ಹಾಕಿದ ಮತ, ಆಗಲಿದೆ ಖಚಿತ
ಬೆಂಗಳೂರು: ಇನ್ನು ಮುಂದೆ ನೀವು ಚಲಾಯಿಸಿದ ಮತ ಯಾವ ಅಭ್ಯರ್ಥಿಗೆ ಲಭಿಸಿದೆ ಎನ್ನುವುದು ಮತಗಟ್ಟೆಯಲ್ಲೇ ಖಾತರಿಯಾಗಲಿದೆ. ಆದರೆ ಇದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಬೇಕಿದೆ. ಕೇಂದ್ರ ಚುನಾವಣಾ ಆಯೋಗ ಇದೇ ಪ್ರಥಮ ಬಾರಿಗೆ ವಿವಿಪ್ಯಾಟ್ (ವೊಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಎಂಬ ಹೊಸ ತಂತ್ರಜ್ಞಾನದ ಯಂತ್ರ ಅಳವಡಿಸುವ ಬಗ್ಗೆ ಚಿಂತಿಸುತ್ತಿದೆ. ಇದನ್ನು ಅಳವಡಿಸಿದರೆ, ಮತದಾರರು ಯಾವ ಅಭ್ಯರ್ಥಿಗೆ ಮತದಾನ ಮಾಡುತ್ತಾರೋ ಆ ಅಭ್ಯರ್ಥಿ ಹೆಸರು, ಕ್ರಮಸಂಖ್ಯೆ ಮತ್ತು ಚಿಹ್ನೆ ಇರುವ ಚಿತ್ರಣವೇ ಯಂತ್ರದಲ್ಲಿ ಮೂಡುತ್ತದೆ.
ಈ ಹಿಂದೆ ಹೇಗಿತ್ತು?
ದೇಶದಲ್ಲಿ ಈತನಕ ನಡೆದ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಬಳಕೆಯಿಂದ ಮತದಾರ ತಾನು ಚಲಾಯಿಸಿದ ಮತ ಯಾವ ಅಭ್ಯರ್ಥಿ ಖಾತೆಗೆ ಹೋಗಿದೆ ಎನ್ನುವುದೇ ತಿಳಿಯುತ್ತಿರಲಿಲ್ಲ. ಇದರಿಂದಾಗಿ ಮತದಾರ ಯಂತ್ರದ ಗುಂಡಿ ಒತ್ತಿ ಚಲಾಯಿಸಿದ ಮತ ಇಚ್ಛಿಸಿದ ಅಭ್ಯರ್ಥಿಗೇ ಹೋಗಿದೆಯೋ, ಇಲ್ಲವೋ ಅಥವಾ ಮತ ಅಪಮೌಲ್ಯವಾಗಿದೆಯೋ ಎನ್ನುವ ಗೊಂದಲ ಇರುತ್ತಿತ್ತು. ಕೆಲವೊಮ್ಮೆ ಇದು ಅತಿರೇಕಕ್ಕೆ ಹೋಗಿ ಎಣಿಕೆ ವೇಳೆ
ಗದ್ದಲವಾಗುತ್ತಿತ್ತು. ನಂತರ ಕೋರ್ಟ್
ಮೆಟ್ಟಿಲೇರಿರುವುದೂ ಉಂಟು.
ಬರಲಿವೆ ಹೊಸ ಯಂತ್ರಗಳು
ಈ ಬಾರಿ ಚುನಾವಣೆಯಲ್ಲಿ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ಮತಯಂತ್ರಗಳು ಬಳಕೆಗೆ ಬರಲಿವೆ. ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಂಸ್ಥೆ ಸಿದ್ಧಪಡಿಸಿರುವ ಈ ಯಂತ್ರಗಳು ಈ ಬಾರಿಯೇ ಅನೇಕ ಕಡೆ ಪ್ರಾಯೋಗಿಕವಾಗಿ ಬಳಕೆಯಾಗಲಿವೆ. ಈತನಕ ಬಳಸುತ್ತಿದ್ದ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್ ಯುನಿಟ್ಗೆ 4 ಮತಯಂತ್ರಗಳನ್ನು ಮಾತ್ರ ಅಳವಡಿಸಬಹುದಿತ್ತು. ಇದರಿಂದ ಒಂದು ಮತಯಂತ್ರಕ್ಕೆ 16 ಅಭ್ಯರ್ಥಿಗಳಂತೆ 4 ಯಂತ್ರದಲ್ಲಿ 64 ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಮಾಡಬಹುದಿತ್ತು. ಆದರೆ ಈಗ ಬಂದಿರುವ ಸುಧಾರಿತ ಯಂತ್ರದಲ್ಲಿ ಒಂದೇ ಕಂಟ್ರೋಲ್ ಯುನಿಟ್ನಲ್ಲಿ 24 ಮತಯಂತ್ರಗಳನ್ನು ಜೋಡಿಸಬಹುದು. ಈ ಮೂಲಕ ಒಂದು ಯಂತ್ರಕ್ಕೆ 16 ಅಭ್ಯರ್ಥಿಯಂತೆ 384 ಅಭ್ಯರ್ಥಿಗಳಿಗೆ ಅವಕಾಶ ಮಾಡಬಹುದು. ಇದರಿಂದ ಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸಿದರೂ ಮತಯಂತ್ರದಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ.
ಸುಪ್ರೀಂ ಸೂಚನೆ
ಒಮ್ಮೆ ಮತಗೊಂದಲದಿಂದಾಗಿ ರಾಜಕೀಯ ಪಕ್ಷವೊಂದರ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಕೋರ್ಟ್ ಸೂಚನೆಯಂತೆ ಆಯೋಗ ವಿವಿಪ್ಯಾಟ್ ಮೊರೆ ಹೋಗುತ್ತಿದೆ. ಈ ನೂತನ ವ್ಯವಸ್ಥೆ ಈಗಾಗಲೇ ಮಿಜೋರಾಂ ಮತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬೆರಳೆಣಿಕೆ ಮತಗಟ್ಟೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗಿದೆ. ಆದರೆ ಲೋಕಸಭಾ ಚುನಾವಣೆಗಳಲ್ಲಿ ಇದುವರೆಗೂ ಬಳಸಿಲ್ಲ. ಈ ಬಾರಿ ಬಳಕೆಯಾಗುವ ಸಾಧ್ಯೆತೆ ಇದೆ.
ಮಾಹಿತಿ ಸೇಫ್
ಈ ಯಂತ್ರದ ಮತ್ತೊಂದು
ವಿಶೇಷವೆಂದರೆ ಪ್ರತಿ ಕಂಟ್ರೋಲ್ ಯುನಿಟ್ನಲ್ಲೂ ಒಂದು ಸ್ಲೇವ್ ಯುನಿಟ್ ಎಂಬ ಚಿಪ್ ಅಳವಡಿಸಲಾಗಿದೆ. ಇದರಲ್ಲಿ ಎಲ್ಲ ಮತಗಳ ಮಾಹಿತಿಯೂ ಸಂಗ್ರಹವಾಗಿರುತ್ತದೆ. ಒಂದು ವೇಳೆ ಗಲಾಟೆ ನಡೆದು ಮತಯಂತ್ರವನ್ನೇ
ದ್ವಂಸ ಮಾಡಿದರೂ ಮತ
ಮಾಹಿತಿ ಮಾತ್ರ ಸೇಫ್.
ಹೇಗೆ ಕೆಲಸ ಮಾಡುತ್ತದೆ?
ಇದು ಮತಯಂತ್ರ ಮತ್ತು ಅದನ್ನು ನಿಯಂತ್ರಿಸುವ ಕಂಟ್ರೋಲ್ ಯುನಿಟ್ ಯಂತ್ರಕ್ಕೆ ಅಳವಡಿಸುವ ಪ್ರತ್ಯೇಕ ಯಂತ್ರ. ಮತದಾರ ಮತ ಚಲಾಯಿಸಿದಾಗ ಎಟಿಎಂನಲ್ಲಿ ರಸೀದಿ ಹೊರ ಬರುವಂತೆ ಒಂದು ಚೀಟಿ ಹೊರ ಬರುತ್ತದೆ. ಅದರಲ್ಲಿ ಅಭ್ಯರ್ಥಿ ಗುರುತು, ಇತ್ಯಾದಿ ವಿವರ ಇರುತ್ತದೆ. ಇದು ಮತಯಂತ್ರದ ಗುಂಡಿ ಒತ್ತಿದ ನಂತರ 7 ಸೆಕೆಂಡ್ವರೆಗೂ ಮತದಾರರಿಗೆ ಕಾಣುತ್ತದೆ. ಬಳಿಕ ಯಂತ್ರದೊಳಗೆ ಹೋಗಿ ಬೀಳುತ್ತದೆ. ಹೀಗೆ ಚಲಾವಣೆಯಾದ ಪ್ರತಿ ಮತಕ್ಕೂ ಒಂದೊಂದು ಚೀಟಿ ಉತ್ಪತ್ತಿಯಾಗಿ ಆ ಯಂತ್ರದಲ್ಲೇ ಸಂಗ್ರಹವಾಗಿರುತ್ತದೆ. ಇದು ಸೀಲ್ ಆಗಿರುತ್ತದೆ. ಎಣಿಕೆ ಸಂದರ್ಭದಲ್ಲಿ ಮತಯಂತ್ರದಲ್ಲಿ ಏನಾದರೂ ದೋಷ ಉಂಟಾದರೆ ಈ ಚೀಟಿಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬಹುದು. ಹಾಗೆಯೇ ಎಣಿಕೆ ಬಗ್ಗೆ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದಾಗ ಈ ಚೀಟಿಗಳನ್ನು ಎಣಿಸಿ ಖಾತರಿ ಮಾಡಿಕೊಳ್ಳ
ಬಹುದಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಹಿಂದೆ ಹೀಗಿತ್ತು
1
ಕಂಟ್ರೋಲ್ ಯುನಿಟ್
ಜೋಡಿಸಬಹುದಾದ
ಮತಯಂತ್ರ 4
64
4 ಕಂಟ್ರೋಲ್ ಯುನಿಟ್ಗೆ 16 ಅಭ್ಯರ್ಥಿಗಳ ಹೆಸರಿಗೆ ಮಾತ್ರ ಅವಕಾಶ
ಈಗ ಹೇಗಾಗುತ್ತೆ
24
ಮತಯಂತ್ರ ಒಂದು ಕಂಟ್ರೋಲ್ ಯುನಿಟ್ನಲ್ಲಿ ಜೋಡಿಸಬಹುದಾದ ಯಂತ್ರ
384
ಅಭ್ಯರ್ಥಿಗಳು 16
ಅಭ್ಯರ್ಥಿಯಂತೆ 384
ಅಭ್ಯರ್ಥಿಗಳಿಗೆ ಅವಕಾಶ
-ಶಿವಕುಮಾರ್ ಬೆಳ್ಳಿತಟ್ಟೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

