ಪ್ರಧಾನ ಸುದ್ದಿ

ಅಧಿಕಾರದಾಹಿ ಸಿದ್ದುಗೆ ಮೋದಿ ಟೀಕೆ ಹಕ್ಕಿಲ್ಲ

ಅಧಿಕಾರದಾಹಿ ಸಿದ್ದುಗೆ  ಮೋದಿ ಟೀಕೆ ಹಕ್ಕಿಲ್ಲ
Published On :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಕ್ಕಿಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಬಿಜೆಪಿಯ ಸಂಸದೀಯ  ಮಂಡಳಿ. ನರೇಂದ್ರ ಮೋದಿ ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ, ಅಂದಿನಿಂದ ಇಂದಿನವರೆಗೂ ಬಿಜೆಪಿಗೆ ನಿಷ್ಠರಾಗಿದ್ದಾರೆ. ಅವರ ನಿಷ್ಠೆ ವಿಚಾರಕ್ಕೆ ಹೊರತು ಅಧಿಕಾರಕ್ಕಲ್ಲ.
ಆದರೆ ಸಿದ್ದರಾಮಯ್ಯನವರು ದೇವೇಗೌಡರ ಕಿರಿಕಿರಿ ತಾಳಲಾರದೇ ಜನತಾದಳದಿಂದ ಕಾಂಗ್ರೆಸ್‌ಗೆ ಅಧಿಕಾರಕ್ಕಾಗಿ ಓಡಿಬಂದವರು. ಒಂದೊಮ್ಮೆ ಕಾಂಗ್ರೆಸ್ ಅವರನ್ನು ಪ್ರತಿಪಕ್ಷ ನಾಯಕ ಮತ್ತು ಮುಖ್ಯಮಂತ್ರಿ ಮಾಡದೇ ಇದ್ದಿದ್ದರೆ ಅವರು ಕಾಂಗ್ರೆಸ್‌ನಲ್ಲಿ ಇರುತ್ತಿದ್ದರಾ? ಲೋಕಸಭೆ ಚುನಾವಣೆ ನಂತರ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತೆ ಸೂಚಿಸಿದರೆ ಅವರು ಕಾಂಗ್ರೆಸ್‌ನಲ್ಲೇ ಉಳಿಯುತ್ತಾರಾ? ಇಂತಹ ಜನರು ಮೋದಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ ಈ ರೀತಿ ತಿರುಗೇಟು ನೀಡಿದ್ದಾರೆ. ಮೋದಿ ಬಗ್ಗೆ ಟೀಕಿಸಲು ವಿಷಯಗಳು ಸಿಗದೇ, ಕ್ಷುಲ್ಲಕ ಟೀಕೆಗಳನ್ನು ಮಾಡಲಾಗುತ್ತಿದೆ. ನಮ್ಮ ದೇಶದ ಚುನಾವಣೆಯಲ್ಲಿ ಮೋದಿ ಎದುರಿಸಿದಷ್ಟು ಕೀಳುಮಟ್ಟದ ಟೀಕೆಗಳನ್ನು ಬೇರೆ ಯಾರೂ ಎದುರಿಸಿಲ್ಲ ಎಂದು ಅವರು ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.               
ಓಲೈಕೆ ರಾಜಕಾರಣ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಓಲೈಕೆ ರಾಜಕಾರಣ ಮಾಡುತ್ತಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಬಹುಸಂಖ್ಯಾತರನ್ನು ತುಳಿಯುವ ಕೆಲಸದಲ್ಲಿ ನಿರತವಾಗಿದೆ. ಶಿರಾ, ಮಂಗಳೂರು, ಗದಗದ ಲಕ್ಷ್ಮೇಶ್ವರ ಹೀಗೆ ಅನೇಕ ಕಡೆ ನಡೆದ ಘಟನೆಗಳಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಘಟನೆಯಲ್ಲೂ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇವರ ಓಲೈಕೆ ರಾಜಕಾರಣವೇ ಕಾನೂನು ಸುವ್ಯವಸ್ಥೆ ಕುಸಿಯಲು ಕಾರಣ. ಸರ್ಕಾರ ನಿಷ್ಪಕ್ಷಪಾತಿಯಾಗಿದ್ದರೆ ಎಲ್ಲವೂ ಸರಿಯಿರುತ್ತದೆ. ಸಾಮಾಜಿಕ ಸೇವೆ ಮಾಡಿಕೊಂಡಿರುವ ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳೇ ಸರ್ಕಾರಕ್ಕೆ ಕಾಣುತ್ತವೆ. ಆದರೆ ನಿಜವಾಗಿಯೂ ಸಮಾಜಘಾತುಕ ಸಂಘಟನೆಗಳ ಬಗ್ಗೆ ಸರ್ಕಾರ ಜಾಣಕುರುಡು ಪ್ರದರ್ಶಿಸುತ್ತದೆ.
ಸರ್ಕಾರದ ಯೋಜನೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಶಾದಿಭಾಗ್ಯ, ಒಂದು ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವಾಸ ಮುಂತಾದ ಯೋಜನೆಗಳು ಸಮಾಜವನ್ನು ಒಡೆಯುವ ಯೋಜನೆಗಳಾಗಿವೆ. ಸರ್ಕಾರಕ್ಕೆ ಒಂದು ಸ್ಪಷ್ಟ ಗುರಿಯಿಲ್ಲ ಎಂಬುದು ಅವರ ಹಲವು ಯೋಜನೆಗಳಿಂದ ಸಾಬೀತಾಗಿದೆ. ಹಲವು ಯೋಜನೆಗಳನ್ನು ಜಾರಿ ಮಾಡಿ, ನಂತರ ಹಿಂಪಡೆಯಲಾಗಿದೆ. ಪಂಚಾಯತ್ ರಾಜ್ ಯೋಜನೆ, ಮಕ್ಕಳ ಪ್ರವಾಸ, ಪ್ರತಿಭಟನೆ ಮಾಡಿದರೆ ಸ್ಕಾಲರ್‌ಶಿಪ್ ಇಲ್ಲ ಮುಂತಾದ ಯೋಜನೆಗಳನ್ನು ಜಾರಿ ಮಾಡಿ, ವಿರೋಧದ ನಂತರ ಹಿಂಪಡೆಯಲಾಗಿದೆ. ಅಂದರೆ ಸರ್ಕಾರಕ್ಕೆ ಯೋಜನೆ ಜಾರಿ ಮಾಡುವಾಗ ಅದರ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ.
ಮೋದಿ ಟೀಕೆ ಹಕ್ಕಿಲ್ಲ
ಲಾಡ್ ಕೈಬಿಟ್ಟವರು ಡಿಕೆಶಿ ತಗೊಂಡಿದ್ದೇಕೆ?

ಬಿಜೆಯಲ್ಲಿ ಕಳಂಕಿತರಿದ್ದಾರೆ. ಅವರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಮಾತನಾಡುವವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ ಎನ್ನುತ್ತಾರಲ್ಲ. ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್‌ರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬಹುದಾ?
ಡಿ.ಕೆ. ಶಿವಕುಮಾರ್‌ಗೆ ಅನ್ವಯವಾಗುವ ನಿಮಯ ಬಿಜೆಪಿಗೂ ಅನ್ವಯವಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತ ಅನ್ವಯವಾಗುತ್ತೆ. ಆದರೆ ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪ್ರಾಮಾಣಿಕತೆಯ ಸೋಗು ಹಾಕಿದವರು ಅವರು. ಅದಕ್ಕಾಗಿಯೇ ಆರಂಭದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರಲಿಲ್ಲ. ಅದೇ ಕಾರಣಕ್ಕೆ ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಪಾಪ ಸಂತೋಷ್ ಲಾಡ್‌ಗೆ ದಿಲ್ಲಿಯಲ್ಲಿ 'ಕೈ' ಇರಲಿಲ್ಲ ರಾಜೀನಾಮೆ ಕೊಟ್ಟರು. ಆದರೆ ಡಿ.ಕೆ. ಶಿನಕುಮಾರ್ ಅವರನ್ನು ಸೇರಿಸಿಕೊಳ್ಳದೇ ಇರಲು ಇವರಿಂದ ಆಗಲಿಲ್ಲವಲ್ಲ. ಇವರೇ ಆರಂಭದಲ್ಲಿ ಪ್ರಾಮಾಣಿಕತೆಯ ಮಾತನಾಡಿದ್ದರಿಂದ ನಾವು ಅವರ ಸೇರ್ಪಡೆ ಪ್ರಶ್ನಿಸುತ್ತಿದ್ದೇವೆ. ಭ್ರಷ್ಟಾಚಾರ ನಿಯಂತ್ರಣ ವಿಷಯದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ನೈತಿಕವಾಗಿ ಕಾಂಗ್ರೆಸ್‌ಗಿಂತ ಸಾಕಷ್ಟು ಮುಂದಿದೆ. ಅವರಿಂದ ಪಾಠ ಕಲಿಯಬೇಕಾದ ದುರ್ಗತಿ ಬಂದಿಲ್ಲ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೊದಲು ಕೇಂದ್ರ ಸರ್ಕಾರದ ಹಗರಣಗಳ ಬಗ್ಗೆ ಅವರು ಒಮ್ಮೆ ತಿಳಿದುಕೊಳ್ಳಲಿ.
ಆರೋಪ ಬಂದ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರೇ ತೀರ್ಮಾನಿಸಿದರು. ಪಕ್ಷದಲ್ಲೂ ಯಾವುದೇ ಹುದ್ದೆ ಇಲ್ಲ. ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಮೇಲಿದ್ದ ಕೆಲವು ಪ್ರಕರಣಗಳನ್ನು ಹೈಕೋರ್ಟ್ ರದ್ದುಪಡಿಸಿದೆ. ನಮ್ಮ ದೇಶದಲ್ಲಿ ಒಂದೊಂದು ಪ್ರಕರಣಗಳು 20-25 ವರ್ಷ ನಡೆಯುತ್ತವೆ. ಅಷ್ಟು ವರ್ಷ ಅವರು ರಾಜಕೀಯದಿಂದ ದೂರ ಇರಬೇಕು ಎಂದು ಬಯಸುವುದು ಬಹುಶಃ ಸರಿಯಾಗಲಾರದು.
ಚರ್ಚೆ ಅನಿವಾರ್ಯ ಆದರದು ಗೊಂದಲವಲ್ಲ
ಪಕ್ಷದಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಹಲವು ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವಾಗ ಚರ್ಚೆ ಅನಿವಾರ್ಯ ಮತ್ತು ಅಗತ್ಯಕೂಡ. ಅಂತಹ ಸಂದರ್ಭದಲ್ಲಿ ಅಭಿಪ್ರಾಯ ಭೇದಗಳು ಬಂದೇ ಬರುತ್ತವೆ. ಆದರ ಅದನ್ನೇ ಗೊಂದಲ, ಭಿನ್ನಮತ ಎಂದು ಹೇಳುವುದು ಸರಿಯಲ್ಲ. ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ 20 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದೇವೆ. 2ನೇ ಪಟ್ಟಿಯೂ ಅಂತಿಮಗೊಂಡಿದೆ. 2-3 ಕ್ಷೇತ್ರದ ಬಗ್ಗೆ  ಅಭಿಪ್ರಾಯ ಭೇದಗಳಿರುವುದು ನಿಜ. ಅದನ್ನು ಬಗೆಹರಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಪ್ರಕಟಗೊಂಡ ಅಭ್ಯರ್ಥಿ ಪಕ್ಷದ ಸರ್ವಾನುಮತದ ಅಭ್ಯರ್ಥಿಯಾಗಿರುತ್ತಾನೆ. ಶೇ.90ರಷ್ಟು ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯನ್ನು ರಾಜ್ಯದಲ್ಲೇ ಅಂತಿಮಗೊಳಿಸಿದ್ದೇವೆ. 2-3 ಕ್ಷೇತ್ರಕ್ಕೆ ಮಾತ್ರ ರಾಷ್ಟ್ರಾಧ್ಯಕ್ಷರ ಸಲಹೆ ಕೇಳಲಾಗಿದೆ.
ಒಗ್ಗಟ್ಟಿನಲ್ಲಿ ಬಲವಿದೆ
ಯುಪಿಎ 10 ವರ್ಷದ ಕೆಟ್ಟ ಆಡಳಿತದ ಬಗ್ಗೆ ಜನರಿಗೆ ಬೇಸರವಿದೆ. ಮೋದಿ ಅಲೆಯಿದೆ. ವಿಧಾನಸಭೆ ಚುನಾವಣೆ ಸೋಲಿನ ಹೊರತಾಗಿಯೂ ಪಕ್ಷ ಉತ್ತಮವಾಗಿ ಚೇತರಿಸಿಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಬೇರೆಯಾಗಿದ್ದ ಜನರೆಲ್ಲ ಪಕ್ಷಕ್ಕೆ ಮರಳಿದ್ದಾರೆ. ಹೀಗಾಗಿ ಪಕ್ಷದ ಬಲ ಹೆಚ್ಚಿದೆ. ಹಂಚಿಹೋಗಿದ್ದ ಮತಗಳು ಈ ಬಾರಿ ಒಟ್ಟು ಸೇರಲಿವೆ. ಇದೆಲ್ಲ ಅಂಶಗಳು ಬಿಜೆಪಿಗೆ ಹಿಂದಿನ ಬಾರಿಗಿಂತ ಉತ್ತಮ ಫಲಿತಾಂಶ ತಂದುಕೊಡಲಿವೆ.


-ವಿನಾಯಕ ಭಟ್ಟ ಮೂರೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.