ಪ್ರಧಾನ ಸುದ್ದಿ

ಎಗ್ಗಿಲ್ಲದೆ ಸಾಗಿದೆ ಮರಳು ದಂಧೆ

ಎಗ್ಗಿಲ್ಲದೆ ಸಾಗಿದೆ ಮರಳು ದಂಧೆ
Published On :

ಹಾಸನ: ರಾಜ್ಯದಲ್ಲಿ ಮರಳು ನೀತಿ ಜಾರಿಯಲ್ಲಿದ್ದರು ಸಹ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ.  
ಮರಳು ನೀತಿಯನ್ನು ಅಧಿಕಾರಿಗಳು ಸರಿಯಾಗಿ ಪಾಲಿಸದನ್ನೇ ಲಾಭ ಮಾಡಿಕೊಂಡಿರುವ ಲೂಟಿಕೋರರು ಹಾಸನ ಜಿಲ್ಲೆಯ ಎಲ್ಲೆಂದರಲ್ಲಿ ನದಿಒಡಲು ಬಗೆದು ಮರಳು ಸಾಗಿಸುತ್ತಿದ್ದಾರೆ. ಮಾತ್ರವಲ್ಲ ಒಂದು ಲಾರಿ ಅಥವಾ ಟ್ರ್ಯಾಕ್ಟರ್‌ನ ಮರಳ ಬೆಲೆಯನ್ನು ಮನಬಂದಂತೆ ನಿಗದಿ ಮಾಡುತ್ತಿರುವುದು ಖರೀದಿದಾರರು ಕಣ್‌ಕಣ್ ಬಿಡುವಂತಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ದಾಳಿ ನಡೆಸಿದರೂ, ದಂಧೆಕೋರರ ಲೂಟಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಅಕ್ರಮ ಮರಳು ದಂಧೆಯಿಂದಾಗಿ ಸರ್ಕಾರದ ಬೊಕ್ಕಸ ಮತ್ತು ಗ್ರಾಹಕರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ 2011ರ ಏಪ್ರಿಲ್‌ನಲ್ಲಿ ಜಾರಿ ಮಾಡಿತ್ತು. ಆದರೆ ನೀತಿಯೊಳಗಿನ ಹತ್ತಾರು ಗೊಂದಲಗಳಿಂದಾಗಿ ಮರಳು ನೀತಿ ಹುಸಿಯಾಯಿತು. ಏತನ್ಮಧ್ಯೆ ಮರಳು ನೀತಿ ಪ್ರಸ್ತಾಪ ಹಿನ್ನೆಲೆಯಲ್ಲಿ ಈಚೆಗೆ ಮರಳುಗಾರಿಕೆ ಗುತ್ತಿಗೆ ನೀಡುವುದನ್ನು ನಿಲ್ಲಿಸಲಾಗಿತ್ತು.
ಇದನ್ನೇ ಲಾಭ ಮಾಡಿಕೊಂಡ ಲೂಟಿಕೋರರು ಜಿಲ್ಲೆಯಲ್ಲಿ ಮರಳು ಲೂಟಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಸಕಲೇಶಪುರ, ಆಲೂರು ಮತ್ತು ಹೊಳೆನರಸೀಪುರ ತಾಲೂಕುಗಳಲ್ಲಿ ಹೇಮಾವತಿ ಮತ್ತು ಯಗಚಿ ನದಿಯನ್ನು ಎಲ್ಲೆಂದರಲ್ಲಿ ಬಗೆದು ಮರಳು ದೋಚಲಾಗುತ್ತಿದೆ. ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಜಿಲ್ಲಾಡಳಿತದ ಅಧಿಕಾರಿಗಳು ದಾಳಿ ಮಾಡಿದರೂ, ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ದಾಳಿಗೆ ಮುಂದಾಗುತ್ತಿದ್ದಂತೆ ಈ ಮಾಹಿತಿ ಮಾಹಿತಿ ದಂಧೆಕೋರರಿಗೆ ಮುಟ್ಟುತ್ತದೆ. ಹೀಗಾಗಿ ಅಕ್ರಮ ತಡೆಗೆ ಹಿನ್ನಡೆಯಾಗಿದೆ.
ಮರಳು ಲೂಟಿಯನ್ನು ಸುಗ್ಗಿ ಮಾಡಿಕೊಂಡಿರುವ ದಂಧೆಕೋರರ ಆಟಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಡ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಆಗೊಮ್ಮೆ ಈಗೊಮ್ಮೆ ದಾಳಿ ಮಾಡುವುದರಿಂದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವುದು ಕಷ್ಟ ಸಾಧ್ಯವಾಗಿದೆ. ಶೇ.100 ರಷ್ಟು ಸ್ಯಾಂಡ್ ಮೈನಿಂಗ್ ತಡೆ ಹಾಕಬೇಕಾದರೆ 24 ಗಂಟೆ ಚೆಕ್ ಪೋಸ್ಟ್ ಹಾಕಬೇಕಾಗಿದೆ.
ಮರಳು ನೀತಿ ಜಾರಿಗೆ ತಂದು ಕೈಕಟ್ಟಿ ಕುಳಿತಿರುವ ಅಧಿಕಾರಿಗಳು, ಚೆಕ್ ಪೋಸ್ಟ್‌ಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದಿರುವುದು ಎಲ್ಲರನ್ನು ಕಾಡತೊಡಗಿದೆ. ಇನ್ನೊಂದೆಡೆ ಮರಳು ಬೆಲೆ ಗಗನಕ್ಕೇರಿರುವುದು ಗ್ರಾಹಕರಿಗೆ ತುಟ್ಟಿಯಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಮರಳು ಸಾಗಣೆ ಮತ್ತು ಖರೀದಿ ಸರಳವಾಗಬೇಕಾದರೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಬೇಕಾಗಿದೆ
ನೀತಿಯಲ್ಲಿ ಕೊಂಚ ಬದಲಾವಣೆ
2011ರಲ್ಲಿ ಜಾರಿಗೆ ತಂದಂತಹ ತಮಿಳುನಾಡು ಮಾದರಿಯ ಮರಳು ನೀತಿಯಲ್ಲಿ ಇದ್ದ ಕೆಲ ಗೊಂದಲಗಳನ್ನು ನಿವಾರಿಸಲು 2013ರಲ್ಲಿ ಕೊಂಚ ಬದಲಾವಣೆ ತರಲಾಗಿದೆ. ಹೊಳೆ ಅಥವಾ ನದಿಯೊಳಗೆ ಯಂತ್ರಗಳನ್ನು ಇಳಿಸಿ ಮರಳು ತೆಗೆಯಬಾರದು ಎಸ್ಸಿಎಸ್ಟಿಗೆ ಮೀಸಲಾತಿಯನ್ನು ನೀಡಲಾಗಿದೆ. 1ನೇ ಬ್ಲಾಕ್ ಎಸ್ಸಿ, 2ನೇ ಬ್ಲಾಕ್  ಎಸ್ಟಿ ಮತ್ತು 7ನೇ ಬ್ಲಾಕ್ ಎಸ್ಸಿಗೆ ಮೀಸಲಾತಿ ನೀಡಲಾಗಿದೆ.
ಗಣ ಭೂ ವಿಜ್ಞಾನ ಇಲಾಖೆ ಅಧಿಕಾರಿ ಹನುಮಂತರೆಡ್ಡಿ
ಮರಳು ನೀತಿಯನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಅಕ್ರಮ ಮರಳುಗಾರಿಕೆಗೆ ನಿಯಂತ್ರಣ ಏರಲಾಗಿದೆ. ಇತ್ತೀಚೆಗೆ ಸಕಲೇಶಪುರದಲ್ಲಿ ಹಿಡಿದಂತಹ ಮರಳು ಲಾರಿಗಳಿಗೆ ಪರವಾನಗಿ ಇದೆ.  ಆದರೆ, ಅವು ಬೆಳಗಿನ ವೇಳೆಯಲ್ಲಿ ಸಾಗಣೆ ಮಾಡಬೇಕು ಅಂತಿದೆ. ಆದರೆ, ಆ ಲಾರಿಗಳು ಬೇರೆ ವೇಳೆ ಸಾಗಣೆ ಮಾಡಿದ್ದರಿಂದ ಅದನ್ನು ವಶಕ್ಕೆ ಪಡೆಯಲಾಗಿತ್ತು. ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

 ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.