ಪ್ರಧಾನ ಸುದ್ದಿ

ಶಿವಸೇನೆ ಬೆಳಗಲೊಬ್ಬ ಆದಿತ್ಯ

ಶಿವಸೇನೆ ಬೆಳಗಲೊಬ್ಬ ಆದಿತ್ಯ
Published On :

ಭಾರತೀಯ ರಾಜಕಾರಣದಲ್ಲಿ ಅಧಿಕಾರ ದಂಡವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬರುವುದು ರಿವಾಜಾಗಿದೆ. ವಂಶ ಪಾರಂಪರ್ಯ ರಾಜಕಾರಣ ಎಂಬ ಬಗೆಗಿನ ಟೀಕೆಗಳೇನೇ ಇದ್ದರೂ ರಾಜಕಾರಣದ ಕುಟುಂಬದ ಹೊಸ ತಲೆಮಾರುಗಳು ಮುನ್ನೆಲೆಗೆ ಬಂದಾಗ ಸುದ್ದಿಯಾಗುತ್ತಾರೆ. ಅವರ ಆಲೋಚನೆಯ ಮೂಸೆಯಲ್ಲಿ ಹೊಸದೇನಾದರೂ ಅರಳಬಹುದು ಎಂದು ಬೆಂಬಲಿಗರು ಮತ್ತು ಸಾಮಾನ್ಯರೂ ಆಸಕ್ತಿಯ ಗಮನ ಚೆಲ್ಲುತ್ತಾರೆ.
ಶಿವಸೇನೆಯಲ್ಲಿ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಠಾಕ್ರೆ ತನ್ನ ಪ್ರಚಾರದ ಛಾಪು ಒತ್ತುವುದಕ್ಕೆ ಈ ಲೋಕಸಭೆ ಚುನಾವಣೆ ಉತ್ತಮ ವೇದಿಕೆಯನ್ನೇ ಒದಗಿಸುತ್ತಿದೆ. ಉದ್ಧವ ಠಾಕ್ರೆಯ ಮಗನಾದ ಆದಿತ್ಯಗೆ ಇನ್ನೂ 23ರ ಹರೆಯ. ಶಿವಸೇನೆಯ ಯುವ ವಿಭಾಗದ ಮುಖ್ಯಸ್ಥ. ಅಕ್ಟೋಬರ್ 2010ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಬದುಕಿದ್ದಾಗಲೇ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಆದಿತ್ಯ ಠಾಕ್ರೆಯ ಅದ್ಧೂರಿ ರಾಜಕೀಯ ಪ್ರವೇಶವಾಯಿತು.
ಹಾಗೆ ರಾಜಕೀಯ ಪ್ರವೇಶಿಸುವಾಗಲೇ ಅವರು ಸುದ್ದಿಯಲ್ಲಿದ್ದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿದ್ದ ರೋಹಿಂಗ್ಟನ್ ಮಿಸ್ತ್ರಿಯ 'ಸಚ್ ಅ ಲಾಂಗ್ ಜರ್ನಿ'ಯನ್ನು ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಆದಿತ್ಯ ಆ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಬೌದ್ಧಿಕ ವಲಯದ ಆಕ್ರೋಶ ಇವರ ಮೇಲೆ ಹರಿದಾಡಿತ್ತು. ಅವತ್ತು ಮರುದಿನವೇ ಕಾಲೇಜಿನಲ್ಲಿ ಪರೀಕ್ಷೆ ಇರಿಸಿಕೊಂಡು ರಾಜಕೀಯ ರಂಗ ಪ್ರವೇಶ ಮಾಡಿದ್ದರು.
ಈ ಚುನಾವಣೆಯಲ್ಲಿ ಅವರಿಗೆ ಎರಡು ಭಿನ್ನ ಬಗೆಯ ಜವಾಬ್ದಾರಿಗಳಿವೆ. ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಶಿವಸೇನೆಯ ಪ್ರಚಾರ ಸಾರಥ್ಯ. ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಶಿವಸೇನೆ ಪ್ರಚಾರ ನಿರ್ವಹಣೆಯ ಉಸ್ತುವಾರಿ. ಮೊದಲಿನದು ತಂತ್ರಜ್ಞಾನ ಹಾಗೂ ನಗರ ಸಂವೇದನೆಗಳಿಂದ ಹೊರತಾಗಿರುವವರ ಬಳಿ ಪಕ್ಷವನ್ನು ಕೊಂಡೊಯ್ಯುವ ಗುರುತರ ಜವಾಬ್ದಾರಿಯಾದರೆ, ಮತ್ತೊಂದು ನಾವೆಲ್ಲ ಬಲ್ಲೆವು ಎಂಬ ಸಾಮಾಜಿಕ ಜಾಲತಾಣಗಳ ನಗರವರ್ಗ, ವಿಶೇಷವಾಗಿ ಯುವಕರಿಗೆ ಶಿವಸೇನೆಯ ಕುರಿತು ಆಪ್ಯಾಯತೆ ಇರುವಂತೆ ನೋಡಿಕೊಳ್ಳುವುದು.
ಆದಿತ್ಯ ಠಾಕ್ರೆ ಇದೀಗ ತಮ್ಮ ಇಮೇಜ್ ನಿರ್ಮಾಣಕ್ಕಾಗಿ ಬಹಳಷ್ಟು ಶ್ರಮವನ್ನೇ ವಹಿಸಬೇಕಾಗಿದೆ. ಇಲ್ಲಿ ಅವರಿಗೆ ಪ್ರತಿಕೂಲ- ಅನುಕೂಲ ಅಂಶಗಳೆರಡೂ ಇವೆ. ಕಾಲೇಜಿನ ಅವಧಿಯಲ್ಲಿ ಮಿಸ್ತ್ರಿ ಪುಸ್ತಕವನ್ನು ಹಿಂತೆಗೆದುಕೊಳ್ಳುವಂಥ ಒತ್ತಡದ ವಾತಾವರಣ ನಿರ್ಮಿಸಿದ್ದು ಆದಿತ್ಯ ಕುರಿತು ಒಳ್ಳೆಯ ಚಿತ್ರಣವನ್ನೇನೂ ಕಟ್ಟಿಕೊಟ್ಟಿಲ್ಲ.ನಮ್ಮ ವಿಚಾರಗಳನ್ನು ಒಪ್ಪದವರ ಟೀಕೆಗಳಿಗೂ ಅವಕಾಶವಿರಬೇಕು ಎಂಬ ಔದಾರ್ಯವನ್ನು ಬೆಳೆಸಿಕೊಳ್ಳದಿರುವವನು ನಾಯಕ ಹೇಗಾಗುತ್ತಾನೆ ಎಂಬ ಮಾತುಗಳೇ ಹೆಚ್ಚಾಗಿ ಕೇಳಿ ಬಂದಿದ್ದವು. ಮುಂಬೈ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯೂ ಆಗಿದ್ದ ಮಿಸ್ತ್ರಿಯವರ ಆ ಸಾಹಿತ್ಯ ಕೃತಿ ಬೌದ್ಧಿಕ ವಲಯದಲ್ಲಿ ಜಾಗತಿಕ ಮನ್ನಣೆಗೂ ಒಳಗಾಗಿತ್ತು. ಹೀಗಾಗಿ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಕ್ರಮ 'ಅಸಹಿಷ್ಣು' ಮಾದರಿಯಾಗಿ ಬಿಂಬಿತವಾಗಿತ್ತು. ಈ ಇಮೇಜನ್ನು ಕೊಂಚಮಟ್ಟಿಗೆ ಸರಿಪಡಿಸಿಕೊಂಡು ಯುವ ಜನರ ವಿಶ್ವಾಸ ಗಳಿಸುವುದಕ್ಕೆ ಆದಿತ್ಯಗೆ ಸಹಕರಿಸಿದ ಅಂಶವೆಂದರೆ, ಮುಂಬೈನಲ್ಲಿ ಉಪಾಹಾರ ಮಂದಿರಗಳನ್ನು 24 ಗಂಟೆಗಳೂ ತೆರೆದಿರುವ ಅನುಮತಿ ಬೇಕು ಎಂದು ಅವರು ನಡೆಸಿದ್ದ ಅಭಿಯಾನ. ಸರ್ಕಾರವೇನೂ ಇದಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಇದರಿಂದ ಆದಿತ್ಯ ಠಾಕ್ರೆಯವರಿಗೆ ಪ್ರಚಾರಕ್ಕಂತೂ ಮೋಸವಾಗಲಿಲ್ಲ.
ಶಿವಸೇನೆಯಂಥ ಸಾಂಪ್ರದಾಯಿಕ ಪಕ್ಷವನ್ನು ಫೇಸ್‌ಬುಕ್, ಟ್ವಿಟ್ಟರ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿರುವುದರಲ್ಲಿ ಆದಿತ್ಯ ಶ್ರಮ ಅಪಾರ ಎನ್ನುತ್ತಾರೆ ಹತ್ತಿರದವರು. ನಗರದ ಯುವಕರನ್ನು ಸೆಳೆಯುವ ಈ ನಡೆಯ ಜತೆಯಲ್ಲೇ, ಮಹಾರಾಷ್ಟ್ರದ ಹಳ್ಳಿಗಳಲ್ಲಿ ಅವರು ನಡೆಸಿದ ರೋಡ್‌ಶೋ ಸಹ ಒಬ್ಬ ಯುವ ನಾಯಕನಾಗಬಹುದಾದ ಭರವಸೆ ಮೂಡಿಸುತ್ತಿದೆ. ಈಗಿನ ಪೀಳಿಗೆಗೆ ಹೆಚ್ಚಾಗಿ ಒಪ್ಪಿತವಾಗುತ್ತಿರುವ 'ಹಿಂದುತ್ವ- ಅಭಿವೃದ್ಧಿ'ಗಳ ಮಿಶ್ರ ಮಾದರಿಯ ಮಂತ್ರವನ್ನೇ ಆದಿತ್ಯ ಠಾಕ್ರೆ ಪಠಿಸುತ್ತಿದ್ದಾರೆ. ಯುವಜೋಶ್‌ಗೆ ಒಪ್ಪುವಂತೆ ಕವಿಹೃದಯದವರಾಗಿರುವ ಪ್ರಯತ್ನವೂ ಆದಿತ್ಯರದ್ದು. 2007ರಲ್ಲೇ ಇವರ ಕವಿತಾ ಸಂಕಲನ 'ಮೈ ಥಾಟ್ಸ್ ಇನ್ ಬ್ಲ್ಯಾಕ್ ಆ್ಯಂಡ್ ವೈಟ್‌' ಪ್ರಕಟವಾಗಿದೆ. ತಾವೇ ಎಂಟು ಹಾಡುಗಳನ್ನು ಬರೆದು 'ಉಮೀದ್‌' ಎಂಬ ಆಲ್ಬಮ್ ಸಹ ಹೊರತಂದಿದ್ದಾರೆ.
ಆದರೆ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮುಂಬೈಗೆ ಸೀಮಿತವಾಗಿರುವ ಕೆಲವೇ ಮಂದಿಯ ಗುಂಪೊಂದರ ಅಭಿಪ್ರಾಯಕ್ಕೆ ಮಣೆ ಹಾಕುತ್ತಾರೆ ಎಂಬ ಆರೋಪ ಅವರ ಮೇಲಿದೆ. ಇದು ಭವಿಷ್ಯದಲ್ಲಿ ಮಾರಕವಾದೀತು. ಇವರ ನಿಕಟ ಸಹವರ್ತಿಗಳಾಗಿದ್ದ ಅಭಿಜಿತ್ ಪನ್ಸೆ ಮತ್ತು ರಾಹುಲ್ ನಾರ್ವೇಕರ್ ಪಕ್ಷ ತೊರೆದಿದ್ದಾರೆ. ಶಿವಸೇನೆಯ ಹಿರಿಯರು ಗಂಭೀರವಾಗಿ ತೆಗೆದುಕೊಳ್ಳುವ ಮಟ್ಟಕ್ಕಿನ್ನೂ ಆದಿತ್ಯ ಠಾಕ್ರೆ ಬೆಳೆದಿಲ್ಲ ಎಂಬ ಟೀಕೆಗೆ ಸ್ವಲ್ಪ ಸಬೂತು ಒದಗಿಸುವ ಅಂಶವಿದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.