ಚಿಕ್ಕಮಗಳೂರಿನ ಕೊಪ್ಪದಲ್ಲಿತ್ತು ಐಎಂ ಬಾಂಬ್ ಫ್ಯಾಕ್ಟರಿ!

ನವದೆಹಲಿ: ನಮ್ಮ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿತ್ತು ಇಂಡಿಯನ್ ಮುಜಾಹಿದೀನ್ನ ಬಾಂಬ್ ಫ್ಯಾಕ್ಟರಿ!
ಉಗ್ರ ಕೃತ್ಯ ನಡೆಸಲು ದೇಶಾದ್ಯಂತ ಹಲವು ನೆಲೆಗಳ ಸ್ಥಾಪಿಸುವುದಕ್ಕೂ ಮುನ್ನ ಐಎಂ ಉಗ್ರ ಯಾಸೀನ್ ಭಟ್ಕಳ್ ಅಲ್ಲಿ ಮೊದಲ ತರಬೇತಿ ಕೇಂದ್ರ ಹಾಗೂ ಬಾಂಬ್ ತಯಾರಿಕಾ ಘಟಕ ಸ್ಥಾಪಿಸಿದ್ದ.
ಯಾಸೀನ್ ಹಾಗೂ ಇತರೆ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಈ ಆಘಾತಕಾರಿ ಸಂಗತಿ ಬಯಲಾಗಿದೆ. ವಿಠಲಮಕ್ಕಿಯಲ್ಲಿ ಬರೋಬ್ಬರಿ 3 ಎಕರೆ ಜಾಗವನ್ನು ಭೋಗ್ಯಕ್ಕೆ ಪಡೆದುಕೊಂಡು ಅಲ್ಲಿ ತನ್ನ ಬಾಂಬ್ ತಯಾರಿಕೆ, ಉಗ್ರ ಕೃತ್ಯಕ್ಕೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದ ಯಾಸೀನ್.
ಎಂಜಿನಿಯರ್ ಯಾಸೀನ್: ಈ 3 ಎಕರೆಯ ತೋಟದ ಮನೆಯನ್ನು ಭೋಗ್ಯಕ್ಕೆ ಪಡೆದಿದ್ದರೂ ದುಬೈನ ಹಣದಿಂದ ಇದನ್ನು ನಿರ್ವಹಿಸಲಾಗುತ್ತಿತ್ತು. ಮನೆ ಪಕ್ಕದಲ್ಲೇ ಅರ್ಧಂಬರ್ಧ ನಿರ್ಮಿಸಿದ ಮತ್ತೊಂದು ಕಟ್ಟಡವಿತ್ತು. ಸುತ್ತಲೂ ಬಾಳೆ ಬೆಳೆಸಲಾಗಿತ್ತು. ಅಲ್ಲಿ ಯಾಸೀನ್ ವ್ಯವಸಾಯವನ್ನೂ ಮಾಡುತ್ತಿದ್ದ. ಬತ್ತವನ್ನೂ ಬೆಳೆದಿದ್ದ. ಹಸು, ಆಡು, ನಾಯಿಗಳನ್ನೂ ಸಾಕಿದ್ದ. ಊರಮಂದಿಯೆಲ್ಲ ಆತ ನನ್ನು 'ಎಂಜಿನಿಯರ್' ಎಂದು ಕರೆಯುತ್ತಿದ್ದರು. ಆದರೆ ಯಾರಿಗೂ ಮನೆಯೊಳಗೆ ಪ್ರವೇಶಿಸುವ ಅವಕಾಶ ಇರಲಿಲ್ಲ.
ಏ.2ರವರೆಗೆ ವಶಕ್ಕೆ
ಮಂಗಳವಾರ ಬಂಧಿತನಾದ ಐಎಂ ಮುಖ್ಯಸ್ಥ ತಹ್ಸೀನ್ ಅಖ್ತರ್ ಅಲಿಯಾಸ್ ಮೋನುನನ್ನು ಏ.2ರವರೆಗೆ ಪೊಲೀಸ್ ವಶಕ್ಕೊಪ್ಪಿಸಿ ಬುಧವಾರ ದೆಹಲಿ ಕೋರ್ಟ್ ಆದೇಶ ನೀಡಿದೆ.
ಮಂಗಳೂರಲ್ಲಿ ಬಟ್ಟೆ ಖರೀದಿ
ಅಕ್ಟೋಬರ್ 2008ರಲ್ಲಿ ದೆಹಲಿ ಸ್ಫೋಟದ ಬಳಿಕ ಪೊಲೀಸರು ಈ ತೋಟದ ಮನೆಗೆ ದಾಳಿ ಮಾಡಿದ್ದರು. ಅಷ್ಟರಲ್ಲಾಗಲೇ ಯಾಸೀನ್ ತಪ್ಪಿಸಿಕೊಂಡಿದ್ದ. ಸೆಪ್ಟೆಂಬರ್ನಲ್ಲಿ ಬಾಟ್ಲಾ ಹೌಸ್ ಎನ್ಕೌಂಟರ್ ನಡೆಯುವ ಸಮಯದಲ್ಲಿ ಯಾಸೀನ್ ತನ್ನ ಸಹಚರರಾದ ಅಕ್ಬರ್, ಮರಿಯಮ್, ಬಾವಾ ಹಾಗೂ ಕಯಾಮುದ್ದೀನ್ ಜತೆ ಮಂಗಳೂರಿನಲ್ಲಿ ಈದ್ಗಾಗಿ ಬಟ್ಟೆ ಖರೀದಿಸುತ್ತಿದ್ದ ಎಂದೂ ಎನ್ಐಎ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಸ್ಫೋಟಕ ತಯಾರಿಕೆ ಫ್ಯಾಕ್ಟರಿ
ಈ ಫಾರ್ಮ್ನೊಳಗೆ ದೇಶದ ಜನರ ನೆತ್ತರ ಹರಿಸುವ ಬಾಂಬ್ಗಳು ತಯಾರಾಗುತ್ತಿದ್ದವು ಎಂದು ಯಾರಿಗೂ ಗೊತ್ತೇ ಇರಲಿಲ್ಲ. ಐಇಡಿ ಸ್ಫೋಟಕಗಳನ್ನು ಇಲ್ಲೇ ತಯಾರಿಸಿ, ದಾಸ್ತಾನು ಮಾಡಲಾಗುತ್ತಿತ್ತು. ಜತೆಗೆ, ಉಗ್ರ ಕೃತ್ಯಗಳನ್ನೆಸಗಲು ತರಬೇತಿಯನ್ನೂ ನೀಡಲಾಗುತ್ತಿತ್ತು. ಈ ಮತ್ತು ದೋಣಿಯಾಕಾರದ ಬಾಂಬ್ಗಳನ್ನು ತಯಾರಿಸುವಲ್ಲಿ ಯಾಸೀನ್ ನಿಪುಣನಾಗಿದ್ದ. 2006ರಿಂದ 2008ರವರೆಗೆ ಐಎಂ ಬಳಸಿದ ಎಲ್ಲ ಬಾಂಬ್ಗಳೂ ಇದೇ ಮನೆಯಲ್ಲಿ ತಯಾರಿಸಿದ್ದಾಗಿತ್ತು ಎನ್ನುತ್ತದೆ ಆರೋಪಪಟ್ಟಿ. ಇಲ್ಲಿ ತಯಾರಿಸಿದ ಸ್ಫೋಟಕಗಳನ್ನು ಬಳಸಿ ಹೈದರಾಬಾದ್, ದೆಹಲಿ, ಮುಂಬೈ, ಅಹಮದಾಬಾದ್ ಹಾಗೂ ಜೈಪುರದಲ್ಲಿ ಸ್ಫೋಟ ನಡೆಸಲಾಗಿತ್ತು. 5 ವರ್ಷಗಳ ಹಿಂದಷ್ಟೇ ಪೊಲೀಸರು ಈ ಮನೆಗೆ ಬೀಗ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


