ವಿಧ್ವಂಸಕ ಕೃತ್ಯ ಸಂಚು: ನಾಲ್ವರು ಐಎಂ ಉಗ್ರರ ಸೆರೆ

ರಾಜಸ್ಥಾನದಲ್ಲಿ ಇಂಡಿಯನ್ ಮುಜಾಹಿದೀನ್ ಉಗ್ರರ ಬಂಧಿಸಿದ ದೆಹಲಿ ಪೊಲೀಸರು / ಬಂಧಿತರಲ್ಲಿ ಪಾಕ್ ಪ್ರಜೆ, ಭಟ್ಕಳ್ ಆಪ್ತ ವಖಾಸ್
ನವದೆಹಲಿ: ಲೋಕಸಭೆ ಚುನಾವಣೆ ವೇಳೆ ರಕ್ತದೋಕುಳಿ ಹರಿಸಬೇಕು ಎಂಬ ಉಗ್ರರ ಪ್ರಯತ್ನ ವಿಫಲವಾಗಿದೆ. ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಂಡಿಯನ್ ಮುಜಾಹಿದೀನ್ನ ನಾಲ್ವರು ಉಗ್ರರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಮೂಲಕ ದೇಶದಲ್ಲಿ ಸಂಭವಿಸಬಹುದಾಗಿದ್ದ ಅತಿ ದೊಡ್ಡ ಉಗ್ರ ಕೃತ್ಯವನ್ನು ತಡೆದಿದ್ದಾರೆ. ವಿವಿಧ ಉಗ್ರ ಕೃತ್ಯಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಪಾಕ್ ಪ್ರಜೆ ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್ ಹಾಗೂ ಆತನ ಮೂವರು ಸಹಚರರನ್ನು ರಾಜಸ್ಥಾನದಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ. ವಖಾಸ್ನನ್ನು ದೆಹಲಿಯ ವಿಶೇಷ ಕೋರ್ಟ್ಗೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿ ಆದೇಶ ಹೊರಡಿಸಿದೆ. ಇದೇ ವೇಳೆ, ಬಂಧಿತ ಶಂಕಿತ ಉಗ್ರರ ನಿವಾಸಗಳಿಂದ ಭಾರಿ ಪ್ರಮಾಣದ ಸ್ಫೋಟಕಗಳು, ಡಿಟೋನೇಟರ್ಗಳು, ಎಲೆಕ್ಟ್ರಾನಿಕ್ ಸರ್ಕ್ಯೂಟ್ಗಳು/ಟೈಮರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ವೇಳೆ ದಾಳಿಗೆ ಸಂಚು?
ಲೋಕಸಭೆ ಚುನಾವಣೆ ವೇಳೆ, ಮೋದಿ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ರ್ಯಾಲಿಗಳ ಮೇಲೆ ಭಾರಿ ದಾಳಿ ನಡೆಸಲು ಹಾಗೂ ಪ್ರಮುಖ ನಾಯಕರನ್ನು ಅಪಹರಿಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಇತ್ತೀಚೆಗಷ್ಟೇ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಇದರ ಬೆನ್ನಲ್ಲೇ ನಾಲ್ವರು ಉಗ್ರರ ಬಂಧನ ನಡೆದಿದೆ. ಈ ಬಗ್ಗೆ ಮಾತನಾಡಿದ ವಿಶೇಷ ಆಯುಕ್ತ ಎಸ್.ಎನ್. ಶ್ರೀವಾಸ್ತವ, ಉಗ್ರರ ಯೋಜನೆ ಏನಾಗಿತ್ತು ಎಂಬ ಬಗ್ಗೆ ವಿಚಾರಣೆ ಬಳಿಕವಷ್ಟೇ ತಿಳಿದುಬರಲಿದೆ. ಸದ್ಯ ನಾವಿನ್ನೂ ಪ್ರಾಥಮಿಕ ಹಂತದಲ್ಲಿದ್ದೇವೆ ಎಂದಿದ್ದಾರೆ. ಆದರೆ, ಉಗ್ರರು ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬುದು ಸತ್ಯ ಎಂದೂ ಹೇಳಿದ್ದಾರೆ.
ಉಗ್ರರ ಬಂಧನ ಭಾರಿ ಯಶಸ್ಸು: ಶಿಂದೆ
ದೆಹಲಿ ಪೊಲೀಸರಿಂದ ನಾಲ್ವರು ಉಗ್ರರ ಬಂಧನವು ಅತಿ ದೊಡ್ಡ ಯಶಸ್ಸು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಬಣ್ಣಿಸಿದ್ದಾರೆ. ಇವರ ವಿಚಾರಣೆಯು ಇನ್ನೂ ಅನೇಕ ಉಗ್ರರನ್ನು ಬಂಧಿಸಲು ನೆರವಾಗಲಿದೆ ಎಂದೂ ಹೇಳಿದ್ದಾರೆ ಶಿಂದೆ. ಕಳೆದ 8-10 ದಿನಗಳಿಂದ ಪೊಲೀಸರು ವಖಾಸ್ನ ಹಿಂದೆ ಬಿದ್ದಿದ್ದರು. ಈಗ ಆತ ಸೆರೆಸಿಕ್ಕಿದ್ದಾನೆ. ಇದೊಂದು ದೊಡ್ಡ ಸಾಧನೆ ಎಂದರು.
ಭಟ್ಕಳ್ ಆಪ್ತ, ಬಾಂಬ್ ಮೇಕರ್
ಬಂಧಿತರಲ್ಲಿ ಪ್ರಮುಖನಾದ ವಖಾಸ್ ಪಾಕ್ ಪ್ರಜೆಯಾಗಿದ್ದು, ಆತನನ್ನು ಪಾಕ್ ಐಎಸ್ಐ ಭಾರತಕ್ಕೆ ಕಳುಹಿಸಿದೆ. ಈತ ಐಎಂ ಉಗ್ರ ಯಾಸೀನ್ ಭಟ್ಕಳ್ನ ಆಪ್ತ. ಜತೆಗೆ ಉಗ್ರ ಸಂಘಟನೆಗೆ ಬಾಂಬ್ ತಯಾರಿಸುವ ಕಾರ್ಯವನ್ನೂ ನಿರ್ವಹಿಸುತ್ತಿದ್ದ. ರಾಜಸ್ಥಾನದ ಇತರೆ ಮೂವರು ಉಗ್ರರು ದಾಳಿಗೆ ನಡೆಸುತ್ತಿದ್ದ ಸಿದ್ಧತೆಯನ್ನು ಗಮನಿಸಲೆಂದೇ ಈತ ಅಜ್ಮೇರ್ಗೆ ಬಂದಿದ್ದ. ಶನಿವಾರ ಮುಂಜಾನೆ ಅಜ್ಮೇರ್ನ ರೇಲ್ವೆ ನಿಲ್ದಾಣದಲ್ಲೇ ಈತ ಪೊಲೀಸರಿಗೆ ಸೆರೆಸಿಕ್ಕ ಎಂದಿದ್ದಾರೆ ಪೊಲೀಸರು. ಇದೇ ವೇಳೆ, 2011ರಲ್ಲಿ ಮುಂಬೈನ ಝವೇರಿ ಬಜಾರ್ನಲ್ಲಿ ನಡೆದ ಸ್ಫೋಟ ಸೇರಿದಂತೆ ವಿವಿಧ ಉಗ್ರ ಕೃತ್ಯಗಳಿಗೆ ಸಂಬಂಧಿಸಿ ವಖಾಸ್ ಪೊಲೀಸರಿಗೆ ಬೇಕಾಗಿದ್ದ. ಝವೇರಿ ಬಜಾರ್ನಲ್ಲಿ ಬಾಂಬಿಟ್ಟಿದ್ದು ಈತನೇ ಎಂದು ಸ್ವತಃ ಭಟ್ಕಳ್ ಬಾಯಿಬಿಟ್ಟಿದ್ದ. ವಖಾಸ್ಗೆ ಅಲ್ಖೈದಾ ಜತೆಯೂ ಸಂಪರ್ಕವಿದೆ ಎನ್ನಲಾಗಿದೆ. ವಖಾಸ್ನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ನಗದು ಬಹುಮಾನ ನೀಡುವುದಾಗಿಯೂ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಘೋಷಿಸಿತ್ತು. ಈ ನಡುವೆ, 2011ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯದ ವೇಳೆ ಬಾಂಬಿಡಲೂ ವಖಾಸ್ ಯೋಜಿಸಿದ್ದ. ಆದರೆ ಅಲ್ಲಿನ ಭದ್ರತಾ ವ್ಯವಸ್ಥೆಯಲ್ಲಿ ಲೋಪವಿರದೇ ಇದ್ದ ಕಾರಣ ವಖಾಸ್ಗೆ ತನ್ನ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
ರಾಜಸ್ಥಾನದಾದ್ಯಂತ ರೆಡ್ ಅಲರ್ಟ್
ಉಗ್ರರ ಬಂಧನ ಹಿನ್ನೆಲೆಯಲ್ಲಿ ರಾಜಸ್ಥಾನ ಪೊಲೀಸರು ಜೋಧ್ಪುರ, ಜೈಪುರ ಸೇರಿದಂತೆ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದಾರೆ. ವಿಮಾನ ನಿಲ್ದಾಣಗಳು, ರೇಲ್ವೆ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಜತೆಗೆ, ಹೊಟೇಲ್ಗಳಿಗೆ ಭೇಟಿ ನೀಡುವ ಗ್ರಾಹಕರ ಮೇಲೆ ಕಣ್ಣಿಡುವಂತೆ ಸೂಚಿಸಲಾಗಿದೆ. ಇದೇ ವೇಳೆ, ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ದೆಹಲಿಯ ಜಾಮಿಯಾ ನಗರ ಪೊಲೀಸ್ ಠಾಣೆ ಮುಂದೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಬಂಧಿತರ್ಯಾರು?
-ಪಾಕಿಸ್ತಾನದ ಪ್ರಜೆ, ಐಎಂ ಉಗ್ರ ಜಿಯಾ ಉರ್ ರೆಹಮಾನ್ ಅಲಿಯಾಸ್ ವಖಾಸ್(25)
- ಮೊಹಮ್ಮದ್ ಮಹರೂಫ್(21), ಜೈಪುರ ನಿವಾಸಿ
- ಮೊಹಮ್ಮದ್ ವಖರ್ ಅಝರ್(21), ಜೈಪುರ ನಿವಾಸಿ
- ಶಾಖಿಬ್ ಅನ್ಸಾರಿ ಅಲಿಯಾಸ್ ಖಾಲಿದ್ (25), ಜೋಧ್ಪುರ ನಿವಾಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


