ದೇವೇಗೌಡ ಸೇರಿ ಜೆಡಿಎಸ್ 15 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಕನ್ನಡಪ್ರಭ ವಾರ್ತೆ , ಬೆಂಗಳೂರು , ಮಾ.20
ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ 15 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಧಿಕೃತವಾಗಿ ಗುರುವಾರ ಘೋಷಿಸಿದ್ದಾರೆ.
ಈ ಹಿಂದೆ 12 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಸಂಸದೀಯ ಮಂಡಳಿ ಅಂತಿಮಗೊಳಿಸಿ ನನಗೆ ಕಳುಹಿಸಿಕೊಟ್ಟಿತ್ತು. ಆದರೆ, ಅದರಲ್ಲಿ ಕೆಲವು ಹೆಸರುಗಳು 'ಬ್ರಾಕೆಟ್'ನಲ್ಲಿ ಇದ್ದವು. ಆದ್ದರಿಂದ ಇದೀಗ ಅಧಿಕೃತವಾಗಿ 15 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಬಯಸುತ್ತಿದ್ದಾರೆ. ಈ ಬಗ್ಗೆ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದ್ದು, ಅಲ್ಲಿ ನಿರ್ಧಾರ ಕೈಗೊಂಡು ತೀರ್ಮಾನಿಸಲಾಗುತ್ತದೆ. ಇನ್ನು ಜಾಫರ್ ಷರೀಫ್ ಹಾಗೂ ಎಚ್.ಟಿ. ಸಾಂಗ್ಲಿಯಾನ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಇನ್ನೊಂದೆರಡು ದಿನಗಳಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ. ಆದ್ದರಿಂದಲೇ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಹಾಗೂ ಮೈಸೂರು ಲೋಕಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು 23ರಂದು ಪ್ರಕಟಿಸಲಾಗುತ್ತದೆ. ಇನ್ನುಳಿದ 9 ಕ್ಷೇತ್ರದ ಅಭ್ಯರ್ಥಿಗಳನ್ನು ಶೀಘ್ರವೇ ಅಂತಿಮಗೊಳಿಸಲಾಗುತ್ತದೆ ಎಂದು ನುಡಿದರು.
ಕೇಂದ್ರದ ಮಾಜಿ ಸಚಿವರಾದ ಧನಂಜಯಕುಮಾರ್ ಅವರು ಎರಡು ಮೂರು ಬಾರಿ ನನ್ನನ್ನು ಭೇಟಿ ಮಾಡಿದ್ದರು. ಅವರು ಜೆಡಿಎಸ್ ಸೇರಿ, ಅಭ್ಯರ್ಥಿಯಾಗಲು ಬಯಸಿದ್ದಾರೆ. ಹೀಗಾಗಿ, ಅವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತಿದೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಅವರು ಕಣಕ್ಕಿಳಿಯಲಿದ್ದಾರೆ ಎಂದರು.
ಹಾಸನದಲ್ಲಿ ನನಗೆ ಯಾವುದೇ ಭೀತಿ ಇಲ್ಲ. ಅಲ್ಲಿನ ಜನ ನನ್ನನ್ನು ಬೆಳೆಸಿದ್ದಾರೆ. ಗರಿಷ್ಠ ನಾನು ಎರಡು ಅಥವಾ ಮೂರು ದಿನ ಮಾತ್ರ ಹಾಸನದಲ್ಲಿ ಇರುತ್ತೇನೆ. ಮೂರ್ನಾಲ್ಕು ದಿನದಲ್ಲಿ ಅಭ್ಯರ್ಥಿಗಳೆಲ್ಲರನ್ನೂ ಪ್ರಕಟಿಸಿ ರಾಜ್ಯಾದ್ಯಂತ ಪ್ರಚಾರ ಕೈಗೊಳ್ಳುತ್ತೇನೆ. ಹಳೇ ಮೈಸೂರು ಭಾಗದ ಎಲ್ಲ ಕ್ಷೇತ್ರಕ್ಕೂ ಹೋಗುತ್ತೇನೆ ಎಂದು ದೇವೇಗೌಡ ಹೇಳಿದರು.
ಮಂಗಳೂರಿನಲ್ಲಿ ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ)ನೊಂದಿಗೆ ಮಾತುಕತೆ ನಡೆಯುತ್ತಿದ್ದು, ಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ. ಇನ್ನು ಕೇರಳದ ಕೊಟ್ಟಾಯಂನಲ್ಲಿ ಜೆಡಿಎಸ್ನಿಂದ ಮ್ಯಾಥ್ಯೂ ಟಿ. ಥಾಮಸ್ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ಧನಂಜಯಕುಮಾರ್ ಅವರು ಕೆಜೆಪಿ ತೊರೆದು ಅಧಿಕೃತವಾಗಿ ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಪಡೆದು ಪಕ್ಷಕ್ಕೆ ಸೇರ್ಪಡೆಯಾದರು. ರಾಷ್ಟ್ರಾಧ್ಯಕ್ಷ ದೇವೇಗೌಡ ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
15 ಅಭ್ಯರ್ಥಿಗಳ ವಿವರ
ಚಿಕ್ಕೋಡಿ- ಶ್ರೀಮಂತ ಬಾಳಾಸಾಹೇಬ್ ಪಾಟೀಲ್
ರಾಯಚೂರು (ಎಸ್ಸಿ)- ರಾಜಾ ಅಮರೇಶ್ವರ ನಾಯಕ
ಬೀದರ್- ಬಂಡೆಪ್ಪ ಕಾಶಂಪೂರ್
ಹಾವೇರಿ- ರವಿ ಬಿ. ಮೆಣಸಿನಕಾಯಿ
ಉತ್ತರ ಕನ್ನಡ- ಶಿವಾನಂದ ನಾಯ್ಕ
ಶಿವಮೊಗ್ಗ- ಗೀತಾ ಶಿವರಾಜ್ಕುಮಾರ್
ಹಾಸನ- ಎಚ್.ಡಿ. ದೇವೇಗೌಡ
ಚಿತ್ರದುರ್ಗ (ಎಸ್ಸಿ)- ಗೂಳಿಹಟ್ಟಿ ಶೇಖರ್
ತುಮಕೂರು- ಎ. ಕೃಷ್ಣಪ್ಪ
ಚಾಮರಾಜನಗರ (ಎಸ್ಸಿ)- ಎಂ. ಶಿವಣ್ಣ
ಬೆಂಗಳೂರು ಗ್ರಾಮಾಂತರ- ಪ್ರಭಾಕರ ರೆಡ್ಡಿ
ಕೋಲಾರ (ಎಸ್ಸಿ)- ಕೆ. ಕೇಶವ
ಗುಲ್ಬರ್ಗ (ಎಸ್ಸಿ)- ಡಿ.ಜಿ. ಸಾಗರ್
ಉಡುಪಿ-ಚಿಕ್ಕಮಗಳೂರು- ಧನಂಜಯಕುಮಾರ್
ಮಂಡ್ಯ- ಸಿ.ಎಸ್. ಪುಟ್ಟರಾಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


