ಇಂಥ ಗಂಡಸ್ತನಕ್ಕೆ ಧಿಕ್ಕಾರವಿರಲಿ!

ಪಿಟಿಐ / ಥಾಣೆ / ಮಾ.23
ಮಹಿಳೆಯರನ್ನು ವೇಶ್ಯಾವಾಟಿಕೆಗೆ ತಳ್ಳುವುದೇ ಮಹಾ ಪಾತಕದ ಕೆಲಸ. ಆದರೆ, ಅದಕ್ಕಿಂತ ಪಾತಕದ ಎರಡು ಕೃತ್ಯಗಳು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಮೈಮಾರುವ ದಂಧೆಗೆ ಒಪ್ಪದ ಕಾರಣಕ್ಕೆ ಮೂವರು ಕೀಚಕರು ಮಹಿಳೆಯ ಸ್ತನಗಳನ್ನು ತರಿದು ಹಾಕಿದ್ದಾರೆ. ಎರಡನೇ ಪ್ರಕರಣದಲ್ಲಿ ಕಾರ್ಮಿಕನೊಬ್ಬ ತನ್ನ ಮಿತ್ರನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ಆಕೆಗೆ ಬೆಂಕಿ ಹಚ್ಚಿದ್ದಾನೆ.
ಸ್ತನಗಳನ್ನೇ ಕತ್ತರಿಸಿದರು
ಥಾಣೆಯಲ್ಲಿನ ವೇಶ್ಯಾಗೃಹವೊಂದಕ್ಕೆ ಗುಜರಾತ್ನ ಭಿವಂಡಿಯಿಂದ ಮಹಿಳೆಯನ್ನು ಕರೆತಂದಿದ್ದರು. ಮೈಮಾರುವ ದಂಧೆಗೆ ಆಕೆಯನ್ನು ತಳ್ಳಲೇಬೇಕೆಂದು ವೇಶ್ಯಾವಾಟಿಕೆ ಮಾಲೀಕ ರೂಬಿ ಎಂಬ ಕಿರಾತಕ ಆಕೆಯನ್ನು ವಿವಿಧ ರೀತಿಯಲ್ಲಿ ಮನವೊಲಿಸಿದ. ಆಕೆ ಒಪ್ಪಲೇ ಇಲ್ಲ. ಇದರಿಂದ ಕ್ರುದ್ಧಗೊಂಡ ಮಾಲೀಕ ತನ್ನ ಇಬ್ಬರು ಸ್ನೇಹಿತರ ನೆರವಿನಿಂದ ಆಕೆಯನ್ನು ಮನಬಂದಂತೆ ಥಳಿಸಿದ.
ಇದರಿಂದಾಗಿ ಆಕೆ ತೀವ್ರವಾಗಿ ಗಾಯಗೊಂಡಳು. ಇದೂ ಸಾಲದು ಎಂಬಂತೆ ಆ ಪಾಪಿಗಳು ಯಾವುದೇ ಕರುಣೆ ತೋರದೆ ಆಕೆಯ ಸ್ತನಗಳನ್ನು ಕತ್ತರಿಸಿದರು.
ಆಸ್ಪತ್ರೆಗೆ ದಾಖಲು
ಈ ಘಟನೆ ಬಳಿಕ ಆಕೆಯನ್ನು ರಕ್ಷಿಸಿದ ಕೆಲವರು ಭಿವಂಡಿಯಲ್ಲಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೆ ಥಾಣೆಯಲ್ಲಿನ ಆಸ್ಪತ್ರೆಗೇ ದಾಖಲಿಸಲಾಯಿತು. ಸದ್ಯ ಆಕೆ ಮಾತನಾಡಲಾಗದ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೈಶಾಚಿಕ ಘಟನೆಗೆ ಸಂಬಂಧಿಸಿದಂತೆ ವೇಶ್ಯಾವಾಟಿಕೆ ಮಾಲೀಕ ರೂಬಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರಿಗಾಗಿ ಶೋಧ ನಡೆಯುತ್ತಿದೆ.
ತಡವಾಗಿ ಬೆಳಕಿಗೆ
ಈ ತಿಂಗಳ 19ರಂದೇ ಭೀಕರ ಘಟನೆ ನಡೆದಿತ್ತು. ಆದರೆ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿ ಹಚ್ಚಿ ಕೊಂದ
ಮತ್ತೊಂದು ಪ್ರಕರಣದಲ್ಲಿ, ಉಕ್ಕು ಕಾರ್ಖಾನೆಯಲ್ಲಿ ದುಡಿಯುತ್ತಿರುವ ಕಾರ್ಮಿಕ ತನ್ನ ಮಿತ್ರನ ಮನೆಗೆ ಶುಕ್ರವಾರ ತೆರಳಿದ್ದ. ಈ ಸಂದರ್ಭದಲ್ಲಿ ಆತನ ಪತ್ನಿ ಮಾತ್ರ ಇದ್ದಳು. ಈ ಸಂದರ್ಭವನ್ನು ಬಳಸಿಕೊಳ್ಳಲು ಮುಂದಾದ ಕಾರ್ಮಿಕ ಆಕೆಯ ಜತೆ ಲೈಂಗಿಕವಾಗಿ ಸಹಕರಿಸಲು ಕೋರಿದ. ಆಕೆ ಅದಕ್ಕೆ ಒಪ್ಪದಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ಆಕೆಗೆ ಬೆಂಕಿ ಹಚ್ಚಿ ಪರಾರಿಯಾದ. ತೀವ್ರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಅಸು ನೀಗಿದಳು. ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕನನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


