ಪ್ರಧಾನ ಸುದ್ದಿ

ರೈತರು, ಬಡ ಮಕ್ಕಳ ಶಿಕ್ಷಣಕ್ಕೆ ಸಾಲವಿಲ್ಲ!

Published On :

ಹುಬ್ಬಳ್ಳಿ: ರೈತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ಸರ್ಕಾರ ಅವುಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿದೆಯೇ ಎಂಬುದು ಪ್ರಶ್ನಾರ್ಹ. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಜೆಟ್‌ನಲ್ಲಿ ಘೋಷಣೆಯಾಗಿರುವ ರೈತ ಮತ್ತು ಬಡ ಮಕ್ಕಳಿಗೆ ಬಡ್ಡಿರಹಿತ ಉನ್ನತ ಶಿಕ್ಷಣ ಸಾಲ ಯೋಜನೆ ಈವರೆಗೂ ಜಾರಿಯಾಗಿಲ್ಲ.
ಫೆಬ್ರವರಿಯಲ್ಲಿ ಮಂಡಿಸಿರುವ 2013-14ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತ ಮತ್ತು ಬಡ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್‌ಗಳಿಂದ ಪಡೆಯುವ ಶಿಕ್ಷಣದ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರ ಪಾವತಿಸಲಿದ್ದು, ಇದಕ್ಕಾಗಿ 20 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾಗಿ ಪ್ರಕಟಸಿದ್ದರು. ಇನ್ನೊಂದು ತಿಂಗಳು ಕಳೆದರೆ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಆದರೂ ಸರ್ಕಾರ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ.
ಸಿದ್ದರಾಮಯ್ಯ ಅವರು ಈ ವಿದ್ಯಾರ್ಥಿ ಸಾಲ ಯೋಜನೆಯನ್ನು ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ಘೋಷಿಸಿದ್ದಾರೆ. ವಾರ್ಷಿಕ ಆದಾಯ 2.50 ಲಕ್ಷದ ಒಳಗೆ ಇರುವವರು ಈ ಯೋಜನೆಯ ಲಾಭ ಪಡೆಯಬಹುದು. ಇಲ್ಲಿಯವರೆಗೆ ಸರ್ಕಾರ ಮತ್ತು ಬ್ಯಾಂಕುಗಳು ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಮಾತ್ರ ಸಾಲ ನೀಡುತ್ತಿದ್ದವು. ಆದರೆ ಸರ್ಕಾರ ಘೋಷಿಸಿರುವ ಈ ಬಡ್ಡಿ ರಹಿತ ಯೋಜನೆಯಿಂದ ಸಾಮಾನ್ಯ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೂ ಒಟ್ಟು 3 ಲಕ್ಷದವರೆಗೆ ಸಾಲ ನೀಡುವ ಕಾರ್ಯಕ್ರಮ ರೂಪಿಸಲಾಗಿತ್ತು. ರಾಜೀವ್ ಗಾಂಧಿ ಸಾಲ ರೂಪದ ಶಿಷ್ಯವೇತನ ಹೆಸರಿನಲ್ಲಿ ಅನುಷ್ಠಾನಗೊಳ್ಳಬೇಕಿದ್ದ ಈ ಯೋಜನೆಯ ನೋಡಲ್ ಬ್ಯಾಂಕ್ ಆಗಿ ವಿಜಯಾ ಬ್ಯಾಂಕ್ ನೇಮಕಗೊಂಡಿದ್ದು, ಕಾಲೇಜು ಶಿಕ್ಷಣ ಇಲಾಖೆಯಿಂದ ಕಾರ್ಯಕ್ರಮ ಅನುಷ್ಠಾನವಾಗಬೇಕಿತ್ತು.
ವಿಳಂಬವೇಕೆ?: ಬಜೆಟ್ ಮಂಡನೆಯಾಗಿ ಮೂರು ತಿಂಗಳು ಗತಿಸಿದ್ದರೂ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಅಧಿಸೂಚನೆ ಹೊರಡಿಸಿಲ್ಲ. ಮೇ ಮುಗಿಯುತ್ತಿದ್ದಂತೆಯೇ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಅಂಥ ಸಮಯದಲ್ಲಿ ಸಭೆ ಮಾಡಿ ನಿಯಮಾವಳಿ ರೂಪಿಸಿ ಬಳಿಕ ಅಧಿಸೂಚನೆ ಹೊರಡಿಸುವುದರೊಳಗೆ ಕಾಲೇಜು ಪ್ರವೇಶ ಪ್ರಕ್ರಿಯೆ ಮುಗಿದು ಹೋಗಿರುತ್ತದೆ. 2014-15ರ ಶೈಕ್ಷಣಿಕ ವರ್ಷದಿಂದ ಯೋಜನೆಯನ್ನು ಅನುಷ್ಠಾನಗೊಳಿಸಿ ಪ್ರತಿ ವರ್ಷ 50 ಸಾವಿರ ವಿದ್ಯಾರ್ಥಿಗಳಿಗೆ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುವುದೆಂದು ಬಜೆಟ್ ಮಂಡನೆ ಬಳಿಕ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದರು.
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಚಿಂತನೆ ಆರಂಭವಾಗಿದೆ. ಕಳೆದ ತಿಂಗಳು ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರಾಜೀವ್ ಗಾಂಧಿ ಸಾಲ ರೂಪದ ವಿದ್ಯಾರ್ಥಿ ವೇತನ ಯೋಜನೆ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಗಿದೆ. ಏತನ್ಮಧ್ಯೆ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಇಡೀ ಸರ್ಕಾರಿ ಆಡಳಿತ ಯಂತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಇದೀಗ ನಿರುಮ್ಮಳವಾಗಿದೆ. ಆದರೆ ಸಭೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಯೋಜನೆ ಜಾರಿಗೊಳಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುವ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ. ಸಾಲರೂಪ ಶಿಷ್ಯವೇತನ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದು ಸಭೆ ಮಾತ್ರ ಆಗಿದೆ. ಹೀಗಾಗಿ ಸದ್ಯಕ್ಕಂತೂ ಯೋಜನೆ ಅನುಷ್ಠಾನವಾಗುವ ಸಾಧ್ಯತೆ ತೀರ ಕಡಿಮೆ ಎಂದೇ ಹೇಳಬಹುದು.
*    ಬಡ್ಡಿರಹಿತ ಸಾಲ ಯೋಜನೆ ಕಾರ್ಯರೂಪಕ್ಕೆ ತರಲು ಸರ್ಕಾರ ಮೀನಮೇಷ
*    ಬಜೆಟ್‌ನಲ್ಲಿ ಘೋಷಣೆಯಾದರೂ ಆದೇಶ ಮಾತ್ರ ಹೊರಡಿಸಿಲ್ಲ
*    ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ ಕ್ಯಾರೆ ಎನ್ನದ ಸರ್ಕಾರ
*    ಸಾಮಾನ್ಯ ಪದವಿ, ಸ್ನಾತಕೋತ್ತರ ಪದವಿಗೂ 3 ಲಕ್ಷವರೆಗೆ ಬಡ್ಡಿ ರಹಿತ ಸಾಲ ಯೋಜನೆ
ಯೋಜನೆ ಬಗ್ಗೆ ನನಗೆ ಗೊತ್ತೇ ಇಲ್ಲ!
ಬಜೆಟ್‌ನಲ್ಲಿ ಘೋಷಣೆಯಾಗಿರುವ ಯೋಜನೆ ಕುರಿತು ಬೆಂಗಳೂರಿನಲ್ಲಿ ಫೆ.4ರಂದು ಸುದ್ದಿಗಾರರಿಗೆ ರಾಜೀವ್ ಗಾಂಧಿ ಸಾಲ ರೂಪದ ಶಿಷ್ಯವೇತನ ಯೋಜನೆ ಕುರಿತು ಮಾಹಿತಿ ನೀಡಿದ್ದ ಉನ್ನತ ಶಿಕ್ಷಣ ಸಚಿವ  ಆರ್.ವಿ. ದೇಶಪಾಂಡೆ ಅವರನ್ನು 'ಕನ್ನಡಪ್ರಭ' ಈ ಕುರಿತು ಮಾತನಾಡಿಸಿದರೆ, 'ನಾನೀಗ ಹೊರಗಿದ್ದೇನೆ. ನನಗೆ ಯೋಜನೆ ಬಗ್ಗೆ ಗೊತ್ತಿಲ್ಲ' ಎಂದು ಹೇಳುವ ಮೂಲಕ ನುಣುಚಿಕೊಂಡಿದ್ದಾರೆ.


-ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.