ಪ್ರಧಾನ ಸುದ್ದಿ

ಬಿಸಿಲ ಬೇಗೆಗೆ ತಂಗಳಾದ ಬಿಸಿಯೂಟ

ಬಿಸಿಲ ಬೇಗೆಗೆ ತಂಗಳಾದ ಬಿಸಿಯೂಟ
Published On :

ಸರ್ಕಾರಿ ಲೆಕ್ಕದಲ್ಲಿ ಶೇ.60 ಮಕ್ಕಳು ಊಟಕ್ಕೆ ಹಾಜರು
ಜಿಲ್ಲಾವಾರು ಮಾಹಿತಿ ಅನ್ವಯ ಶಾಲೆಗೆ ಬರುತ್ತಿರುವವರು ಕಡಿಮೆ


ಬರಪೀಡಿತ ಪ್ರದೇಶದ ಮಕ್ಕಳು ಅರೆ ಹೊಟ್ಟೆಯಲ್ಲಿ ಕೂರಬಾರದು ಎನ್ನುವ ಸದುದ್ದೇಶದಿಂದ ಈ ಬಾರಿ ರಾಜ್ಯ ಸರ್ಕಾರ ಬೇಸಗೆ ರಜೆಯಲ್ಲೂ ಬಿಸಿಯೂಟ ಆರಂಭಿಸಿತ್ತು. ಶಿಕ್ಷಣ ಇಲಾಖೆಯ ಹರಸಾಹಸದ ಹೊರತಾಗಿಯೂ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿಲ್ಲ. ರಜೆಯ ಮಜಾ ಅನುಭವಿಸುತ್ತಿದ್ದ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕದಿದ್ದುದು ಒಂದು ಕಾರಣವಾದರೆ ಕೆಲವೆಡೆ ಶಿಕ್ಷಕರ ಉದಾಸೀನವೂ ಈ ಯೋಜನೆ ವೈಫಲ್ಯಕ್ಕೆ ಕಾರಣವಾಗಿದೆ. ಈ ಅಪಸವ್ಯದ ನಡುವೆ ಶಿಕ್ಷಕರು ಮನೆಮನೆಗೆ ತೆರಳಿ ಮಕ್ಕಳನ್ನು ಕರೆತಂದು ಊಟ ಹಾಕಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸಲು ಕ್ರೀಡೆ, ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದನ್ನು ಮರೆಯುವಂತಿಲ್ಲ.


ಜಿಲ್ಲೆ    ಒಟ್ಟು        ಯೋಜನೆಯ       ಒಟ್ಟು             ಬರುತ್ತಿರುವ
    ಶಾಲೆ    ಶಾಲೆ    ಮಕ್ಕಳು    ಮಕ್ಕಳು
ಯಾದಗಿರಿ    1090    1090    1,66,162    54,815
ಉತ್ತರ ಕನ್ನಡ    469    328    35,084    10,354
ಕೊಪ್ಪಳ     193     193     38,397     10,668
ಬಳ್ಳಾರಿ     1422     1419     2,70,108     1,08,843
ರಾಯಚೂರು    435     435     65,461     17,979
ಧಾರವಾಡ     1086     1086     2,97,921     62,000
ಬಿಜಾಪುರ     2321     2321     3,07,515     66,116
ಬೆಳಗಾವಿ    2830    2830     3,73,408     1,86,725
ಗದಗ    848    558     1,90,000     1,11,235
ಕೋಲಾರ    2058    2058     1,11,733     54,686
ಮೈಸೂರು    2409    581     2,64,000     58,557
ಚಾಮರಾಜನಗರ    685    685     60,232     23,825
ಕೊಡಗು    172    172    13,158    2,185
ಮಂಡ್ಯ    1034    1034    71,720    50,263
ಹಾವೇರಿ     930    930    1,54,000    19,000
ಶಿವಮೊಗ್ಗ     250    147    4,650    3,213
ದಾವಣಗೆರೆ     862    735    84,087    28,569
ಚಿಕ್ಕಮಗಳೂರು    456    366    21,087    7,506
ಬೀದರ್     376    376    35,153    8,788
ರಾಮನಗರ    1496    1496    77,306    39,345
ಹಾಸನ    2804    2001    1,68,479    82,122
ಚಿಕ್ಕಬಳ್ಳಾಪುರ    1592     1592    1,28,463    89,338
ತುಮಕೂರು    3971     3971    2,16,985    90,478
ಬಾಗಲಕೋಟೆ     1405     1405    2,57,000    60,126





ಬೀದರ್
ಜಿಲ್ಲೆಯ 5ರಲ್ಲಿ ಔರಾದ್ ತಾಲೂಕಿನಲ್ಲಿ ಮಾತ್ರ ಬಿಸಿಯೂಟದ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಇದರ ಅನುಕೂಲ ಪಡೆಯಲು ಫಲಾನುಭವಿ ಮಕ್ಕಳ ಕೊರತೆ ಇರುವುದು ಶಿಕ್ಷಕರಿಗೆ ತಲೆನೋವಾಗಿದೆ. ಅಂಥ ಮಕ್ಕಳ ಜಾಡು ಹಿಡಿದು ಮನೆ ಮನೆಗೆ ತಿರುಗಾಡಬೇಕಾದ ದುಸ್ಥಿತಿ ಅವರ ಹೆಗಲಿಗೇರಿದೆ. ರಜಾ ದಿನಗಳಲ್ಲಿ ಪರವೂರಿಗೆ ಹೋದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಒಂದೆಡೆಯಾದರೆ, ಕೂಲಿ ಮತ್ತಿತರ ಕೆಲಸಕ್ಕೆ ತೆರಳುವ ಪೋಷಕರು ಮಕ್ಕಳನ್ನು ತಮ್ಮೊಂದಿಗೆ ಕೆಲಸದ ಸ್ಥಳಕ್ಕೆ ಕರೆದೊಯ್ಯುತ್ತಿರುವುದು ಬಿಸಿಯೂಟದಿಂದ ವಿದ್ಯಾರ್ಥಿಗಳು ವಿಮುಖರಾಗಲು ಪ್ರಮುಖ ಕಾರಣ.
ದಾವಣಗೆರೆ
ನೀರಾವರಿ ಪ್ರದೇಶ ಹೊರತುಪಡಿಸಿ ದಾವಣಗೆರೆ, ಹರಪನಹಳ್ಳಿ ಹಾಗೂ ಜಗಳೂರು ತಾಲೂಕುಗಳಲ್ಲಿನ ಬಿಸಿಯೂಟ ವ್ಯವಸ್ಥೆ ಇರುವ ಶಾಲೆಗಳಲ್ಲಿ ಊಟದ ವ್ಯವಸ್ಥೆ ನೋಡಿಕೊಳ್ಳಲು ಒಬ್ಬ ಶಿಕ್ಷಕರನ್ನು ನೇಮಿಸಲಾಗಿದೆ. ಅಣಬೇರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ಜೊತೆಗೆ ಮಕ್ಕಳಿಗೆ ಹಾಡು, ಚಿತ್ರಕಲೆ, ಆಟೋಟ, ಕಾಗುಣಿತ, ಜಾನಪದ ಗೀತೆ, ಪಠ್ಯದ ಪದ್ಯಗಳು, ಶಿಶು ಗೀತೆಗಳು, ಕಂಪ್ಯೂಟರ್ ಮೂಲಕ ಕೆಲವು ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುವುದೂ ಸೇರಿದಂತೆ ದಿನಕ್ಕೊಂದು ಚಟುವಟಿಕೆ ನಡೆಸಲಾಗುತ್ತದೆ. ಆನಗೋಡು, ಶಿವಪುರ, ದಾವಣಗೆರೆಯ ಭದ್ರಾ ಕಾಲನಿ ಶಾಲೆ, ಜಗಳೂರು ತಾ. ಹಾಲೆಕಲ್ಲು ಶಾಲೆ, ಬೆಣ್ಣೆಹಳ್ಳಿ ಶಾಲೆಗಳಲ್ಲಿ ಮಾದರಿಯಾಗಿ ಬಿಸಿಯೂಟ ಮತ್ತು ಬೇಸಿಗೆ ಶಿಬಿರವನ್ನು ಜೊತೆ ಜೊತೆಗೆ ಸಂಘಟಿಸಲಾಗುತ್ತಿದೆ.
ಮಂಡ್ಯ
ಶಾಲೆಗಳಲ್ಲಿ ಪ್ರತಿದಿನ ಮಕ್ಕಳ ಹಾಜರಾತಿ ಗಮನಿಸಿಕೊಂಡೇ ಅಡುಗೆ ಸಿದ್ಧತೆ ಮಾಡಲಾಗುತ್ತಿದೆ. ಊಟಕ್ಕೂ ಮೊದಲು ಮಕ್ಕಳನ್ನು ಕೆಲಹೊತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿ ನಂತರ ಊಟ ಬಡಿಸಲಾಗುತ್ತಿದೆ. ಪ್ರತಿ ಶಾಲೆ ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಥವಾ ಸದಸ್ಯರು ಬಿಸಿಯೂಟದ ಜವಾಬ್ದಾರಿ ಹೊತ್ತಿದ್ದಾರೆ.
ಬಿಜಾಪುರ
ಎಲ್ಲಡೆ ಬಿಸಿಯೂಟ ಚಾಲ್ತಿಯಲ್ಲಿದೆ. ಆದರೆ ಮಕ್ಕಳೇ ಬಾರದಿರುವ 200 ಶಾಲೆಗಳಿವೆ. ಇಲ್ಲಿ ಶಿಕ್ಷಕರು ಪೋಷಕರ ಮನೆ, ಮನೆಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಬರುವ ಪರಿಸ್ಥಿತಿ ಇದೆ. ಮನೆಯಲ್ಲಿ ಮಕ್ಕಳು ಸಿಗದಿದ್ದರೆ ದಾರಿ ಹೋಕ ಮಕ್ಕಳನ್ನೇ ಕರೆತಂದು ಬಿಸಿಯೂಟ ಬಡಿಸಬೇಕಾದ ವಿಚಿತ್ರ ಸನ್ನಿವೇಶವಿದೆ. ಬಿಸಿಯೂಟ ಕಡ್ಡಾಯಗೊಳಿಸಿರುವುದರಿಂದ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ತಪ್ಪದೇ ಶಾಲೆಗೆ ಆಗಮಿಸಿ ಬಿಸಿಯೂಟದ ಉಸ್ತುವಾರಿ ನೋಡಿಕೊಳ್ಳಲೇಬೇಕು. ಅಡುಗೆಯವರು ಕನಿಷ್ಠ 15 ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಬೇಕು. ಸಿದ್ಧಪಡಿಸಿದ ಬಿಸಿಯೂಟ ಉಳಿಯುವಂತಿಲ್ಲ, ಮನೆಗೆ ತೆಗೆದುಕೊಂಡು ಹೋಗುವಂತೆಯೂ ಇಲ್ಲ. ಹೀಗಾಗಿ ಮುಖ್ಯ ಗುರುಗಳು, ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಜೊತೆಗೆ ಸ್ಥಳೀಯರು ಹಾಗೂ ಎಸ್ಡಿಎಂಸಿ ಸಮಿತಿ ಪದಾಧಿಕಾರಿಗಳು ಈ ಬಗ್ಗೆ ಕಿಂಚಿತ್ತೂ ಗಮನ ಹರಿಸದಿರುವುದು ಶಿಕ್ಷಕರಿಗೆ ತಲೆನೋವು.
ಕೊಡಗು
ಸೋಮವಾರಪೇಟೆ ಬರಪೀಡಿತ ತಾಲೂಕಾಗಿದ್ದು, ಈ ವ್ಯಾಪ್ತಿಯ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಿ, ಮಕ್ಕಳಿಗೆ ಉಣ ಬಡಿಸಬೇಕೆಂದು ಆದೇಶಿಸಲಾಗಿದೆ. ಅದರೊಂದಿಗೆ ಹೊರ ಜಿಲ್ಲೆಯಿಂದ ಮಕ್ಕಳು ಇಲ್ಲಿಗೆ ಬಂದಲ್ಲಿ ಅವರಿಗೂ ಉಣ ಬಡಿಸಬೇಕೆಂದು ಸೂಚಿಸಲಾಗಿದೆ. ಆದರೆ ಆರಂಭದ ದಿನಗಳಿಗೆ ಹೋಲಿಸಿದರೆ ಮಕ್ಕಳ ಸಂಖ್ಯೆ ಕ್ರಮೇಣ ಇಳಿಮುಖವಾಗಿದೆ. ಇನ್ನೂ ಕೆಲವು ಕಡೆ ವಿದ್ಯಾರ್ಥಿಗಳನ್ನು ಶಾಲೆಯೆಡೆಗೆ ಆಕರ್ಷಿಸಲು ಕ್ರೀಡೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಶಾಲೆಗೆ ಬರುವ ಅಥವಾ ಬಂದ ವಿದ್ಯಾರ್ಥಿಗಳ ಸಂಖ್ಯೆಯನ್ನಾದರಿಸಿ ಅಡುಗೆ ತಯಾರಿಸುತ್ತಿರುವುದರಿಂದ ಯಾವ ಶಾಲೆಯಲ್ಲೂ ಮಾಡಿದ ಅಡುಗೆ ಉಳಿಯುತ್ತಿಲ್ಲ.
ಬೆಳಗಾವಿ
ಬಿಸಿಯೂಟವನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಮಾಡಲಾಗುತ್ತಿದೆ. ಈ ಮೊದಲು ಅರೆ ಸರ್ಕಾರಿ ಸಂಸ್ಥೆಗಳ ಮೂಲಕ ಬಿಸಿಯೂಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಇದೀಗ ಶಾಲೆಗಳಲ್ಲೇ ಬಿಸಿಯೂಟದ ಕೇಂದ್ರಗಳನ್ನು ಆರಂಭಿಸಲಾಗಿದೆ. ಶಿಕ್ಷಕರಿಗಿಂತ ಆಯಾ ಶಾಲೆಗಳ ಮುಖ್ಯ ಶಿಕ್ಷಕರೇ ಪ್ರಮುಖವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಬಿಸಿಯೂಟ ಮಾಡಿಸುವುದರಿಂದ ಮಕ್ಕಳಿಗೆ ಊಟ ಮಾಡಿಸುವುದು, ಪಾತ್ರೆಗಳನ್ನು ತೊಳೆಯುವವರೆಗೆ ತಾಪತ್ರಯ ತಪ್ಪಿದ್ದಲ್ಲ. ಎಸ್ಡಿಎಂಸಿ ಪದಾಧಿಕಾರಿಗಳು ಶಾಲೆಗಳಿಗೆ ಪಾತ್ರೆಗಳನ್ನು ಹಾಗೂ ನೀರಿನ ಅರವಟ್ಟಿಗೆಯನ್ನು ದೇಣಿಗೆ ನೀಡುವ ಮೂಲಕ ಮಕ್ಕಳನ್ನು ಬಿಸಿಯೂಟ ಮಾಡಲು ಪ್ರೇರೇಪಿಸುತ್ತಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಬಿ.ಕೆ. ಕಂಗ್ರಾಳಿ ಹಾಗೂ ಅವಚಾರಹಟ್ಟಿ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಮಾದರಿ ಬಿಸಿಯೂಟ ನಡೆಸಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟಕ್ಕೂ ಮೊದಲು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಅವರನ್ನು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತದೆ.
ಗದಗ
ಐದೂ ತಾಲೂಕುಗಳೂ ಬರ ಪೀಡಿತವಾಗಿದ್ದು, ಎಲ್ಲ ಶಾಲೆಗಳಲ್ಲೂ ಬಿಸಿಯೂಟ ಆರಂಭಿಸಲಾಗಿದೆ. ಶಾಲಾ ಸುಧಾರಣಾ ಸಮಿತಿ ಸದಸ್ಯರು ಹಾಗೂ ಪಾಲಕರು ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ನಿಗದಿತ ಪ್ರಮಾಣದಲ್ಲಿ ಮಕ್ಕಳು ಬಾರದಿರುವ ಹಿನ್ನಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಮತ್ತು ಪಾಲಕರು ಸೇರಿ ಕೇಂದ್ರಗಳನ್ನು ಸ್ಥಗಿತಗೊಳಿಸಿದ್ದಾರೆ. ಬೆರಳೆಣಿಕೆ ಮಕ್ಕಳು ಬರುತ್ತಿದ್ದರೆ, ಅವರನ್ನು ಸಮೀಪದ ಇನ್ನೊಂದು ಬಿಸಿಯೂಟ ಕೇಂದ್ರಕ್ಕೆ ಕಳುಹಿಸಿ, ಊಟದ ವ್ಯವಸ್ಥೆ ಮಾಡಿದ್ದಾರೆ.
ಊಟಕ್ಕಿಲ್ಲ ಲೆಕ್ಕಕ್ಕುಂಟು: ಬೇಸಿಗೆಯಲ್ಲಿ ಬಿಸಿಯೂಟ ನೀಡುವುದು ಒಳ್ಳೆಯದೆ. ಆದರೆ, ಶಾಲೆಗಳಲ್ಲಿ ಊಟ ಮಾಡುತ್ತಿರುವ ಮಕ್ಕಳ ಸಂಖ್ಯೆಗೂ ದಾಖಲೆಗಳಿಗೂ ಭಾರಿ ವ್ಯತ್ಯಾಸವಿದೆ. ಹಿರಿ-ಕಿರಿಯ ಅಧಿಕಾರಿಗಳ ಕರಾಮತ್ತಿನಿಂದಾಗಿ ಶಾಲೆಗೆ ಮಕ್ಕಳು ಬಾರದಿದ್ದರೂ, ಕಡತಗಳಲ್ಲಿ ಊಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಜಿಪಂ ಸದಸ್ಯರೊಬ್ಬರು ಮಾಡಿದ್ದಾರೆ.
ಕೋಲಾರ
ಬಯಲು ಸೀಮೆಗೆ ಸೇರಿದ ಈ ಜಿಲ್ಲೆಯಲ್ಲಿ ಬಿಸಿಯೂಟಕ್ಕೆ ಗ್ರಾಮೀಣ ಭಾಗದ ಅದರಲ್ಲೂ ಗಡಿ ಭಾಗದಲ್ಲಿ ಮಾತ್ರ ತಕ್ಕಮಟ್ಟಿನ ಪ್ರತಿಕ್ರಿಯೆ ಸಿಗುತ್ತಿದೆ. ಉಳಿದೆಡೆ ಮಕ್ಕಳ ಸಂಖ್ಯೆ ಕೊರತೆಯಿಂದಾಗಿ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಶಾಲಾ ಮಕ್ಕಳಿಗೆ ಮಾತ್ರವಲ್ಲದೆ ಸದರಿ ಶಾಲೆಯ ಸುತ್ತ-ಮುತ್ತಲ ಹಳ್ಳಿಯ ಮಕ್ಕಳು ಬಂದರೂ ಬಿಸಿಯೂಟ ನೀಡಲಾಗುತ್ತಿದೆ.  ಗುರಿ ಸಾಧನೆಗಾಗಿ ಜಿಪಂ ಸಿಇಒ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ತಂಡ ರಚನೆ ಮಾಡಲಾಗಿದ್ದು, ತಾಲೂಕು ಮಟ್ಟದಲ್ಲೂ ಸಂಬಂಧಿಸಿದ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ತಾಲೂಕಿನ ಬಿಇಒ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಿ ಹಾಗೂ ಯೋಜನೆ ಯಶಸ್ವಿಗೆ ಮಾರ್ಗದರ್ಶನ ನೀಡಿ, ಪ್ರಗತಿಗೆ ಸಂಬಂಧಿಸಿದ ವರದಿಯನ್ನು ನೋಡಲ್ ಅಧಿಕಾರಿಗಳ ಮೂಲಕ ಅಕ್ಷರ ದಾಸೋಹ ಶಿಕ್ಷಣಾಧಿಕಾರಿಗೆ ನೀಡುತ್ತಾರೆ. ಅದನ್ನು ನಂತರ ಜಿಪಂ ಸಿಇಒ ಅವರಿಗೆ ತಲುಪಿಸುವುದಕ್ಕೆ ಮಾರ್ಗಸೂಚಿ ನೀಡಲಾಗಿದೆ.
ಚಿಕ್ಕಬಳ್ಳಾಪುರ
ಬೇಸಿಗೆ ಕಾಲದ ರಜಾ ದಿನಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಬಿಸಿಯೂಟ ಹಾಕಿಸಬೇಕೆಂಬ ಖಡಕ್ ಎಚ್ಚರಿಕೆಯನ್ನು ಜಿಲ್ಲೆಯ ಶಿಕ್ಷಣ ಇಲಾಖೆ ಶಿಕ್ಷಕರಿಗೆ ನೀಡಿದೆ. ಹಾಗೆಯೇ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳ ವಿವರಗಳನ್ನೂ ಪಡೆದುಕೊಳ್ಳುತ್ತಿದೆ. ಆದರೆ, ಬರದ ಸಂದರ್ಭದಲ್ಲಿ ಕೈಗೊಳ್ಳುತ್ತಿರುವ ಬಿಸಿಯೂಟದ ಬಗ್ಗೆ ಯಾವುದೇ ವಿಶೇಷ ಕಾಳಜಿ ವಹಿಸಲಾಗುತ್ತಿಲ್ಲ. ಪ್ರತಿದಿನ ಬೆಳಗ್ಗೆ ಶಾಲೆಗೆ ಆಗಮಿಸಿ ಹಾಜರಾದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಡುಗೆ ತಯಾರಿಸಲು ಅಡುಗೆ ಸಿಬ್ಬಂದಿಗೆ ತಿಳಿಸಬೇಕಷ್ಟೇ. ಹಾಜರಾಗುವ ವಿದ್ಯಾರ್ಥಿಗಳಿಗಷ್ಟೆ ಊಟ ಹಾಕಲಾಗುತ್ತಿದೆ. ಬಿಸಿಯೂಟಕ್ಕೆ ವಿದ್ಯಾರ್ಥಿಗಳು ಬಾರದೇ ಇರುವ ಶಾಲೆಗಳು ಇಲ್ಲದಿದ್ದರೂ ಅಲ್ಪ ಪ್ರಮಾಣದಲ್ಲಿ ವಿದ್ಯಾರ್ಥಿಗಳ ಗೈರು ಹಾಜರಿ ಸಹಜವಾಗಿ ಕಂಡು ಬರುತ್ತಿದೆ. ಇದರಿಂದ ಬಿಸಿಯೂಟ ಉಳಿದು, ಬೇರೆಯವರಿಗೆ ಕೊಡುವಂಥದ್ದು ಅಲ್ಲಲ್ಲಿ ನಡೆಯುತ್ತಿದೆ. ಕೆಲ ಗ್ರಾಮಗಳಲ್ಲಿ ಬಿಸಿಯೂಟ ವ್ಯರ್ಥವಾಗಬಾರದೆಂದು ಕೂಲಿ ಕಾರ್ಮಿಕರು ಸೇವಿಸುತ್ತಿದ್ದಾರೆ.
ಬಳ್ಳಾರಿ
ಮಕ್ಕಳು ಹಸಿವಿನಿಂದ ಬಳಲದಂತೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದರೂ ಶಾಲೆಯಿಂದ ಅನತಿ ದೂರದಲ್ಲಿರುವ ಮಕ್ಕಳು ಹಾಗೂ ತೀರಾ ಬಡ ಮಕ್ಕಳು ಮಾತ್ರ ರಜೆಯ ದಿನಗಳಲ್ಲಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹೊಟ್ಟೆ ತುಂಬ ಉಣ್ಣುತ್ತಿದ್ದಾರೆ. ಕೆಲವು ಶಾಲೆಗಳದು ವಿಚಿತ್ರ ಪರಿಸ್ಥಿತಿ. ಇಲ್ಲಿ ಅಡುಗೆ ಸಿಬ್ಬಂದಿ ಅಡುಗೆ ಮಾಡಿಟ್ಟು ಮಕ್ಕಳಿಗೆ ಕಾಯುವ ಸ್ಥಿತಿ ಇದೆ. ಅಡುಗೆಯಾದ ಮೇಲೆ ಊಟಕ್ಕೆ ಬರುವಂತೆ ಜೋರಾಗಿ ಬೆಲ್ ಹೊಡೆಯಬೇಕು. ಆಗಲೂ ಮಕ್ಕಳು ಬಾರದಿದ್ದರೆ, ಊರಿಗೆ ಹೋಗಿ, ಕರೆತರಬೇಕು. ಬೆಳಗ್ಗೆ 10 ಗಂಟೆಗೆ ಶಾಲೆಗೆ ಬರುವ ಮಕ್ಕಳ ಸಂಖ್ಯೆಯನ್ನು ಆಧರಿಸಿ ಅಡುಗೆ ತಯಾರಿಸುತ್ತಾರೆ. ಬಿಸಿಯೂಟವನ್ನು ಇಸ್ಕಾನ್ಗೆ ವಹಿಸಿಕೊಟ್ಟಿರುವ ಶಾಲೆಗಳಲ್ಲಿ ಪರಿಸ್ಥಿತಿ ಚೆನ್ನಾಗಿದೆ. ಬೆರಳೆಣಿಕೆಯ ಶಾಲೆಯಲ್ಲಿ ಎಸ್ಡಿಎಂಸಿ ಸಹಕಾರ ತೋರುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾವೇರಿ
6 ಬರ ಪೀಡಿತ ತಾಲೂಕುಗಳ ಶಾಲೆಗಳಲ್ಲಿ ಬೇಸಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದ್ದರೂ ಎಲ್ಲ ಮಕ್ಕಳು ಇದರ ಪ್ರಯೋಜನ ಪಡೆಯುತ್ತಿಲ್ಲ. ಶಾಲಾ ಆವರಣದಲ್ಲಿ ಆಟವಾಡಲು ಬರುವ ಮಕ್ಕಳೇ ಬಿಸಿಯೂಟಕ್ಕೆ ಸೀಮಿತವಾಗುತ್ತಿದ್ದಾರೆ. ಇದರಿಂದ ಎಷ್ಟು ಮಕ್ಕಳಿಗೆ ಅಡುಗೆ ಸಿದ್ಧಪಡಿಸಬೇಕು ಎಂಬುದು ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿಗೆ ತಿಳಿಯುತ್ತಿಲ್ಲ. 17 ಶಾಲೆಗಳಲ್ಲಿ ಮಕ್ಕಳೇ ಬರುತ್ತಿಲ್ಲ. ಆದರೂ ಆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ನಿತ್ಯವೂ ಶಾಲೆಗೆ ಬಂದು ಹೋಗುವ ಅನಿವಾರ್ಯತೆ ಇದೆ.  ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಬಿಸಿಯೂಟಕ್ಕೆ ಅಷ್ಟಾಗಿ ಬೇಡಿಕೆ ಕಂಡುಬರುತ್ತಿಲ್ಲ.
ಕೊಪ್ಪಳ
ಬರಪೀಡಿತ ಪ್ರದೇಶದ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲಿ ನಡೆಸುತ್ತಿರುವ ಬಿಸಿಯೂಟಕ್ಕೆ ಮಕ್ಕಳನ್ನು ಕರೆತರುವುದೇ ದೊಡ್ಡ ಸಾಹಸ. ಶಾಲೆಗೆ ಮಕ್ಕಳನ್ನು ಕರೆತಂದು ಅಡುಗೆ ಮಾಡಿ ಉಣಬಡಿಸಬೇಕು ಎನ್ನುವಷ್ಟರಲ್ಲಿ ಹಲವರು ಕಾಲ್ಕಿತ್ತಿರುತ್ತಾರೆ. ಮಾಡಿದ ಅಡುಗೆಯನ್ನು ಪಕ್ಕದಲ್ಲಿರುವ ಬಡವರಿಗೆ ಅನಿವಾರ್ಯವಾಗಿ ನೀಡಲಾಗುತ್ತಿದೆ. ಕೆಲವೊಮ್ಮೆ ಆಡುಗೆ ಶುರು ಮಾಡಿದ ಮೇಲೆ ಮಕ್ಕಳು ಬರುತ್ತಾರೆ. ಆಗ ಮತ್ತೆ ಅಡುಗೆ ಸಿದ್ಧಪಡಿಸಬೇಕು! ಇದು ಜಿಲ್ಲೆಯಾದ್ಯಂತ ಕಾಣಸಿಗುವ ಸಾಮಾನ್ಯ ಸಮಸ್ಯೆ. ನಿತ್ಯವೂ ಶಿಕ್ಷಕರು ಗ್ರಾಮದಲ್ಲಿ ಸುತ್ತಾಡಿ ಮಕ್ಕಳನ್ನು ಕರೆದು ತರಬೇಕಾದ ಪರಿಸ್ಥಿತಿ ಹಲವು ಗ್ರಾಮಗಳಲ್ಲಿ ಇದೆ. ಮಕ್ಕಳ ಹಾಜರಾತಿ ಕಡಿಮೆಯಾದಾಗ ಸುತ್ತಲಿನ ನಿವಾಸಿಗಳನ್ನು ಕರೆದು ಊಟ ಕೊಟ್ಟ ಘಟನೆಗಳೂ ನಡೆದಿವೆ.
ಉತ್ತರ ಕನ್ನಡ
ಮೂರು ತಾಲೂಕುಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಒಬ್ಬರೇ ಶಿಕ್ಷಕರಿರುವ ಶಾಲೆಗಳಲ್ಲಿ ಪರಿಸ್ಥಿತಿ ಸ್ಪಲ್ಪ ಕಷ್ಟಕರವಾಗಿದೆ. ಅವರು ರಜೆ ಹೋಗಬೇಕಾದಲ್ಲಿ ಬಿಸಿಯೂಟ ಸಿದ್ಧಪಡಿಸುವವರಿಗೇ ಜವಾಬ್ದಾರಿ ವಹಿಸಬೇಕು. ಹೀಗಾಗಿ ಬಿಸಿಯೂಟ ನಿಂತ ಉದಾಹರಣೆ ಇಲ್ಲ. ಈ ಮೂರು ತಾಲೂಕುಗಳ ಶೇ. 27 ರಷ್ಟು ಶಾಲೆಗಳಲ್ಲಿ ಬರ ನಿರ್ವಹಣೆ ಬಿಸಿಯೂಟ ಯೋಜನೆ ಬೇಡ ಎಂದು ಎಸ್ಡಿಎಂಸಿ ಹಾಗೂ ಸ್ಥಳೀಯರು ಲಿಖಿತವಾಗಿ ನೀಡಿದ್ದಾರೆ. ಮುಂಡಗೋಡ ತಾಲೂಕಿನ ಜೇನಮುರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಊಟಕ್ಕೆ ಬರುವ ಮಕ್ಕಳಿಗೆ ಹಲವು ಕ್ರೀಡಾ ಸಲಕರಣೆಗಳನ್ನು ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ.
ಯಾದಗಿರಿ
ಬಹುತೇಕ ಶಾಲೆಗಳಲ್ಲಿ ಅಡುಗೆ ಅನಿಲ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಕಟ್ಟಿಗೆ, ಸಿಮೆಎಣ್ಣೆ ಬಳಸಿ ಅಡುಗೆ ಮಾಡಲಾಗುತ್ತಿದೆ. ಇನ್ನು ಕೆಲವೆಡೆ ಮಕ್ಕಳನ್ನು ಬಿಸಿಯೂಟಕ್ಕೆ ಕರೆತರಲು ಎಸ್ಡಿಎಂಸಿ ಮತ್ತು ಅಡುಗೆ ಸಹಾಯಕರನ್ನು ಬಳಸಿಕೊಳ್ಳಲಾಗುತ್ತಿದೆ. ಕೊಡೆಕಲ್, ಕೊಂಕಲ್ ಹಾಗೂ ಸುರಪುರಿನ ಕೆಲವು ಶಾಲೆಗಳಲ್ಲಿ ಮಕ್ಕಳು ಹೆಚ್ಚಾಗಿ ಬರದಿರುವುದು ಕಂಡುಬಂದಿದೆ.
ಚಾಮರಾಜನಗರ
ಮಕ್ಕಳಿಗೆ ಈ ಯೋಜನೆ ವರವಾಗಿದೆ. ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಭಾಗಶಃ ಪ್ರದೇಶವನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಯೋಜನೆ ಜಾರಿಯಲ್ಲಿದೆ. ಬಹುತೇಕ ಮಕ್ಕಳು ಶಾಲೆಗೆ ರಜೆ ಇರುವುದರಿಂದ ಹಾಜರಾಗುತ್ತಿಲ್ಲ. ತೀರಾ ಬಡತನ ಮತ್ತು ಹಿಂದುಳಿದ ಪ್ರದೇಶದಲ್ಲಿರುವ ಮಕ್ಕಳು ಹಾಗೂ ಗುಡ್ಡಗಾಡು ಪ್ರದೇಶದ ಶಾಲೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. 35ಕ್ಕಿಂತ ಹೆಚ್ಚಿನ ಮಕ್ಕಳು ಹಾಜರಾದರೆ ಅಂಥ ಮಕ್ಕಳ ಭಾವಚಿತ್ರ ಸಹಿತ ದಾಖಲೆ ಸಂಗ್ರಹಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ.
ಧಾರವಾಡ
ಬಿಸಿಯೂಟ ಯೋಜನೆಗೆ ಮಕ್ಕಳು ಸ್ಪಂದಿಸದ ಕಾರಣ ನಿಯೋಜಿತ ಶಿಕ್ಷಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಗ್ರಾಮೀಣ ಹಾಗೂ ಕೊಳಚೆ ಪ್ರದೇಶಗಳಲ್ಲಿ ಒಂದಿಷ್ಟು ಮಕ್ಕಳನ್ನು ಕರೆತಂದು ಬಿಸಿಯೂಟ ಉಣಬಡಿಸಿದರೆ, ನಗರದಲ್ಲಂತೂ ಬಿಸಿಯೂಟ ಯೋಜನೆಗೆ ಉಸ್ತುವಾರಿ ವಹಿಸಿದ ಪ್ರಧಾನ ಗುರುಗಳಿಗೆ ಕಷ್ಟ. ಬಿಸಿಯೂಟ ಯೋಜನೆ ವೀಕ್ಷಿಸಲು ಸಮೀಪದ ಕಮಲಾಪುರ, ಸೈದಾಪುರ, ಸಾಧನಕೇರಿ ಶಾಲೆಗಳಿಗೆ ಹೋದಾಗ, ಮೈದಾನದಲ್ಲಿ ಆಟವಾಡುತ್ತಿದ್ದ ಐದಾರು ಮಕ್ಕಳನ್ನೇ ಒತ್ತಾಯಪೂರ್ವಕವಾಗಿ ಕರೆದು ಊಟ ಹಾಕುವ ದೃಶ್ಯಗಳು ಕಂಡು ಬಂದವು. ಹಲವು ಶಾಲೆಗಳಲ್ಲಿ ಮಕ್ಕಳು ಬಾರದೆ, ಅಡುಗೆ ಸಹಾಯಕರೇ ಬಿಸಿಯೂಟ ಹಾಳಾಗಬಾರದೆಂದು ತಮ್ಮ ಮನೆಗೆ ಒಯ್ಯುತ್ತಾರೆ ಎಂಬ ಆರೋಪವಿದೆ. ಈ ಯೋಜನೆ ನಿರೀಕ್ಷಿತ ಫಲ ನೀಡುತ್ತಿಲ್ಲ. ಶಾಲೆಯಲ್ಲಿ ಉಳಿದ ಬಸಿಯೂಟವನ್ನು ಶಿಕ್ಷಕರು ಅನಿವಾರ್ಯವಾಗಿ ದನ-ಕರುಗಳಿಗೆ ನೀಡುವಂತಾಗಿರುವುದು ಸೋಜಿಗದ ಸಂಗತಿ.
ರಾಯಚೂರು
ನೀರಾವರಿ ಪ್ರದೇಶ ಹೊರತುಪಡಿಸಿ ಮಳೆಯಾಧಾರಿತ ಪ್ರದೇಶದಲ್ಲಿರುವ ಶಾಲೆಗಳಲ್ಲಿ ಮಾತ್ರ ಬಿಸಿ ಯೂಟ ಯೋಜನೆ ಜಾರಿಯಾಗಿದೆ.  ಇಲ್ಲೂ ಮಕ್ಕಳ ಹಾಜರಾತಿ ಕೊರತೆ ಕಂಡುಬಂದಿದೆ. ಬಿಸಿಯೂಟ ಸೇವನೆಗೆ ಆಗಮಿಸುವ ವಿದ್ಯಾರ್ಥಿಗಳ ಸರಾಸರಿ ಸಂಖ್ಯೆಯಾಧರಿಸಿ ಅಡುಗೆ ತಯಾರಿಸಲಾಗುತ್ತಿದೆ.  ಪ್ರತಿ ಶಾಲೆಯ ಶಿಕ್ಷಕರೊಬ್ಬರಿಗೆ ಬಿಸಿಯೂಟದ ಹೊಣೆ ವಹಿಸಿರುವುದರಿಂದ ಯೋಜನೆಗೆ ಅಡಚಣೆಯಾಗಿಲ್ಲ.  ಎಸ್ಡಿಎಂಸಿ ಮತ್ತು ಗ್ರಾಮಗಳ ಜನರ ಆಸಕ್ತಿ ಅಷ್ಟಕ್ಕಷ್ಟೇ. ಮಕ್ಕಳನ್ನು ಕರೆತರುವ ನಿಟ್ಟಿನಲ್ಲಿ ಯಾವುದೇ ರೀತಿಯ ವಿಶೇಷ ಕಾರ್ಯಕ್ರಮ ರೂಪಿಸುವ ಪ್ರಯತ್ನ ಮಾಡಿಲ್ಲ.
ಮೈಸೂರು
ನಾಲ್ಕು ತಾಲೂಕುಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಚಾಲ್ತಿಯಲ್ಲಿದೆ. ಎಷ್ಟು ಮಕ್ಕಳು ಬರುತ್ತಾರೆ ಎಂಬ ಆಧಾರದ ಮೇಲೆ ಬಿಸಿಯೂಟ  ತಯಾರಿಸಲಾಗುತ್ತದೆ. ಬಲವಂತ ಇಲ್ಲದಿದ್ದರೂ ಶಾಲೆಗೆ ಬರುವವರಿಗೆ ಬಿಸಿಯೂಟ ನೀಡಲೇಬೇಕು. ಬರಪೀಡಿತ ಪ್ರದೇಶದ ಶಾಲೆಗಳಲ್ಲಿ ಯಾವುದಾದರೂ ವಿದ್ಯಾರ್ಥಿಗೆ ಬಿಸಿಯೂಟ ನೀಡುತ್ತಿಲ್ಲ ಎಂಬ ಬಗ್ಗೆ ಪೋಷಕರು ಮಾಹಿತಿ ನೀಡಿದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ, ಮಾಹಿತಿ ನೀಡಲಾಗಿದೆ.
ಹಾಸನ
ಬರದ ಬೇಸಿಗೆ ಬಿಸಿಯೂಟವನ್ನು ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮಾಂತರ ಪ್ರದೇಶದಲ್ಲಿ ಯಶಸ್ವಿಯಾಗಿ ನೀಡಲಾಗುತ್ತಿದೆ.  ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿಬ್ಬಂದಿಗಳನ್ನು ಅಣಿಗೊಳಿಸಿದೆ.  ಬಿಸಿಯೂಟ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮತ್ತು  ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತಯರ  ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಹಾಗೂ  ಸ್ಥಳೀಯ ಜನರ ನೆರವು ಪಡೆದು ಬಿಸಿಯೂಟಕ್ಕೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಕನಿಷ್ಠ 10ಕ್ಕಿಂತ ಮೇಲ್ಪಟ್ಟು ಮಕ್ಕಳು ಬರುವ ಶಾಲೆಗಳಲ್ಲಿ ಮಾತ್ರ ಬಿಸಿಯೂಟ ನೀಡಲಾಗುತ್ತಿದೆ.
ರಾಮನಗರ
ಬೇಸಿಗೆ ಪ್ರಾರಂಭದಲ್ಲಿ ಮಕ್ಕಳು ರಜೆಯ ಮಜ ಅನುಭವಿಸುತ್ತಿದ್ದರು. ಹೀಗಾಗಿ ಮಧ್ಯಾಹ್ನದ ಬಿಸಿಯೂಟಕ್ಕೆ ಹಾಜರಿ ಕುಸಿದಿತ್ತು. ಕಳೆದೆರಡು ವಾರದಿಂದ ಮಕ್ಕಳ ಹಾಜರಾತಿ ಪ್ರಮಾಣ ಏರುಗತಿಯಲ್ಲಿದೆ. ಇದಕ್ಕೆ ಅಧಿಕಾರಿಗಳ ಒತ್ತಡ, ಶಿಕ್ಷಕರು ವಹಿಸಿದ ಕಾಳಜಿಯೇ ಕಾರಣ ಎನ್ನಲಾಗಿದೆ.  ಬಿಸಿಯೂಟಕ್ಕೆ ಮಕ್ಕಳೇ ಬರುತ್ತಿಲ್ಲವೆಂದು ಎಸ್ಡಿಎಂಸಿ ಮೂಲಕ ನಿರ್ಣಯ ಕೈಗೊಂಡು, ಕಾರ್ಯಕ್ರಮ ಸ್ಥಗಿತಕ್ಕೆ ಮುಂದಾಗಿದ್ದ ಜಿಲ್ಲೆಯ 30 ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅಧಿಕಾರಿಗಳ ಒತ್ತಡಕ್ಕೆ ಮಣಿದ ಶಿಕ್ಷಕರು ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆತರುವ ಪ್ರಯತ್ನ ನಡೆಸಿದ್ದಾರೆ. ಈ ಕಾರ್ಯಕ್ರಮದ ಬಳಿಕ ಶೂನ್ಯ ಹಾಜರಾತಿ ಶಾಲೆಯೇ ಇಲ್ಲದಂತಾಗಿದೆ.  ಈ ಜಿಲ್ಲೆಯ ಇರುಳಿಗರ ಕಾಲೊನಿಯ ಸರ್ಕಾರಿ ಶಾಲೆಯಲ್ಲಿ ಶೇ.100ರಷ್ಟು ಹಜಾರಿ ಇದೆ.
ಶಿವಮೊಗ್ಗ
ಹೊಸನಗರ ತಾಲೂಕು ಹೊರತುಪಡಿಸಿ ಬೇರೆಲ್ಲೂ ಈ ವ್ಯವಸ್ಥೆಯ ಬೇಡಿಕೆ ಕಂಡುಬಂದಿಲ್ಲ.  ಬಿಸಿಯೂಟ ಆರಂಭಿಸಿರುವ ಎಲ್ಲ ಕಡೆಯೂ ಶಾಲಾ ಎಸ್ಡಿಎಂಸಿಯವರು ಸಹಕಾರ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ಬಿಸಿಯೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳು ಬಿಸಿಯೂಟಕ್ಕೆ ಬಾರದೇ ಇರುವ ಕಡೆ ಒತ್ತಾಯ ಮಾಡಿ ಶಾಲೆಗೆ ಬಿಸಿಯೂಟಕ್ಕೆಂದು ಕರೆ ತರಲು ಸಾಧ್ಯವಿಲ್ಲ ಎಂದಿದ್ದಾರೆ ಅಧಿಕಾರಿಗಳು.
ಚಿಕ್ಕಮಗಳೂರು
ಕಡೂರು ತಾಲೂಕಿನಲ್ಲಿ ಮಾತ್ರ ಬಿಸಿಯೂಟ ಯೋಜನೆ ಜಾರಿಯಲ್ಲಿದೆ.   ಬಿಸಿಯೂಟಕ್ಕಾಗಿ ಶಾಲೆಗೆ ಬರುವಂತೆ ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ರಾಜ್ಯ ಸರ್ಕಾರ ಹೇಳಿದೆ. ಆದ್ದರಿಂದ ಶಿಕ್ಷಕರಾಗಲಿ, ಶಾಲಾಭಿವೃದ್ಧಿ ಸಮಿತಿಯವರಾಗಲಿ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಬರುವ ಕೆಲಸಕ್ಕೆ ಕೈಹಾಕುತ್ತಿಲ್ಲ. ಮಕ್ಕಳು ಸ್ವಇಚ್ಛೆಯಿಂದ ಶಾಲೆಗೆ ಬಂದರೆ ಮಾತ್ರ ಅವರಿಗೆ ಬಿಸಿಯೂಟ ನೀಡಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.