ಭ್ರಷ್ಟಾಚಾರದ ವಿರುದ್ಧ ಪ್ರತಾಪ ತೋರುವರು

ಬೆಂಗಳೂರು: 'ನಮ್ಮವರು ಮೊದಲಿನಿಂದಲೂ ದೇಶಾಭಿಮಾನಿ. ರಾಜಕೀಯಕ್ಕೆ ಸೇರುವ ಕನಸು ಕಂಡವರಲ್ಲ. ಅವರು ಪತ್ರಿಕೋದ್ಯಮ ಬಿಟ್ಟು ರಾಜಕಾರಣಿಯಾದದ್ದು ಮೋದಿಗಾಗಿ'
ಹಾಗೆ ಹೇಳುವಾಗ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರ ಪತ್ನಿ ಡಾ.ಅರ್ಪಿತಾ ಮಾತಿನಲ್ಲಿ 'ಪತಿ ಈಗ ರಾಜಕಾರಣಿ' ಎನ್ನುವುದನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎನ್ನುವ ಭಾವವೇ ಧ್ವನಿಸುತ್ತಿತ್ತು.
ಬಿಡುವಿಲ್ಲದ ಪ್ರಚಾರದ ನಡುವೆಯೂ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅರ್ಪಿತಾ, ಯಶಸ್ವಿ ನೇತಾರನಾಗುವ ಗುಣಗಳು ಪ್ರತಾಪ್ ಅವರಲ್ಲಿ ಇವೆ ಎನ್ನುವುದನ್ನು ವಿಶ್ವಾಸದಿಂದಲೇ ಹೇಳಿಕೊಂಡರು. 'ಪ್ರತಾಪ್ ರಾಜಕೀಯಕ್ಕೆ ಬಂದರೆ ಚೆನ್ನಾಗಿರುತ್ತದೆ. ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಧ್ವನಿ ನೀಡಬಲ್ಲರು. ಬಡವರ ಕಷ್ಟಗಳಿಗೆ ಸ್ಪಂದಿಸಬಲ್ಲರು. ಮಾದರಿ ರಾಜಕಾರಣಿಯಾಗಬಲ್ಲರು ಎಂದು ನನಗೆ ಸದಾ ಅನ್ನಿಸುತ್ತಿತ್ತು. ಆದರೆ, ಪ್ರತಾಪ್ ಮನಸ್ಸಿನಲ್ಲಿ ಮಾತ್ರ ರಾಜಕೀಯ ಸೇರುವ ಸಣ್ಣದೊಂದು ಆಸೆಯೂ ಇರಲಿಲ್ಲ' ಎಂದರು.
ಬಿಜೆಪಿ ಅಭ್ಯರ್ಥಿಯಾಗಿ ಮೈಸೂರಿನಿಂದ ಪ್ರತಾಪ್ ಹೆಸರು ಘೋಷಣೆಯಾದ ಕ್ಷಣದಲ್ಲಿ ಅರ್ಪಿತಾ ಮನದಲ್ಲಿ ಭಾವನೆಗಳ ಉಬ್ಬರಇಳಿತ. ಒಂದೆಡೆ ಅನಿರೀಕ್ಷಿತ ಘೋಷಣೆಯ ಅಚ್ಚರಿ, ಇನ್ನೊಂದೆಡೆ ಪತ್ರಿಕೋದ್ಯಮದ ನಂಟು ಕಳಚಿಕೊಂಡು ಬಿಡುತ್ತಾರಲ್ಲ ಎನ್ನುವ ಬೇಸರ.
ಆಕೆ, ಪ್ರತಾಪ್ ಬರಹಗಳ ಕಟ್ಟಾ ಅಭಿಮಾನಿ. ಪ್ರತಾಪ್ಗೆ ಟಿಕೆಟ್ ಕೊಟ್ಟ ಬಗ್ಗೆ ಮೈಸೂರಿನಲ್ಲಿ ಕೇಳಿಬಂದ ಅಪಸ್ವರಗಳಿಂದ ಆತಂಕಗೊಂಡಿದ್ದರು.
ಆದರೆ, ಪ್ರತಾಪ್ ಆತ್ಮವಿಶ್ವಾಸದಲ್ಲೇ ಇದ್ದರು. 'ಪರಿಸ್ಥಿತಿ ಸರಿಹೋಗುತ್ತದೆ' ಎನ್ನುವುದನ್ನು ತಾಳ್ಮೆಯಿಂದಲೇ ಪತ್ನಿಗೆ ಮನವರಿಕೆ ಮಾಡಿಕೊಟ್ಟರು. 'ಎಲ್ಲರೂ ನಮ್ಮ ಜತೆ ಬರುತ್ತಾರೆ, ಹೆದರಬೇಡ' ಎಂದು ಧೈರ್ಯ ತುಂಬಿದರು. ಆರಂಭದ ಅಸಮಾಧಾನಗಳೆಲ್ಲ ಮರೆಯಾಗಿರುವುದು ಈಗ ಪ್ರಚಾರದಲ್ಲಿ ತೊಡಗಿಕೊಂಡಿರುವ ಅರ್ಪಿತಾ ಗಮನಕ್ಕೂ ಬಂದಿದೆ. ಅವರಲ್ಲೀಗ ನೆಮ್ಮದಿಯ ಭಾವ.
'ನರೇಂದ್ರ ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆಯಾದ ನಂತರ, 'ಮೋದಿ ಪ್ರಧಾನಿಯಾಗುವುದರ ಹಿಂದೆ ನಮ್ಮ ಶ್ರಮವೂ ಇರಬೇಕು' ಎಂಬುದನ್ನು ಆಗಾಗ ಹೇಳುತ್ತಲೇ ಇದ್ದರು ಪ್ರತಾಪ್. ಈ ರೀತಿಯಲ್ಲಿ ನಾವು ಕೊಡುಗೆ ನೀಡಬೇಕಾಗಿ ಬರಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಅದರಲ್ಲೂ ಮೈಸೂರು ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎನ್ನುವುದರ ಪುಟ್ಟ ಸುಳಿವೂ ಇರಲಿಲ್ಲ' ಅಂತಾರವರು.
ಪ್ರತಾಪ್ರನ್ನು ಅರ್ಪಿತಾ ಯಾವಾಗಲೂ ಛೇಡಿಸುವುದು '24್ಗ7' ಎಂದು. ಅಂಥ ಕೆಲಸದ ಹುಳು ಪ್ರತಾಪ್. ಕಚೇರಿ ವೇಳೆ ಅಲ್ಲದೆ ಮನೆಯಲ್ಲಿ ಇದ್ದಾಗಲೂ ಓದು, ಬರವಣಿಗೆಯಲ್ಲೇ ತೊಡಗಿಕೊಂಡಿರುತ್ತಿದ್ದುದು ಅದಕ್ಕೆ ಕಾರಣ. ಒಮ್ಮೊಮ್ಮೆ ಮೂಡ್ ನೋಡಿಕೊಂಡು ಮಾತನಾಡಿಸಬೇಕು! ಹೀಗಾಗಿ, 'ಅವರು ಸಂಸದರಾದರೆ ಸೋಮಾರಿಯಾಗಿ ಅಥವಾ ಜನರಿಂದ ದೂರವಾಗಿ ಇರುವುದಿಲ್ಲ. ಕುಟುಂಬದಲ್ಲಿ ಅವರನ್ನು ಮಿಸ್ ಮಾಡ್ಕೊಳ್ತೀವಿ ಅನ್ನೊ ಭಾವ ಶುರುವಿನಲ್ಲಿ ಕಾಡುವುದು ಸಹಜ. ದೇಶಕ್ಕಾಗಿ ಅಷ್ಟೂ ತ್ಯಾಗ ಮಾಡದಿದ್ದರೆ ಹೇಗೆ' ಎನ್ನುತ್ತ ನಕ್ಕರು ಅರ್ಪಿತಾ.
ಪ್ರಚಾರದಲ್ಲಿ ಬ್ಯುಸಿ
ಕೆಲವರ್ಷದ ಹಿಂದೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ ಅರ್ಪಿತಾ, ಪತಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡೇ ಮನೆಮನೆ ಸುತ್ತುತ್ತಿದ್ದಾರೆ. ಮೈಸೂರು ನಗರದ ಬಹಳಷ್ಟು ಬಡಾವಣೆಗಳಿಗೆ ಭೇಟಿ ನೀಡಿದ್ದಾರೆ. ಅವರ ಮನೆ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


