ಪ್ರಧಾನ ಸುದ್ದಿ

ಬರ: ರೈತರ ಕೈಸೇರದ ರು.77.72 ಕೋಟಿ ಇನ್‌ಪುಟ್ ಸಬ್ಸಿಡಿ

Published On :

ಚಿಕ್ಕಮಗಳೂರು: ರಾಜ್ಯದ 125 ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿಯಾದ ರೈತರಿಗೆ ಸರ್ಕಾರ ಬಿಡುಗಡೆ ಮಾಡಿದ 77.72 ಕೋಟಿ ಇನ್‌ಪುಟ್ ಸಬ್ಸಿಡಿ ಈವರೆಗೂ ರೈತರನ್ನು ತಲುಪಿಲ್ಲ. ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜ್ಯ ಸರ್ಕಾರ ಮಾ.19ರಂದೇ ಪರಿಹಾರ ಧನ ಬಿಡುಗಡೆ ಮಾಡಿತ್ತು. ಇದಾಗಿ 35 ದಿನ ಕಳೆದಿದೆ. ಇಷ್ಟಾದರೂ ಒಂದೇ ಒಂದು ರುಪಾಯಿ ರೈತರ ಕೈಸೇರಿಲ್ಲ.
ಎಷ್ಟೆಷ್ಟು ಹಣ ಬಿಡುಗಡೆ?
-    ಬಾಗಲಕೋಟೆ    7.68 ಕೋಟಿ
-    ಗದಗ    5.38 ಕೋಟಿ
-    ಹಾಸನ    2.98 ಕೋಟಿ
-    ಬೆಳಗಾವಿ    14.39 ಕೋಟಿ
-    ಮೈಸೂರು    2.98 ಕೋಟಿ
-    ಚಿತ್ರದುರ್ಗ    7.25 ಕೋಟಿ
-   ತುಮಕೂರು    10.61 ಕೋಟಿ
-    ಧಾರಾವಾಡ    2.29 ಕೋಟಿ
-   ಚಾಮರಾಜನಗರ    9.50 ಕೋಟಿ
-    ಕೋಲಾರ    3.05 ಕೋಟಿ
-    ಚಿಕ್ಕಬಳ್ಳಾಪುರ    25 ಲಕ್ಷ
-    ಮಂಡ್ಯ    20 ಲಕ್ಷ
-    ಚಿಕ್ಕಮಗಳೂರು    54 ಲಕ್ಷ
-    ದಾವಣಗೆರೆ    39 ಲಕ್ಷ
-    ಯಾದಗಿರಿ    23 ಲಕ್ಷ

 ಕಳೆದ ವರ್ಷದ ಪರಿಹಾರ
ಕಳೆದ ವರ್ಷ ಮುಂಗಾರಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ 125 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು. ಈ ತಾಲೂಕುಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರ ಹಣ ಬಿಡುಗಡೆ ಮಾಡಿದೆ. ಇದರ ಜತೆಗೆ ಬರ ಪೀಡಿತ ಪ್ರದೇಶಗಳಲ್ಲದ ಇತರೆ ತಾಲೂಕುಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬಂದಿದ್ದರಿಂದ ಮಾ.13 ರಲ್ಲಿ 65 ಕೋಟಿ ಬಿಡುಗಡೆ ಮಾಡಿತ್ತು. ರೈತರಿಗೆ ಪರಿಹಾರ ನೀಡಲು ಮಾ.29 ರಂದು ಇನ್‌ಪುಟ್ ಸಬ್ಸಿಡಿ ಅನುದಾನ ಬಿಡುಗಡೆ ಮಾಡಿತ್ತು.

35 ದಿನ ಆಗಿವೆ
ಹಣ ಬಿಡುಗಡೆಯಾಗಿ 35 ದಿನಗಳು ಕಳೆದಿದೆ. ಚುನಾವಣಾ ನೀತಿ ಸಂಹಿತೆ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆಯುವಂತೆ ಸರ್ಕಾರವೇ ಸಂಬಂಧಿಸಿ ಅಧಿಕಾರಿಗಳಿಗೆ ಸೂಚಿಸಿತ್ತು. ರೈತರಿಗೆ ತೊಂದರೆಯಾಗದಿರಲಿ, ಸಕಾಲಕ್ಕೆ ರೈತರ ಕೈಗೆ ಪರಿಹಾರ ಸಿಗಲಿ ಎನ್ನುವುದು ಸರ್ಕಾರದ ಉದ್ದೇಶವಾಗಿತ್ತು. ಚುನಾವಣೆ ಮುಗಿದು 18 ದಿನಗಳೇ ಆಗಿವೆ. ಆದರೂ ರೈತರಿಗೆ ಪರಿಹಾರ ವಿತರಿಸುವ ಕಾರ್ಯ ಆರಂಭಗೊಂಡಿಲ್ಲ. ಒಟ್ಟಿನಲ್ಲಿ ದೇವರು ವರಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಸ್ಥಿತಿ ರೈತರದು. ಬರ ಪೀಡಿತ ಪ್ರದೇಶದ ರೈತರು ಸಂಕಷ್ಟದಲ್ಲಿದ್ದಾರೆ, ಮುಂದಿನ ಮುಂಗಾರು ಬೆಳೆ ಬೆಳೆಯಲು ಭೂಮಿ ಹದಗೊಳಿಸುತ್ತಿದ್ದಾರೆ. ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಸದ್ಯ ಹಣದ ಅವಶ್ಯಕತೆ ಇದೆ. ಚುನಾವಣಾ ಕರ್ತವ್ಯದಿಂದ ಅಧಿಕಾರಿಗಳು ಮುಕ್ತರಾಗಿದ್ದು, ರೈತರ ಪರಿಸ್ಥಿತಿಯನ್ನು ಅರಿತು ಇನ್ನಾದರೂ ತಕ್ಷಣ ಪರಿಹಾರ ವಿತರಣೆಗೆ ಆದ್ಯತೆ ನೀಡಬೇಕಿದೆ.


-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.