ಪ್ರಧಾನ ಸುದ್ದಿ

ಬಿಜಾಪುರದಲ್ಲಿ ಗುಂಪು ಘರ್ಷಣೆ

ಬಿಜಾಪುರದಲ್ಲಿ ಗುಂಪು ಘರ್ಷಣೆ
Published On :

ಕ.ಪ್ರ.ವಾರ್ತೆ ಬಿಜಾಪುರ ಮೇ 26
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಣೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲಕ್ಕೆ ನಗರದ ಗಾಂಧಿ ಚೌಕ ಬಳಿಯ ನೆಹರು ಮಾರುಕಟ್ಟೆಯಲ್ಲಿ ಅವಘಡ ನಡೆದಿದ್ದು ಕಲ್ಲು ತೂರಾಟದಲ್ಲಿ ನಾಲ್ವರು ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿವೆ.
ಮೆರವಣಿಗೆ ಸಾಗುತ್ತಿದ್ದ ವೇಳೆ ಕೆಲ ಕಿಡಿಗೇಡಿಗಳು ಜನರ ಮೇಲೆ ಕಲ್ಲು ತೂರಾಟ ನಡೆಸಿ ಬಡಿಗೆಯಿಂದ ಹಲ್ಲೆ ನಡೆಸಿದರು. ಘಟನೆಯಲ್ಲಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಕೆಲ ದ್ವಿಚಕ್ರ ವಾಹನ, ಕಾರು, ಜೀಪ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಲಾಠಿ ಪ್ರಹಾರ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಗುಂಪನ್ನು ಚದುರಿಸಿದರು. ಶಾಂತಿ, ಸುವ್ಯವಸ್ಥೆ ಕಾಪಾಡಲು ನಗರದಾದ್ಯಂತ ಸೋಮವಾರ ರಾತ್ರಿ 7 ಗಂಟೆಯಿಂದ ಮೂರು ದಿನಗಳವರೆಗೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಘಟನೆ ವಿವರ: ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರಿಂದ ಬಿಜೆಪಿ ವತಿಯಿಂದ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ ಮಾರ್ಗವಾಗಿ ವಿಜಯೋತ್ಸವ ಮೆರವಣಿಗೆ ಹೊರಟಿತ್ತು.
ಆಗ ಕೆಲ ಬಿಜೆಪಿ ಕಾರ್ಯಕರ್ತರು ಒಂದು ಕೋಮಿಗೆ ಸೇರಿದ ಜನ ಹಾಗೂ ಅವರು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದ ಹಣ್ಣು, ಹಂಪಲಗಳ ಮೇಲೆ ಕೇಸರಿ ಗುಲಾಲು ಎರಚಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಯಾಗಿ ಆ ಕೋಮಿನ ಜನರು ಮೆರವಣಿಗೆಯತ್ತ ಕಲ್ಲು ತೂರಾಟ ನಡೆಸಿದರು. ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಇದಕ್ಕೆ ಪ್ರತಿಯಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಸಮುದಾಯದ ಜನರ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಣಗಾಡಿದರು. ಪರಸ್ಪರರಲ್ಲಿ ಬಹಳ ಹೊತ್ತಿನವರಗೆ ಕಲ್ಲು ತೂರಾಟ ನಡೆಯಿತು.
ಮುಚ್ಚಿದ ಅಂಗಡಿಗಳು: ದಾಂಧಲೆ ಆರಂಭವಾಗುತ್ತಿದ್ದಂತೆಯೇ ನೆಹರು ಮಾರುಕಟ್ಟೆ, ಶಾಸ್ತ್ರಿ ಮಾರುಕಟ್ಟೆಯಲ್ಲಿನ ಅಂಗಡಿ ಮುಂಗಟ್ಟುಗಳು ಮುಚ್ಚಿದವು. ಜನರು ದಿಕ್ಕಾಪಾಲಾಗಿ ಓಡಿದರು. ಶಾಸ್ತ್ರಿ ಮಾರುಕಟ್ಟೆ ಹಾಗೂ ನೆಹರು ಮಾರುಕಟ್ಟೆ ನಿರ್ಜನ ಪ್ರದೇಶವಾಗಿ ಬಿಕೋ ಎನ್ನುತ್ತಿತ್ತು. ಹೀಗಾಗಿ ಮಾರುಕಟ್ಟೆ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಕೆಲ ಕಿಡಿಗೇಡಿಗಳು ತಂಡೋಪತಂಡವಾಗಿ ನಗರದ ಲಕ್ಷ್ಮಿ ದೇವಸ್ಥಾನ, ಸಿದ್ಧೇಶ್ವರ ದೇವಸ್ಥಾನ, ಅಮೀರ ಟಾಕೀಜ್, ಕಿರಾಣಾ ಬಜಾರ, ಕೇಂದ್ರ ಬಸ್ ನಿಲ್ದಾಣ ರಸ್ತೆ ಮುಂತಾದ ಕಡೆಗಳಲ್ಲಿ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದು ಕಂಡ ಕಂಡವರ ಮೇಲೆ ಕಲ್ಲು ತೂರಾಟ ನಡೆಸಿ ಅಮಾಯಕರ ಮೇಲೆ ಹಲ್ಲೆ ನಡೆಸಿದರು.
ಸಂಜೆ 6 ಗಂಟೆಯಿಂದ ನಗರ ಸಾರಿಗೆ ಸೇರಿದಂತೆ ಆಟೋ, ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಇಂಡಿಯನ್ ರಿಸರ್ವ್ ಪೊಲೀಸ್ ಪಡೆಯ 600 ಪೊಲೀಸರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಪೊಲೀಸರು ನಗರದಲ್ಲಿ ಬೀಡು ಬಿಟ್ಟಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಬೆಳಗಾವಿ ಉತ್ತರ ವಲಯ ಐಜಿಪಿ ಭಾಸ್ಕರರಾವ್ ಬಿಜಾಪುರಕ್ಕೆ ದೌಡಾಯಿಸಿದರು. ನಗರ ಶಾಸಕ ಡಾ. ಮಕ್ಬುಲ್ ಬಾಗವಾನ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿ ಶಾಂತಿ, ಸುವ್ಯವಸ್ಥೆಗೆ ಅಗತ್ಯದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೋಮುಸೌಹಾರ್ದತೆ ಕಾಯ್ದುಕೊಂಡು ಬರುವಂತೆ ಶಾಸಕ ಬಾಗವಾನ ಎರಡೂ ಸಮುದಾಯದವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.

ಎರಡು ಗುಂಪುಗಳ ಮಧ್ಯೆ ಸೋಮವಾರ ಸಂಜೆ ಗಾಂಧಿ ಚೌಕ ಬಳಿ ಗುಂಪು ಘರ್ಷಣೆ ಸಂಭವಿಸಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ನಗರದಲ್ಲಿ 144 ಕಲಂ ಅನ್ವಯ ಮೂರು ದಿನಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ಹತೋಟಿಯಲ್ಲಿದೆ.
 ಡಾ. ಬೂದೆಪ್ಪ,  ಉಪ ವಿಭಾಗಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.