ರಾಗಾ ಕ್ಷೇತ್ರದಲ್ಲಿ ನೊಂದ ಜನತೆ
ಅಮೇಠಿ: ಇಲ್ಲಿ 29 ಹಳ್ಳಿಗಳ ಜನರು ಲೋಕಸಭೆ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಯಾರೇ ಬಂದರೂ ತಮ್ಮ ನಿರ್ಧಾರ ಬದಲಿಸೆವು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಈ ಗ್ರಾಮಗಳಿರುವುದು ಬೇರ್ಯಾರ ಕ್ಷೇತ್ರದಲ್ಲೂ ಅಲ್ಲ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕ್ಷೇತ್ರವಾದ ಅಮೇಠಿಯಲ್ಲಿ.
ಹೌದು. 2008ರಲ್ಲಿ ಎಲ್ಲೆ ಗುರುತಿಸುವ ಪ್ರಕ್ರಿಯೆಯ ಬಳಿಕ ಈ 29 ಹಳ್ಳಿಗಳು ಅಮೇಠಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿವೆ. ಆದರೆ ಇಲ್ಲಿನ ಜನರ ಬವಣೆಯನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗಿಲ್ಲ. ಸಮಸ್ಯೆಗಳ ಸರಮಾಲೆಗಳನ್ನೇ ಹೊತ್ತು ಕುಳಿತಿರುವ ಜನರು ಈ ಬಾರಿ ಸ್ಪಷ್ಟ ನಿರ್ಧಾರವನ್ನೇ ತಳೆದಿದ್ದಾರೆ. ಅದೇನೆಂದರೆ, ಚುನಾವಣೆ ಬಹಿಷ್ಕಾರ.
ಕೇಳುವವರಾರು?: ಗೋಮತಿ ನದಿಯ ಪೂರ್ವದಲ್ಲಿರುವ ಈ 29 ಹಳ್ಳಿಗಳಲ್ಲಿ ಸುಮಾರು 25 ಸಾವಿರ ಮಂದಿ ವಾಸಿಸುತ್ತಿದ್ದಾರೆ. ಆಗಾಗ್ಗೆ ತಲೆದೋರುವ ಪ್ರವಾಹ, ಭೂಕಬಳಿಕೆ ಹಾಗೂ ಸ್ಥಳಾಂತರ ಇಲ್ಲಿನ ಜನರನ್ನು ಸಂಕಷ್ಟಕ್ಕೆದೂಡಿವೆ. ಅಮೇಠಿ ಜಿಲ್ಲಾಡಳಿತ, ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಇವರ ಸಂಕಷ್ಟಕ್ಕೆ ಪರಿಹಾರ ಸಿಗುತ್ತಿಲ್ಲ. ಮಳೆಗಾಲದಲ್ಲಿ ರಸ್ತೆಯನ್ನು ಗೋಮತಿ ನದಿ ನುಂಗಿಬಿಡುತ್ತದೆ. ಮಳೆ ನಿಂತ ಬಳಿಕವೂ ರಸ್ತೆ ದುರಸ್ತಿ ನಡೆಯಲ್ಲ, ಕೆಸರು ತುಂಬಿದ ರಸ್ತೆಯಲ್ಲಿ ನಡೆಯಲು ಆಗುವುದಿಲ್ಲ, ಮಕ್ಕಳಿಗೆ ಶಾಲೆಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕ, ಜಿಲ್ಲಾಧಿಕಾರಿ ಕಚೇರಿ ಮಾತ್ರವಲ್ಲ, 2009ರ ಚುನಾವಣೆ ವೇಳೆ ರಾಹುಲ್ ಗಾಂಧಿಯವರಿಗೂ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ನಿರ್ಧಾರ ಬದಲಿಸೆವು: ನಿರಂತರ ನೋವಿನಿಂದ ಬೆಂದಿರುವ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮಸ್ಥರ ನಿರ್ಧಾರದ ಬಗ್ಗೆ ತಿಳಿದು ಬಿಜೆಪಿ ಹಾಗೂ ಆಪ್ ಅಲ್ಲಿಗೆ ಲಗ್ಗೆಯಿಟ್ಟಿದ್ದವು. ಆದರೆ ನಾವು ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹಾಗಾಗಿ, ದಯವಿಟ್ಟು ಕ್ಷಮಿಸಿ, ನಾವು ಮತ ಹಾಕುವುದಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದೇವೆ ಎಂದಿದ್ದಾರೆ ಸ್ಥಳೀಯ ದೇವೇಂದ್ರ ಪ್ರತಾಪ್ ಸಿಂಗ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

