ಪ್ರಧಾನ ಸುದ್ದಿ

ಮುಂದುವರಿದ ವರುಣ ಆರ್ಭಟಕ್ಕೆ ಮತ್ತಿಬ್ಬರು ಬಲಿ

Published On :

ಬೆಂಗಳೂರು: ರಾಜ್ಯದ ಹಲವೆಡೆ ಅಕಾಲಿಕ ಮಳೆ ಶನಿವಾರವೂ ಮುಂದುವರಿದಿದ್ದು, ಯುವಕ ಸೇರಿದಂತೆ ಮತ್ತಿಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಜೊತೆಗೆ ರಾಜ್ಯದಲ್ಲಿ ಅಲ್ಲಲ್ಲಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಡೋಣಿ ನದಿಗೆ ಕೆಲಕಾಲ ಪ್ರವಾಹ ಬಂದಿದ್ದರಿಂದ ರಸ್ತೆ ಸಂಚಾರ ಅಸ್ತವ್ಯವಸ್ತಗೊಂಡಿತ್ತು. ಅಷ್ಟೇ ಅಲ್ಲ, ಮೂರು ಎಮ್ಮೆಗಳು, ಆರು ಆಡುಗಳು ಕೂಡ ಸಿಡಿಲಿಗೆ ಬಲಿಯಾಗಿವೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ತೊಗಾಂವ (ಎಚ್) ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಧೋಂಡಿಯಾ ಅಂಬಾಜಿ (60) ರೈತ ಅಸುನೀಗಿದ್ದಾನೆ. ಈ ಸಂಬಂಧ ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಅಡಗಲ ಗ್ರಾಮದ ಯುವಕ ಶಿವನಗೌಡ ಗೌಡರ (17) ಸಿಡಿಲಿಗೆ ಬಲಿಯಾಗಿದ್ದಾನೆ. ಅಡಗಲ ಗ್ರಾಮದ ಸಮೀಪದ ಸಿದ್ದನಗವಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಯುವಕನಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಯುವಕ ಬಾದಾಮಿಯಲ್ಲಿ ಐಟಿಐ ಅಭ್ಯಸಿಸುತ್ತಿದ್ದ. ಅಲ್ಲದೆ, ಜಿಲ್ಲೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ, ಗದ್ದನಕೇರಿ ಕ್ರಾಸ್‌ನಲ್ಲಿ ಬೇವಿನ ಮರ ಬಿದ್ದು ಮೂರು ವಾಹನಗಳು ಜಖಂಗೊಂಡಿವೆ. ಅಲ್ಲದೆ, ಮುಧೋಳ ತಾಲೂಕಿನ ಬಿದಿರಿ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಎಮ್ಮೆಗಳು ಅಸುನೀಗಿವೆ.
ಬಿಜಾಪುರ ಜಿಲ್ಲೆಯಲ್ಲೂ ಭಾರಿ ಮಳೆ ಸುರಿದಿದ್ದು, ಇಂಡಿ ತಾಲೂಕಿನ ಶಾಲೆಯೊಂದರ ಚಾವಣಿ ಹಾರಿಹೋಗಿದೆ. ಪರಿಣಾಮವಾಗಿ ಶಿಕ್ಷಕಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಜೊತೆಗೆ ತಾಳಿಕೋಟೆಯ ಬಳಿ ಡೋಣಿ ನದಿಗೆ ಪ್ರವಾಹ ಬಂದಿದ್ದರಿಂದ ಕೆಲಸ ಹೊತ್ತು ಸಂಚಾರ ಅಸ್ತವ್ಯವಸ್ತಗೊಂಡಿತ್ತು. ಆಲಿಕಲ್ಲು ಮಳೆಯ ಆರ್ಭಟದಿಂದಾಗಿ ದಾಳಿಂಬೆ, ದ್ರಾಕ್ಷಿ, ಲಿಂಬೆ, ಬಾಳೆ ಫಸಲು ಕೂಡ ನಷ್ಟಕ್ಕೆ ಈಡಾಗಿದೆ. ಜೊತೆಗೆ ಬೋಳೆಗಾಂವ ತೋಟದಲ್ಲಿ ಕಟ್ಟಿದ ಹೋರಿಯೊಂದು ಮೃತಪಟ್ಟರೆ, ತಮದಡ್ಡಿ ಗ್ರಾಮದಲ್ಲಿ ಆರು ಆಡುಗಳು ಮಳೆಯ ರಭಸಕ್ಕೆ ಕೊಚ್ಚಿಹೋಗಿವೆ.
ಗದಗ ಜಿಲ್ಲೆಯಲ್ಲೂ ಬಿರುಗಾಳಿಸಹಿತ ಮಳೆಯಾಗಿದ್ದು, ಗದಗ ನಗರದಲ್ಲಿ ಮರ ಉರುಳಿದ ಪರಿಮಾಣ ಕ್ರೂಸರ್ ವಾಹನವೊಂದು ಜಖಂಗೊಂಡಿದೆ. ಜೊತೆಗೆ ಜಿಲ್ಲೆಯ ಶಿರಹಟ್ಟಿಯಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿದ ಪರಿಣಾಮ ಸಾರ್ವಜನಿಕರು ಕಷ್ಟಪಡುವಂತಾಯಿತು. ಧಾರವಾಡ ಸೇರಿದಂತೆ ರಾಜ್ಯದ ಮತ್ತಿತರ ಕಡೆ ಸಾಧಾರಣ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.