ಕೋಮು ಸಾಮರಸ್ಯಕ್ಕೆ ಬರಲಿದೆ 'ಯುವ ಬ್ರಿಗೇಡ್'
ಮಂಗಳೂರು: ಸಮಾಜದಲ್ಲಿ ಪದೇ ಪದೆ ಶಾಂತಿಕದಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಅಂತ್ಯ ಹಾಕಲು ನಮೋ ಬ್ರಿಗೇಡ್ನ ಹೊಸ ಸಂಘಟನೆ 'ಯುವ ಬ್ರಿಗೇಡ್' ಮುಂದಾಗಲಿದೆ.
ನರೇಂದ್ರ ಮೋದಿಯನ್ನು ಪ್ರಧಾನಿ ಪಟ್ಟಕ್ಕೆ ತಂದದ್ದಾಯ್ತು, ಇನ್ನು ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಸೇರಿದಂತೆ ಪ್ರಮುಖ ನಾಲ್ಕು ಆಯಾಮಗಳಲ್ಲಿ ರಾಷ್ಟ್ರಕಟ್ಟುವ ಕೆಲಸಕ್ಕೆ ನಮೋ ಬ್ರಿಗೇಡ್ ಪರಿವರ್ತಿತ 'ಯುವ ಬ್ರಿಗೇಡ್' ಯುವ ಸಂಘಟನೆ ಶ್ರಮಿಸಲಿದೆ. 'ಅಶಾಂತಿ ವಾತಾವರಣ ಇರುವಲ್ಲಿಗೆ ತೆರಳಿ ಉಭಯ ಮುಖಂಡರ ಮನವೊಲಿಸುವ ಕೆಲಸ ಮಾಡುತ್ತೇವೆ. ಜಾತಿಗಳ ನಡುವೆ ವೈಷಮ್ಯ ಬದಲು ಒಗ್ಗಟ್ಟು ಮುಖ್ಯ. ಚುನಾವಣೆಯಲ್ಲಿ ಹೇಗೆ ಎಲ್ಲರೂ ಮೋದಿಯನ್ನು ಬೆಂಬಲಿಸಿದರೋ ಹಾಗೆ ನಿತ್ಯ ಜೀವನದಲ್ಲೂ ಸೌಹಾರ್ದದಿಂದ ರಾಷ್ಟ್ರಕ್ಕಾಗಿ ಜೀವಿಸಬೇಕು. ಇಲ್ಲಿ ಭಿನ್ನಮತ, ವಿವಾದಕ್ಕಿಂತ ನೆಮ್ಮದಿಯ ಜೀವನ, ರಾಷ್ಟ್ರಹಿತ ಮುಖ್ಯ ಎಂಬುದನ್ನು ಸಂಘಟನೆ ಮನವರಿಕೆ ಮಾಡಲಿದೆ' ಎನ್ನುತ್ತಾರೆ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ. 'ಮೋದಿ ಪ್ರಮಾಣ ವಚನ ಸ್ವೀಕರಿಸುವ ದಿನದಂದೇ ನಮೋ ಬ್ರಿಗೇಡ್ ವಿಸರ್ಜನೆಯಾಗಲಿದೆ. ಆ ಬಳಿಕ ಯುವ ಬ್ರಿಗೇಡ್ ಆಗಿ ನಾಲ್ಕು ಧ್ಯೇಯೋದ್ದೇಶ ಹೊತ್ತ ಸಂಘಟನೆಯಾಗಿ ಮುಂದುವರಿಯಲಿದೆ. ಮಹಾರಕ್ಷಣೆ, ಅರ್ಥ ಕ್ರಾಂತಿ, ಸದ್ಭಾವನೆ, ಡಿಜಿಟಲ್ ಸಂಸ್ಕಾರ ಈ ನಾಲ್ಕು ವಿಭಾಗಗಳು ಜನತೆಯನ್ನು ಜಾಗೃತಿಯತ್ತ ಕೊಂಡೊಯ್ಯಲಿವೆ' ಎನ್ನುತ್ತಾರೆ ಅವರು.
ಸಂಕಷ್ಟಕ್ಕೆ ಸ್ಪಂದನ: ಮಹಾರಕ್ಷಕ್ ವಿಭಾಗ ಸೈನಿಕರಿಗಾಗಿ ಇರುತ್ತದೆ. ನಿವೃತ್ತ ಸೈನಿಕರ ಸಂಕಷ್ಟಗಳಿಗೆ ಸ್ಪಂದಿಸುವುದು. ಸೈನ್ಯಕ್ಕೆ ಹೊಸಬರ ಸೇರ್ಪಡೆಗೆ ತಿಳಿವಳಿಕೆ ಮೂಡಿಸುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿದೆ. ತೆರಿಗೆ ನೀತಿ, ಹಣಕಾಸು ವಹಿವಾಟುಗಳ ಬಗ್ಗೆ ತಜ್ಞರನ್ನೊಳಗೊಂಡ ಅರ್ಥಕ್ರಾಂತಿ ವಿಭಾಗ ಕಾರ್ಯನಿರ್ವಹಿಸುತ್ತದೆ. ಎಲ್ಲವೂ ರಾಷ್ಟ್ರಕ್ಕಾಗಿ ಎಂಬ ಧ್ಯೇಯ ಮೂಡಿಸುವುದು ಸದ್ಭಾವನೆ ವಿಭಾಗದ ಕೆಲಸ. ಸಮಾಜದಲ್ಲಿ ಕೋಮು ಸಾಮರಸ್ಯ ಏರ್ಪಡಿಸುವುದೂ ಇದರ ಪ್ರಮುಖ ಉದ್ದೇಶಗಳಲ್ಲೊಂದು.
ಡಿಜಿಟಲ್ ಸಂಸ್ಕಾರ ವಿಭಾಗ, ಸಂಸ್ಕಾರಕ್ಕೆ ಪೂರಕವಾದ ಪ್ರವಚನ, ಭಾಷಣ, ಪುಸ್ತಕ ಪ್ರಕಟಣೆ, ವೀಡಿಯೋ ತುಣುಕು, ಮೂವೀ ಮೂಲಕ ಪ್ರಸಾರ ಇರಲಿದೆ. ಈ ಸಂಘಟನೆಯ ರೂಪರೇಷೆ ಸಿದ್ಧಗೊಂಡಿದ್ದು ಮೋದಿ ಪ್ರಮಾಣವಚನ ದಿನ ಅಸ್ತಿತ್ವಕ್ಕೆ ಬರಲಿದೆ. 'ನಮೋ ಬ್ರಿಗೇಡ್ ರಾಜ್ಯಾದ್ಯಂತ 300ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ. ಅದೇ ಮಾದರಿಯಲ್ಲಿ ಯುವ ಬ್ರಿಗೇಡ್ ಸಂಘಟಿಸಲಾಗುತ್ತದೆ. ರಾಜಕೀಯೇತರ ಸಂಘಟನೆ ಇದಾಗಿದ್ದು, ವರ್ಷಪೂರ್ತಿ ಬಿಡುವಿಲ್ಲದ ಚಟುವಟಿಕೆಯಿರುತ್ತದೆ' ಎನ್ನುತ್ತಾರೆ ಸಂಚಾಲಕ ನರೇಶ್ ಶೆಣೈ.
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

