ಬಯೋವುಟ್ರಿಕ್ ಹಾಜರಿಗೆ ಹಿಂದೇಟು
ಕಾರವಾರ: ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕಳೆದ ಡಿಸೆಂಬರ್ ಒಳಗೆ ಕಲ್ಪಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಬಹುತೇಕ ಪಂಚಾಯಿತಿಗಳಲ್ಲಿ ಇದು ಇನ್ನೂ ಜಾರಿಗೆ ಬಂದಿಲ್ಲ. ಯೋಜನೆ ಜಾರಿಗೆ ಅಧಿಕಾರಿಗಳು, ಸಿಬ್ಬಂದಿ ಕುಂಟು ನೆಪ ಹೇಳಿ, ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರ 2013 ಡಿಸೆಂಬರ್ ಆರಂಭದಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ ರಾಜ್ಯದ ಎಲ್ಲ ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಸೂಚಿಸಿತ್ತು. ಇದಕ್ಕೆ ಡಿಸೆಂಬರ್ ಅಂತ್ಯದ ತನಕ ಗಡವನ್ನೂ ನೀಡಿತ್ತು. ಆದರೆ, ಈವರೆಗೆ ರಾಜ್ಯದ ಬಹುತೇಕ ಗ್ರಾಪಂ, ತಾಪಂ ಹಾಗೂ ಜಿಪಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿಲ್ಲ.
ವ್ಯಾಪಕ ದೂರು ಕೇಳಿಬಂದಿತ್ತು: ಅಧಿಕಾರಿ ಹಾಗೂ ಸಿಬ್ಬಂದಿ ಪಂಚಾಯಿತಿಗಳಲ್ಲಿ ಜನತೆಗೆ ಕೈಗೆ ಸಿಗುವುದಿಲ್ಲ. ಹಲವು ಸಿಬ್ಬಂದಿ ಪಂಚಾಯಿತಿಗಳಲ್ಲಿ ಲಭ್ಯರಿರುವುದೇ ಇಲ್ಲ ಎಂದು ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ಜನತೆ ತಾಪಂ, ಗ್ರಾಪಂ ಹಾಗೂ ಜಿಪಂಗಳಲ್ಲಿ ಕೇಳಿದರೆ ಅಲ್ಲಿ ಹೋಗಿದ್ದಾರೆ, ಇಲ್ಲಿ ಹೋಗಿದ್ದಾರೆ ಎಂಬ ಸಿದ್ಧ ಉತ್ತರ ಲಭ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪಂಚಾಯಿತಿಗಳಲ್ಲಿ ಬಯೋವುಟ್ರಿಕ್ ಹಾಜರಾತಿ ಆರಂಭಿಸಲು ಆದೇಶಿಸಿತು.
ಬೆಳಗ್ಗೆ ಕಚೇರಿಗೆ ಬಂದಾಗ ಅಂದರೆ 10 ಗಂಟೆಗೆ ಯಂತ್ರದ ಮೇಲೆ ಬೆರಳಚ್ಚು ಹಾಕುವುದು ಹಾಗೂ ಸಂಜೆ 5.30ಕ್ಕೆ ಕಚೇರಿಯಿಂದ ಹೊರಡುವಾಗ ಮತ್ತೊಮ್ಮೆ ಬೆರಳಚ್ಚು ಹಾಕಲು ನಿಗದಿ ಪಡಿಸಲಾಗಿತ್ತು. ಇದಕ್ಕೆ ಅಂತರ್ಜಾಲ ಸಂಪರ್ಕ ಇರುವುದರಿಂದ ಬೆಂಗಳೂರಿನಲ್ಲಿ ಕುಳಿತ ಅಧಿಕಾರಿ ಯಾವುದೇ ಜಿಲ್ಲೆಯ ಯಾವುದೇ ಪಂಚಾಯಿತಿಯ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆಯೇ, ಇಲ್ಲವೇ ಎಂಬುದನ್ನು ತಕ್ಷಣ ತಿಳಿಯಬಹುದಿತ್ತು.
ಕುಂಟು ನೆಪ: ಆರಂಭದಲ್ಲಿ ಸಾಫ್ಟ್‌ವೇರ್ ಇಲ್ಲ ಎಂಬ ಕೂಗು ಕೇಳಿಬಂತು. ಅನಂತರ ಎನ್‌ಐಸಿ ಎಲ್ಲ ಪಂಚಾಯಿತಿಗಳಿಗೆ ಸಾಫ್ಟ್‌ವೇರ್ ಅಳವಡಿಸಿತು. ಅದಾದ ಮೇಲೆ ಬಯೋವುಟ್ರಿಕ್ ಯಂತ್ರ ಇಲ್ಲ ಎಂಬ ಪತ್ರ ಹೋಯಿತು. ಅದಕ್ಕೂ ಸರ್ಕಾರ ಉತ್ತರಿಸಿ, ಯಂತ್ರ ಖರೀದಿಗಾಗಿ ಧನಸಹಾಯ ಮಾಡುವ ಪ್ರಶ್ನೆ ಇಲ್ಲ. ಯಂತ್ರವನ್ನು ಆಯಾ ಪಂಚಾಯಿತಿಗಳ ಅನುದಾನದಲ್ಲೇ ಖರೀದಿಸಬೇಕು ಎಂದಿತು. ಆದರೆ, ಕೆಲವೆಡೆ ಯಂತ್ರ ಖರೀದಿಸಿ ಟೇಬಲ್ ಮೇಲೆ ಇಡಲಾಗಿದ್ದರೆ, ಹಲವೆಡೆ ಇನ್ನೂ ಯಂತ್ರದ ಖರೀದಿಯೇ ಆಗಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೆ ಪರಿಸ್ಥಿತಿ ಇದೆ.
ಉತ್ತರ ಕನ್ನಡ ಜಿಪಂನಲ್ಲೂ ಇನ್ನೂ ಬಯೋವುಟ್ರಿಕ್ ಹಾಜರಾತಿ ವ್ಯವಸ್ಥೆ ಕಲ್ಪಿಸಿಲ್ಲ. ಜಿಲ್ಲೆಯ 11 ತಾಪಂಗಳಲ್ಲಿ 3 ತಾಪಂಗಳಲ್ಲಿ ಮಾತ್ರ ಜಾರಿಗೆ ಬಂದಿದೆ. 208 ಗ್ರಾಪಂಗಳ ಪೈಕಿ ಕೇವಲ 36 ಗ್ರಾಪಂಗಳಲ್ಲಿ ಈ ವ್ಯವಸ್ಥೆ ಇದೆ. ಇದೆ ಪರಿಸ್ಥಿತಿ ಹೆಚ್ಚು ಕಮ್ಮಿ ರಾಜ್ಯದ ಉಳಿದೆಡೆಯೂ ಇದೆ.
ಬಯೋವುಟ್ರಿಕ್ ವ್ಯವಸ್ಥೆಯನ್ನು ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಜಾರಿಗೊಳಿಸಲೇಬೇಕು. ಮೇ 7ರಂದು ಬೆಂಗಳೂರಿನಲ್ಲಿ ಕರೆದಿರುವ ಸಭೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುತ್ತೇನೆ. ಅನಂತರ ಎಲ್ಲೆಲ್ಲಿ ಅಳವಡಿಸಲಾಗಿಲ್ಲವೋ ಅಲ್ಲಿ ತಕ್ಷಣ ಅಳವಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಸರ್ಕಾರದ ಆದೇಶ ಪಾಲನೆಯಾಗಬೇಕು. ಈ ದಿಸೆಯಲ್ಲಿ ಏನೇ ತಾಂತ್ರಿಕ ತೊಂದರೆ ಇದ್ದರೂ ಪರಿಹರಿಸಲಾಗುವುದು.
- ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ
ಹಾಗೂ ಪಂಚಾಯತ್‌ರಾಜ್ ಸಚಿವರು
-ವಸಂತಕುಮಾರ್ ಕತಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

