ಪ್ರಜಾತಂತ್ರದ ನಿಜ ಕಾವಲುಗಾರರು
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಗಳೂರು ಮಾ.23
ಇವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಅದರ ಆಕಾಂಕ್ಷೆಯೂ ಇಲ್ಲ. ಆದರೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳುತ್ತಾರೆ, ಕಿವಿ ಹಿಂಡುತ್ತಾರೆ.
ಲೋಕಸಭೆ ಚುನಾವಣೆಯಲ್ಲಿ ಜನರ ಬೇಕು-ಬೇಡಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರೇತರ ಸಂಸ್ಥೆ (ಎನ್ಜಿಒ)ಗಳು ಮಾಡುತ್ತಿವೆ. ಜಿಲ್ಲೆಯಲ್ಲಿ ನೂರಕ್ಕಿಂತ ಅಧಿಕ ಎನ್ಜಿಒಗಳಿವೆ. ಅವುಗಳಲ್ಲಿ 20ಕ್ಕೂ ಹೆಚ್ಚು ಎನ್ಜಿಒಗಳು ನಿರ್ದಿಷ್ಟ ವಿಷಯದ ಮೇಲೆ ಹೋರಾಟ ಮಾಡುತ್ತಿವೆ. ಅವುಗಳು ಜನರ ಪ್ರತಿನಿಧಿಯಾಗಿ ಜಿಲ್ಲೆಯ ಅಭಿವೃದ್ಧಿಯ ಒತ್ತಾಸೆಯಲ್ಲಿ ಕೆಲಸ ಮಾಡುತ್ತವೆ. ಅಂಥ ಎನ್ಜಿಒ ಸಂಸ್ಥೆಗಳು ಚುನಾವಣೆ ಹೊಸ್ತಿಲಲ್ಲಿ ತಮ್ಮ ಪ್ರಭಾವ ತೋರಿಸುತ್ತವೆ.
ಚುನಾವಣೆ ಘೋಷಣೆಯಾದಾಗಲೆಲ್ಲ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಮತದಾರರ ಜಾಗೃತಿ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ಮಾಡಿ ಗಮನ ಸೆಳೆಯುತ್ತಿದೆ. ಈ ಮೊದಲು ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆಸಿ ಜನರ ಪ್ರಣಾಳಿಕೆ ಮುಂದಿಟ್ಟು ಸಂವಾದ ನಡೆಸುತ್ತಿತ್ತು. ಈ ವರ್ಷದಿಂದ ಸಂವಾದ ನಡೆಸಬಾರದು ಎಂದು ನೀತಿಸಂಹಿತೆಯತ್ತ ಅಧಿಕಾರಿಗಳು ಬೊಟ್ಟು ಮಾಡಿದ್ದಾರಿಂದ ಅಭ್ಯರ್ಥಿ, ರಾಜಕೀಯ ಮುಖಂಡರನ್ನು ಕರೆಸದೆ ಪದಾಧಿಕಾರಿಗಳ ಸಭೆಗೆ ಸೀಮಿತಗೊಳಿಸಿದೆ. ಈ ಬಾರಿ ವಿವಿಧ 26 ಬೇಡಿಕೆಗಳನ್ನು ಮುಂದಿಟ್ಟಿದೆ.
'ಸರ್ಕಾರ ಯೋಜನೆ ಜಾರಿಗೊಳಿಸುವಾಗ ಪರಿಣಾಮಕಾರಿಯಾಗಬೇಕು. 10 ವರ್ಷ ಹಿಂದೆ ಜನರ ಪ್ರಣಾಳಿಕೆ, ಸಂವಾದ ಪರಿಣಾಮ ಬೀರುತ್ತಿತ್ತು. ಈಗ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಾರ್ಪೊರೇಟ್ ಹಾಗೂ ನಗರೀಕರಣದ ಪರವಾಗಿದ್ದಾರೆ. ಹಾಗಾಗಿ ನೈಜ ಅಭಿವೃದ್ಧಿಯ ಕಲ್ಪನೆ ಹೊಂದಿರುವುದಿಲ್ಲ' ಎಂದು ವಿಷಾದಿಸುತ್ತಾರೆ ನಾಗರಿಕ ಸೇವಾಟ್ರಸ್ಟ್ ಮುಖಂಡ ಕೆ.ಸೋಮನಾಥ ನಾಯಕ್.
ಆಂತರಿಕ ಆಯ್ಕೆಯಾಗಲಿ: 'ಕಾಂಗ್ರೆಸ್ನಲ್ಲಿ ಆಂತರಿಕ ಚುನಾವಣೆಯಲ್ಲಿ ಅಭ್ಯರ್ಥಿ ಆರಿಸಿದಂತೆ ಎಲ್ಲ ಪಕ್ಷಗಳಲ್ಲೂ ಇದು ಜಾರಿಗೆ ಬರಬೇಕು. ಅಭ್ಯರ್ಥಿ ಆಯ್ಕೆಯನ್ನು ಚುನಾವಣೆ ಆಯೋಗದ ಸುಪರ್ದಿಯಲ್ಲಿ ನಡೆಸಬೇಕು. ಈ ಬಗ್ಗೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ' ಎನ್ನುತ್ತಾರೆ ಚುನಾವಣೆ ಕಾವಲು ಸಮಿತಿ ಸಂಚಾಲಕ ಕಟೀಲು ದಿನೇಶ್ ಪೈ.
ಕಡ್ಡಾಯ ಹಕ್ಕು ಶಿಕ್ಷಣ ಕಾಯ್ದೆಗೆ ತಿದ್ದುಪಡಿಯಾಗಬೇಕು. ಚುನಾವಣೆ ಪ್ರಚಾರಕ್ಕೆ ಮಕ್ಕಳನ್ನು ಬಳಸಬಾರದು. ಬಾಲಕಾರ್ಮಿಕ ಕಾಯ್ದೆ ಕಟ್ಟುನಿಟ್ಟು ಅನುಷ್ಠಾನ, ಶಿಕ್ಷಣ ಸುಧಾರಣೆ ಬೇಡಿಕೆಗೆ ರಾಜಕೀಯ ಪಕ್ಷಗಳು ಸ್ಪಂದಿಸಬೇಕು.
-ರೆನ್ನಿ ಡಿಸೋಜ, ಪಡಿ, ವೆಲೊರೆಡ್ ಸಂಚಾಲಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

