ಪ್ರಧಾನ ಸುದ್ದಿ

ಪಿಯು ಪುಸ್ತಕ ಈ ಬಾರಿಯೂ ವಿಳಂಬ

Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಮೇ 3
ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಗುತ್ತಿಗೆದಾರರ ಜಟಾಪಟಿಯಲ್ಲಿ ಪುಸ್ತಕ ಪ್ರಕಟಣೆ ವಿಳಂಬವಾಗುತ್ತಿದೆ. ಮೇ ತಿಂಗಳಲ್ಲೇ ಕಾಲೇಜು ಆರಂಭವಾದರೆ ಪುಸ್ತಕಗಳು ಸಿಗುವುದು ಮಾತ್ರ ಅನುಮಾನ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪುಸ್ತಕಗಳು ಮೇ ಮೊದಲ ವಾರ ಪ್ರಕಟವಾಗುತ್ತವೆ ಎಂದು ಇಲಾಖೆ ಅಧಿಕಾರಿಗಳೇ ಪತ್ರಿಕಾ ಪ್ರಕಟಣೆ ನೀಡಿದ್ದರು. ಆದರೆ ಕೆಲ ಆಡಳಿತಾತ್ಮಕ ಹಾಗೂ ಆರ್ಥಿಕ ವಿಚಾರಗಳಲ್ಲಿ  ಗುತ್ತಿಗೆ ಸಂಸ್ಥೆ ಹಾಗೂ ಇಲಾಖೆ ನಡುವೆ ತಾಳಮೇಳವಿಲ್ಲ. ಪರಿಣಾಮ ಮಾರುಕಟ್ಟೆಯಲ್ಲಿ ಈಗಾಗಲೇ ಇರಬೇಕಿದ್ದ 1.14 ಕೋಟಿ ಪುಸ್ತಕಗಳ ಮುದ್ರಣ ಆರಂಭವೇ ಆಗಿಲ್ಲ. ಬಹುತೇಕ ಖಾಸಗಿ ಕಾಲೇಜುಗಳು ಮೇ 5ರಿಂದಲೇ ದ್ವಿತೀಯ ಪಿಯು ತರಗತಿ ಆರಂಭಿಸುತ್ತಿವೆ. ಆದರೆ ಪಠ್ಯವೇ ಇಲ್ಲದೇ ಉಪನ್ಯಾಸಕರು ಪಾಠ ಮಾಡಬೇಕಾದ ಅನಿವಾರ್ಯ ಎದುರಾಗಿದೆ.
ಕಳೆದ ವರ್ಷವೂ ಇದೇ ರೀತಿ ಸಮಸ್ಯೆಯಾಗಿತ್ತು. ಇಲಾಖೆಯ ಹಿಂದಿನ ನಿರ್ದೇಶಕರ ನಿದ್ದೆಯಿಂದ ಪುಸ್ತಕಗಳು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಂದಿದ್ದವು. ಪಾಠ ಕಲಿಯದ ಅಧಿಕಾರಿಗಳು ಮತ್ತದೆ ಪ್ರಮಾದ ಮಾಡಿದ್ದಾರೆ.
2013-14ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಪಿಯು ಕಲೆ ಹಾಗೂ ವಾಣಿಜ್ಯ ವಿಭಾಗಗಳ ಎಲ್ಲ ವಿಷಯಗಳ ಪಠ್ಯ ಬದಲಿಸಲಾಗಿತ್ತು. ಆದ್ದರಿಂದ ಈ ವರ್ಷ ದ್ವಿತೀಯ ಪಿಯುಸಿ ಕಲೆ ಹಾಗೂ ವಾಣಿಜ್ಯ ಪಠ್ಯ ಬದಲಾವಣೆಯಾಗಿದೆ. ಜತೆಗೆ ಎಲ್ಲ ಭಾಷಾ ಪುಸ್ತಕವನ್ನು ಬದಲಿಸಲಾಗಿದೆ. ಪುಸ್ತಕ ವಿಳಂಬವಾದರೆ ಅದು ನೇರ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ.
ಟೆಂಡರ್ ಅಂತಿಮಗೊಂಡು ಒಂದೂವರೆ ತಿಂಗಳಾಯಿತು: ಮಾರ್ಚ್ ಎರಡನೇ ವಾರದಲ್ಲೇ 20 ಹಂತದಲ್ಲಿ 1.14 ಕೋಟಿ ಪುಸ್ತಕ ಪ್ರಕಟಣೆ ಟೆಂಡರ್ ಅಂತಿಮಗೊಂಡಿದೆ. ಮೊದಲ ಟೆಂಡರ್‌ನಲ್ಲಿ ಪ್ರಥಮ ಪಿಯು ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಎಲ್ಲ ವಿಷಯಗಳನ್ನು ಸೇರಿಸಿ ಒಟ್ಟು 73 ಪುಸ್ತಕಗಳ 78.19 ಲಕ್ಷ ಪ್ರತಿಗಳಿಗೆ ಗುತ್ತಿಗೆ ನೀಡಲಾಗಿದೆ. ಮತ್ತೊಂದು ಟೆಂಡರ್‌ನಲ್ಲಿ ದ್ವಿತೀಯ ಪಿಯು ಕಲೆ ಹಾಗೂ ವಾಣಿಜ್ಯದ 48 ಪುಸ್ತಕಗಳ 32.26 ಲಕ್ಷ ಪ್ರತಿಗಳಿಗೆ ಗುತ್ತಿದೆ ಕೊಡಲಾಗಿದೆ.
ಇಲಾಖೆ ಮೂಲಗಳ ಪ್ರಕಾರ ಇವೆಲ್ಲ ಪುಸ್ತಕಗಳು ಬೆಂಗಳೂರಿನ ಪ್ರತಿಷ್ಠಿತ ಪ್ರಕಾಶನ ಹಾಗೂ ಅದರ ಸಹ ಸಂಸ್ಥೆಗಳಿಗೆ ದೊರೆತಿದೆ. ಮೊದಲ ಟೆಂಡರ್‌ನಲ್ಲಿನ ಕೆಲ ಅಂಶಗಳಿಗೆ ಗುತ್ತಿಗೆ ಪಡೆದ ಪ್ರಕಾಶನವು ಆಕ್ಷೇಪವೆತ್ತಿದೆ. ಈ ಸಂಬಂಧ ಕೋರ್ಟ್ ಮೊರೆ ಹೋಗಿದೆ. ಇದೇ ನೆಪವನ್ನಾಗಿರಿಸಿಕೊಂಡು ಎರಡನೇ ಟೆಂಡರ್‌ನ ಪುಸ್ತಕಗಳ ಪ್ರಕಟಣೆಗೆ ವಿಳಂಬ ಮಾಡಲಾಗುತ್ತಿದೆ. ಏಕೆಂದರೆ ಈ ಪುಸ್ತಕಗಳ ಪಠ್ಯಕ್ರಮವು ಮತ್ಯಾವುದೇ ಪ್ರಕಾಶಕರ ಬಳಿಯಿಲ್ಲ. ಎಷ್ಟೇ ವಿಳಂಬವಾದರೂ ಮಾರುಕಟ್ಟೆಯಲ್ಲಿ ಶೇ.100ರಷ್ಟು ವ್ಯಾಪಾರ ಇದೇ ಸಂಸ್ಥೆಗೆ ಆಗುತ್ತದೆ ಎನ್ನುವುದು ಖಾತ್ರಿ.
ಕಳೆದ ವರ್ಷದ ಟೆಂಡರ್ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ನಿಯಮ ಪಾಲಿಸಲಾಗಿಲ್ಲ. ಇದರಿಂದ ಮಾರುಕಟ್ಟೆಯ ಶೇ.70ರಷ್ಟು ಪಾಲನ್ನು ಹಿಂದಿನ ವರ್ಷ ಗುತ್ತಿಗೆ ಪಡೆದ ಸಂಸ್ಥೆಯೇ ಆವರಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಹಳೆಯ ಪುಸ್ತಕಗಳೇ ಲಭ್ಯವಿವೆ. ಈ ಹಿನ್ನೆಲೆಯಲ್ಲಿ ಟೆಂಡರ್‌ನಲ್ಲಿ ದಾಖಲಿಸಿರುವ ಪುಸ್ತಕಗಳ ಪ್ರತಿ ಕಡಿಮೆ ಮಾಡಬೇಕು ಅಥವಾ ಮಾರಾಟವಾದ ಪುಸ್ತಕಗಳಿಗಷ್ಟೇ ರಾಜಧನ ಪಡೆಯಬೇಕು ಎನ್ನುವುದು ಗುತ್ತಿಗೆದಾರರ ವಾದ.
ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ
ಮೇ ತಿಂಗಳ ಮೊದಲ ವಾರದಲ್ಲಿಯೇ ಪುಸ್ತಕ ಪ್ರಕಟಿಸಲು ಸೂಚಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರುವುದು ನಿಜ. ಮೇ 15ರೊಳಗೆ ಪುಸ್ತಕ ಮಾರುಕಟ್ಟೆಗೆ ಬಿಡದಿದ್ದರೆ ಪ್ರಕಾಶಕ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಮಾರುಕಟ್ಟೆಯ ಸ್ಥಿತಿಗತಿ ಅರಿವಿಲ್ಲದೆ ಯಾವುದೇ ಗುತ್ತಿಗೆದಾರರು ಟೆಂಡರ್‌ಗೆ ಅರ್ಜಿ ಹಾಕುವುದಿಲ್ಲ. ಟೆಂಡರ್‌ಗೆ ಒಪ್ಪಿಗೆ ಸೂಚಿಸಿದ ಮೇಲೆ ಅದೇ ಅಂತ್ಯವಾಗುತ್ತದೆ. ನಿಗದಿತ ಸಮಯದಲ್ಲಿ ಪುಸ್ತಕ ಲಭ್ಯವಾಗಬೇಕು. ಅದರಲ್ಲೂ ದ್ವಿತೀಯ ಪಿಯು ಕಲೆ ಹಾಗೂ ವಾಣಿಜ್ಯ ವಿಭಾಗದ ಪುಸ್ತಕಗಳ ವಿಚಾರದಲ್ಲಿ ರಾಜಿ ಸಾಧ್ಯವೇ ಇಲ್ಲ. ಸರ್ಕಾರದ ಸೂಚನೆ ಮೀರಿ ಕಾರ್ಯನಿರ್ವಹಿಸಿದರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳೊಬ್ಬರು ಎಚ್ಚರಿಕೆ ನೀಡಿದ್ದಾರೆ.


-ರಾಜೀವ ಹಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.