ಪ್ರಧಾನ ಸುದ್ದಿ

ದುರ್ಗದ ಕೋಟೆಗೆ ಮತ್ತೊಬ್ಬ ಟೆಕ್ಕಿ ಲಗ್ಗೆ

Published On :

ಕ.ಪ್ರ. ವಾರ್ತೆ \ ಚಿತ್ರದುರ್ಗ \ ಮಾ.23
ಕಳೆದ ಲೋಕಸಭಾ ಚುನಾವಣೆ ವೇಳೆ ಅಮೆರಿಕದ ಸಿಲಿಕಾನ್ ಸಿಟಿಯಿಂದ ಅಜ್ಞಾತರಾಗಿ ಬಂದು ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾದ ಜನಾರ್ದನಸ್ವಾಮಿ ಅವರಂತೆಯೇ ಈ ಬಾರಿಯೂ ಮತ್ತೊಬ್ಬ ಟೆಕ್ಕಿ ಚಿತ್ರದುರ್ಗ ಕೋಟೆ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದ್ದಾರೆ.
 ಈ ಬಾರಿ ಲಗ್ಗೆ ಇಟ್ಟಿರುವವರು ಗುಡಿಸಲಿನಲ್ಲಿ ಹುಟ್ಟಿ ಕಷ್ಟಪಟ್ಟು ತಮ್ಮದೇ ಸ್ವಂತ ಕಂಪನಿ ಹುಟ್ಟು ಹಾಕಿ ಯಶಸ್ವಿ ಟೆಕ್ಕಿ ಎನಿಸಿದ ಜಿ.ಟಿ. ಸುರೇಶ್‌ಕುಮಾರ್. ಈ ಬಾರಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಪಕ್ಷದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
ದೇಶ-ವಿದೇಶಗಳಲ್ಲಿ ವೃತ್ತಿ: ಮೂಲತಃ ಚಳ್ಳಕೆರೆ ತಾಲೂಕು ಗೋಪನಹಳ್ಳಿ ಗ್ರಾಮದ ಮಾದಿಗ ಸಮುದಾಯಕ್ಕೆ ಸೇರಿದ ಸುರೇಶಕುಮಾರ್ ಚಳ್ಳಕೆರೆಯಲ್ಲಿ 2ನೇ ತರಗತಿಯವರೆಗೆ ಶಿಕ್ಷಣ ಪಡೆದವರು. ಮುಂದೆ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಯಾರೋ ಕೊಟ್ಟ ಕಂಪ್ಯೂಟರ್‌ನಲ್ಲಿ ಕಲಿತು ಡಿಪ್ಲೊಮಾ ಕೋರ್ಸ್ ಮಾಡಿಕೊಂಡರು. ಪ್ರೋಗ್ರಾಮಿಂಗ್ ಕಲಿತು ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಅಮೆರಿಕ, ಇಂಗ್ಲೆಂಡ್ ಮತ್ತಿತರೆ ದೇಶಗಳಲ್ಲಿ ಕೆಲಸ ಮಾಡಿದರು. ಬಳಿಕ ಬ್ರಾಡ್‌ಫೋರ್ಡ್ ಇಂಟರ್‌ನೆಟ್ ಇಂಡಿಯಾ ಪ್ರೈವೇಟ್ ಲಿ. ಎಂಬ ಕಂಪನಿ ಪ್ರಾರಂಭಿಸಿದರು. ಕಳೆದ 7-8 ವರ್ಷಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.
ಸಮಾಜ ಸೇವೆ: ಆಲ್ ಇಂಡಿಯಾ ಅಚೀವರ್ಸ್ ಫೌಂಡೇಶನ್, ಮದರ್ ತೆರೇಸಾ ಪ್ರಶಸ್ತಿ ಮತ್ತಿತರೆ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ತಮ್ಮದೇ ಆದ ಜಿಟಿ ಫೌಂಡೇಶನ್ ಸ್ಥಾಪಿಸಿ ಸಮಾಜ ಸೇವಾ ಕಾರ್ಯ ಕೈಗೊಳ್ಳುತ್ತ ಬಂದಿದ್ದಾರೆ. ಕರ್ನಾಟಕ ಸಮರ ಸೇನೆಯ ಸ್ವಾಭಿಮಾನಿ ಕನ್ನಡಿಗರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿ ನಾಡಿನ ನೆಲ ಜಲ ಮತ್ತಿತರೆ ವಿಷಯಗಳಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹೊರ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ನೀವು ಸ್ಥಳೀಯರು, ಆದ್ದರಿಂದ ಯಾಕೆ ಪ್ರಯತ್ನ ಮಾಡಬಾರದು ಎಂದು ಸ್ನೇಹಿತರು ನೀಡಿದ ಸಲಹೆಯ ಮೇರೆಗೆ ಮತ್ತು ಆರ್‌ಪಿಐ ಪಕ್ಷದ ರಾಮದಾಸ ಅತಾವಳೆ, ವೆಂಕಟಸ್ವಾಮಿ ಪಕ್ಷದ ವತಿಯಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರಿಂದ ಸ್ಪರ್ಧೆಗೆ ಮುಂದಾಗಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.