ಪ್ರಧಾನ ಸುದ್ದಿ

ಅಧಿಕಾರಶಾಹಿಯಲ್ಲಿ ಮೋದಿ ಸಂಚಲನ

ಅಧಿಕಾರಶಾಹಿಯಲ್ಲಿ ಮೋದಿ ಸಂಚಲನ
Published On :

ನವದೆಹಲಿ: ಪ್ರಧಾನಿಯಾಗುತ್ತಿದ್ದಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳನ್ನು ಭೇಟಿ ಮಾಡುವ ಮೂಲಕ ನರೇಂದ್ರ ಮೋದಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ.
ನೂತನ ಪ್ರಧಾನಿ ಎದುರು ಸಾದರಪಡಿಸಲು ತಮ್ಮ ಇಲಾಖೆಗೆ ಸಂಬಂಧಿಸಿ 20 ನಿಮಿಷದ ಪವರ್‌ಪಾಯಿಂಟ್ ಪ್ರೆಸೆಂಟೆಶೇನ್ ಸಿದ್ಧಪಡಿಸುವಂತೆ ಸಂಪುಟ ಕಾರ್ಯದರ್ಶಿ ಅಜಿತ್‌ಕುಮಾರ್ ಸೇಠ್ ಎಲ್ಲ 84 ಇಲಾಖೆಗಳ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಪ್ರತಿ ಕಾರ್ಯದರ್ಶಿಯೊಂದಿಗೂ ಮುಖಾಮುಖಿ ಭೇಟಿ ಮಾಡಲು ಮೋದಿ ಬಯಸಿದ್ದಾರೆ. ಕಾರ್ಯದರ್ಶಿಗಳು ಪ್ರಧಾನಿಯನ್ನು ನೇರವಾಗಿ ಭೇಟಿ ಮಾಡುವ ಅವಕಾಶ ಲಭಿಸುವುದು ತೀರಾ ಅಪರೂಪ. ಸಿಂಗ್ ತಮ್ಮ 10 ವರ್ಷದ ಅವಧಿಯಲ್ಲಿ ಒಮ್ಮೆಯೂ ಕಾರ್ಯದರ್ಶಿಗಳನ್ನು ಭೇಟಿ ಮಾಡಿರಲಿಲ್ಲ.
ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಯಾವುದೇ ಸಮಯ, ಯಾವುದೇ ಸ್ಥಳದಲ್ಲಿ ಸಭೆ ನಡೆಯಬಹುದು ಎಂದು ಸಂಪುಟ ಕಾರ್ಯದರ್ಶಿ ತಮ್ಮ ಸೂಚನೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ತಮ್ಮ ಇಲಾಖೆಗಳ ಹಿಂದಿನ ದಾಖಲೆಗಳು, ಹಾಲಿ ಸಮಸ್ಯೆಗಳು, ಮುಂದೆ ಕೈಗೊಳ್ಳಬೇಕಿರುವ ಯೋಜನೆಗಳ ಕುರಿತು ವರದಿ ಸಿದ್ಧಪಡಿಸುವ 'ಹೋಮ್‌ವರ್ಕ್‌'ನಲ್ಲಿ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ನಿರತರಾಗಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷಗಳ ಅವಧಿಯಲ್ಲಿ ಮೋದಿ ಅಧಿಕಾರಿಗಳ ಮೇಲೆ ಎಷ್ಟು ಬಿಗಿಹಿಡಿತ ಹೊಂದಿದ್ದರೊ ಅಷ್ಟೇ ಮುಕ್ತ ಸ್ವಾತಂತ್ರ್ಯವನ್ನೂ ನೀಡಿದ್ದರು. 'ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಗಾತ್ರ ಕುಗ್ಗಿಸುವ ಕುರಿತಾಗಿ ಅಭಿಪ್ರಾಯ ಸಲ್ಲಿಸುವಂತೆಯೂ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ' ಎಂದು ಮೂಲಗಳು ತಿಳಿಸಿವೆ.
ವಿಧೇಯಕಗಳಿಗೆ ಮರುಜೀವ: ಯುಪಿಎ-2 ಅವಧಿಯಲ್ಲಿ ಅನುಮೋದನೆಗೆ ಬಾಕಿ ಇದ್ದ, ರದ್ದಾಗಿರುವ ವಿಧೇಯಕಗಳಿಗೆ ಜೀವ ತುಂಬಲೂ ಮೋದಿ ತೀರ್ಮಾನಿಸಿದ್ದು, ಈ ಕುರಿತಾಗಿಯೂ ವರದಿ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ.
ಲಂಚ ನೀಡುವುದನ್ನೂ ಅಪರಾಧ ಎಂದು ಪರಿಗಣಿಸುವ, ಲಂಚ ಸ್ವೀಕಾರದ ವ್ಯಾಖ್ಯೆಯನ್ನು ವಿಸ್ತಾರಗೊಳಿಸುವ, ವಾಣಿಜ್ಯ ಸಂಘಟನೆಗಳನ್ನೂ ಲಂಚದ ವ್ಯಾಪ್ತಿಗೆ ಸೇರಿಸುವ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ವಿಧೇಯಕ 2013 ಒಳಗೊಂಡು 60 ವಿಧೇಯಕಗಳು ರಾಜ್ಯಸಭೆ ಅನುಮೋದನೆಗೆ ಬಾಕಿ ಇವೆ.
ಕರ್ನಾಟಕ, ಒಡಿಶಾ, ಹರ್ಯಾಣ, ದಾದರ್ ಮತ್ತು ನಗರ್ ಹವೇಲಿಯಲ್ಲಿನ ಇನ್ನಷ್ಟು ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಸಾಂವಿಧಾನಿಕ (ಪರಿಶಿಷ್ಟ ಜಾತಿ) ಅಧ್ಯಾಧೇಶ (ತಿದ್ದುಪಡಿ) ವಿಧೇಯಕ 2014 ಸಹ ಇದರಲ್ಲಿ ಸೇರಿದೆ. 68 ವಿಧೇಯಕಗಳನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಆದರೆ ಅನುಮೋದನೆ ಸಿಕ್ಕಿಲ್ಲ.
ಧೂಳಿನಿಂದ ಮೇಲೇಳಲಿದೆ ಕಡತ: ಆಹಾರ ಹಣದುಬ್ಬರ ತಡೆಯುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಮಿತಿ ಮೂರು ವರ್ಷ ಹಿಂದೆ ನೀಡಿದ್ದ ವರದಿಯನ್ನು ಪ್ರಧಾನಿ ಎದುರು ಮಂಡಿಸಲು ಗ್ರಾಹಕ ವ್ಯವಹಾರಗಳ ಇಲಾಖೆ ಸಿದ್ಧತೆ ನಡೆಸಿದೆ.
ಆಹಾರ ಪದಾರ್ಥಗಳ ಬೆಲೆ ಗಗನಕ್ಕೆ ಏರಿದಾಗ 2010ರಲ್ಲಿ ಡಾ.ಮನಮೋಹನ ಸಿಂಗ್ ಅವರು ಮೋದಿ ಅಧ್ಯಕ್ಷತೆಯಲ್ಲೇ ಮುಖ್ಯಮಂತ್ರಿಗಳು ಮತ್ತು ಪ್ರಮುಖ ಸಚಿವರನ್ನು ಒಳಗೊಂಡ ಕೋರ್ ಕಮಿಟಿ ರಚಿಸಿದ್ದರು. ಕಾಳಸಂತೆ ವಹಿವಾಟು ತಡೆಯಲು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವುದೂ ಸೇರಿದಂತೆ ಹಲವು ಶಿಫಾರಸುಗಳನ್ನು ಸಮಿತಿ ಮಾಡಿತ್ತು. ಯುಪಿಎ ಸರ್ಕಾರ ಅದನ್ನು ತಿರಸ್ಕರಿಸಲೂ ಇಲ್ಲ, ಅದರಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಆಸಕ್ತಿಯನ್ನೂ ತೋರಿಸಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.