ಪ್ರಧಾನ ಸುದ್ದಿ

ಬಿಳಿಚಿಕೊಂಡ ತೊಗಲುಗೊಂಬೆಗಳು

Published On :

ಬೆಂಗಳೂರು: ವಿದ್ಯಾರ್ಥಿಗಳ ಕೈಯಲ್ಲಿ ಬಿಳಿ ಹಾಳೆ, ಪೆನ್ಸಿಲ್ ಜೊತೆಗೆ ವಿವಿಧ ಬಗೆ ಬಣ್ಣ. ಆದರೆ ಅಲ್ಲಿ ಪಾಠ ಹೇಳಲು ನಿಂತ ಗುರುಗಳ ಕೈಯಲ್ಲಿ ಒಣಗಿಸಿದ ಅಗಲವಾದ ಮೇಕೆ ಚರ್ಮ, ಸುಣ್ಣ-ಬಣ್ಣ, ಕುಂಚ, ಸಣ್ಣದಾದ ಉಳಿ, ಬಿದಿರು ಕಡ್ಡಿ...
ಬೆಳಕು-ನೆರಳಿನಾಟದಲ್ಲಿ ಜೀವನದ ಆಟವನ್ನು ಗೊಂಬೆಯಾಟದಲ್ಲಿ ತೋರಿಸುವ ಕಲೆ ಕಲಿಯುವ ವಿದ್ಯಾರ್ಥಿ ಹಾಗೂ ಆ ಗೊಂಬೆಯ ತಯಾರಿ ಹಾಗೂ ಆಟದ ಪಾಠ ಕಲಿಸುವ ಶಿಕ್ಷಕನ ನಡುವಿನ ಪರಸ್ಪರ ಕಲಿಕಾ ವಿನಿಮಯದ ಚಿತ್ರಣ ಇದು.
ಜೀವನದ ಗೊಂಬೆ ಆಡಿಸೋನು ಮೇಲೆ ಇದ್ದಾನೆ ನಿಜ. ಆದರೆ ಬೆಳಕಿನ ನೆರಳಿನಾಟದಲ್ಲಿ ಸೂತ್ರಧಾರನಾಗಿ ಕುಳಿತು ತಾಳಕ್ಕೆ ತಕ್ಕಂತೆ ತೊಗಲುಗೊಂಬೆ ಕುಣಿಸುವ ಗೊಂಬೆಯಾಟದ ಕುಶಲಕರ್ಮಿ ಶ್ರಮಜೀವಿ. ಆತ ತನ್ನ  ಜೀವನೋಪಾಯಕ್ಕೆ ನಂಬಿಕೊಂಡು ಬಂದ ತೊಗಲುಗೊಂಬೆ ತಯಾರಿಕೆಗೆ ಮೇಕೆ ಚರ್ಮ, ಸುಣ್ಣ-ಬಣ್ಣ, ಕುಂಚ, ಸಣ್ಣದಾದ ಉಳಿ, ಬಿದಿರು ಕಡ್ಡಿ ಬೇಕೆ ಬೇಕು. ಹೀಗಾಗಿಯೇ ಅಲ್ಲಿ ತನ್ನ ಕುಶಲಗಾರಿಕೆ ಕುರಿತು ಪಾಠ ಹೇಳಲು ನಿಂತ ವ್ಯಕ್ತಿ ತನ್ನದೇ ಪರಿಕರಗಳನ್ನು ಹಿಡಿದುಕೊಂಡೆ ಬಂದಿದ್ದ.
ತೊಗಲುಗೊಂಬೆ, ಅದರ ನಾಮವೇ ಹೇಳುವಂತೆ ಅದು ಚರ್ಮದಿಂದಲೇ ತಯಾರಿಸಿದ್ದು. ಆದರೆ ತೊಗಲುಗೊಂಬೆಯಾಟದಲ್ಲಿ ಈಗಲೂ ಆಸಕ್ತಿಯಿಟ್ಟುಕೊಂಡವರಿಗೆ, ಬಣ್ಣ, ಬಣ್ಣದಲ್ಲಿ ಆಕರ್ಷಿಸುವ ಗೊಂಬೆಗಳನ್ನು ನೋಡುವವರಿಗೆ ಅದರ ತಯಾರಿಕೆಯ ವಿಧಾನದಲ್ಲಿ ಈಗಲೂ ಕುತೂಹಲ, ಆಸಕ್ತಿ ಇಲ್ಲದಿಲ್ಲ.  ಚಿತ್ರಕಲಾ ಪರಿಷತ್ ಈ ಹಿನ್ನೆಲೆಯಲ್ಲಿಯೇ ಸೋಮವಾರ ತೊಗಲು ಗೊಂಬೆ ತಯಾರಿಕೆಯ ಕಾರ್ಯಾಗಾರ ಹಮ್ಮಿಕೊಂಡಿತ್ತು. ಕಳೆದ ಭಾನುವಾರದಿಂದ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆಯುತ್ತಿರುವ  'ತೊಗಲುಗೊಂಬೆ ಹಬ್ಬ'ದ ಭಾಗವಾಗಿಯೇ ಆಂಧ್ರ ಪ್ರದೇಶದ ಧರ್ಮಾವರಂ ನಿವಾಸಿ ಹನುಮಂತು ತೊಗಲು ಗೊಂಬೆ ತಯಾರಿಕೆಯ ವಿಧಾನಗಳ ಪ್ರಾತ್ಯಕ್ಷಿಕೆ ನೀಡಿದರು. ತೊಗಲು ಗೊಂಬೆ ತಯಾರಿಕೆಯಲ್ಲಿ ಆತನ ಕುಟುಂಬಕ್ಕೆ ತಲೆಮಾರುಗಳ ಜ್ಞಾನವಿದೆ. ಇದರಿಂದಲೇ ತಾವು ಒಣಗಿಸಿ ತಂದ ಅಗಲವಾದ ಮೇಕೆ ಚರ್ಮಹಿಡಿದು ಗೊಂಬೆ ತಯಾರಿಕೆಯ ವಿಧಾನ ಹೇಳಿ ಗಮನ ಸೆಳೆದರು.
ಮೇಕೆ ಚರ್ಮದಲ್ಲಿ ಗೊಂಬೆಯೇ?: ಕರ್ನಾಟಕ ಮತ್ತು ಆಂಧ್ರಪ್ರದೇಶ ಮಟ್ಟಿಗೆ ಈಗಲೂ ತೊಗಲುಗೊಂಬೆ ತಯಾರಿಕೆಗೆ ಮೇಕೆ ಚರ್ಮವೇ ಮೂಲ ಕಚ್ಚಾವಸ್ತು. ಅದಕ್ಕೆ ಸುಣ್ಣ ಬಳಿದು ಎರಡು ದಿನಗಳ ಕಾಲ  ಮಣ್ಣಿನಲ್ಲಿ ಹುದುಗಿಸಿಡಲಾಗುತ್ತದೆ. ಆನಂತರ ಹೊರತೆಗೆದು ಬಿಸಿ ನೀರಿನಲ್ಲಿ ಅದ್ದಿ, ಹದಗೊಳಿಸಿ ಚರ್ಮದ ಮೇಲಿನ ಕೂದಲು ತೆಗೆಯಲಾಗುತ್ತೆ. ಮತ್ತೆ ಎರಡು ದಿನ ಬಿಸಿಲಿನಲ್ಲಿ ಒಣಗಿಸಿದ ನಂತರವೇ ಅದು ಗೊಂಬೆ ತಯಾರಿಕೆಗೆ ಬಳಕೆಯಾಗುತ್ತದೆ. ಇನ್ನು ತೊಗಲುಗೊಂಬೆಯಾಟದ ಪ್ರಸಂಗಗಳು ಈ ಹೊತ್ತಿಗೂ ರಾಮಾಯಣ ಹಾಗೂ ಮಹಾಭಾರತದ ಕಥಾ ಸನ್ನಿವೇಶಗಳನ್ನೆ ನಂಬಿಕೊಂಡಿವೆ. ಪಾತ್ರಗಳ ನೀಲಿ ನಕ್ಷೆಯನ್ನು ಮೊದಲು ಬಿಳಿ ಹಾಳೆಯಲ್ಲಿ ಸಿದ್ಧಪಡಿಸಿಕೊಳ್ಳುತ್ತಾರೆ. ನಂತರ ಅದರ ಯಥಾವತ್ತ ರೂಪವನ್ನು ಒಣಗಿಸಿದ ಮೇಕೆ ಚರ್ಮದ ಮೇಲೆ ಚಿತ್ರಿಸಿ, ಅತೀ ಸಣ್ಣ  ಉಳಿಗಳ ಮೂಲಕ ಕುಶಲಗಾರಿಕೆ ಮಾಡಲಾಗುತ್ತದೆ. ಅಗತ್ಯವಾದ ಬಣ್ಣ ಬಳಿದು ಶೃಂಗರಿಸಲಾಗುತ್ತೆ. ಹೀಗೆ ಅವರ ಕುಶಲಗಾರಿಕೆಯಲ್ಲಿ ರಾಮ, ರಾವಣ, ಕೃಷ್ಣ  ಸೇರಿದಂತೆ ರಾಮಾಯಣ ಹಾಗೂ ಮಹಾಭಾರತದ  ಎಲ್ಲ ಪಾತ್ರಗಳು ಇಲ್ಲಿ ಗೊಂಬೆಗಳಾಗಿ ರೂಪ ತಾಳಿ ಗೊಂಬೆಯಾಟದ ಪ್ರದರ್ಶನಕ್ಕೆ ನಿಲ್ಲುತ್ತವೆ. ನೋಡುಗರ ಅಕರ್ಷಣೆಗೂ ಕಾರಣವಾಗುತ್ತಿವೆ.
ತಾತಾ, ಮುತ್ತಾತಂದಿರ ಕಾಲದಿಂದ್ಲೂ ಗೊಂಬೆ ಮಾಡ್ತಾ ಬಂದ ಕುಟುಂಬ ನಮ್ಮದು. ನಾನು ಕೂಡ ಅದ್ನೆ  ಮುಂದುವೆರೆಸಿಕೊಂಡು ಬಂದಿದ್ದೇನೆ. ಈಗ ಮಗ ಕೂಡ ಅದ್ನೆ ಮಾಡ್ತಿದ್ದಾನೆ. ಒಂದ್ರೀತಿ ಖುಷಿ ಇದೆ.  ಈಗೀಗ  ಡಿಮ್ಯಾಂಡ್ ಇಲ್ಲ. ಆದ್ರೂ ಮಾಡ್ತ ಬರ್ತಿದ್ದೇವೆ. ಚಿತ್ರಕಲಾ ಪರಿಷತ್ ಸಪೋರ್ಟ್ ಮಾಡ್ತೀದೆ.
- ಆಂಜನೇಯ, ಗೊಂಬೆ ತಯಾರಕರು, ಧರ್ಮಾವರಂ
ಒಂದು ದಿನದ ಶ್ರಮವಲ್ಲ..
ಪ್ರದರ್ಶನಗಳಲ್ಲಿ ತೊಗಲು ಗೊಂಬೆಗಳನ್ನು ಕಂಡು, ಕಣ್ತುಂಬಿಕೊಂಡು ಖುಷಿ ಪಡುವ ನಮಗೆ ಅದರ
ತಯಾರಿಕೆಯ ಹಿಂದಿನ ಶ್ರಮ, ಕಷ್ಟ- ಸುಖದ ಬಗ್ಗೆ ಅಷ್ಟಕಷ್ಟೇ ಮಾಹಿತಿ. ಆದರೆ ಒಂದು ಗೊಂಬೆ ತಯಾರಿಕೆಗೆ 5 ರಿಂದ 15 ದಿನಗಳು ಬೇಕಾಗುತ್ತವೆ ಎಂದು ಹೇಳುವ ಧರ್ಮಾವರಂ ನಿವಾಸಿ ಹನುಮಂತು ಅವರ ಮಾತು ಅಚ್ಚರಿಯೂ ತರಿಸುತ್ತೆ.  
ಅಷ್ಟು ಶ್ರಮಕ್ಕೆ ಇಷ್ಟೇ ಬೆಲೆ...
ಒಂದು ಗೊಂಬೆ ತಯಾರಿಕೆಗೆ ಬೇಕಾದ ಮೂಲ ಕಚ್ಚಾವಸ್ತಗಳ ಖರ್ಚು ವೆಚ್ಚದ ಜೊತೆಗೆ ಅದಕ್ಕೆ ಹಾಕುವ ಕುಶಲ ಕರ್ಮಿಯ ಶ್ರಮವನ್ನು ಲೆಕ್ಕ ಹಾಕಿದರೆ ಕನಿಷ್ಠ ರು. 5 ರಿಂದ 10 ಸಾವಿರ. ಆದರೆ ಪ್ರದರ್ಶನಗಳನ್ನು ಹೊರತುಪಡಿಸಿ,  ಮಾರಾಟದ ಮೂಲಕ ಸಿಗುವ ಬೆಲೆ ಅತ್ಯಂತ ಕಡಿಮೆ. ಹೆಚ್ಚೆಂದರೆ ರು. 1 ಸಾವಿರ ಒಂದು ಗೊಂಬೆಗೆ ಸಿಗುತ್ತದೆ.
ಒಟ್ಟಾರೆ, ನೋಡುಗರಿಗೆ ಈ ತನಕ ಮನರಂಜನೆ ನೀಡುತ್ತಾ ಬಂದ ತೊಗಲುಗೊಂಬೆ ಕಲೆ ಕಚ್ಚಾವಸ್ತುಗಳ ಬೆಲೆ ಏರಿಕೆಯಿಂದಲೋ, ಆಧುನಿಕತೆಯ ಹೊಡೆತದಿಂದಲೋ ನಾಶವಾಗುವ ಆತಂಕದಲ್ಲಿದ್ದರೂ, ಅದರ ತಯಾರಿಕೆಯ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವೇ ಆಗಿತ್ತು.


-ದೇಶಾದ್ರಿ ಎಚ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.