ಪ್ರಧಾನ ಸುದ್ದಿ

ಅಧಿಕಾರ ಮುಖ್ಯವಲ್ಲ, ಹೊಣೆಗಾರಿಕೆ ನಿಭಾಯಿಸಲು ಸಮರ್ಪಿಸಿಕೊಳ್ಳೋಣ

ಅಧಿಕಾರ ಮುಖ್ಯವಲ್ಲ, ಹೊಣೆಗಾರಿಕೆ ನಿಭಾಯಿಸಲು ಸಮರ್ಪಿಸಿಕೊಳ್ಳೋಣ
Published On :

ದೇಶದ 125 ಕೋಟಿ ಜನರ ನಿರೀಕ್ಷೆಗಳನ್ನು ಹೊತ್ತು ಇಲ್ಲಿಗೆ ಬಂದಿದ್ದೇವೆ. ಹುದ್ದೆ, ಅಧಿಕಾರ ಮುಖ್ಯವಲ್ಲ ಅವುಗಳ ಬೆನ್ನತ್ತದೆ ಜನ ಹೊರಿಸಿರುವ ಹೊಣೆಗಾರಿಕೆ ನಿಭಾಯಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ
ನವದೆಹಲಿ:
'ಹೊಣೆಗಾರಿಕೆಯ ಹೊಸ ಪರ್ವ ಶುರುವಾಗಿದೆ. ಅಧಿಕಾರ, ಹುದ್ದೆ ಬೆನ್ನುಹತ್ತದೆ ಜನ ನಮ್ಮ ಮೇಲಿಟ್ಟಿರುವ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಸಮರ್ಪಣಾ ಮನೋಭಾವದಿಂದ ದುಡಿಯೋಣ' ಬಿಜೆಪಿ ಸಂಸದೀಯ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ  ಸಂಸದರಿಗೆ ಹೇಳಿದ ಕಿವಿಮಾತು ಇದು. ಮೊದಲ ಸಲ ಸಂಸತ್ತು ಪ್ರವೇಶಿಸಿದ ಮೋದಿ 30 ನಿಮಿಷ ಅತ್ಯಂತ ಭಾವುಕರಾಗಿ ಮಾತನಾಡಿದರು.

ನನಗೆ ದೇಶ ಮುನ್ನಡೆಸುವ ಹೊಣೆ ವಹಿಸಿದ ಎಲ್ಲರಿಗೂ ಆಭಾರಿ. ಅದರಲ್ಲೂ ಮುಖ್ಯವಾಗಿ ಆಡ್ವಾಣಿಜಿ ಮತ್ತು  ರಾಜನಾಥ್‌ಜಿ ಅವರಿಗೆ ಕೃತಜ್ಞತೆ ಸಲ್ಲಿಸುವೆ. ವಾಜಪೇಯಿ ಅವರ ಆರೋಗ್ಯ ಚೆನ್ನಾಗಿದ್ದಿದ್ದರೆ ಅವರೂ ಈ ಸಭೆಯಲ್ಲಿ ಪಾಲ್ಗೊಂಡು ನಮ್ಮ ಸಂಭ್ರಮವನ್ನು ಇಮ್ಮಡಿಸುತ್ತಿದ್ದರು.

ಸಂಸತ್ತು ಪ್ರಜಾಪ್ರಭುತ್ವದ ದೇಗುಲ. ನಾವು ದೇಶದ 125 ಕೋಟಿ ಜನರ ನಿರೀಕ್ಷೆಗಳನ್ನು ಹೊತ್ತು ಇಲ್ಲಿಗೆ ಬಂದಿದ್ದೇವೆ. ಹುದ್ದೆ, ಅಧಿಕಾರ ನಮಗೆ ಮುಖ್ಯವಲ್ಲ. ಅವುಗಳ ಬೆನ್ನತ್ತದೆ ಜನ ಹೊರಿಸಿರುವ ಹೊಣೆಗಾರಿಕೆಯನ್ನು ನಿಭಾಯಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ.

ನಾನೊಬ್ಬ ಶಿಸ್ತಿನ ಸಿಪಾಯಿ. ಕಳೆದ ವರ್ಷದ ಸೆಪ್ಟೆಂಬರ್ 13ರಂದು ನನಗೆ ಹೊಣೆ ವಹಿಸಲಾಯಿತು. ಸೆಪ್ಟೆಂಬರ್ 15ರಿಂದಲೇ ಕಾರ್ಯಪ್ರವೃತ್ತನಾದೆ. ಮೇ 10ರಂದು ಚುನಾವಣೆ ಪ್ರಚಾರ ಕಾರ್ಯ ಮುಗಿದ ಬಳಿಕ ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ ಅವರಿಗೆ ವರದಿ ನೀಡಿದೆ. 2019ರಲ್ಲಿ ನಾವು ಪುನಃ ಭೇಟಿಯಾದಾಗ ನನ್ನ ಸರ್ಕಾರದ ರಿಪೋರ್ಟ್ ಕಾರ್ಡ್ ನಿಮ್ಮ ಮುಂದಿಡುವೆ.

ನಾನು ಸಂಸತ್ ಭವನವನ್ನು ಮೊದಲ ಸಲ ಪ್ರವೇಶಿಸಿದ್ದೇನೆ. ನನ್ನ ವಿಚಾರದಲ್ಲಿ ಹೀಗೆಯೇ ಆಗುತ್ತಿದೆ, ನಾನು ಗುಜರಾತ್ ವಿಧಾನಸಭೆ ಪ್ರವೇಶಿಸಿದ್ದು ಕೂಡ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕವೇ.

ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರು, ಸಂವಿಧಾನ ನೀಡುವ ಮೂಲಕ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹಿರಿಯರಿಗೆ ನನ್ನ ಸೆಲ್ಯೂಟ್. ಒಬ್ಬ ಬಡವನ ಮಗ ಇವತ್ತು ಪ್ರಧಾನಿಯಾಗುತ್ತಿದ್ದಾನೆ. ಇದು ನಮ್ಮ ಸಂವಿಧಾನದ ಅತಿದೊಡ್ಡ ಶಕ್ತಿ.

ಈ ಚುನಾವಣೆ ಪ್ರಜಾಪ್ರಭುತ್ವದಲ್ಲಿ ದೇಶದ ಸಾಮಾನ್ಯ ಜನ ಇಟ್ಟುಕೊಂಡಿದ್ದ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಯಾವುದೇ ರಾಷ್ಟ್ರಕ್ಕಾದರೂ ಇದು ದೊಡ್ಡ ಸಂಗತಿ. ಸರ್ಕಾರ ಬಡವರ ಕುರಿತು ಚಿಂತಿಸಬೇಕು ಎನ್ನುವವ ನಾನು. ಅಂತಿಮವಾಗಿ ಸರ್ಕಾರ ಎಂದರೆ ಯಾರು? ಬಡವರೇ ಅಲ್ಲವೆ? ಸರ್ಕಾರ ಬಡವರ ಸಮಸ್ಯೆಗಳನ್ನು ಅರಿಯಬೇಕು. ಹೊಸ ಸರ್ಕಾರ ಬಡವರ ಪರವಾಗಿ ದುಡಿಯಲಿದೆ. ಕೋಟಿ ಕೋಟಿ ಯುವಕರ ಆಶೋತ್ತರ, ಸಹೋದರಿಯರು ಮತ್ತು ಮಾತೆಯರ ಭದ್ರತೆ, ಸುರಕ್ಷತೆ; ಗ್ರಾಮೀಣರು, ದಮನಿತರ ಅಭಿವೃದ್ಧಿಗೆ ನಮ್ಮ ಸರ್ಕಾರ ಮುಡಿಪು.

ನಮಗೆ ಸಿಕ್ಕಿರುವ ಜನಾದೇಶ ಆಡಳಿತ ವಿರೋಧಿ ಅಲೆ ಅಲ್ಲ. ಹೊಸ ಭರವಸೆ ಮತ್ತು ವಿಶ್ವಾಸದಿಂದ ಮತದಾರರು ನಮಗೆ ಅಧಿಕಾರ ನೀಡಿದ್ದಾರೆ. ಅವರ ನಿರೀಕ್ಷೆಗಳನ್ನು ಈಡೇರಿಸಲು ನಾವು ಶಕ್ತಿಮೀರಿ ಶ್ರಮಿಸಬೇಕು. ಜನಸಾಮಾನ್ಯರಲ್ಲಿ ಹೊಸ ಆಶಾಭಾವ ಮೂಡಿದೆ ಎನ್ನುವುದು ಈ ಫಲಿತಾಂಶದಿಂದಲೇ ಸ್ಪಷ್ಟ. 2013ರಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಸೇರಿದ್ದಾಗ 'ನಾವು ಮುನ್ನಡೆಯಲಿ, ಮುನ್ನಡೆಯದಿರಲಿ. ದೇಶವಂತೂ ಮುನ್ನಡೆಯುತ್ತಿದೆ' ಎಂದಿದ್ದೆ. ಅದರ ಫಲಿತವೇ ಈ ಫಲಿತಾಂಶ.

ಸಮಸ್ಯೆಗಳು ಎಲ್ಲರ ಬದುಕಿನಲ್ಲಿಯೂ ಇರುತ್ತವೆ. 2001ರ ಭೂಕಂಪದ ಬಳಿಕ ಗುಜರಾತ್ ಕತೆ ಮುಗಿದೇ ಹೋಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕ್ಷಿಪ್ರ ಅವಧಿಯಲ್ಲಿ ಗುಜರಾತ್ ತನ್ನ ಕಾಲ ಮೇಲೆ ತಾನು ನಿಂತುಕೊಂಡಿತು. ನಾವು ಆಶಾವಾದಿಯಾಗಿರಬೇಕು ಎನ್ನುವುದೇ ಇಡೀ ದೇಶಕ್ಕೆ ನಾನು ಹೇಳಲು
ಬಯಸಿರುವ ಮಾತು. ನಾವು ನಿರಾಶರಾಗಬೇಕಾದ ಪ್ರಮೇಯವೇ ಇಲ್ಲ. ನಮ್ಮಲ್ಲಿ ಅವಕಾಶಗಳಿಗೆ ಬರವಿಲ್ಲ.

ಎಲ್ಲರ ಅಭಿವೃದ್ಧಿಯೂ ಸರ್ಕಾರಕ್ಕೆ ಮುಖ್ಯ. ಹಾಗೆಯೇ ಪ್ರತಿಯೊಬ್ಬರ ಸಹಭಾಗಿತ್ವವೂ ಅಷ್ಟೇ ಅಗತ್ಯವಾದದ್ದು. ಎಲ್ಲ ಭಾರತೀಯರೂ ಒಂದೊಂದು ಹೆಜ್ಜೆ ಮುಂದಕ್ಕೆ ಇಟ್ಟರೆ ದೇಶ 125 ಕೋಟಿ ಹೆಜ್ಜೆ ಮುಂದಕ್ಕೆ ಇಟ್ಟಂತಾಗುತ್ತದೆ.

ನಾವು 2019ರಲ್ಲಿ ಭೇಟಿಯಾಗುವಾಗ ನಮ್ಮ ಸರ್ಕಾರದ ರಿಪೋರ್ಟ್ ಕಾರ್ಡ್ ಅನ್ನು ನಿಮ್ಮ ಮುಂದಿಡುವೆ.  ನಾನು ದೇಶಕ್ಕಾಗಿ ಬದುಕುವೆ.

ದೊಡ್ಡ ವ್ಯಕ್ತಿ ಎನ್ನುವ ಕಾರಣಕ್ಕಾಗಿ ನೀವು ಮೋದಿಯನ್ನು ನೋಡುತ್ತಿಲ್ಲ. ಪಕ್ಷದ ಹಿರಿಯ ನಾಯಕರು ನನ್ನನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಈ ಮಟ್ಟಕ್ಕೆ ಬೆಳೆಸಿದ್ದಾರೆ.

ಈ ಗೆಲವು ನಮ್ಮದಲ್ಲ. ಬಿಜೆಪಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಐದು ತಲೆಮಾರಿನ ನಾಯಕರ ತ್ಯಾಗ, ಕೋಟ್ಯಾಂತರ ಕಾರ್ಯಕರ್ತರ ಪರಿಶ್ರಮವಿದೆ. ಅವರೆಲ್ಲರಿಗೂ ವಂದಿಸುವೆ. ಯಾರೊಬ್ಬರೂ ಪಕ್ಷಕ್ಕಿಂತ ದೊಡ್ಡವರಲ್ಲ. ವಿಜಯೋತ್ಸವ ನಡೆಯುತ್ತಿದೆ. ಬೆನ್ನಲ್ಲಿಯೇ ಹೊಣೆಗಾರಿಕೆಯ ಹೊಸ ಪರ್ವವೂ ಶುರವಾಗಿದೆ.

ಸಾಂಪ್ರದಾಯಿಕ ಸೆಂಟ್ರಲ್ ಹಾಲ್‌ನಲ್ಲಿ ಬಿಜೆಪಿ ಸಂಸದೀಯ ಪಕ್ಷದ ನಾಯಕನನ್ನಾಗಿ ನನ್ನನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಕ್ಕೆ ನಾನು ಬಹಳಷ್ಟು ಧನ್ಯನಾಗಿದ್ದೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.