ಪ್ರಧಾನ ಸುದ್ದಿ

ಹೈಜಾಕ್ ಅಸಾಧ್ಯ, ಪತನವೇ ಸಾಧ್ಯ

ಹೈಜಾಕ್ ಅಸಾಧ್ಯ, ಪತನವೇ ಸಾಧ್ಯ
Published On :

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮಾ.15
'8 ದಿನಗಳ ಹಿಂದೆ ನಾಪತ್ತೆಯಾಗಿರುವ ಮಲೇಷ್ಯಾದ ವಿಮಾನ ಹೈಜಾಕ್ ಆಗಲು ಸಾಧ್ಯವೇ ಇಲ್ಲ. ಏಕೆಂದರೆ ವಿಮಾನದ ಸಂಪರ್ಕ ಸಾಧನಗಳನ್ನು ಸ್ವಿಚ್‌ಆಫ್ ಮಾಡಿಕೊಂಡು ಅದನ್ನು ಚಲಾಯಿಸಲು ಸಾಧ್ಯವೇ ಇಲ್ಲ. ಅದು ಬಂಗಾಳಕೊಲ್ಲಿ ಸಮುದ್ರದಲ್ಲಿ ಪತನವಾಗಿರಲೇಬೇಕು.'
- ಹೀಗೆಂದು ಬೆಂಗಳೂರಿನ ಪ್ರಮುಖ ವಾಯುಯಾನ ತಜ್ಞರೊಬ್ಬರು ವಾದಿಸಿದ್ದಾರೆ. 'ಕನ್ನಡಪ್ರಭ' ಜತೆ ಮಾತನಾಡಿದ ಅವರು ವಿಮಾನ ಅಪಹರಣಕ್ಕೆ ಒಳಗಾಗಿದೆ ಎಂದರೆ, ಅದರಿಂದ ಪ್ರಯಾಣಿಕರ ನಿಕಟವರ್ತಿಗಳ ಆತಂಕ ಹೆಚ್ಚಾಗಬಹುದು ಎನ್ನುತ್ತಾರೆ.          
ನಮಗೆ ಗೊತ್ತಾಗಬೇಕಿತ್ತು
ಒಂದು ವೇಳೆ ನಮ್ಮ ದೇಶದ ವಾಯುಯಾನ ಪ್ರದೇಶದಲ್ಲಿ ಹಾದು ಹೋಗಿದೆ ಎಂದಾದರೆ ತಿರುವನಂತಪುರ, ವಿಶಾಖಪಟ್ಟಣ ಅಥವಾ ಚೆನ್ನೈನಲ್ಲಿರುವ ರಾಡರ್ ಕೇಂದ್ರದಲ್ಲಿ ಅದು ದಾಖಲಾಗಬೇಕಾಗಿತ್ತು. ಆದರೆ ಹಾಗೆ ಆಗಿಯೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಆಳದ ಬಂಗಾಳಕೊಲ್ಲಿ
ಅಂಡಮಾನ್ ದ್ವೀಪ ಸಮೂಹದ ವ್ಯಾಪ್ತಿಯಲ್ಲಿ ಬಂಗಾಳ ಕೊಲ್ಲಿ ಅತ್ಯಂತ ಆಳವಾಗಿದೆ. ಹೀಗಾಗಿ, ಅಲ್ಲಿ ವಿಮಾನ ಪತನವಾದರೂ ಅದನ್ನು ಶೀಘ್ರಾತಿಶೀಘ್ರವಾಗಿ ಪತ್ತೆ ಹಚ್ಚುವುದು ಕಷ್ಟ. ಈ ನಿಟ್ಟಿನಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವಿದೆ. ಏಕೆಂದರೆ ದೇಶದ ನೌಕಾಪಡೆ ಪಿ-8 ಐ ಎಂಬ ವಿಶೇಷ ವಿಮಾನವನ್ನು ಬಳಸಿಕೊಂಡು ಶೋಧ ಕಾರ್ಯ ನಡೆಸಬಹುದು. ಅಮೆರಿಕದ ನೌಕಾಪಡೆ ಬಳಿಕ ವಿಶ್ವದಲ್ಲಿ ಇಂಥ ವಿಮಾನ ಹೊಂದಿರುವುದು ದೇಶದ ನೌಕಾಪಡೆ ಎನ್ನುವುದು ಅವರ ವಿವರಣೆ.
ಈ ವಿಮಾನದ ಮೂಲಕ ಅತ್ಯಂತ ಆಳದಲ್ಲಿ ಇರಬಹುದಾದ ಅವಶೇಷವನ್ನು ಕೂಡ ಪತ್ತೆಹಚ್ಚಬಹುದಂತೆ.
ತಾಂತ್ರಿಕವಾಗಿ ಸಾಧ್ಯವೇ ಇಲ್ಲ
ಯಾರೋ ವಿಮಾನ ಹೈಜಾಕ್ ಮಾಡಿದ್ದಾರೆ ಎಂಬ ವಾದಕ್ಕೆ ಅರ್ಥವೇ ಇಲ್ಲ ಎನ್ನುತ್ತಾರೆ ತಜ್ಞರು. ಏಕೆಂದರೆ ಕೌಲಾಲಂಪುರದಿಂದ ಹೊರಟ ವಿಮಾನವನ್ನು ಮಲೇಷ್ಯಾ ಮಾತ್ರವಲ್ಲ ಇತರ ರಾಷ್ಟ್ರಗಳೂ ಗಮನಿಸುತ್ತವೆ. ಬೋಯಿಂಗ್ 777 ವಿಮಾನವನ್ನು ಯಾವುದೇ ಭೂಪ್ರದೇಶದಲ್ಲಿ ಇಳಿಸಲು ಸಾಧ್ಯವೇ ಇಲ್ಲ ಮತ್ತು ಅದು ನಿಗದಿತ ರಾಷ್ಟ್ರಕ್ಕೆ ಪ್ರಯಾಣಿಸುವ ಹಿನ್ನೆಲೆಯಲ್ಲಿ ಅಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ ಸತತವಾಗಿ ಸಿಗುತ್ತಾ ಇರುತ್ತದೆ.
ಬಂಗಾಳಕೊಲ್ಲಿ /ಹಿಂದೂ ಸಾಗರದಲ್ಲಿ ಪತನ?
ಬೆಂಗಳೂರಿನ ವಾಯುಯಾನ ತಜ್ಞರು ಪ್ರತಿಪಾದಿಸುವಂತೆ ವಿಮಾನ ಬಂಗಾಳ ಕೊಲ್ಲಿ ಅಥವಾ ಹಿಂದೂ ಮಹಾಸಾಗರದಲ್ಲಿ ಪತನವಾಗಿದೆ ಎಂದು ಸಿಎನ್‌ಎನ್ ಸುದ್ದಿವಾಹಿನಿ
ವರದಿ ಮಾಡಿದೆ. ಅದರ ಪ್ರಕಾರ ಕೌಲಾಲಂಪುರದಿಂದ ಬೀಜಿಂಗ್‌ಗೆ ಹೊರಟ ವಿಮಾನ ಕೆಲವೇ ಕ್ಷಣಗಳಲ್ಲಿ ಹಾರುವ ಎತ್ತರದಲ್ಲಿ ಭಾರಿ ಬದಲಾವಣೆ ಮಾಡಿಕೊಂಡಿತು.
ಮಾನವರ ಹಸ್ತಕ್ಷೇಪದಿಂದಲೇ ಇಂಥ ಒಂದು ಬದಲು ಸಾಧ್ಯವಿದೆ ಎಂದು ಸುದ್ದಿವಾಹಿನಿ ಹೇಳಿಕೊಂಡಿದೆ. 45 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ ಏಕಾಏಕಿ 23 ಸಾವಿರ ಅಡಿಗಳಿಗೆ ಇಳಿದಿತ್ತು ಎಂದು ಮಲೇಷ್ಯಾದ ರಾಡರ್‌ಗೆ ಕಂಡುಬಂದಿತ್ತು.



-ಕೆ. ಸದಾಶಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.