ಕೈ ಕೊಟ್ಟ ಸಮೀಕ್ಷೆ ತಂದ ತಲ್ಲಣ

ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 13
ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಮುನ್ನವೇ ರಾಜ್ಯ ಕಾಂಗ್ರೆಸ್ನಲ್ಲಿ ತಲ್ಲಣ ತೀವ್ರಗೊಂಡಿದ್ದು, ಯಾವುದೇ ಕ್ಷಣದಲ್ಲಿ ಭಿನ್ನಮತ ಸ್ಫೋಟಿಸಿ ರಾಜಕೀಯ ಚಟುವಟಿಕೆ ಬಿರುಸುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ಇದಕ್ಕೆ ತುಪ್ಪ ಸುರಿವಂತೆ ಮೇ 20ಕ್ಕೆ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಆಪ್ತ ಸಚಿವರಲ್ಲಿ ಒಬ್ಬರಾದ ವಿ. ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ರಾಜ್ಯದಲ್ಲಿ ನಿರೀಕ್ಷಿತ ಗೆಲವು ಅಸಾಧ್ಯ ಎಂಬ ಸುಳಿವು ದೊರೆಯುತ್ತಿದ್ದಂತೆ ಸಮನ್ವಯ ಸಮಿತಿ ಸಭೆ ಕರೆಯಲಾಗಿದೆ. ರಾಜ್ಯ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದು, ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಲಿದೆ.
ಆದರೆ ಅದಕ್ಕೆ ಮುನ್ನವೇ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮೈಸೂರಿನಲ್ಲಿ ಸಂಪುಟ ಪುನಾರಚನೆ ಮಾತಾಡಿದ್ದಾರೆ. ಸಂಪುಟ ಪುನಾರಚನೆ ಸಂದರ್ಭದ ಆಂತರಿಕ ಭಿನ್ನಮತವನ್ನು ಮುಖ್ಯಮಂತ್ರಿ ಶಮನಗೊಳಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಭಿನ್ನಮತ ಇದೆ ಎಂಬುದನ್ನೂ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.
ವರದಿ ಸ್ಫೋಟ: ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನೀಡಿರುವ ಇನ್ನೊಂದು ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಬಿಗಿ ವಾತಾವರಣ ಸೃಷ್ಟಿಸಿದೆ. ಸಮೀಕ್ಷೆಗಳು ಏನೇ ಹೇಳಿದರೂ ರಾಜ್ಯದಲ್ಲಿ ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಜಯ ಗಳಿಸುತ್ತದೆ ಎಂದಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವರದಿ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳಿಂದ ವರದಿ ಬಂದಿದೆ. ಇದನ್ನು ಆಧರಿಸಿ ಪರಾಮರ್ಶೆ ನಡೆಸುತ್ತೇವೆ ಎಂದಿದ್ದಾರೆ. ಇದು ಸರ್ಕಾರ ಹಾಗೂ ಪ್ರದೇಶ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಸಾಧನೆ ಪರಾಮರ್ಶೆ: ಜತೆಗೆ ವರ್ಷ ಪೂರೈಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಹೋದ್ಯೋಗಿಗಳ ಕರ್ತವ್ಯ ಪರಾಮರ್ಶೆಯೂ ನಡೆಯಲಿದೆ. ಕೆಲ ಸಚಿವರ ವರ್ತನೆ ಮತ್ತು ಸಾಮರ್ಥ್ಯದ ಬಗ್ಗೆ ಹೈಕಮಾಂಡ್ ಈಗಾಗಲೇ ವರದಿ ತರಿಸಿಕೊಂಡಿದೆ. ಚುನಾವಣೆಯಲ್ಲಿ ಅವರ 'ಪಾಲ್ಗೊಳ್ಳುವಿಕೆ' ಬಗ್ಗೆ ರಹಸ್ಯ ವರದಿ ಲಭ್ಯವಾಗಿದೆ. ಇದು ಹಲವರಲ್ಲಿ ನಡುಕ ಮೂಡಿಸಿದೆ.
ನೇಮಕ: ನಿಗಮ, ಮಂಡಳಿ ನೇಮಕದ ಬಗ್ಗೆಯೂ ಈ ಸಭೆಯಲ್ಲಿ ಅಂತಿಮ ತೀರ್ಮಾನವಾಗುವ ಸಾಧ್ಯತೆ ಇದೆ. ಈ ಪ್ರಕ್ರಿಯೆಗೆ ಕೈ ಹಾಕಿದರೆ ಜೇನುಗೂಡಿಗೆ ಕೈ ಹಾಕಿದಂತಾಗುತ್ತದೆ ಎಂದು ಸುಮ್ಮನಿದ್ದ ಮುಖ್ಯಮಂತ್ರಿ ಈಗ ಅಂತಿಮ ನಿರ್ಧಾರ ಕೈಗೊಳ್ಳಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ. ಮೇಲ್ಮನೆಗೆ ನೇಮಕ, ಅಭ್ಯರ್ಥಿ ಆಯ್ಕೆ ಕುರಿತೂ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಡವರ ಪರ: ದಿಗ್ವಿಜಯ್ ಸಿಂಗ್ ಅವರನ್ನು ಬರಮಾಡಿಕೊಂಡ ನಂತರ ಸುದ್ದಿಗಾರರ ಜತೆಮಾತನಾಡಿದ ಪರಮೇಶ್ವರ, 'ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಸಂಪುಟ ಸದಸ್ಯರು ಕರ್ತವ್ಯ ನಿರ್ವಹಿಸಿದ್ದಾರೆ. ಬಡವರು, ಸಾಮಾಜಿಕ ನ್ಯಾಯದ ಪರವಾಗಿದ್ದಾರೆ. ಸರ್ಕಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ನಾನು ಸರ್ಕಾರದ ಭಾಗವಾಗುವ ವಿಚಾರವನ್ನು ಸೋನಿಯಾ ಗಾಂಧಿ ನಿರ್ಧರಿಸುತ್ತಾರೆ' ಎಂದರು.
ಭಿನ್ನರ ಭೇಟಿ
ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿರುವ ದಿಗ್ವಿಜಯ್ ಸಿಂಗ್ ಅವರನ್ನು ಶಾಸಕ ಕೋಳಿವಾಡ ಸೇರಿ ಅನೇಕ ಭಿನ್ನರು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರದ ಸಮನ್ವಯ ಸಮಿತಿ ಸಭೆ ಹಲವು ಕುತೂಹಲ ಸೃಷ್ಟಿಸಿದೆ.
ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ. ಭಾರತದಂಥ ದೊಡ್ಡ ದೇಶದಲ್ಲಿ 500ರಿಂದ 1000 ಜನರನ್ನು ಮಾದರಿಯಾಗಿ ತೆಗೆದುಕೊಳ್ಳಲಾಗಿದೆ. ಇದು ಒಟ್ಟಾರೆ ಫಲಿತಾಂಶಕ್ಕೆ ಮಾನದಂಡವಲ್ಲ. ನಮ್ಮ ಪಕ್ಷ ಆಂತರಿಕ ಸಮೀಕ್ಷೆ ನಡೆಸಿದ್ದು 18 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ.
- ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ
ಲೋಕಸಭಾ ಚುನಾವಣೆಯನ್ನು ನಾವು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ. ಹೀಗಾಗಿ ಸೋಲು-ಗೆಲವನ್ನು ಸಾಮೂಹಿಕ ನಾಯಕತ್ವದಲ್ಲೇ ಸ್ವೀಕರಿಸುತ್ತೇವೆ. ಫಲಿತಾಂಶವನ್ನು ಪಕ್ಷದ ಎಲ್ಲ ನಾಯಕರೂ ಸಮಾನವಾಗಿ ಸ್ವೀಕರಿಸುತ್ತಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


