ಪಶುಸಂಗೋಪನ ಇಲಾಖೆ ಪುನಾರಚನೆಗೆ ಸಚಿವರ ಗಡುವು
ಬೆಂಗಳೂರು: ಯಾವುದೇ ಸಬೂಬು ಹೇಳದೆ ಇನ್ನೆರಡು ತಿಂಗಳಲ್ಲಿ ಇಲಾಖೆ ಪುನಾರಚನೆ ಮಾಡಬೇಕೆಂದು ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಪಶುಸಂಗೋಪನಾ ಇಲಾಖೆ ಪುನಾರಚನೆ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಇದೇ ಮನೋಭಾವ ಮುಂದುವರಿಯ ಕೂಡದು ಎಂದರು. ರಾಜ್ಯ ಸರ್ಕಾರಿ ಪಶುವೈದ್ಯರ ಸಂಘ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ತಾಂತ್ರಿಕ ಸಮ್ಮೇಳನ ಮತ್ತು ಪಶುವೈದ್ಯರ ಮಹಾಧಿವೇಶನದಲ್ಲಿ ಅವರು ಮಾತನಾಡಿದರು. ಕಾಲೇಜುಗಳನ್ನೂ ಒಳಗೊಂಡಂತೆ ಪಶುಸಂಗೋಪನಾ ಇಲಾಖೆಯನ್ನು ಪುನಾರಚಿಸಬೇಕೆಂದು 2012ರಲ್ಲೇ ಸರ್ಕಾರ ನಿರ್ಧರಿಸಿತ್ತು. ಈ ಬಗ್ಗೆ ಆದೇಶವೂ ಆಗಿತ್ತು. ಆದರೆ ಅಧಿಕಾರಿಗಳು ನಾನಾ ಕಾರಣಗಳನ್ನು ನೀಡುತ್ತಾ ಇನ್ನೂ ಮುಂದೂಡುತ್ತಲೇ ಇದ್ದಾರೆ ಎಂದು ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದರು. 1064 ಪಶು ಸಹಾಯಕರ ನೇಮಕ ಪ್ರಕ್ರಿಯೆದಲ್ಲೂ ವಿಳಂಬವಾಗಿದ್ದು, ಅಧಿಕಾರಿಗಳು 6 ತಿಂಗಳಿನಿಂದಲೂ ಬರೀ ದಾಖಲೆ ಪರಿಶೀಲನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತಿದ್ದು, ನೇಮಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಬೇಕೆಂದು ಸೂಚಿಸಿದರು.
ಕಾವಲು ಭೂಮಿ ಇಲಾಖೆಗೆ: ಗೋಮಾಳ ಮತ್ತು ಕಾವಲು ಭೂಮಿಯೇ ಇಲಾಖೆಗೆ ಆಧಾರವಾಗಿದೆ. ಆದರೆ ಈ ಭೂಮಿಗಳು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿವೆ. ಇನ್ನುಮುಂದೆ ಈ ಭೂಮಿಗಳನ್ನು ಪಶುಸಂಗೋಪನೆ ವ್ಯಾಪ್ತಿಗೆ ತರಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೆ ಈ ಜಾಗಗಳಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸುವುದಕ್ಕೂ ಸರ್ಕಾರ ಮುಂದಾಗುತ್ತಿದೆ. ಇದಕ್ಕಾಗಿ ಹೊಸ ವಿಧೇಯಕವನ್ನೇ ರಚಿಸಲಾಗುತ್ತಿದೆ ಎಂದು ಸಚಿವ ಜಯಚಂದ್ರ ವಿವರಿಸಿದರು. ರಾಜ್ಯದಲ್ಲಿ 5 ಪಶು ವೈದ್ಯ ಕಾಲೇಜುಗಳಿದ್ದು, ಅವುಗಳನ್ನು ಉನ್ನತೀಕರಿಸಲಾಗುತ್ತಿದೆ. ಇದಕ್ಕಾಗಿ 200ಕೋಟಿ ವೆಚ್ಚ ಮಾಡಲು ಸರ್ಕಾರ ತೀರ್ಮಾನಿಸಿದೆ. ಹಾಗೆಯೇ ಉತ್ತಮ ಪೌಷ್ಟಿಕಾಂಶ ಮತ್ತು ಆರೋಗ್ಯದ ದೃಷ್ಟಿಯಿಂದ ಮೇಕೆ ಹಾಲನ್ನು ಬಳಸಬೇಕಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದ್ದು, ಹೆಚ್ಚಿನ ಸಂಶೋಧನೆಗಳೂ ಆಗಬೇಕಿದೆ ಎಂದು ಅವರು ಸಲಹೆ ನೀಡಿದರು. ಇಲಾಖೆ ಕಾರ್ಯದರ್ಶಿ ಕೆ.ಎಚ್.ಅಶ್ವತ್ಥನಾರಾಯಣ, ಇಲಾಖೆ ಆಯುಕ್ತ ಪಾಂಡುರಂಗ ಬಿ.ನಾಯಕ್, ಇಲಾಖೆ ನಿರ್ದೇಶಕ ಡಾ.ಡಿ.ಎಂ.ದಾಸ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

