ಮಲೇಷ್ಯಾ ವಿಮಾನ: ಬಗೆಹರಿಯದ ಗೊಂದಲ

ಕೌಲಾಲಂಪುರ: ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾ ವಿಮಾನಕ್ಕಾಗಿ ಲಕ್ಷಾಂತರ ಮಂದಿ ಆನ್ಲೈನ್ ಶೋಧ ಕಾರ್ಯದಲ್ಲಿ ತೊಡಗಿದ ಬೆನ್ನಲ್ಲೇ ಥೈವಾನ್ನ ವಿವಿ ವಿದ್ಯಾರ್ಥಿಯೊಬ್ಬ ದಟ್ಟ ಅರಣ್ಯವೊಂದರಲ್ಲಿ ವಿಮಾನವಿರುವ ಚಿತ್ರವನ್ನು ಮ್ಯಾಪ್ ಸರ್ಚ್ ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಮತ್ತೊಂದೆಡೆ ಮಲಾಕ್ಕಾದ ಕೆಳಗೆ ವಿಮಾನದ ಅವಶೇಷಗಳಿರುವುದನ್ನು ಸಾಮಾಜಿಕ ತಾಣ ರೆಡ್ಇಟ್ ಅಪ್ಲೋಡ್ ಮಾಡಿದೆ. ಆದರೆ ಈ ಚಿತ್ರಗಳು ನಂಬಲರ್ಹವೇ ಎಂಬುದು ದೃಢಪಟ್ಟಿಲ್ಲ. ಇದೇ ವೇಳೆ, ನಾಪತ್ತೆಯಾಗಿರುವ ವಿಮಾನವು ಹಿಂದೂ ಮಹಾಸಾಗರದ ದಕ್ಷಿಣ ಭಾಗದತ್ತ ಸಂಚರಿಸಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ವಿಮಾನವು ಯು-ಟರ್ನ್ ಮಾಡಿದೆ ಎನ್ನಲಾದ ಸಮಯದಲ್ಲಿ ಮಲೇಷ್ಯಾದ ಗ್ರಾಮವೊಂದರ ನಿವಾಸಿಗಳು ದೇಶದ ಈಶಾನ್ಯ ಭಾಗದಲ್ಲಿ ವಿಮಾನವೊಂದು ಕೆಳಮಟ್ಟದಲ್ಲಿ ಹಾರಿರುವುದನ್ನು ಗಮನಿಸಿದ್ದಾರೆ. ಕೆಲಂತಾನ್ ಎಂಬ ಗ್ರಾಮದ ರೈತರು, ಬೆಸ್ತರು ಹಾಗೂ ಇತರರು ವಿಮಾನವನ್ನು ನೋಡಿರುವುದಾಗಿಯೂ, ಎಂಜಿನ್ ಸ್ಫೋಟವಾದ ಸದ್ದು ಕೇಳಿರುವುದಾಗಿಯೂ ತಿಳಿಸಿದ್ದಾರೆ. ಆದರೆ, ಇವುಗಳಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊತ್ತಿಲ್ಲ. ಇದೇ ವೇಳೆ, ಬುಧವಾರ ಆಸ್ಟ್ರೇಲಿಯಾ ಕೂಡ ವಿಮಾನದ ಶೋಧ ಕಾರ್ಯದಲ್ಲಿ ಕೈಜೋಡಿಸಿದೆ. ಪರ್ತ್ನ ನೈರುತ್ಯ ಭಾಗದಲ್ಲಿ 3 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸುವುದಾಗಿ ತಿಳಿಸಿದೆ.
ಡಿಲೀಟ್ ಆದ ಫೈಲ್ಗಳು: ಈ ನಡುವೆ, ವಿಮಾನದ ಪೈಲಟ್ನ ಹೋಂ ಫ್ಲೈಟ್ ಸಿಮ್ಯುಲೇಟರ್ನಲ್ಲಿದ್ದ ಫೈಲ್ಗಳನ್ನು ಕಳೆದ ತಿಂಗಳಷ್ಟೇ ಅಳಿಸಲಾಗಿತ್ತು. ಈ ಫೈಲುಗಳನ್ನು ಮತ್ತೆ ಪಡೆಯಲು ಯತ್ನಿಸುತ್ತಿರುವುದಾಗಿ ಮಲೇಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ. ಫೈಲುಗಳಲ್ಲಿ ವಿಮಾನ ನಾಪತ್ತೆಗೆ ಸಂಬಂಧಿಸಿ ಏನಾದರೂ ಕುರುಹುಗಳು ಸಿಗಬಹುದೇ ಎಂದು ಪರಿಶೀಲಿಸಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ, ವಿಮಾನವು ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಳ್ಳಲು ಅದರ ಟ್ರಾನ್ಸ್ಪಾಂಡರ್ ಸ್ವಿಚ್ ಆಫ್ ಮಾಡಿದ್ದೇ ಕಾರಣ ಎನ್ನಲಾಗಿದೆ. ಆದರೆ ನಿಯಂತ್ರಣ ಕೊಠಡಿ ಹಾಗೂ ವಿಮಾನದ ನಡುವಿನ ಸಂವಹನದ ಏಕೈಕ ಕೊಂಡಿಯಾಗಿದ್ದ ಟ್ರಾನ್ಸ್ಪಾಂಡರ್ ಅನ್ನು ಸ್ವಿಚ್ ಆಫ್ ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಟ್ರಾನ್ಸ್ಪಾಂಡರ್ ಸ್ವಿಚ್ ಆಫ್ ಮಾಡುವುದೇಕೆ?
-ಕೆಲವೊಮ್ಮೆ ಟ್ರಾನ್ಸ್ಪಾಂಡರ್ನಲ್ಲಿ ದೋಷ ಕಾಣಿಸಿಕೊಂಡರೆ ಅದು ತಪ್ಪು ಮಾಹಿತಿ ಒದಗಿಸುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಅದನ್ನು ಪೈಲಟ್ ಸ್ವಿಚ್ ಆಫ್ ಮಾಡಬಹುದು.
- ಸಾಧನದಲ್ಲಿ ವಿದ್ಯುತ್ ಶಾಕ್ ಉಂಟಾಗಿ, ಬೆಂಕಿ ಹತ್ತಿಕೊಳ್ಳುವ ಸಾಧ್ಯತೆಯಿರುತ್ತದೆ. ಈ ಬೆಂಕಿ ಬೇರೆಡೆ ವ್ಯಾಪಿಸದಂತೆ ತಡೆಯಲು ಅದನ್ನು ಸ್ವಿಚ್ ಆಫ್ ಮಾಡಬಹುದು.
ವಿಮಾನ ಪತ್ತೆಯಾಗದೇ ಇದ್ದಲ್ಲಿ?
- ಅದರ ಹೊಣೆಯನ್ನು ಯಾರ ಮೇಲೆ ಹೊರಿಸಬೇಕು ಎಂಬುದೇ ಕೋರ್ಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಅವಶೇಷಗಳು ಸಿಗದ ಕಾರಣ, ಘಟನೆಗೆ ಏರ್ಲೈನ್ಸ್ ಕಾರಣವೇ, ವಿಮಾನದ ತಯಾರಕರು ಕಾರಣರೇ ಅಥವಾ ಬೇರ್ಯಾರಾದರೂ ಹೊಣೆಯೇ ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಬಹುದು.
- ವಿಮಾನಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಸುಧಾರಿಸಬೇಕೆಂದು ಸರ್ಕಾರಗಳು ಹಾಗೂ ವಿಮಾನಯಾನ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


