ಪ್ರಧಾನ ಸುದ್ದಿ

ಲೋಕಸಭೆ ಚುನಾವಣೆ: 30 ಸಾವಿರ ಕೋಟಿ ರು. ವಹಿವಾಟು!

ಲೋಕಸಭೆ ಚುನಾವಣೆ: 30 ಸಾವಿರ ಕೋಟಿ ರು. ವಹಿವಾಟು!
Published On :

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಚಾಣದ ಹೊಳೆಯೇ ಹರಿಯಲಿದೆ. ಸರ್ಕಾರ, ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು 30 ಸಾವಿರ ಕೋಟಿ ವೆಚ್ಚ ಮಾಡುವ ನಿರೀಕ್ಷೆ ಇದೆ ಎನ್ನುತ್ತಿದೆ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್. ಅಮೆರಿಕದ ಚುನಾವಣೆಗೆ ಮಾಡಿದ ವೆಚ್ಚ(42 ಸಾವಿರ ಕೋಟಿ)ಕ್ಕೆ ಹೋಲಿಸಿದರೆ ಇದು ಕಡಿಮೆಯೇ. ಆದರೆ ಚುನಾವಣಾ ಆಯೋಗ ಎಷ್ಟೇ ಹದ್ದಿನ ಕಣ್ಣಿಟ್ಟರೂ ನಮ್ಮವರು ಮಾಡುವ ಅನಧಿಕೃತ ವೆಚ್ಚ ಯಾರ ಲೆಕ್ಕಕ್ಕೂ ಸಿಗದು ಎನ್ನುವುದು ಸರ್ವವಿದಿತ. ಹಾಗಾಗಿ ಅಮೆರಿಕಕ್ಕಿಂತ ನಮ್ಮ ವೆಚ್ಚವೇ ಹೆಚ್ಚು.
ಸರ್ಕಾರ ಎಷ್ಟು ವೆಚ್ಚ ಮಾಡುತ್ತೆ?
16ನೇ ಲೋಕಸಭೆಗೆ ಮಾಡಲಾಗುವ ಒಟ್ಟು 30 ಸಾವಿರ ಕೋಟಿಯಲ್ಲಿ 7 ರಿಂದ 8 ಸಾವಿರ ಕೋಟಿಯಷ್ಟು ವೆಚ್ಚವನ್ನು ಸರ್ಕಾರವೇ ಮಾಡಲಿದೆ. ಇದರಲ್ಲಿ ಚುನಾವಣಾ ಆಯೋಗದ ವೆಚ್ಚ 3,500 ಕೋಟಿ. ಅದೇ ರೀತಿ ಗೃಹ ಸಚಿವಾಲಯ, ಭಾರತೀಯ ರೇಲ್ವೆ ಸೇರಿದಂತೆ ಸರ್ಕಾರದ ವಿವಿಧ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸರಿಸುಮಾರು ಇಷ್ಟೇ ಪ್ರಮಾಣದಲ್ಲಿ ವೆಚ್ಚ ಮಾಡುತ್ತವೆ. ಆದರೆ, ಒಟ್ಟಾರೆ ಸರ್ಕಾರ ಎಷ್ಟು ವೆಚ್ಚ ಮಾಡುತ್ತದೆ ಎನ್ನುವುದು ಚುನಾವಣೆ ಬಳಿಕವೇ ಖಚಿತಗೊಳ್ಳಲಿದೆ.
ಖರ್ಚಿನ ಲೆಕ್ಕಾಚಾರ
ಅಭ್ಯರ್ಥಿಗಳ ದಿನನಿತ್ಯದ ವೆಚ್ಚದ ಮೇಲೆ ಚುನಾವಣಾ ವೀಕ್ಷಕರು ಕಣ್ಣಿಟ್ಟೇ ಇರುತ್ತಾರೆ. ಈ ಬಾರಿ ಅಭ್ಯರ್ಥಿಗಳ ವೆಚ್ಚದ ಮೇಲೆ ಇನ್ನಷ್ಟು ನಿಯಂತ್ರಣ ಹೇರಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಹೀಗಾಗಿ ಅಭ್ಯರ್ಥಿಯೊಬ್ಬ ತನಗಾಗಿ ದಿನವೊಂದಕ್ಕೆ ಎಷ್ಟು ವೆಚ್ಚ ಮಾಡಬಹುದು ಎನ್ನುವ ಲೆಕ್ಕಾಚಾರವನ್ನೂ ಹಾಕಿದೆ. ಈ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.(ಹಾಗಂತ ಅಭ್ಯರ್ಥಿಯು ನಿರ್ದಿಷ್ಟ ವಿಷಯಕ್ಕೆ ಹೆಚ್ಚು ಮಾಡಬಾರದೆಂದೇನೂ ಇಲ್ಲ. ಆದರೆ, ಒಟ್ಟಾರೆ ವೆಚ್ಚ 70 ಲಕ್ಷ ದಾಟುವಂತಿಲ್ಲ)
ಟ್ರೆಂಡ್ ಬದಲಾಗಿದೆ
ಇತ್ತೀಚಿನ ವರೆಗೆ ರಾಜಕೀಯ ಪಕ್ಷಗಳೇ ಚುನಾವಣೆಯಲ್ಲಿ ಹೆಚ್ಚಿನ ವೆಚ್ಚ ಮಾಡುತ್ತಿದ್ದವು. ಆದರೆ, ಈಗ ಟ್ರೆಂಡ್ ಬದಲಾಗಿದೆ. ಅಭ್ಯರ್ಥಿಗಳೇ ಪಕ್ಷಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಈ ಹಣ ಕರೋಡ್‌ಪತಿ ಅಭ್ಯರ್ಥಿಗಳು, ಕಾರ್ಪೊರೇಟ್‌ಗಳು ಮತ್ತು ಕಾಂಟ್ರಾಕ್ಟರ್‌ಗಳಿಂದ ಹರಿದು ಬರುತ್ತದೆ ಎನ್ನುತ್ತಾರೆ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಮುಖ್ಯಸ್ಥ ಎನ್. ಭಾಸ್ಕರ ರಾವ್.
4000ಕೋಟಿ
ಅಭ್ಯರ್ಥಿಯೊಬ್ಬ ಮಾಡಬಹುದಾದ ಗರಿಷ್ಠ ವೆಚ್ಚ ಮಿತಿಯನ್ನು ಈ ಬಾರಿ ಗರಿಷ್ಠ 70 ಲಕ್ಷಕ್ಕೆ ಏರಿಸಿರುವುದರಿಂದ 543 ಅಭ್ಯರ್ಥಿಗಳೇ ಅಂದಾಜು 4 ಸಾವಿರ ಕೋಟಿ ವರೆಗೆ ವೆಚ್ಚ ಮಾಡಲಿದ್ದಾರೆ ಎನ್ನುವ ಲೆಕ್ಕಾಚಾರವಿದೆ.
ದಿನದ ಒಟ್ಟಾರೆ ವೆಚ್ಚ
ಎಲ್ಲ ಲೆಕ್ಕಾಚಾರಗಳನ್ನು ಗಮನಿಸಿದರೆ ಅಭ್ಯರ್ಥಿಯು ವೈಯಕ್ತಿಕವಾಗಿ ಪ್ರತಿ ದಿನ ಒಟ್ಟು ವೆಚ್ಚ: 48,033 ವೆಚ್ಚ ಮಾಡಬಹುದು. ಚುನಾವಣಾ ದಿನ ಘೋಷಣೆಯಾಗಿ 45 ದಿನಗಳ ವರೆಗೆ ಈ ವೆಚ್ಚ 21.61 ಲಕ್ಷ ತಲುಪುತ್ತದೆ. ಅಭ್ಯರ್ಥಿಯೊಬ್ಬನಿಗಿರುವ ಗರಿಷ್ಠ ವೆಚ್ಚ ಮಿತಿ 70 ಲಕ್ಷ. ಇದರಲ್ಲಿ ವೈಯಕ್ತಿಕ ವೆಚ್ಚವನ್ನು ಕಳೆದ ಉಳಿವ 48.39 ಲಕ್ಷವನ್ನು ಅಭ್ಯರ್ಥಿಯು ಕಚೇರಿ, ಹೋರ್ಡಿಂಗ್, ಬಿಲ್‌ಬೋರ್ಡ್, ಪ್ರಚಾರಕ್ಕಾಗಿ ಬಳಸಬಹುದು.
ಹೇಗೆ ಪತ್ತೆ ಹಚ್ಚುತ್ತಾರೆ?
ಅಭ್ಯರ್ಥಿಯೊಬ್ಬ ನಾಮಪತ್ರ ಸಲ್ಲಿಸಿದ ಬಳಿಕ ಪ್ರತ್ಯೇಕ ಬ್ಯಾಂಕ್ ಅಕೌಂಟ್ ತೆರೆಯಬೇಕಾಗುತ್ತದೆ. ಅದರ ಮೂಲಕ ಅಭ್ಯರ್ಥಿ ಮಾಡುವ ಪ್ರತಿ ದಿನದ ವೆಚ್ಚಗಳನ್ನು ಪರಿಶೀಲಿಸಲಾಗುತ್ತದೆ. ಆದರೆ, ಅಂತಿಮ ವೆಚ್ಚವನ್ನು ಚುನಾವಣೆಯ ನಂತರ ಪರಿಶೀಲಿಸಲಾಗುತ್ತದೆ.
ಲೋಕಸಭಾ ಚುನಾವಣೆ ಅಭ್ಯರ್ಥಿಯು ಚುನಾವಣೆಗೆ ವೆಚ್ಚ ಮಾಡುವ ಮೊತ್ತವನ್ನು ರು. 70 ಲಕ್ಷಕ್ಕೆ ಏರಿಕೆ ಮಾಡಿದ್ದು ಸರಿಯಾದ ತೀರ್ಮಾನವಾಗಿದೆ.     
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
ಕಾರ್ಯಕರ್ತರ ದಿನ ವೆಚ್ಚ ನೋಡಿಕೊಳ್ಳುವುದೇ ದೊಡ್ಡ ಸವಾಲು. ಹೀಗಿರುವಾಗ 70 ಲಕ್ಷದಲ್ಲಿ ಖರ್ಚು ಸರಿದೂಗಿಸುವುದು ಕಷ್ಟವಾಗುತ್ತಿದೆ.
- ಧ್ರುವನಾರಾಯಣ, ಚಾಮರಾಜನಗರ ಸಂಸದ 

ಆಹಾರಕ್ಕೆ?
ಟೀ ಮತ್ತು ಬಿಸ್ಕತ್ತು 10
ತಿಂಡಿ 90
ಸಂಜೆ ಲಘು ಉಪಹಾರ 30
ರಾತ್ರಿ ಊಟ 60
ಟಿಫಿನ್ 45
ಮಿನರಲ್ ವಾಟರ್ 60
ತಂಪು ಪಾನೀಯ 15
ಹಣ್ಣು ಹಂಪಲು 15
ಒಟ್ಟು  383

ಪ್ರವಾಸ
ವಾಹನ ಬಾಡಿಗೆ 700
ಪೆಟ್ರೋಲ್ 810
ಚಾಲಕನ ಭತ್ಯೆ 360
ಒಟ್ಟು    1870

ಸಭೆಗಳು
ಡಯಾಸ್ 8000
ಪೋಡಿಯಂ  600
ಪುಷ್ಪಗುಚ್ಛ  840
ಹಾರ  1200
ಮೈಕ್  2000
ಒಟ್ಟು  44,200

ವಸತಿಗೃಹ

ರೂಂ ವೆಚ್ಚ 1500

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.