ಅದೃಷ್ಟ ತಂದ ಆರು ಬೆರಳು, ಶಿಶು ಉಳಿಸಿದ ಅಜ್ಜಿ ನೆರಳು

-ರಾಮಮೂರ್ತಿ ನವಲಿ
ಕನ್ನಡಪ್ರಭ ವಾರ್ತೆ ಗಂಗಾವತಿ ಮಾ.12
ಆಧುನಿಕ ಯುಗದಲ್ಲೂ ಮೂಢನಂಬಿಕೆ ಅಳಿಸಿಲ್ಲ. ಅದಕ್ಕೆ ಜ್ವಲಂತ ನಿದರ್ಶನ ಎನ್ನುವಂತೆ ಗಂಗಾವತಿ ನಗರದ ಮಧ್ಯಭಾಗದಲ್ಲಿರುವ ರುದ್ರಭೂಮಿಯಲ್ಲಿ ಒಂದು ದಿನದ ಹೆಣ್ಣು ಶಿಶುವೊಂದನ್ನು ನಿಧಿ ಆಸೆಗಾಗಿ ಬಲಿ ಕೊಡಲು ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಅಜ್ಜಿಯೊಬ್ಬಳು ಸಕಾಲಕ್ಕೆ ಆಗಮಿಸಿದ್ದರಿಂದ ದುಷ್ಕರ್ಮಿಗಳು ಮಗುವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಆರು ಬೆರಳಿರುವ ಮಗುವನ್ನು ಬಲಿ ಕೊಟ್ಟರೆ ತಮ್ಮ ಕಾರ್ಯ ಸಿದ್ಧಿಸುತ್ತದೆ ಎಂಬುದು ವಾಮಾಚಾರಿಗಳ ನಂಬಿಕೆ. ಹೀಗಾಗಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಲ್ಲಿನ ರುದ್ರಭೂಮಿಯಲ್ಲಿ ನಾಲ್ಕೈದು ಜನರು ಗುಂಡಿ ತೋಡಿ, ವಾಮಾಚಾರದ ವಸ್ತುಗಳೊಂದಿಗೆ ಅದೇ ತಾನೇ ಜನಿಸಿದ 6 ಬೆರಳುಗಳುಳ್ಳ ಹೆಣ್ಣು ಶಿಶುವನ್ನು ಜೀವಂತ ಹೂಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಕಟ್ಟಿಗೆ ಆರಿಸಲೆಂದು ಅಲ್ಲಿಗೆ ಬಂದಿದ್ದ ವೃದ್ಧೆ ಶಾಂತಮ್ಮಗೆ ಈ ವ್ಯಕ್ತಿಗಳ ನಡವಳಿಕೆ ಬಗ್ಗೆ ಅನುಮಾನ ಬಂದಿದೆ. ಅಜ್ಜಿಯನ್ನು ನೋಡಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ತಕ್ಷಣ ಗುಂಡಿಯ ಬಳಿಗೆ ಹೋದ ಅಜ್ಜಿ ಅಳುತ್ತಿರುವ ಶಿಶುವನ್ನು ನೋಡಿದ್ದಾರೆ. ಗುಂಡಿಯ ಸುತ್ತಲೂ ತೆಂಗಿನಕಾಯಿ, ಬಳೆ, ನಿಂಬೆಹಣ್ಣು, ಕುಂಕುಮ ಇತ್ಯಾದಿಗಳನ್ನು ಹಾಕಿದ್ದರಿಂದ ವಾಮಾಚಾರಕ್ಕೆ ಈ ಮಗುವಿನ ಬಲಿ ನೀಡಲು ಸಿದ್ಧತೆ ನಡೆಸಿರುವುದು ಅವರಿಗೆ ಸ್ಪಷ್ಟವಾಗಿದೆ. ತಕ್ಷಣ ಶಿಶು ಮೇಲೆ ದಾಳಿ ನಡೆಸಲು ಕಾಯುತ್ತಿದ್ದ ನಾಯಿ, ಹಂದಿಗಳನ್ನು ಓಡಿಸಿ, ಅಜ್ಜಿ ಮಗುವನ್ನು ತನ್ನ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಗುಡಿಸಲಿಗೆ ಕರೆ ತಂದಿದ್ದಾಳೆ. ಆದರೆ, ಈ ಮಗು ಯಾರಿಗೆ ಸೇರಿದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಬುಧವಾರ ಸಂಜೆ ಪೊಲೀಸ್ ಸ್ಟೇಷನ್ಗೆ ಹೋಗಿದ್ದ ಅಜ್ಜಿ ದೂರು ನೀಡಿ ಮಗುವನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ.
ಈ ಮಗು ಹುಟ್ಟಿ ಒಂದು ದಿನ ಕಳೆದಿದೆ ಅಷ್ಟೇ. ಮಂಗಳವಾರ ಮಧ್ಯಾಹ್ನ ಜನಿಸಿದ ಶಿಶು ಎಂದು ವೈದ್ಯರು ತಿಳಿಸಿದ್ದಾರೆ. ಶಿಶುವಿನ ವೈದ್ಯಕೀಯ ತಪಾಸಣೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಇದ್ದು, ಶಿಶುವನ್ನು ಸಂರಕ್ಷಿಸಲು ಅಲ್ಲಿಗೆ ಕಳುಹಿಸುತ್ತೇವೆ. ಮಗುವಿನ ಹೆತ್ತವರ ಪತ್ತೆಗೂ ಕ್ರಮ ಕೈಗೊಳ್ಳುತ್ತೇವೆ.
-ರೆಹಮಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


