ಕೆರೆಗೆ ಹಾರಿ ವಿದ್ಯಾರ್ಥಿನಿಯರಿಬ್ಬರ ಆತ್ಮಹತ್ಯೆ
ಬೆಂಗಳೂರು: ಸಹಪಾಠಿಗಳ ಮುಂದೆ ಪದೇಪದೆ ನಿಂದಿಸುತ್ತಿದ್ದ ಪ್ರಾಂಶುಪಾಲರು ಹಾಗೂ ಶಿಕ್ಷಕರ ವರ್ತನೆಗೆ ಬೇಸತ್ತು ಇಬ್ಬರು ವಿದ್ಯಾರ್ಥಿನಿಯರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೋಳಿ ಕಾರಣ ಬಣ್ಣ ಆಡಿದ್ದ ಈ ವಿದ್ಯಾರ್ಥಿನಿಯರು ಶಾಲೆಗೆ ಹೋದಾಗ ಪ್ರಾಂಶುಪಾಲರು ಬೈದಿದ್ದಾರೆ. ನಿಮ್ಮಿಂದ ಇತರೆ ವಿದ್ಯಾರ್ಥಿಗಳು ಹಾಳಾಗುತ್ತಾರೆ ಎಂದು ಮಂಗಳವಾರ ಶಾಲೆಯಿಂದ ಹೊರ ಹಾಕಿದ್ದಾರೆ. ಹಿಂದೆಯೂ ಈ ಇಬ್ಬರು ವಿದ್ಯಾರ್ಥಿನಿಯರನ್ನು ಆಗಾಗ್ಗೆ ನಿಂದಿಸುತ್ತಿದ್ದರು. ಇದರಿಂದ ನೊಂದ 10ನೇ ತರಗತಿ ವಿದ್ಯಾರ್ಥಿನಿಯರು ಸ್ಯಾಂಕಿ ಕೆರೆಗೆ ಮಂಗಳವಾರ ಬೆಳಗ್ಗೆ ಬಿದ್ದಿದ್ದಾರೆ. ಮಧ್ಯಾಹ್ನ ಶವಗಳು ತೇಲುತ್ತಿರುವುದು ಅಲ್ಲಿನ ಸಿಬ್ಬಂದಿ ಗಮನಕ್ಕೆ ಬಂದಿದೆ. ಲಕ್ಕಸಂದ್ರ ನಿವಾಸಿ ಹಾಗೂ ಅಗ್ನಿಶಾಮಕ ದಳ ನೌಕರ ಜನಾರ್ದನ್ ಪುತ್ರಿ ಪ್ರಿಯಾಂಕಾ ಜೆ.(16) ಹಾಗೂ ತಾವರೆಕೆರೆ ಎಸ್.ಜೆ.ಪಾಳ್ಯ ನಿವಾಸಿ ದಯಾನಂದ್ ಸಾಗರ್ ಪುತ್ರಿ ಸೋನಾಲಿ (16) ಆತ್ಮಹತ್ಯೆ ಮಾಡಿಕೊಂಡವರು. ಇವರು ಲಕ್ಕಸಂದ್ರ ಮೇರಿ ಇಮ್ಯಾಕ್ಯುಲೇಟ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ರಾಂಶುಪಾಲರು, ತರಗತಿ ಶಿಕ್ಷಕಿ ಕಿರುಕುಳ ನೀಡುತ್ತಿದ್ದುದೇ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕಿ ವಿರುದ್ಧ ದೂರು ದಾಖಲಿಸುವುದಾಗಿ ಮತ್ತು ನ್ಯಾಯ ಸಿಗುವವರೆಗೂ ಶಾಲೆ ಮುಂದೆ ಶವ ಇಟ್ಟು ಧರಣಿ ಮಾಡಲಾಗುವುದು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಕೈಗೆ ಟೈ ಕಟ್ಟಿದ್ದರು: ಪ್ರಿಯಾಂಕಾ ಹಾಗೂ ಸೋನಾಲಿ ಸ್ನೇಹಿತರು. ನೀರಿಗೆ ಬಿದ್ದಾಗ ಬೇರೆ ಆಗಬಾರದೆಂದು ಟೈನಿಂದ ತಮ್ಮ ಕೈಗೆ(ರಟ್ಟೆಗೆ) ಕಟ್ಟಿಕೊಂಡಿದ್ದಾರೆ. ಬ್ಯಾಗ್ ಹಾಗೂ ಶೂಗಳನ್ನು ಕಟ್ಟೆ ಮೇಲೆ ಬಿಚ್ಚಿಟ್ಟು ನೀರಿಗೆ ಹಾರಿದ್ದಾರೆ.
ಪೋಷಕರ ಆಕ್ರಂದನ
ಉದ್ಯಾನದಲ್ಲಿ ನಾರಾಯಣ್ ಮಧ್ಯಾಹ್ನ 2.30ರಿಂದ 3ಗಂಟೆ ವೇಳೆಗೆ ಗಿಡಗಳಿಗೆ ನೀರು ಹಾಕುತ್ತಿದ್ದರು. ಅಲ್ಲಿದ್ದ ಶೂ ಹಾಗೂ ಬ್ಯಾಗ್ ಕಂಡು ಅಕ್ಕಪಕ್ಕದಲ್ಲಿ ನೋಡಿದಾಗ ಯಾರೂ ಕಂಡಿಲ್ಲ. ನಂತರ ತೇಲುತ್ತಿದ್ದ ಮೃತದೇಹ ಕಂಡು ಉಳಿದ ಸಿಬ್ಬಂದಿಗೆ ತಿಳಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜಾಜಿನಗರ ಅಗ್ನಿಶಾಮಕ ಠಾಣೆ ಪೊಲೀಸರು ಬಂದು ಶವ ಮೇಲೆತ್ತಿದರು. ನಂತರ ಸ್ಥಳಕ್ಕಾಗಮಿಸಿದ ವಿದ್ಯಾರ್ಥಿನಿಯರ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸದಾಶಿವ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತದೇಹ ಸಾಗಿಸಲಾಗಿದೆ.
ಸಾವಿಗೆ ಪ್ರಾಂಶುಪಾಲರೇ ಕಾರಣ...
ಕಳೆದ ಮೂರು ವರ್ಷಗಳಿಂದ ನನ್ನ ಮಗಳು ಸೇರಿ ಶಾಲೆಯ ಸಾಕಷ್ಟು ವಿದ್ಯಾರ್ಥಿಗಳ ಮೇಲೆ ಆರೋಪ ಮಾಡಲಾಗುತ್ತಿತ್ತು. ಮಕ್ಕಳು ಸರಿಯಾಗಿ ಓದುವುದಿಲ್ಲ ಎಂದು ಪದೇಪದೆ ಪೋಷಕರ ಸಭೆ ಕರೆಯುತ್ತಿದ್ದರು. ಮಕ್ಕಳ ಮೇಲೆ ಸಾಕಷ್ಟು ಒತ್ತಡ ಹೇರುತ್ತಿದ್ದರು ಎಂದು ಪ್ರಿಯಾಂಕಾ ತಂದೆ ಜನಾರ್ದನ್ ದೂರಿದ್ದಾರೆ. ಇದರಿಂದ ನಮಗೇ ಬೇಸರವಾಗಿತ್ತು. ಇನ್ನು ಮಕ್ಕಳ ಮೇಲೆ ಅದು ಪರಿಣಾಮ ಬೀರದೆ ಇರುತ್ತದೆಯೇ?. ಸಣ್ಣಪುಟ್ಟ ವಿಷಯಗಳಿಗೆ ಮಕ್ಕಳನ್ನು ನಿಂದಿಸುತ್ತಿದ್ದರು. ನಾನಾ ರೀತಿ ಶಿಕ್ಷೆ ಕೊಡುತ್ತಿದ್ದರು. ಈ ಮೂಲಕ ಎಲ್ಲಾ ವಿದ್ಯಾರ್ಥಿಗಳ ಮುಂದೆ ಮಕ್ಕಳಿಗೆ ಅವಮಾನ ಮಾಡುತ್ತಿದ್ದರು. ಇಷ್ಟೆಲ್ಲಾ ಕಿರುಕುಳ ನೀಡುತ್ತಿದ್ದರೂ ಸಹ ಶಾಲೆ ವಿರುದ್ಧ ದೂರು ನೀಡದೆ ಸುಮ್ಮನಿದ್ದೆವು. ಸೋಮವಾರ ಶಾಲೆಯಲ್ಲಿ ವಿದ್ಯಾರ್ಥಿಗಳು ಹೋಳಿ ಆಡಿದ್ದಾರೆ. ಆದರೆ ಮಂಗಳವಾರ ಮಕ್ಕಳು ಶಾಲೆಗೆ ಹೋದಾಗ ನಿಮ್ಮಿಂದ ಮಕ್ಕಳು ಹಾಳಾಗುತ್ತಾರೆ ಎಂದು ಹೇಳಿ ತರಗತಿಗೆ ಸೇರಿಸಿಲ್ಲ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಮಕ್ಕಳ ಸಾವಿಗೆ ಶಾಲೆಯ ಪ್ರಾಂಶುಪಾಲ ಹಾಗೂ ಅವರ ತರಗತಿಯ ಮುಖ್ಯಶಿಕ್ಷಕಿಯೇ ಕಾರಣ ಎಂದು ಆರೋಪಿಸಿದರು.
ಶಾಲೆಯಿಂದ ವಾಪಸ್ ಕಳಿಸಿದ್ದರು
ಮಂಗಳವಾರ ಬೆಳಗ್ಗೆ ಪ್ರಾಂಶುಪಾಲರು ತರಗತಿಗೆ ಹಾಜರಾಗದಂತೆ ವಾಪಸ್ ಕಳುಹಿಸಿದ್ದಾರೆ. ಬೇಸರಗೊಂಡ ಮಕ್ಕಳು ಮಧ್ಯಾಹ್ನವೇ ಸ್ಯಾಂಕಿ ಕೆರೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ನಂತರ ಪ್ರಿಯಾಂಕಾ ತಾಯಿಗೆ ಕರೆ ಮಾಡಿದ ಶಾಲಾ ಸಿಬ್ಬಂದಿ ಮಕ್ಕಳು ಶಾಲೆಗೆ ಬಂದಿಲ್ಲ, ಮನೆಗೆ ವಾಪಸ್ ಬಂದಿದ್ದಾರೆಯೇ ಎಂದು ವಿಚಾರಿಸಿದರು. ಆದರೆ ಮಕ್ಕಳು ಮನೆಗೆ ಬಂದಿಲ್ಲದ ಕಾರಣ ಪೋಷಕರು ಗಾಬರಿಗೊಂಡಿದ್ದರು. ಅಷ್ಟರಲ್ಲಿ ಸದಾಶಿವ ನಗರ ಪೊಲೀಸರು ಜನಾರ್ದನ್ ಅವರಿಗೆ ಕರೆ ಮಾಡಿ ನಿಮ್ಮ ಪುತ್ರಿಗೆ ಅಪಘಾತವಾಗಿದ್ದು, ತಕ್ಷಣ ಬರಬೇಕು ಎಂದು ತಿಳಿಸಿದ್ದಾರೆ. ಆದರೆ, ಅವರು ಠಾಣೆಗೆ ಬಂದ ನಂತರ ಆತ್ಮಹತ್ಯೆ ವಿಷಯ ತಿಳಿದಿದೆ.
ಡೆತ್ನೋಟ್ ವಿವರ
ಶಿಕ್ಷಕರಾದ ಫಿಲೋಮಿನಾ ಹಾಗೂ ಮೇರಿ ಲೀಲಾ ನಮಗೆ ನಮ್ಮ ಸ್ನೇಹಿತರ ಮುಂದೆ ಪದೇಪದೆ ಅವಮಾನ ಮಾಡುತ್ತಿದ್ದರು. ಮಂಗಳವಾರವೂ ಅವಮಾನ ಮಾಡಿದರು. ಇದರಿಂದ ನೊಂದ ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಪೂಜ್ಯ ತಂದೆ, ತಾಯಿ ಅವರೇ ನಮ್ಮ ಈ ನಿರ್ಧಾರ ನಿಮಗೆ ನೋವಾಗಬಹುದು. ನಮ್ಮನ್ನು ಕ್ಷಮಿಸಿ. ನಮ್ಮ ಎಲ್ಲಾ ಮಿತ್ರರಿಗೆ ಪರೀಕ್ಷೆಗೆ ಶುಭ ಕೋರುತ್ತಿದ್ದೇವೆ. ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆಯಲೆಂದು ಆಶಿಸುತ್ತೇವೆ. ಇಂತಿ,
-ಸೋನಾಲಿ, ಪ್ರಿಯಾಂಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

