ .ಭವಾನಿ ಅವರ ಸಂಪರ್ಕ ಸಂಖ್ಯೆ, ಮೊ. 914183650.
- ಕೆ.ಎನ್. ರವಿ

ಹುಣಸೆ ಮುಪ್ಪಾದರೂಹುಲಿ ಮುಪ್ಪೇ?
ಬಹುಶಃ ನಿಮಗೆ ಹೈಟೆಕ್ ಮಾಲ್‌ಗಳಲ್ಲಿ ತರಕಾರಿ ಸಿಗಬಹುದು. ಆದರೆ, ಇಂಥ ಕಾಡುವ ಅಜ್ಜಿ ಸಿಗಲಿಕ್ಕಿಲ್ಲ! ಇವಳು ಹುಲಿಯಮ್ಮ. ವಯಸ್ಸು 90. ಗೋಕರ್ಣ ಮಾದನಗೇರಿಯ ರಸ್ತೆ ಅಂಚಿನಲ್ಲಿ ತರಕಾರಿ ಮಾರಾಟಕ್ಕೆ ಮಹಿಳೆಯರೆಲ್ಲ ಸಾಲಾಗಿ ಕೂತಿರುತ್ತಾರೆ. ವ್ಯಾಪಾರಿಗಳ ಜೊತೆ ಖರೀದಿ ಚೌಕಾಶಿಗೆ ನಿಲ್ಲುವ ಮುಂಚೆ ಒಂದು ಕ್ಷಣ ಅಲ್ಲಿ ಕುಳಿತ ಈ ಹುಲಿಯಮ್ಮನ ಮುಖ ಓದಬೇಕು.
ಮುಂಜಾನೆ 5ಕ್ಕೆ ಎದ್ದು 15 ಕಿ.ಮೀ. ದೂರದಿಂದ ಬಸ್ಸಿನಲ್ಲಿ ಬರುತ್ತಾಳೆ. ಮಾದನಗೇರಿಯ ಆ ಸಂತೆ ಬೆಳಗ್ಗೆಯಿಂದ ಸಂಜೆವರೆಗೂ ಇರುತ್ತದೆ. ಎಲ್ಲ ಖರ್ಚು ಕಳೆದು, ದಿನದ ಅಂತ್ಯದಲ್ಲಿ ಆಕೆಯ ಸೆರಗಿನ ಗಂಟೊಳಗೆ 150-200 ರುಪಾಯಿ ಉಳಿಯಬಹುದೇನೋ. ಭಾರ ಹೊರಲಾಗುವುದಿಲ್ಲ ಎಂಬ ನೋವಿದೆ ಅವಳಲ್ಲಿ. ಕುಳಿತು ಉಣ್ಣಬಾರದು, ಕುಟುಂಬಕ್ಕೆ ಭಾರವಾಗಬಾರದೆಂಬ ಜೀವನ ಪಾಲಿಸಿ ಅವಳ ಕಣ್ಣುಗಳಲ್ಲಿ. ದಿನವಿಡೀ ಬಿಸಿಲಿನಲ್ಲಿ ಒಣಗಿದರೂ ತರಕಾರಿ ಒಣಗದಂತೆ ನೆರಳಾಗುತ್ತಾಳೆ. ಕೂತು ಸುಸ್ತಾದಾಗ ಒಂದು ಕ್ಷಣ ಗುಬ್ಬಿ ನಿದ್ದೆ.
ಗೋಕರ್ಣ ಸೀಮೆಯ ಸಮುದ್ರ ತಟದ ಸಾವಿರಾರು ಎಕರೆಯಲ್ಲಿ ಹಾಲಕ್ಕಿ ಬುಡಕಟ್ಟು ಜನಾಂಗ ಬೇಸಿಗೆಯಲ್ಲಿ ತರಕಾರಿ ಬೆಳೆಯುತ್ತದೆ. ಭೂಮಿ ಇಲ್ಲದವರೂ ಬೇರೆಯವರ ಭೂಮಿಯನ್ನು ಎರವಲು ಪಡೆದು ಬೆಳೆಯುತ್ತಾರೆ.
ಕಾಯಿಪಲ್ಲೆಗಳ ಸಗಟು ಮಾರಾಟ ಗೋಕರ್ಣ ಬೀದಿಯಲ್ಲಿ ನಡುರಾತ್ರಿ 1ರವರೆಗೂ ಸಾಗುತ್ತದೆ. ಈ ಹುಲಿಯಮ್ಮನ ವ್ಯಾಪಾರ ಕ್ಷೇತ್ರವೂ ಇದೇ. ನಮಗೆ ತರಕಾರಿ ಬೆಳೆಯುವ ಇವರು, ದಿನಕ್ಕೆ ಎರಡು ಗಂಟೆಯೂ ನಿದ್ದೆ ಮಾಡುವುದಿಲ್ಲ.
ಮಾದನಗೇರಿಯ ತರಕಾರಿ ಬಳಗ ಗಮನಿಸಿದರೆ, ಪರಸ್ಪರ ಪೈಪೋಟಿಯ ಸಂಘರ್ಷವಿಲ್ಲದ ಅವರ ಮೊಗದಲ್ಲಿ ಖುಷಿ ಮೊಗೆದಷ್ಟೂ ಉಕ್ಕುತ್ತಿರುತ್ತದೆ. ಈಕೆಯ ಇಷ್ಟದ ಕಾಯಕದಲ್ಲಿ ಜೀವನದರ್ಶನವಾಗುತ್ತದೆ. ತರಕಾರಿಗಿಂತ ಮುಂಚೆ ಹುಲಿಯಜ್ಜಿಯನ್ನು ಹುಡುಕುತ್ತೇನೆ. ಅಜ್ಜಿ ಇದ್ದಾಳೆಂದರೆ, ಎದುರು ತರಕಾರಿ ಇದ್ದೇ ಇರುತ್ತದೆ. ಮಾತಾಡಿಸುವ ಹಂಬಲಕ್ಕೆ ತರಕಾರಿ ಬೆಲೆ ವಿಚಾರಿಸದೇ ಒಂದಿಷ್ಟು ಹಣ ಕೊಡುತ್ತೇನೆ. ಮರುಕ್ಷಣ ಹುಲಿಯಜ್ಜಿ ಹಣಕ್ಕಿಂತ ಹೆಚ್ಚು ಕಾಯಿಪಲ್ಲೆಕೊಡುತ್ತಾಳೆ. ಒಂದು ಪೈಸೆಯನ್ನೂ ಉಳಿಸಿಕೊಳ್ಳದೆ ಲೆಕ್ಕಾಚಾರ ಮುಗಿಸುತ್ತಾಳೆ. ಮತ್ತಷ್ಟು ತರಕಾರಿ ನೀಡಿ ಅಕ್ಕರೆಯಲ್ಲಿ ನಗುತ್ತಾಳೆ.
- ಶಿವಾನಂದ ಕಳವೆ

ಭ್ರಷ್ಟರ ವಿರುದ್ಧ ಎಲ್ಸಿ ಹೆಜ್ಜೆ...
ಭ್ರಷ್ಟಾಚಾರದ ವಿರುದ್ಧ ಮಾತಾಡುವುದು ಕೇವಲ ಕಿರಣ್ ಬೇಡಿಯಷ್ಟೇ ಅಲ್ಲ, ಎಲ್ಸಿ ಥಾಮಸ್‌ರಂಥವರೂ ಇದ್ದಾರೆ!
ತುಸು ಮೈಮರೆತರೂ ಮಾಡದ ಕೆಲಸಕ್ಕೆ ಅನ್ಯಾಯವಾಗಿ ಸಾವಿರಾರು ಮೊತ್ತ ಗುಳುಂ ಆಗುತ್ತಿತ್ತು. ಇದನ್ನು ಸಕಾಲದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಹಣದ ದುರುಪಯೋಗ ನಿಲ್ಲಿಸಿದರು. ಜನಪರ ಹೋರಾಟದಲ್ಲಿ ದನಿ ಎತ್ತಿದ್ದಕ್ಕೆ ಹಲ್ಲೆಗೊಳಗಾದರು. ಗ್ರಾಮ ಪಂಚಾಯ್ತಿ ಸದಸ್ಯೆಯಾಗಿ, ಸುಮ್ಮನೆ ಎದುರಾದ ಅಪಮಾನವನ್ನೂ ಧೈರ್ಯವಾಗಿ ಎದುರಿಸಿದರು.  ತನ್ನ ವಾರ್ಡ್‌ನಲ್ಲಿ ಹೆಚ್ಚಿನ ಕುಟುಂಬವನ್ನು ಉದ್ಯೋಗ ಖಾತರಿ ಯೋಜನೆಗೆ ಸೇರಿಸಿದರು. ಈಗ ಈಕೆ ಎಲ್ಲರಿಗೂ ಬೇಕಾದ ಸದಸ್ಯೆ.
ಮಂಗಳೂರಿನ ಕುಟ್ರುಪಾಡಿ ಗ್ರಾಪಂ ಸದಸ್ಯೆ ಎಲ್ಸಿ, ಬಡಕುಟುಂಬದ ಹೋರಾಟದ ಕುಡಿ. ಸದಾ ಪಂಚಾಯ್ತಿ ಅಭಿವೃದ್ಧಿಯ ತುಡಿತ. ಪತಿಗೆ ಕೂಲಿ ಕೆಲಸ. ಸ್ವಂತ ಮನೆ ಇಲ್ಲ. ಉಳಿಪುವಿನ ತಾಯಿ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಜೀವನ. ಉದ್ಯೋಗ ಖಾತರಿಯಲ್ಲಿ ನೆಲ ಸಮತಟ್ಟು ಕಾಮಗಾರಿ ನಡೆದಿತ್ತು. ಹಳೇ ಕಾಮಗಾರಿಗೆ ಹೊಸ ಕಾಮಗಾರಿ ಎಂದು ರು. 40 ಸಾವಿರ ಬಿಲ್ ಮಾಡಿ, ಪಂಚಾಯ್ತಿಗೆ ಸಲ್ಲಿಸಿಯಾಗಿತ್ತು. ಇದೇ ರೀತಿ ಒಬ್ಬರು ಹಿಟಾಚಿ ಬಳಸಿ ನರೇಗ ಕಾಮಗಾರಿ ನಡೆಸಿದ್ದರು. ಆದರೆ ಬಿಲ್ ಸಲ್ಲಿಕೆ ವೇಳೆ ಪ್ರತ್ಯೇಕ ಕೂಲಿ ಮೊತ್ತ ಬರೆದಿದ್ದರು. ಇದನ್ನು ಎಲ್ಸಿ ಪಂಚಾಯ್ತಿ ಗಮನಕ್ಕೆ ತಂದರು. ಆದರೆ ಅಧಿಕಾರಶಾಹಿ, ಕೆಲವು ಸದಸ್ಯರು ಭ್ರಷ್ಟಾಚಾರ ಪೋಷಣೆಗೆ ಮುಂದಾಗಿದ್ದರು. ಪಂಚಾಯ್ತಿ ಸಭೆಯಲ್ಲಿ ಎಲ್ಸಿ ಒತ್ತಾಯಕ್ಕೆ ಬೆಲೆ ಸಿಗಲಿಲ್ಲ. ಒಂಬುಡ್ಸ್‌ಮನ್‌ಗೆ ದೂರು ನೀಡಿ, ಯಶಸ್ವಿಯಾದರು. ಈ ಘಟನೆ ಬಳಿಕ ಎಲ್ಸಿಗೆ ಪಂಚಾಯ್ತಿಯಲ್ಲಿ ವಿರೋಧಿಗಳು ಹೆಚ್ಚಾದರು. ಆಕ್ರಮಣವೂ ನಡೆಯಿತು. ದ.ಕ. ಗ್ರಾಮೀಣಾಭಿವೃದ್ಧಿ ಸೊಸೈಟಿಯಲ್ಲಿ 12 ವರ್ಷ ಸೇವೆ ಸಲ್ಲಿಸಿದ್ದ ಎಲ್ಸಿ ಎಲ್ಲೆಡೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. 80 ಮನೆಯಲ್ಲಿ ಖಾತರಿಗೆ ಒಪ್ಪಿಕೊಂಡು ಉದ್ಯೋಗ ಚೀಟಿ ಕೊಡಿಸಿದರು. ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನವನ್ನು ಜನರಿಗೆ ತಲುಪಿಸುವಲ್ಲಿ ಮುಂದು.
- ಆತ್ಮಭೂಷಣ್

ಹೇಳಿ ಅಜ್ಜಿ, ಏನ್ ಸುದ್ದಿ?
ಬಿಜಾಪುರದ ಗೋಲ್‌ಗುಂಬಜ್ ಗೊತ್ತಲ್ಲ... 'ಎಷ್ಟು ಸುಂದರ'! ಹಾಗಂತ ನೀವು ಹಗಲಲ್ಲಿ ನೋಡಿ ಉದ್ಗಾರ ತೆಗೆಯುತ್ತೀರಿ. ಎಂದಾದರೂ ಬೆಳ್ಳಂಬೆಳಗ್ಗೆ ಅಲ್ಲಿಗೆ ಭೇಟಿ ನೀಡಿದ್ದೀರಾ? ಅದರೆದುರು ಪತ್ರಿಕೆ ಹರವಿ ಕುಳಿತ 90ರ ಅಜ್ಜಿ ಗೌರಮ್ಮ ಸಾವಕಾರ ಕಣ್ಣಿಗೆ ಬಿದ್ದಿದ್ದಾಳಾ?
ಬಹುಶಃ ಬಿದ್ದಿರಲಿಕ್ಕಿಲ್ಲ! ನ್ಯೂಸ್‌ಪೇಪರ್ ಮಾರುವ ಈ ಅಜ್ಜಿ ಎಂದು ನ್ಯೂಸ್ ಆಗಿಲ್ಲ. ಇಲ್ಲಿನ ಪಾಶ್ಚಾಪುರ ಪೇಠ ಬಡಾವಣೆ ನಿವಾಸಿಯಾದ ಈಕೆಗೆ ಮೂವರು ಗಂಡು, ಮೂವರು ಹೆಣ್ಣು ಮಕ್ಕಳು. 40 ವರ್ಷಗಳ ಹಿಂದೆಯೇ ಗಂಡ ತೀರಿದರು. ಸಂಸಾರ ಸಾಗಿಸಲು ಅಜ್ಜಿ ಪುಟ್ಟ ಕಿರಾಣಿ ಅಂಗಡಿ ಇಟ್ಟಳು. ಬಂಡವಾಳವಿಲ್ಲದ ಕಾರಣ ಅದು ಬಂದ್ ಆಯಿತು. ಮಕ್ಕಳೆಲ್ಲರ ಮದುವೆ ಮಾಡಿದ್ದಾಳೆ. ಸದ್ಯ ಕೊನೆಯ ಪುತ್ರ ಶರಣಬಸಪ್ಪನೊಂದಿಗೆ ವಾಸ. ಗಂಡ ತೀರಿಹೋದ ಬಳಿಕ ಈಕೆಯ ಕೈಹಿಡಿದಿದ್ದು ಸುದ್ದಿಪತ್ರಿಕೆಗಳು.
ಬೆಳಗ್ಗೆ 5 ಗಂಟೆಗೆ ಸಿದ್ಧಳಾಗಿ, ಸರಿಯಾಗಿ 6 ಗಂಟೆಗೆ ಪೇಪರ್ ಮಾರತೊಡಗುತ್ತಾಳೆ. ಎಲ್ಲ ಪತ್ರಿಕೆ ಮಾರಿಯೇ ಈಕೆ ಮನೆಗೆ ಹೋಗುವುದು. ಬೆಳಗ್ಗೆ 10ಕ್ಕೆ ಮಗ ಶರಣಬಸಪ್ಪ ಉಪಾಹಾರ ತಂದುಕೊಡುತ್ತಾನೆ. ಪೇಪರಿನ ಎಲ್ಲ ಲೆಕ್ಕಾಚಾರವನ್ನು ಸಂಜೆ ಮಗನಿಗೆ ಒಪ್ಪಿಸುತ್ತಾಳೆ. ದಿನದಲ್ಲಿ ಏನಿಲ್ಲ ಅಂದರೂ 100 ಪತ್ರಿಕೆ ಮಾರುತ್ತಾಳೆ. ಇಷ್ಟಕ್ಕೇ ದಣಿಯುವುದಿಲ್ಲ. ಪತ್ರಿಕೆ ಮಾರಿ ಮುಗಿಸಿದ ಬಳಿಕ ಮನೆಗೆಲಸದಲ್ಲಿ ಬ್ಯುಸಿ. ಅಂದಹಾಗೆ, ಈ ಅಜ್ಜಿಗೆ ಯಾವತ್ತೂ ಕೆಮ್ಮು, ನೆಗಡಿ ಕಾಡಲಿಲ್ಲ. ಜೀವನದಲ್ಲಿ ಒಮ್ಮೆಯೂ ಮಾತ್ರೆ, ಔಷಧಿ ಸೇವಿಸದ ದಾಖಲೆಯೂ ಇವಳ ಹೆಸರಿನಲ್ಲಿದೆ. ಅಂದಹಾಗೆ, ಅಜ್ಜಿಯ ದಿನಪತ್ರಿಕೆ ಮಾರಾಟದ ವೃತ್ತಿಗೆ 20 ವರ್ಷ! ಬೇಗನೆ ಏಳುವುದು, ಆಸಕ್ತಿಯಿಂದ ದುಡಿಯುವುದು, ನಿರಂತರವಾಗಿ ಕೆಲಸ ಮಾಡುವುದು ಈಕೆಯ ಮೂರಂಶದ ಸೂತ್ರ.
- ರುದ್ರಪ್ಪ ಆಸಂಗಿ

ಸಿಂಪಲ್ ಸೈಕಲ್ಲಜ್ಜಿ
ದೇಹದಲ್ಲಿ ಯವ್ವನದ ಗಾಳಿ ಎಂದೋ ಪುಸ್ಸೆಂದಿದೆ. ಆದರೆ, ಉತ್ಸಾಹದ ಗಾಳಿ ಒಳಗೇ ಇದೆ. ಇದೇ ನೀತಿಯಲ್ಲಿ ನಿತ್ಯ ಸೈಕಲ್ಲು, ಬೈಕಿನ ಟಯರ್‌ಗಳಿಗೆ ಪಂಕ್ಚರ್ ಹಾಕಿ, ಗಾಳಿ ತುಂಬುವ ಕೆಲಸದಲ್ಲಿ ನಿರತಳಾಗುತ್ತಾಳೆ 65ರ ಪ್ರಾಯದ ಶಾಂತಮ್ಮ.
ನೀವೀಕೆಯನ್ನು ನೋಡಬೇಕೆಂದರೆ ಪಂಕ್ಚರ್ ಟಯರ್ ಹಿಡಕೊಂಡು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಾರಾಜಪೇಟೆಗೆ ಹೋಗಬೇಕು. ಅಲ್ಲಿ ಸಿಕ್ಕವರೆಲ್ಲ ಶಾಂತಮ್ಮನ ಮನೆ ವಿಳಾಸವನ್ನು ನಿಮಗೆ ಕೊಡಬಹುದು. ಈಕೆಯ ಕಾಯಕಕ್ಕೆ ಎಂಟು ವರುಷ. ಎಲ್ಲ ಮಹಿಳೆಯರಂತೆ ಈಕೆಗೂ ನಿತ್ಯ ಮನೆಯ ಕಸ ಗುಡಿಸುವುದಿರುತ್ತದೆ, ಪಾತ್ರೆ ತೊಳೆಯುವುದಿರುತ್ತದೆ, ಅಡುಗೆ ಮಾಡುವುದಿರುತ್ತದೆ. ಇವೆಲ್ಲವನ್ನೂ ಪೂರೈಸಿಯೇ ಶಾಂತಮ್ಮ ಈ ಡ್ಯೂಟಿಗೆ ಸರಿಯಾದ ಟೈಮಿನಲ್ಲಿ ಹಾಜರಾಗುತ್ತಾರೆ. ಪಂಕ್ಚರ್ ಹಾಕಲು ಈಕೆಗೆ ಹತ್ತೇ ನಿಮಿಷ ಸಾಕು. ಈಕೆ ತೀರಾ ಬಡವಿ. ಇದ್ದ ಒಂದು ಹೆಣ್ಣು ಮಗುವೂ ಅನಾರೋಗ್ಯದಿಂದ ತೀರಿತು. ಪತಿಗೆ ಸೈಕಲ್ ಶಾಪ್ ಹಾಕುವ ಯೋಚನೆ ಬಂತು. ಪಂಕ್ಚರ್ ಹಾಕಲು ಈಕೆ ಕಲಿತಿದ್ದೂ ಆಗಲೇ. ದಿನಗಳೆದಂತೆ ಸೈಕಲ್‌ಗಳ ಸಂಖ್ಯೆ ಕಡಿಮೆಯಾದಾಗ ಬೈಕ್‌ನ ಸಣ್ಣಪುಟ್ಟ ರಿಪೇರಿ, ಪಂಕ್ಚರ್ ಹಾಕುವುದೂ ಅಭ್ಯಾಸವಾಯಿತು. ದಿನಕ್ಕೆ ಕಡಿಮೆ ಎಂದರೂ ರು. 150-200 ದುಡಿಯುತ್ತಾಳೆ.
ಈ ಶಾಂತಮ್ಮ ಇಷ್ಟಕ್ಕೇ ಕೂರುವುದಿಲ್ಲ. ಬಿಡುವಿದ್ದರೆ ಹರಿದ ಸೀರೆ, ಇನ್ನಿತರ ಬಟ್ಟೆಗಳಿಂದ ಮ್ಯಾಟ್ ತಯಾರಿಸುತ್ತಾರೆ. ಅಕ್ಷರ ಜ್ಞಾನವಿಲ್ಲ. ಆದರೂ ಲೆಕ್ಕಾಚಾರ ಪಕ್ಕಾ.
- ನಾರಾಯಣ ಹೆಗಡೆ

ಏಕಾಂಗಿನಿ
ಆರು ಮಕ್ಕಳು ನಾನಾ ಬಗೆಯ ಅಂಗವಿಕಲತೆ ಎದುರಿಸುತ್ತಿದ್ದಾರೆ. ಪತಿ ದುಡಿಯುತ್ತಾನಾದರೂ ಮಾತು ತೊದಲುತ್ತದೆ. ಹೀಗಾಗಿ, ಇಡೀ ಕುಟುಂಬದ ಜವಾಬ್ದಾರಿ ಹೊತ್ತಿರುವ ಈ ಮಹಿಳೆ, ಮಕ್ಕಳ ಲಾಲನೆ-ಪಾಲನೆಯ ಜತೆಗೆ ಅಡುಗೆ ಮಾಡಬೇಕು. ಊಟವನ್ನೂ ಮಾಡಿಸಬೇಕು. ಆದರೂ ಎದೆಗುಂದದೆ ಬದುಕು ಸಾಗಿಸುತ್ತಿದ್ದಾಳೆ.
ಇಂಥ ಕಷ್ಟಸಹಿಷ್ಣು ಮಹಿಳೆಯ ಹೆಸರು- ಪಾರ್ವತಿ ಪಡೆಯಪ್ಪ ಹರಿಜನ.
ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಪಾರ್ವತಿ ಮತ್ತು ಪಡೆಯಪ್ಪ ದಂಪತಿಗೆ ಏಳು ಮಕ್ಕಳು. ಆರು ಮಕ್ಕಳು ಅಂಗವಿಕಲರು. ಹಿರಿಯ ಮಗಳಷ್ಟೇ ಆರೋಗ್ಯವಂತೆ. ಅವಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಆಕೆಗೆ ಜನಿಸಿದ ಮಗುವೂ ಅಂಗವಿಕಲ. ಹೀಗಾಗಿ, ಇಡೀ ಕುಟುಂಬಕ್ಕೆ ಪ್ರಯಾಸ.
ಪಡೆಯಪ್ಪನಿಗೆ ಮಾತು ತೊದಲುತ್ತದೆ. ಮಗ ಹನುಮಂತನ (18) ಕಾಲು ಊನ. ಅಂಬಕ್ಕ (15), ಮೀನಾಕ್ಷಿ (13), ಯಲ್ಲಮ್ಮ (11), ಬಸಮ್ಮ (9) ಹಾಗೂ ಶ್ರೀದೇವಿ ಬುದ್ಧಿಮಾಂಧ್ಯರು. ಕಡುಬಡತನದ ಕಾರಣ ಗಂಡ ಕೂಲಿ ಮಾಡುತ್ತಾನೆ. ಮಗ ಮನೆಯ ಸ್ಥಿತಿ ನೋಡಲಾರದೆ ಊರಿನಲ್ಲಿ ಭಿಕ್ಷೆ ಬೇಡಿ, ಕುಟುಂಬದ ಪೋಷಣೆಗೆ ನೆರವಾಗುತ್ತಿದ್ದಾನೆ. ಮಕ್ಕಳನ್ನು ಜೋಪಾನ ಮಾಡುವುದರಲ್ಲೇ ಪಾರ್ವತವ್ವನ ದಿನ ಕಳೆಯುತ್ತದೆ. ಅಂಗವಿಕಲರು, ಬುದ್ಧಿಮಾಂಧ್ಯರಾಗಿರುವ ಕಾರಣ ಮಕ್ಕಳಿಗೆ ಶಿಕ್ಷಣವಿಲ್ಲ. ಮಕ್ಕಳು ಏಕೆ ವಿಕಲಾಂಗರಾಗಿದ್ದಾರೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಅಂಗವಿಕಲ ಮಕ್ಕಳು ಹಾಗೂ ಪತಿಯಲ್ಲಿ ಆತ್ಮವಿಶ್ವಾಸ ಮೂಡಿಸುತ್ತ ಪಾರ್ವತಿ ಜೀವನ ನಡೆಸುತ್ತಿದ್ದಾಳೆ. ಈ ಮೊದಲು ಗುಡಿಸಲಲ್ಲಿ ವಾಸಿಸುತ್ತಿದ್ದ ಕುಟುಂಬ ಸರ್ಕಾರ ನೀಡುವ ಆಸರೆ ಮನೆಯನ್ನು ಪಡೆದುಕೊಂಡು ಅದರಲ್ಲಿ ತುಸು ನೆಮ್ಮದಿ ಕಂಡುಕೊಂಡಿದೆ. ಅಂಗವಿಕಲ ಮಕ್ಕಳ ಮಾಸಾಶನ ಕೊಂಚ ಆಧಾರವಾಗಿದೆ.
- ಸೋಮರಡ್ಡಿ ಅಳವಂಡಿ

ಮಾರ್ಚ್ 8 ಮಹಿಳಾ ದಿನ
ಇಂದು ಅವಳದ್ದೇ ದಿನ. ಇಂದೇನು, ನಿತ್ಯವೂ ಅವಳದ್ದೇ ದಿನ. ಮುಂಜಾನೆ ಎದ್ದು 'ಕರಾಗ್ರೆ ವಸತೇ ಲಕ್ಷ್ಮಿ' ಎಂಬ ಸ್ತೋತ್ರದಿಂದ ರಾತ್ರಿ ಯಾವುದೋ ಕರಾಳ ಕನಸಿನಲ್ಲಿ ಧಿಗ್ಗನೆದ್ದು ಅಮ್ಮ ಎಂದು ಕೂಗುವವರೆಗೂ ಅವಳೇ ಆವರಿಸಿದ್ದಾಳೆ. ಈ ಜಗತ್ತಿನಲ್ಲಿ ಹೆಣ್ಣೀಗ ಹಿಂದೆ ನೋಡುತ್ತಿಲ್ಲ. ಎಲ್ಲದರಲ್ಲೂ ಅವಳು ಮುಂದೆ. ಸೋತಂತೆ ಕಾಣಿಸದೆ, ದಣಿದಂತೆ ಕುಸಿಯದೆ, ಸಾಧನೆಯ ಹಿಂದೆ ನಿರಂತರ ಓಡುತ್ತಿರುವ ಆಕೆಯನ್ನು ಪ್ರಶಂಸಿಸಲು ಇದೊಂದು ದಿನ ಸಾಲದು. ನಿತ್ಯ ಸುದ್ದಿಯಾಗುವ ಸೆಲೆಬ್ರಿಟಿಗಳ ಮಧ್ಯ, ಸುದ್ದಿಯಾಗದೆ ಇರುವ ಸಾಮಾನ್ಯ ಸಾಧಕಿಯರೂ ಸಾವಿರಾರಿದ್ದಾರೆ. ಅವರಲ್ಲಿ ಕೆಲವರು ಇಲ್ಲಿ...

ಹರಕು ಬದುಕನ್ನು ಹೊಲಿಯಬಹುದು!
ಈಕೆಗೆ 13 ವರ್ಷವಾಗಿತ್ತೇನೋ. ಮದುವೆಯಾಯಿತು. ನಾಲ್ಕು ವರ್ಷದೊಳಗೇ ಸಂಸಾರದ ಶೇ.75 ಹೊಣೆ ಹೆಗಲಮೇಲೆ ಬಿತ್ತು. ಗಂಡ ಅಪಘಾತದಲ್ಲಿ ಮಡಿದ. ಆಗ ಸೇಡಂನ ಮಾಯಾದೇವಿ ಮಡಿಲಲ್ಲಿ ಇಬ್ಬರು ಕಂದಮ್ಮಗಳಿದ್ದರು. ಆಗ ಮಾಯಾದೇವಿಗೆ 18 ವರ್ಷ. ಈಗಿವರಿಗೆ 38 ವರುಷವಾಗಿರಬಹುದು. ಇವರಷ್ಟು ಚೆನ್ನಾಗಿ ಬಟ್ಟೆ ಹೊಲಿಯುವ ಪ್ರೊಫೆಷನಲ್ ಟೈಲರ್ ಸೇಡಂನಲ್ಲೇ ಇಲ್ಲ! ಸೇಡಂನಲ್ಲಿ ತನ್ನ ಮಕ್ಕಳು, ಅಣ್ಣಂದಿರೊಂದಿಗೆ ಪುಟ್ಟ ಕೋಣೆಯಲ್ಲಿ ವಾಸವಿರುವ ಮಾಯಾದೇವಿಗೆ ಜಗತ್ತು ವಿಶಾಲವಿದೆ ಅಂತನ್ನಿಸಿ ಎಷ್ಟೋ ವರುಷಗಳಾಗಿವೆ. ಕೊತ್ತಲಬಸವೇಶ್ವರ ಮಂದಿರ ಪ್ರಾಂಗಣದಲ್ಲಿ ವಾಸವಿದ್ದಾಗ, ಬಸವರಾಜ ಪಾಟೀಲ್ ಸೇಡಂ ಈಕೆಯನ್ನು ಸಂದರ್ಶಿಸಿದರು. ಕೊತ್ತಲ ಬಸವೇಶ್ವರ ಭಾರತೀಯ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಪಾಟೀಲ್, ಮಾಯಾದೇವಿಯ ಹರಿದುಹೋದ ಬದುಕಿನ ದಯನೀಯತೆ ಕಂಡು ಮರುಗಿದರು. ಮರುಕ್ಷಣವೇ ಹೊಲಿಗೆ ಯಂತ್ರ ಕೊಟ್ಟು, ಬದುಕುವ ಕಲೆ ಹೇಳಿಕೊಟ್ಟರು. ತಮ್ಮ ಸಂಸ್ಥೆಯಲ್ಲಿರುವ ಹೊಲಿಗೆ ತರಬೇತಿ ಕೇಂದ್ರಕ್ಕೆ ಇವರನ್ನು ಕರೆತಂದು, ತರಬೇತಿಗೆ ಪ್ರೇರೇಪಿಸಿದರು. 10 ವರ್ಷ ಹೊಲಿಗೆಯ ಟ್ರೈನಿಂಗ್ ಕೊಟ್ಟರು ಮಾಯಾದೇವಿ. ಇದೀಗ ರಾಜಶ್ರೀ ಸಿಮೆಂಟ್ ನಡೆಸುತ್ತಿರುವ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಹೊಲಿಗೆ ತರಬೇತುದಾರರಾಗಿದ್ದಾರೆ. ಮಾಸಿಕ 5 ಸಾವಿರ ರು. ಪಡೆಯುತ್ತಿದ್ದಾರೆ. ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಮಗಳು ಡಿಪ್ಲೋಮಾ ಪೂರೈಸಿ, ಮದುವೆಯಾಗಿ ಹಾಯಾಗಿದ್ದಾಳೆ. ಮಾಯಾದೇವಿ ಹೊಲಿಗೆಯೊಂದಿಗೆ ಗೊಂಬೆಗಳನ್ನು ಮಾಡುವ, ಎಂಬ್ರಾಯಿಡರಿ ವಿದ್ಯೆಯಲ್ಲೂ ಪ್ರವೀಣೆ. ಅಲ್ಲದೆ ಬಳೆ, ಫ್ಯಾಷನ್ ಡಿಸೈನಿಂಗ್, ಅಗರಬತ್ತಿ, ಕ್ಯಾಂಡಲ್ ತಯಾರಿಕೆಯಲ್ಲೂ ಮಾಯಾದೇವಿ ಹೆಸರು ಮಾಡಿದ್ದಾರೆ. ಇದೀಗ ಮೂರ್ನಾಕ್ಕು ಹುಡುಗರಿಗೆ ಕೆಲಸವನ್ನೂ ಕೊಟ್ಟಿದ್ದಾರೆ.
- ಶೇಷಮೂರ್ತಿ ಅವಧಾನಿ

'ಸೂಜಿ'ಮಲ್ಲಿಗೆ
ಈ ಕಥೆಯ ನಾಯಕಿ ಚಿಕ್ಕಮಣಿ. ಬಂಡೀಪುರ ಅಭಯಾರಣ್ಯದ ಎನ್. ಬೇಗೂರಿನಲ್ಲಿ ಗಿರಿಜನರನ್ನು ಒಕ್ಕಲೆಬ್ಬಿಸಿದಾಗ ನಾಗರಹೊಳೆ ಅಭಯಾರಣ್ಯದ ಸೊಳ್ಳೇಪುರ ಪುನರ್ವಸತಿ ಕೇಂದ್ರದ ಬಸವನಗಿರಿ ಹಾಡಿಗೆ ಬಂದಳು. ಇಬ್ಬರು ಮಕ್ಕಳು ಹುಟ್ಟಿದರು. ಅಜಯಕುಮಾರ, ವಿಜಯಕುಮಾರ. ಸರ್ಕಾರ ಮನೆ ಕಟ್ಟಿಸಿಕೊಟ್ಟಿತು. ಎರಡೂವರೆ ಎಕರೆ ಜಮೀನು ಕೊಟ್ಟಿತು. ಒಂದು ದಿನ ಶಾಲೆಯಿಂದ ಬಂದ ಅಜಯಕುಮಾರ ಆಡಲು ಹೋಗಿ ಕೆರೆಯಲ್ಲಿ ಮುಳುಗಿ ಮಡಿದ. ಮಾನಸಿಕ ಆಘಾತಗೊಂಡ ಚಿಕ್ಕಮಣಿ ಹಾಸಿಗೆ ಹಿಡಿದಳು. ಒಂದು ವರ್ಷ ಮನೆಬಿಟ್ಟು ಹೊರಗೆ ಬರಲೇ ಇಲ್ಲ. ಗಂಡ ಸುರೇಂದ್ರ ಮದ್ಯವ್ಯಸನಿಯಾದ. ಸಂಸಾರದ ನೌಕೆ ಮುಳುಗುತ್ತಲೇ ಇತ್ತು. ಈ ವಿಷಯ ತಿಳಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಲ್ಲಿ ಈ ಹಿಂದೆ ಮಹಿಳಾ ಸ್ವಸಹಾಯ ಸಂಘ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪೋಷಿಣಿ, ಚಿಕ್ಕಮಣಿಗೆ ಧೈರ್ಯ ತುಂಬಿದರು; 'ಮತ್ತೊಬ್ಬ ಮಗನಿದ್ದಾನೆ, ಅವನಿಗಾಗಿ ಬದುಕಬೇಕು. ಗಂಡನನ್ನು ಸರಿದಾರಿಗೆ ತರಬೇಕು' ಎಂದು ಅವಳ ಮನದ ಕತ್ತಲಕೋಣೆಯಲ್ಲಿ ದೀಪ ಹಚ್ಚಿದರು. ನಂತರ ಚಿಕ್ಕಮಣಿ ಮೆಲ್ಲನೆ ಪುತ್ರಶೋಕದಿಂದ ಹೊರಬಂದಳು. ಜಮೀನಿನಲ್ಲಿ ದುಡಿದಳು. ಹಿಂದೆಂದೋ ಕಲಿತಿದ್ದ ಟೈಲರಿಂಗ್ ಅನ್ನೇ ಮತ್ತೆ ಕೈಹಿಡಿದಳು. ಹಾಡಿಯಲ್ಲಿ ನಿವೇದಿತಾ ಮಹಿಳಾ ಸ್ವಸಹಾಯ ಸಂಘ ಆರಂಭಿಸಿದಳು. ಸದಸ್ಯರು ಹತ್ತಾದರು. ಎಲ್ಲರೂ ತಲಾ 40,000 ರು. ಸಾಲ ಪಡೆದು, ಹೊಲಿಗೆ ಯಂತ್ರ ಖರೀದಿಸಿದರು. ಚಿಕ್ಕಮಣಿ ಟೈಲರಿಂಗ್ ಜೊತೆಗೆ ಮನೆಯಲ್ಲೇ ಬಟ್ಟೆ ವ್ಯಾಪಾರ ಆರಂಭಿಸಿದಳು. ಕುಡಿಯಬೇಡಿರೆಂದು ಗಂಡನಿಗೂ ಬುದ್ಧಿಮಾತು ಹೇಳಿದಳು. ಸಮ್ಮತಿ ಸೂಚಿಸಿದ ಗಂಡ, ಟೈಲರಿಂಗನ್ನೂ ಕಲಿತ. ನಂತರ ಗಂಡನಿಗೆ ಮನೆಯಲ್ಲಿ ಟೈಲರಿಂಗ್ ಕೆಲಸ. ಹೆಂಡತಿಗೆ ವಿವಿಧೆಡೆಯ ಜಾತ್ರೆಗಳಲ್ಲಿ ಬಟ್ಟೆ ವ್ಯಾಪಾರದ ಕೆಲಸ. ತಿಂಗಳಿಗೆ ಮೂರ್ನಾಲ್ಕು ಸಾವಿರ ರುಪಾಯಿ ಲಾಭ. ಚಿಕ್ಕಮಣಿಯಿಂದ ಸ್ಫೂರ್ತಿ ಪಡೆದ ಹಾಡಿಯ ರತ್ನಮ್ಮ, ನಿಪ್ಪಟ್ಟು- ಚೌಚೌ ತಯಾರಿಸಿ ಮಾರುತ್ತಾರೆ. ಭಾಗ್ಯಮ್ಮ, ಶಿವಮ್ಮ ಚಿಲ್ಲರೆ ಅಂಗಡಿ ನಡೆಸುತ್ತಿದ್ದಾರೆ. ಅಂದಹಾಗೆ, ಚಿಕ್ಕಮಣಿ ಈಗ ಸ್ಫೂರ್ತಿಯ ಬೆಳಕು.
- ಅಂಶಿ ಪ್ರಸನ್ನಕುಮಾರ್

ಕ್ರಾಫ್ಟ್ ಕಲೆಯ ಕ್ಯಾಪ್ಟನ್
ಅಂಥದ್ದೊಂದು ತಪ್ಪು ತಿಳಿವಳಿಕೆ ಇದೆ... ಲಂಬಾಣಿಗರೆಂದರೆ ಭಟ್ಟಿ ಸಾರಾಯಿ ತೆಗೆಯುವವರು, ಕಾಡಲ್ಲೇ ನೆಲೆಸಿ ಕಟ್ಟಿಗೆ ಮಾರಿ, ಕೂಲಿ ಮಾಡಿಯೇ ಬದುಕುವವರೆಂದು. ಗದಗ ಜಿಲ್ಲೆಯ ಲಂಬಾಣಿ ತಾಂಡಗಳಲ್ಲಿನ ಬಹುತೇಕ ಮಹಿಳೆಯರು ಹಾಗಿಲ್ಲ. ಆರ್ಥಿಕವಾಗಿ ಇವರೆಲ್ಲ ಗಟ್ಟಿಮುಟ್ಟು. ಪಾರಂಪರಿಕ ಉಡುಪುಗಳನ್ನು ಉತ್ಕೃಷ್ಟವಾಗಿ ರೆಡಿಮಾಡಿ, ಸ್ವತಃ ಮಾರಿ ಕೈತುಂಬಾ ನೋಟುಗಳನ್ನೆಣಿಸುತ್ತಾರೆ.
ಇವರ ಈ ಯಶಸ್ಸಿನ ಹಿಂದೆ ನಾಗವೇಣಿ ಅವರ ಹೆಸರಿದೆ. ಇವರಿಗೆಲ್ಲ ತರಬೇತಿ ಕೊಟ್ಟವರೇ ನಾಗವೇಣಿ. 18 ವರ್ಷಗಳಿಂದ ಲಂಬಾಣಿಗರಿಗೆ ಕರಕುಶಲ ವಸ್ತುಗಳ ತಯಾರಿಕೆ ಬಗ್ಗೆ ಮಾಹಿತಿ ನೀಡುತ್ತಾ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕೊಡಿಸಿ, ಇವರ ಜೀವನವನ್ನು ಬೇರು ಮಟ್ಟದಿಂದ ಕಟ್ಟಿದ್ದಾರೆ. ಇದುವರೆಗೆ 8 ಸಾವಿರಕ್ಕೂ ಅಧಿಕ ಲಂಬಾಣಿ ಮಹಿಳೆಯರನ್ನು ಇವರು ಸ್ವಾವಲಂಬಿಗಳನ್ನಾಗಿಸಿದ್ದಾರೆ.
ನಾಗವೇಣಿ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ 'ಕಾಟೀಸ್‌ಕಂಬ'ದವರು. ಇಲ್ಲಿಗೆ ವಿವಾಹವಾಗಿ ಬಂದ ನಂತರ, ಲಂಬಾಣಿ ಮಹಿಳೆಯರ ಬದುಕನ್ನೇ ಬದಲಿಸಿಬಿಟ್ಟರು. ತಮ್ಮಲ್ಲಿದ್ದ ಕರಕುಶಲ ಜ್ಞಾನವನ್ನು ಧಾರೆ ಎರೆದು, ಎಲ್ಲರ ಎದೆಯಲ್ಲೂ ಕಲೆಯ ರಂಗೋಲಿ ಬಿಡಿಸಿದರು. ಕೆಲ ಸ್ವಯಂ ಸೇವಾ ಸಂಸ್ಥೆಗಳಲ್ಲಿ ತರಬೇತಿದಾರರಾಗಿ, ಬಂದ ಹಣದಲ್ಲಿ ಅತ್ಯಂತ ಸರಳ ಜೀವನ ನಡೆಸಿ, ನಿತ್ಯ ಸಂಜೆ 6ರಿಂದ 9ರವರೆಗೆ ಮನೆಯಲ್ಲೇ ಎಲ್ಲರಿಗೂ ಉಚಿತ ತರಬೇತಿ ಕೊಡುತ್ತಿದ್ದಾರೆ. ಇಲ್ಲಿ ತರಬೇತಿ ಪಡೆಯುವವರೆಲ್ಲ ಬಡವರೇ ಆಗಿರುವುದರಿಂದ ಯಾರ ಬಳಿಯೂ ಹಣ ತೆಗೆದುಕೊಳ್ಳುವುದಿಲ್ಲ. ಇಂದಿನ ಮಹಿಳೆಯರು ಇಷ್ಟಪಡುವ ಎಲ್ಲ ಥರದ ಬ್ಯಾಗ್, ಸೌಂದರ್ಯ ಸಾಧನಗಳು, ಮಕ್ಕಳ ಆಟಿಕೆ, ವಿಶೇಷ ವಿನ್ಯಾಸದ ಮೊಬೈಲ್ ಕವರ್‌ಗಳು ಸೇರಿದಂತೆ 200ಕ್ಕೂ ಅಧಿಕ ಮಾದರಿಗಳನ್ನು ಇವರು ತಯಾರಿಸುತ್ತಾರೆ. ಇಲ್ಲಿ ತಯಾರಾಗುವ ವಸ್ತುಗಳು ಗೋವಾ, ಕೇರಳದಲ್ಲೂ ಮಾರಾಟವಾಗುತ್ತವೆ.
- ಶಿವಕುಮಾರ ಕುಷ್ಟಗಿ


10 ಗಂಡಸರು ಒಬ್ಬಳು 'ಆಶಾ'!
ನಸುಕಿನಲ್ಲಿ ಎದ್ದು ಹೊರಟ ಸದ್ದಾದರೆ ದನಕರುಗಳು ಕೂಗುತ್ತವೆ. ಕೋಳಿಗಳು ಮುತ್ತಿಕ್ಕಿಕ್ಕೊಳ್ಳುತ್ತವೆ. ತುಂಡು ಭೂಮಿ. ಆದರೆ, ದೊಡ್ಡ ಸಾಧನೆ. ಏನೆಲ್ಲ ಬೆಳೆ ಸಾಧ್ಯವೋ ಅದನ್ನೆಲ್ಲ ಅಚ್ಚುಕಟ್ಟಾಗಿ ಬೆಳೆದು ಮಾದರಿಯಾದವರು ಆಶಾ ದೇವರಾಯ ನಾಯಕ.
ಅಂಕೋಲಾ ಸ್ವಾತಂತ್ರ್ಯ ಹೋರಾಟಗಾರರ ಭೂಮಿ. ಇಲ್ಲಿನ ಬೋಳೆ ಹೊಸಗದ್ದೆಯಲ್ಲಿನ ತುಂಡು ಭೂಮಿಯಲ್ಲಿ ಬದುಕಿಗಾಗಿ ನಿರಂತರ ಹೋರಾಡಿ ಗೆದ್ದ ಮಹಿಳೆ ಆಶಾ. ಇರುವ 1 ಎಕರೆ 20 ಗುಂಟೆ ಜಾಗದಲ್ಲಿ ಹೈನುಗಾರಿಕೆ, ಉದ್ದು, ಶೇಂಗಾ, ಪಪ್ಪಾಯಿ ಬೆಳೆ, ಅಡಕೆ, ತೆಂಗು, ಕೋಳಿ ಸಾಕಣೆ, ಪುಷ್ಪ ಕೃಷಿ, ಹುಲ್ಲು, ಬಾಳೆ... ಹೀಗೆ ಎಲ್ಲವನ್ನೂ ಕಾಣಬಹುದು.
23 ವರ್ಷಗಳ ಹಿಂದೆ, ಹಸೆಮಣೆ ಏರಿದ್ದ ಆಶಾಗೆ ಕುಟುಂಬ ನಿರ್ವಹಣೆಯೇ ದೊಡ್ಡ ಚಿಂತೆಯಾಗಿತ್ತು. ಆಗ ನೆರವಿಗೆ ಬಂದಿದ್ದು ಹೈನುಗಾರಿಕೆ. ಸಾಲ ಮಾಡಿ 2 ಗೋವುಗಳನ್ನು ಖರೀದಿಸಿದರು. ಈಗ ಎಮ್ಮೆ, ದನ ಕರುಗಳ ಸಂಖ್ಯೆ 15ಕ್ಕೂ ಹೆಚ್ಚಿವೆ. ಎಲ್ಲ ವಿದೇಶಿ ತಳಿಯ ಜಾನುವಾರುಗಳು. ನಿತ್ಯ ಕನಿಷ್ಠವೆಂದರೂ 35 ಲೀಟರ್ ಹಾಲು ಕೊಡುತ್ತವೆ. ದನಕರುಗಳ ತ್ಯಾಜ್ಯದಿಂದ ಗೋಬರ್ ಗ್ಯಾಸ್ ಮಾಡಿದ್ದಾರೆ ಆಶಾ. ದನಕರುಗಳಿಗೆ ಮೇವನ್ನೂ ಇದೇ ಜಾಗದಲ್ಲೇ ಬೆಳೆಯುತ್ತಾರೆ ಆಶಾ. ಎರೆಹುಳು ಗೊಬ್ಬರ ಮಾಡಿದ್ದಾರೆ. ಉತ್ತಮ ತಳಿಯ ಮಾವಿನ ಕಸಿ ಸಸಿಗಳನ್ನು ಮಾಡಿ, ಅದರಿಂದಲೂ ದುಡ್ಡೆಣಿಸಿದ್ದಾರೆ.  ಮುಂಜಾನೆ 4.30ಕ್ಕೆ ಆಶಾ ದಿನಚರಿ ಶುರು. ಮಧ್ಯಾಹ್ನ 1.30ರವರೆಗೂ ಬಿಡುವಿಲ್ಲದೆ ದುಡಿಯುತ್ತಾರೆ. ಮತ್ತೆರಡು ತಾಸು ಊಟ, ವಿಶ್ರಾಂತಿ. 3.30ರಿಂದ ರಾತ್ರಿ 9ರವರೆಗೆ ಕೃಷಿ ಕೆಲಸಗಳ ಮ್ಯಾರಥಾನ್. ಬಹುಶಃ ಈ ಪರಿಯ ದುಡಿಮೆ ಪುರುಷರಿಂದಲೂ ಅಸಾಧ್ಯ. ಪ್ರತಿವರ್ಷ ರು. 5 ಲಕ್ಷ ಆದಾಯ. ಇದರಲ್ಲಿ ರು. 2 ರಿಂದ ರು. 2.50 ಲಕ್ಷ ಖರ್ಚಾಗುತ್ತದೆ. ಅಂದಹಾಗೆ, ಆಶಾಗೆ ಜಿಲ್ಲಾ ಮಟ್ಟದ 'ಶ್ರೇಷ್ಠ ಕೃಷಿ ಮಹಿಳೆ', ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ.
- ವಸಂತಕುಮಾರ್ ಕತಗಾಲ

ಬಂಗಾರದ ಜಿಂಕೆಗಳು!
ಕೆಲವರ ಬಳಿ ಡಜನ್‌ಗಟ್ಟಲೆ ಬಂಗಾರದ ಬಳೆ, ಸರಗಳಿವೆ. ಆದರೆ, ಈ ಮಹಿಳೆಯರಲ್ಲಿರುವುದು ಡಜನ್‌ಗಟ್ಟಲೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳು! ಉಡುಪಿ ಜಿಲ್ಲೆಯ ಅರುಣಕಲಾ ರಾವ್, ಸುಲತಾ ಕಾಮತ್, ಶಾರದಾ ನಾಯಕ್, ಜ್ಯೋತಿ ಶೆಟ್ಟಿ, ವಿದ್ಯಾ ಕಾಮತ್, ಮೀರಾ ನಾಯಕ್, ಎಸ್. ಶಾಲಿನಿ ಆ ಸಾಧಕಿಯರು.
ಇವರೆಲ್ಲ 45 ವರ್ಷ ಮೇಲ್ಪಟ್ಟ ವಿಭಾಗದ ಕ್ರೀಡೆಯಲ್ಲಿ ಪಾಲ್ಗೊಂಡವರು. ಅದೂ ಜಾಗತಿಕ ಮಟ್ಟದಲ್ಲಿ. ಅಷ್ಟಕ್ಕೂ ಇವರ್ಯಾರೂ ಶ್ರೀಮಂತರಲ್ಲ. ಸಾಲಸೋಲ ಮಾಡಿ, ಗ್ರಾಮೀಣ ಕ್ರೀಡೆಗಳಲ್ಲಿ ಭಾಗಿಯಾಗಿ, ಶ್ರೀಲಂಕಾ, ಥಾಯ್ಲೆಂಡ್, ಜಕಾರ್ತಗಳಲ್ಲಿನ ಸ್ಪರ್ಧೆಗಳಲ್ಲಿ ಬರಿಗಾಲಲ್ಲಿ ಓಡಿಬಂದವರು. ಆದರೆ, ಬರಿಗೈಯಲ್ಲಿ ಹಿಂದಿರುಗಲಿಲ್ಲ!
ಈ ಒಬ್ಬೊಬ್ಬರು 30- 50 ಪದಕಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಬಾಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ 5-6 ಪದಕಗಳನ್ನು ಗೆದ್ದಿದ್ದಾರೆ.
 ಆದರೂ, ಸರ್ಕಾರದಿಂದ ಯಾವುದೇ ಗೌರವ ಪಡೆದವರಲ್ಲ. ಕಡೇಪಕ್ಷ ಪ್ರೋತ್ಸಾಹ ಧನವೂ ಸಿಕ್ಕಿಲ್ಲ. ಮುಂದಿನ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವವರಿಗೆ ರು. 1 ಕೋಟಿ ಬಹುಮಾನ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಬಹುಶಃ ಕೇಂದ್ರದ ಕಣ್ಣಿಗೆ ಇವರ್ಯಾರೂ ಕಾಣುವುದಿಲ್ಲ.
ಜಾಗತಿಕ ಸ್ಪರ್ಧೆಗೆ ತೆರಳಲು ಕಾಸಿಲ್ಲದಿದ್ದರೂ ಮನೆಯಲ್ಲೇ ಉಳಿದುಕೊಂಡಿದ್ದಿದೆ. ಇವರ್ಯಾರಿಗೂ ಅಧಿಕೃತ ಕೋಚ್ ಇಲ್ಲ. ಪೌಷ್ಟಿಕ ಆಹಾರ ಏನೆಂಬುದೇ ಇವರಿಗೆ ಗೊತ್ತಿಲ್ಲ. ಟ್ರ್ಯಾಕ್‌ಸೂಟ್, ಸ್ಪೋರ್ಟ್ಸ್ ಶೂಸ್ ಕೂಡ ಇಲ್ಲ. ಇಷ್ಟೆಲ್ಲ ಬಡತನವಿದ್ದೂ ಇಂಥ ಪ್ರತಿಭೆಗಳು ಜನಪ್ರತಿನಿಧಿಗಳ ಕಣ್ಣಿಗೆ ಕಂಡಿಲ್ಲ. ಆದರೂ, ಈ ಮಹಿಳೆಯರು ಓಡುವುದನ್ನು ನಿಲ್ಲಿಸುವುದಿಲ್ಲ.ಟ
- ಸುಭಾಶ್ಚಂದ್ರ ಎಸ್. ವಾಗ್ಳೆ

ಕನಸಿಗೆ ಕಾಲುಗಳಿವೆ
'ಇಂದಿನ ಯುವಕರು ಕನಸು ಕಾಣಬೇಕು. ಆ ಕನಸಿನ ಬೆನ್ನು ಹತ್ತಿ ಹೋಗಬೇಕು. ಟಿವಿಗಳಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು ನೋಡಿ ಖುಷಿ ಪಡುವುದಕ್ಕಷ್ಟೇ ಸೀಮಿತರಾಗಬಾರದು' ಎನ್ನುತ್ತಾರೆ ಎನ್.ಮಂಜುಶ್ರೀ. ಯಾರಿವರು? ಇವರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಇವರ ಮಾತಿನಲ್ಲಿ ವಿಶೇಷತೆ ಏನಿದೆ? ಇದೆ, ಯಾಕೆಂದರೆ ಇವರೇ ಸ್ವತಃ ಅಂಗವೈಕಲ್ಯ ಹೊಂದಿದಾಕೆ.
ಬಾಲ್ಯದಲ್ಲೇ ಇವರ ಕನಸಿಗೆ ಬಲವಾದ ಏಟು ನೀಡಿದ್ದು ಒಂದು ಅಪಘಾತ. ಅದರಲ್ಲಿ ಅವರು ತಮ್ಮ ಬಲಗಾಲು ಕಳೆದುಕೊಂಡರು. ಖಿನ್ನತೆ ಕಾಡುವ ಸಂದರ್ಭ. ಆದರೆ ಈಕೆ ಛಲ ಬಿಡಲಿಲ್ಲ. ಓದಿದರು, ಐಎಎಸ್ ಅಧಿಕಾರಿಯಾದರು. ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು ಎಂದು ತೋರಿಸಿದರು.
ತಮ್ಮ ಸಾಧನೆಗೆ ತಂದೆ ಪ್ರೇರಣೆ ಎನ್ನುತ್ತಾರವರು. ತಂದೆ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿದ್ದರು. ಐಎಎಸ್ ಅಧಿಕಾರಿಗಳೊಂದಿಗೆ ಒಡನಾಟ ಇತ್ತು. ಮಕ್ಕಳಲ್ಲಿ ಒಬ್ಬರನ್ನು ಐಎಎಸ್ ಅಧಿಕಾರಿಯಾಗಿ ರೂಪಿಸಬೇಕು ಎಂಬ ಅಭಿಲಾಷೆ ಹೊಂದಿದ್ದರು. ಸಹೋದರಿ ಒಬ್ಬರು ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕಿ, ಸಹೋದರ ಎಂಜಿನಿಯರ್. ತಂದೆ ಮತ್ತು ಮನೆಯ ಎಲ್ಲರ ಸಹಕಾರದಿಂದ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎನ್ನುತ್ತಾರೆ ಮಂಜುಶ್ರೀ.
2010ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮಂಜುಶ್ರೀ ಗಮಿಸಿದ ಹಾದಿ ಸುಗಮ ಆಗಿರಲಿಲ್ಲ. 2004ರಲ್ಲಿ ಕಲಾ ಪದವಿ ಪಡೆದು ಮರು ವರ್ಷ ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದರು. ಮೊದಲ ಪ್ರಯತ್ನದಲ್ಲೇ ಕೆಎಎಸ್. ನಂತರ ಎರಡು ವರ್ಷ ತರಬೇತಿ. ಜೊತೆ ಜೊತೆಯಲ್ಲೇ ಐಎಎಸ್ ಪರೀಕ್ಷೆಗಳನ್ನು ಬರೆಯುತ್ತಲೇ ಬಂದರು. ಮೊದಲ 3 ಪ್ರಯತ್ನಗಳಲ್ಲಿ ಸಫಲವಾಗಲಿಲ್ಲ. 4ನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 65ನೇ ರ್ಯಾಂಕ್ ಗಳಿಸಿದರು. ಧಾರವಾಡದಲ್ಲಿ ಐಎಎಸ್ ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಪ್ರಾರಂಭಿಸಿದರು. ನಂತರ ರಾಯಚೂರು ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಚಿತ್ರದುರ್ಗ ಜಿಪಂ ಸಿಇಓ ಆಗಿದ್ದಾರೆ. 'ಈ ಬಾರಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬಹಳ ಮಹತ್ವ ಹೊಂದಿದೆ.  ಮಹಿಳೆ ಸಾಧಕಿ ಎಂಬ ಬಗ್ಗೆ ಎಲ್ಲರಿಗೂ ಒಪ್ಪಿಗೆಯಾಗುತ್ತಿಲ್ಲ. ದೇಶದ ಶೇ.49 ಮಹಿಳೆಯರು ಮತದಾರರಾಗಿದ್ದರೂ ನಮಗೆ ರಕ್ಷಣೆ ಇಲ್ಲ ಎಂಬ ಭಾವನೆ ಹೋಗಿಲ್ಲ' ಎನ್ನುತ್ತಾರೆ ಅವರು.
- ಕ.ಮ. ರವಿಶಂಕರ

'ಗಂಗಾ'ಯಣ!
ಈಕೆ ಉತ್ಸಾಹ ಬತ್ತದ 'ಗಂಗೆ'! 'ವಿಶೇಷ' ಮಕ್ಕಳೆಂದರೆ ಈ ಗಂಗಾ ಚಂಗಪ್ಪಗೆ ಅದೇನು ಅಕ್ಕರೆಯೋ. ಮಡಿಕೇರಿಯಿಂದ 18 ಕಿ.ಮೀ. ದೂರದ ಸುಂಟಿಕೊಪ್ಪದಲ್ಲಿ 'ಸ್ವಸ್ಥ' ಎಂಬ ವಿಶೇಷ ಮಕ್ಕಳ ಶಾಲೆ ಇದೆ. ಅದೇ ಇವರ ಆರೈಕೆ ಕೇಂದ್ರ. ಸರಿಸುಮಾರು 140 ವಿಶೇಷ ಮಕ್ಕಳ ಪಾಲನೆಯಲ್ಲಿ 11 ವರ್ಷದಿಂದ ತೊಡಗಿಸಿಕೊಂಡಿದ್ದಾರೆ ಗಂಗಾ. ಕೊಡಗಿನ ವಿವಿಧೆಡೆಯಲ್ಲಿ ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಸೂಕ್ತ ಸೌಲಭ್ಯ, ತರಬೇತಿ ಇಲ್ಲದಿರುವುದನ್ನು ಮನಗಂಡ ಟಾಟಾ ಸಂಸ್ಥೆ ಸುಂಟಿಕೊಪ್ಪ ಬಳಿ ವಿಶೇಷ ಮಕ್ಕಳ ಶಾಲೆ ಸ್ಥಾಪಿಸಿತು. ಅದರ ನಿರ್ವಹಣೆಗೆ ಗಂಗಾ ಚಂಗಪ್ಪ ಅವರನ್ನೇ ನೇಮಿಸಿತು. ಆರಂಭದಲ್ಲಿ 60 ವಿಶೇಷ ಮಕ್ಕಳು ಇಲ್ಲಿದ್ದರು. ಇದು ಕೇವಲ ವಿದ್ಯಾಸಂಸ್ಥೆ ಮಾತ್ರವಲ್ಲದೆ, ವ್ಯಕ್ತಿತ್ವ ರೂಪಿಸುವ ಕೇಂದ್ರವೂ ಆಗಿದೆ. ಇಲ್ಲಿನ ಮಕ್ಕಳು ತಾವೇ ಸ್ಕ್ರೀನ್ ಪ್ರಿಂಟಿಂಗ್ ಮೂಲಕ ಲಕೋಟೆ, ಗೃಹಾಲಂಕಾರಿಕ ವಸ್ತುಗಳನ್ನು ತಯಾರಿಸಿ, ಮಾರುತ್ತಾರೆ. ಅಂತೆಯೇ ಗಂಗಾ ಚಂಗಪ್ಪ ಪ್ರಯತ್ನದ ಫಲವಾಗಿ 4 ಮಕ್ಕಳು ಜಾಗತಿಕ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
-ಅನಿಲ್ ಎಚ್.ಟಿ.

ಅಮೆರಿಕದಿಂದ 'ಇಂದಿರಾ'ವರೆಗೆ...
ಕೆ.ಆರ್. ನಗರ ತಾಲೂಕಿನ ಹನುಮನಹಳ್ಳಿಯ ಇಂದಿರಮ್ಮನ ಸಾವಯವ ಕೃಷಿ ಕಥೆ ಅಮೆರಿಕಕ್ಕೂ ಗೊತ್ತು. ಆ ಬಿಳಿ ತೊಗಲಿನ ತಜ್ಞರು ಈಕೆಯ ಕೃಷಿ ಪವಾಡಗಳನ್ನು ಕಂಡು ನಿಬ್ಬೆರಗಾಗಿದ್ದಾರೆ.
ಇರುವುದು 4 ಎಕರೆ ಮಳೆಯಾಶ್ರಿತ ಜಮೀನು. ಅಲ್ಲಿ 3 ಕೊಳವೆಬಾವಿ. ಸಾಕೆನ್ನುವಷ್ಟು ಎರೆಹುಳುಗಳನ್ನು ಸಾಕಿ ಗೊಬ್ಬರ ತಯಾರಿಸಿದ್ದಾರೆ. ಮಿಕ್ಕ ಗೊಬ್ಬರವನ್ನು ಕೆ.ಜಿ.ಗೆ 6 ರು.ನಂತೆ ಮಾರುತ್ತಾರೆ. 1 ಎಕರೆಯಲ್ಲಿ ಟೊಮೇಟೊ, 2 ಎಕರೆಯಲ್ಲಿ ಕುಂಬಳಕಾಯಿ, ಮತ್ತೊಂದು ಎಕರೆಯಲ್ಲಿ 50 ಅಡಕೆಮರಗಳಿವೆ. ಅಂತರ ಬೆಳೆಯಾಗಿ ಅಜೋಲ ಹುಲ್ಲು ಬೆಳೆಯುತ್ತಾರೆ. ಭತ್ತ, ರಾಗಿ, ಕೊತ್ತಂಬರಿ ಸೊಪ್ಪು ಬೆಳೆದು ಮಾರುವ ಇಂದಿರಮ್ಮ ವರ್ಷಕ್ಕೆ ಪಡೆಯುವುದು ಎರಡು ಲಕ್ಷ ರು. ಆದಾಯ. ಇವರ ಜಮೀನಿನ ಬೆಳೆಗಳು ಮೈಸೂರಿನ ಹಾಪ್‌ಕಾಮ್ಸ್ ಅನ್ನು ತಲುಪುತ್ತವೆ. ಬಿಡುವಿದ್ದಾಗ ರೈತ ತರಬೇತಿ ಕಾರ್ಯಕ್ರಮ. ಮೈಸೂರು ಆಕಾಶವಾಣಿಯಲ್ಲೂ ಅನೇಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಮಣ್ಣು ಮತ್ತು ನೀರಿನ ಪರೀಕ್ಷೆ ಸಂಬಂಧ ಅಮೆರಿಕೆಯ ತಜ್ಞರು ಇಲ್ಲಿಗೆ ಬಂದಿದ್ದರು. ಕೃಷಿ ಇಲಾಖೆಯವರು ಇವರ ಜಮೀನಿನಲ್ಲಿ ರೈತರ ಪಾಠಶಾಲೆ ನಡೆಸಿ, ಸಲಹೆ ಕೊಡುತ್ತಾರೆ. 2005ರಲ್ಲಿ ಬೆಂಗಳೂರು ಕೃಷಿ ವಿವಿ ಇವರಿಗೆ 'ಅತ್ಯುತ್ತಮ ರೈತ ಮಹಿಳೆ' ಪ್ರಶಸ್ತಿ ನೀಡಿದೆ. 2009ರಲ್ಲಿ 'ಬಾನುಲಿ ಕೃಷಿರತ್ನ' ಗೌರವ ಸಿಕ್ಕಿದೆ. ಜಿಲ್ಲಾಮಟ್ಟದ ರಾಜ್ಯೋತ್ಸವ ಇವರ ಸಾಧನೆಗೆ ಇನ್ನೊಂದು ಗರಿ.                
ಚಿತ್ರ: ಭೇರ್ಯ ಮಹೇಶ್
- ಅಂಶಿ ಪ್ರಸನ್ನಕುಮಾರ್


ಕೃಷಿಗೆ ಸು'ಲಲಿತ' ಸೂತ್ರ!
ಇದು ಲಲಿತವ್ವ ಮಾಡಿದ ಮ್ಯಾಜಿಕ್. ಇರುವ ಮೂರು ಎಕರೆ ಜಮೀನಿನಲ್ಲಿ ಮೂವತ್ತು ಬಗೆಯ ಬೆಳೆ! ಅದರಲ್ಲೂ ಈ ಹಾವೇರಿ ಸೀಮೆಯಲ್ಲಿ ರಸಗೊಬ್ಬರ ಬಳಕೆ, ಬಿಟಿ ತಳಿ ಬಿತ್ತನೆ ಮಾಡದಿದ್ದರೆ ಆತ ರೈತನೇ ಅಲ್ಲ ಎನ್ನುವ ಕಾಲದಲ್ಲಿ ಲಲಿತವ್ವ ಪಠಿಸಿದ್ದು ಸಾವಯವ ಮಂತ್ರ.
ಇಲ್ಲಿನ ಕಲ್ಲಾಪುರದ ಲಲಿತವ್ವ ವೀರಪ್ಪ ಹೊಸಳ್ಳಿಯ ಕೃಷಿ ಸಾಧನೆ ಮೆಚ್ಚಿ ಧಾರವಾಡದ ಕೃಷಿ ವಿವಿ 'ಶ್ರೇಷ್ಠ ಕೃಷಿ ಮಹಿಳೆ' ಗೌರವ ನೀಡಿದೆ. ಒಂದು ಎಕರೆ ಒಣ ಬೇಸಾಯ, 2 ಎಕರೆ ನೀರಾವರಿ ಜಮೀನು ಹೊಂದಿರುವ ಲಲಿತವ್ವ ಕುಟುಂಬ ತಮ್ಮ ಜಮೀನಿನ ಸವಕಳಿ ತಡೆಯಲು ಹಾಗೂ ಪೋಷಕಾಂಶ ಕಾಪಾಡಲು ನೀರು ಹರಿಯುವ ದಿಕ್ಕಿಗೆ ವಿರುದ್ಧವಾಗಿ ಬದು ನಿರ್ಮಿಸಿದ್ದಾರೆ. ಇದು ಸಾದಾ ಬದುವಲ್ಲ. ಹಸಿರೆಲೆ ಗೊಬ್ಬರ, ಕಾಂಪೋಸ್ಟ್ ತಯಾರಿಕೆಗಾಗಿ ಮರಗಳನ್ನು ನೆಟ್ಟಿದ್ದಾರೆ. ರಾಸುಗಳಿಗೆ ಮೇವು ಒದಗಿಸಲೆಂದೇ ನಿರ್ಮಿಸಿದ ಜೈವಿಕ ಬದುಗಳು. ಜಮೀನಿನ ಒಂದು ಮೂಲೆಯಲ್ಲಿ ಕೃಷಿ ಹೊಂಡ. ಅದರೊಳಗೆ ನೂರಾರು ಮೀನುಗಳ ಓಡಾಟ.
ಕಬ್ಬು, ತೊಗರಿ, ನವಣೆ, ಅಲಸಂದಿ, ಸಾಸಿವೆ, ಬಿಳಿ ಜೋಳ, ಟೊಮೇಟೋ, ಬೆಂಡೆಕಾಯಿ, ಹೀರೇಕಾಯಿ, ಸೇವಂತಿ... ಇನ್ನೇನು ಬೇಕು ಹೇಳಿ? ಮಾವು, ಚಿಕ್ಕು, ಹಲಸಿನ ಗಿಡವಾ? ಅವೂ ಇವೆ. ಎರೆಹುಳು ಗೊಬ್ಬರವನ್ನೂ ತಯಾರಿಸುವ ಲಲಿತವ್ವ, ಅದರಿಂದಲೂ ಆದಾಯ ಪಡೆಯುತ್ತಾರೆ. ಹೈನುಗಾರಿಕೆಯೂ ಕ್ಲಿಕ್ಕಾಗಿದೆ. ಮೊದಲು ಸಾವಯವ ಹಾದಿ ಹಿಡಿದಾಗ ರೈತರೆಲ್ಲ ಇವರನ್ನು ಗೇಲಿ ಮಾಡಿದರು. ಬಿಟಿ ಹತ್ತಿ, ಗೋವಿನಜೋಳ ಬಿಟ್ಟು ಬೇರೆ ಬೆಳೆ ಹಾಕಿದರೆ ನಷ್ಟ ಎಂದು ಕಿವಿಯೂದುತ್ತಿದ್ದರು. ಆದರೆ, ಅಂದು ಹಾಗೆ ಹೇಳಿದವರೇ ಇಂದು ಹೊಗಳಿಕೆಯ ಮಾತುಗಳನ್ನಾಡುತ್ತಿದ್ದಾರೆ. 65 ವರ್ಷದ ಲಲಿತವ್ವ ಅದನ್ನು ಕೇಳಿಸಿಕೊಂಡು, ಏನೂ ಪ್ರತಿಕ್ರಿಯಿಸದೆ ಹೊಲದತ್ತ ನಡೆಯುತ್ತಾರೆ.
- ನಾರಾಯಣ ಹೆಗಡೆ

'ಮದರ್‌' ಕರ್ನಾಟಕ!
ಆ ಮದರ್ ತೆರೇಸಾ ಈಗಿಲ್ಲದಿರಬಹುದು. ಆದರೆ, ಯೂವಾನ್ ಲೋಮಾಕ್ಸ್‌ರನ್ನು ನಾವು ಸದ್ಯದ ಮದರ್ ತೆರೇಸಾ ಅಂತ ಒಪ್ಪಿಕೊಳ್ಳಬಹುದು. ಬೆಳಗಾವಿಯ ಗಣೇಶಪುರದ ಜೀಸಸ್ ಕೇರ್ ಡಾ. ರೇಮಂಡ್ ಲೋಮಾಕ್ಸ್ ಹೋಂ ಫಾರ್ ಹೋಂಲೆಸ್‌ನ ಸಂಸ್ಥಾಪಕಿ ಈಕೆ. ಅನಾಥರನ್ನು ಬಂಧುಗಳಂತೆ ಕಾಣುತ್ತಾಳೆ.
ಇದೇನು ಕ್ರಿಶ್ಚಿಯನ್ ಕಮ್ಯುನಿಟಿಯ ಧರ್ಮಪ್ರಸಾರದ ಕಾಯಕ ಅಲ್ಲ. ಈಕೆಗೇನು ವಿದೇಶದಿಂದ ಫಂಡುಗಳೇನು ಹರಿದುಬರುವುದಿಲ್ಲ. ಈ ಸೇವೆ ಕೇವಲ ಆತ್ಮತೃಪ್ತಿಗಷ್ಟೇ. ವೃದ್ಧರು, ಅನಾಥರು, ವಿಕಲಚೇತನರ ಸೇವೆಯಲ್ಲೇ ಎರಡು ದಶಕ ಕಳೆದಿದ್ದಾರೆ ಲೋಮಾಕ್ಸ್. ಇಲ್ಲಿ ಎಲ್ಲ ಧರ್ಮದ ತಬ್ಬಲಿಗಳಿದ್ದಾರೆ. ಸದ್ಯದ ಒಟ್ಟು ಸಂಖ್ಯೆ 40. ಅದರಲ್ಲಿ 30 ಮಹಿಳೆಯರು ಹಾಗೂ 10 ಪುರುಷರು.
ಈ ಲೋಮಾಕ್ಸ್‌ರ ಕಥೆ ರೋಚಕ. ಪತಿ ಆಸ್ಟ್ರೇಲಿಯಾದಲ್ಲಿ ಡಾಕ್ಟರ್ ಆಗಿದ್ದರು. ಇವರಿಗೊಂದು ವಿಕಲಾಂಗ ಹೆಣ್ಣುಮಗು ಹುಟ್ಟಿತು. 23 ವರ್ಷಗಳ ಹಿಂದೆಯೇ ಗಂಡ ತೀರಿದರು. ಆ ಮಗುವಿಗೀಗ 29 ವರ್ಷ. ಲೋಮಾಕ್ಸ್ ಜೊತೆಯೇ ಇದ್ದಾಳೆ. ಪತಿಯ ನೆನಪಿನಲ್ಲಿ ಆಶ್ರಮ ಆರಂಭಿಸಿದ ಲೋಮಾಕ್ಸ್, ಅನಾಥರಿಗೆ ಆಶ್ರಯ ಕೊಡತೊಡಗಿದಳು. ರು. 25 ಸಾವಿರ ಪಿಂಚಣಿಯಲ್ಲೇ ಆಶ್ರಮ ನಿರ್ವಹಿಸಿದಳು. ದವಸ- ಧಾನ್ಯ, ಬಟ್ಟೆಗಳನ್ನು ದಾನಿಗಳು ಕೊಟ್ಟರು. ಈ 10 ವರ್ಷಗಳಲ್ಲಿ ಇಲ್ಲಿ 100 ಮಂದಿ ಸತ್ತಿರಬಹುದು. ಅವರ ಅಂತ್ಯಸಂಸ್ಕಾರವನ್ನು ಅವರವರ ಧಾರ್ಮಿಕ ವಿಧಿವಿಧಾನಗಳಲ್ಲೇ ಪೂರೈಸಿದ್ದಾಳೆ ಲೋಮಾಕ್ಸ್.

- ಶ್ರೀಶೈಲ ಮಠದ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.