ಪುಡಿಯಾಗ್ತಿದೆ ಗದುಗಿನ ಭಾರತ

ಹುಬ್ಬಳ್ಳಿ: ಕುಮಾರವ್ಯಾಸನ ಕಾವ್ಯದ ಚಂದ ಕೊಂಡಾಡದವರು ಯಾರು? ಆದರೆ, ದುರಂತವೋ ಎನ್ನುವಂತೆ ಕುಮಾರವ್ಯಾಸ ತಾಳೆಗರಿಯಲ್ಲಿ ಬರೆದ ಅಮೂಲ್ಯ ಕಥನ 'ಕರ್ಣಾಟ ಭಾರತ ಕಥಾಮಂಜರಿ' ದಿನದಿಂದ ದಿನಕ್ಕೆ ಶಿಥಿಲಾವಸ್ಥೆಗೆ ಜಾರುತ್ತಿದ್ದರೂ ಆಳುವವರು ಮಾತ್ರ ಕಂಡೂ ಕಾಣದಂತಿದ್ದಾರೆ.
14ನೇ ಶತಮಾನದಲ್ಲಿ ಕುಮಾರವ್ಯಾಸ 10 ಪರ್ವ, 152 ಸಂಧಿ, 8429 ಪದ್ಯಗಳುಳ್ಳ 'ಕರ್ಣಾಟ ಭಾರತ ಕಥಾ ಮಂಜರಿ' ಬರೆದಿದ್ದ. ಧಾರ್ಮಿಕ ಹಾಗೂ ನೈತಿಕ ಮೌಲ್ಯ ಎತ್ತಿ ಹಿಡಿದ ಮಹಾಕಾವ್ಯ ಇದಾಗಿದ್ದು, 'ಗದುಗಿನ ಭಾರತ'ವೆಂದೇ ಖ್ಯಾತವಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಮೂಲ್ಯ ಗ್ರಂಥ ಪುಡಿ ಪುಡಿಯಾಗುತ್ತಿದೆ.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು... ಎನ್ನುವ ಮೂಲಕ ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಕುಮಾರವ್ಯಾಸನ ಮಹಿಮೆಯನ್ನ್ನು ರಾಷ್ಟ್ರಕವಿ ಕುವೆಂಪು ಕೊಂಡಾಡಿದ್ದರು. ಆದರೆ ಆಳುವವರಿಗೆ ಈ ಮಹಾಕಾವ್ಯದ ಮಹಿಮೆ ಅರಿವಾಗದಿರುವುದು ದುರಂತ.
ವಂಶಸ್ಥರ ಹೋರಾಟ: ಮಹಾಕಾವ್ಯ ರಕ್ಷಣೆಗಾಗಿ ಕುಮಾರವ್ಯಾಸ ವಂಶಸ್ಥರು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಕುಮಾರವ್ಯಾಸನ ಹುಟ್ಟೂರಾದ ಹುಬ್ಬಳ್ಳಿ ಸಮೀಪದ ಕೋಳಿವಾಡದ ಆತನ ಮನೆಯಲ್ಲಿ 'ಕರ್ಣಾಟ ಭಾರತ ಕಥಾ ಮಂಜರಿ' ಇಡಲಾಗಿದೆ. ಇಲ್ಲಿಗೆ ಬರುತ್ತಿದ್ದ ಸಾಹಿತ್ಯಾಸಕ್ತರು, ಪ್ರವಾಸಿಗರು ತಾಳೆಗರಿಯನ್ನ್ನು ಮುಟ್ಟಿ ನೋಡುತ್ತಿದ್ದರು. ಹೀಗಾಗಿ ಅದು ಹಾಳಾಗುವ ಆತಂಕ ಎದುರಾಯಿತು. 1982ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಂಥವನ್ನ್ನು ಗಾಜಿನ ಪೆಟ್ಟಿಗೆಯಲ್ಲಿ ಭದ್ರವಾಗಿರಿಸಿತ್ತು. ಗ್ರಂಥ ಕೆಡದಿರಲಿ ಎಂದು ಪತ್ರಾಗಾರ ಇಲಾಖೆ ಗ್ರಂಥಕ್ಕೆ ಅಗತ್ಯ ದ್ರವ್ಯ ಸಿಂಪಡಿಸಿತ್ತು. ಆದಾಗ್ಯೂ ಇತ್ತೀಚೆಗೆ ಗ್ರಂಥದಿಂದ ಪುಡಿ ಉದುರಲಾರಂಭಿಸಿದ್ದು, ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ಕುಮಾರವ್ಯಾಸನ ಗ್ರಂಥ ಇತಿಹಾಸದ ಪುಟಗಳಲ್ಲಿ ಓದುವ, ನೋಡುವ ಕಾಲ ದೂರವಿಲ್ಲ.
ಬಂದಾ ಪುಟ್ಟ ಹೋದಾ ಪುಟ್ಟ: ಗ್ರಂಥ ರಕ್ಷಣೆಗಾಗಿ ಕುಮಾರವ್ಯಾಸನ ವಂಶಸ್ಥರು ಕಂಡಕಂಡ ಕಚೇರಿ, ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಎಡತಾಕಿದ್ದರ ಪರಿಣಾಮವಾಗಿ ಹಾಗೂ 'ಕನ್ನಡಪ್ರಭ'ದಲ್ಲಿ ವರದಿ ಪ್ರಕಟವಾಗಿದ್ದರಿಂದ ಕೋಳಿವಾಡಕ್ಕೆ ಅದೆಷ್ಟೋ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬಂದರು, ಹೋದರು. ಆದರೆ ಗ್ರಂಥ ರಕ್ಷಣೆಯ ಕಾರ್ಯ ಮಾತ್ರ ನಡೆಯಲೇ ಇಲ್ಲ.
2009ರಲ್ಲಿ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ನ ತಂಡವೊಂದು ಕೋಳಿವಾಡಕ್ಕೆ ಭೇಟಿ ಕೊಟ್ಟು ತಾಳೆಗರಿಯ ಸಾಕ್ಷಚಿತ್ರ ಮಾಡಿಕೊಂಡಿತ್ತು. ತಾಳೆಗರಿಯಿಂದ ಪುಡಿ ಉದುರುವುದನ್ನು ಚಿತ್ರಿಸಿ, ಗ್ರಂಥ ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಸರ್ಕಾರ ಇತ್ತ ಹಾಯಲೇ ಇಲ್ಲ. ಬಿಎಂಶ್ರೀ ಪ್ರತಿಷ್ಠಾನವೂ ಸರ್ಕಾರದ ಗಮನ ಸೆಳೆದಿತ್ತಾದರೂ ಪ್ರಯೋಜನವಾಗಲಿಲ್ಲ.
ಕುಮಾರವ್ಯಾಸನ ವಂಶಸ್ಥ ದತ್ತಾತ್ರೇಯ ಪಾಟೀಲ, 2011ರಲ್ಲಿ ಆಗಿನ ಧಾರವಾಡ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರಿಗೆ ಖಾರವಾಗಿ ಪತ್ರ ಬರೆದು ಗ್ರಂಥ ರಕ್ಷಿಸುವಂತೆ ಮನವಿ ಮಾಡಿದ್ದರು. ಪರಿಣಾಮವಾಗಿ ದರ್ಪಣ ಜೈನ್ ಕೋಳಿವಾಡಕ್ಕೆ ಭೇಟಿ ನೀಡಿ, ಗ್ರಂಥ ರಕ್ಷಿಸುವ ಭರವಸೆ ನೀಡಿದ್ದರು. ಆದರೆ ಜೈನ್ ವರ್ಗವಾದ ಬಳಿಕ ಗ್ರಂಥ ರಕ್ಷಣೆ ಕಾರ್ಯ ಕೈಬಿಡಲಾಯಿತು.
ಪುನಃ ದತ್ತಾತ್ರೇಯ ಪಾಟೀಲ, ಹಾಲಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರನ್ನು ಭೇಟಿ ಮಾಡಿ ಗ್ರಂಥ ರಕ್ಷಣೆಗೆ ಕೇಳಿಕೊಂಡರೆ, 'ಕೋಳಿವಾಡದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕುಮಾರವ್ಯಾಸ ಸ್ಮಾರಕ ಭವನದ ಹಣದಲ್ಲಿ ಒಂದಿಷ್ಟನ್ನು ಗ್ರಂಥ ರಕ್ಷಣೆಗೆ ನೀಡಿದರಾಯಿತು' ಎಂದು ಹೇಳಿ ಸಾಗಹಾಕಿದ್ದಾರೆ.
ಸಚಿವ ಎಚ್.ಕೆ. ಪಾಟೀಲ ಇತ್ತೀಚೆಗೆ ಕೋಳಿವಾಡಕ್ಕೆ ಭೇಟಿ ನೀಡಿ ಗ್ರಂಥ ರಕ್ಷಣೆಯ ಬಗ್ಗೆ ಕಾಳಜಿ ತೋರಿದ್ದಾರೆ. ಗ್ರಂಥ ರಕ್ಷಣೆಗೆ ಏನೆಲ್ಲ ಕ್ರಮ ಕೈಗೊಳ್ಳಬಹುದೆಂದು ಪರಿಶೀಲಿಸಿದ್ದಾರೆ. ಆದರೆ ಚುನಾವಣೆ ಮಧ್ಯೆ ಈ ಕಾರ್ಯ ಪ್ರಗತಿ ಕಂಡಿಲ್ಲ.
ಅಕ್ಷರ ಲೋಕಕ್ಕೆ ಅಪಮಾನ
ಗ್ರಂಥ ರಕ್ಷಣೆ ಕುರಿತಾಗಿ ಕಂಡ ಕಂಡ ಕಚೇರಿ, ಜನಪ್ರತಿನಿಧಿಗಳ ಮನೆ ಬಾಗಿಲು ಬಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಮಾರವ್ಯಾಸನ ಬಗ್ಗೆ ಬಿಡುವಿಲ್ಲದಂತೆ ಭಾಷಣ ಮಾಡುವವರು ಆತನ ಗ್ರಂಥ ರಕ್ಷಣೆಗೆ ಕಾಳಜಿ ತೋರದೇ ಇರುವುದು ಅಕ್ಷರ ಲೋಕಕ್ಕೆಸಗಿದ ಅಪಮಾನ.
- ದತ್ತಾತ್ರೇಯ ಪಾಟೀಲ
ಕುಮಾರವ್ಯಾಸನ ವಂಶಸ್ಥ
-ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


