ರೇಲ್ವೆ ಸುರಕ್ಷತೆಯೇ ಆದ್ಯತೆ

ನವದೆಹಲಿ: ರೇಲ್ವೆ ಸುರಕ್ಷತೆ, ಭದ್ರತೆ ಮತ್ತು ವೇಗವೇ ನನ್ನ ಪ್ರಮುಖ ಆದ್ಯತೆಗಳು.
ಹೀಗೆಂದು ಹೇಳಿರುವುದು ನೂತನ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ. ಸಚಿವರಾಗಿ ಡಿವಿಎಸ್ ಪ್ರಮಾಣವಚನ ಸ್ವೀಕರಿಸಿದ ದಿನವೇ ಅಂದರೆ ಸೋಮವಾರ ಗೋರಖ್ಧಾಮ್ ರೈಲು ದುರಂತ ಸಂಭವಿಸಿ, 25 ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಮಾತನಾಡಿದ ಸಚಿವರು, ರೇಲ್ವೆ ಸುರಕ್ಷತೆಯು ಗಂಭೀರ ವಿಚಾರವಾಗಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಸಲಹೆ: ರೇಲ್ವೆ ಸಚಿವಾಲಯಕ್ಕೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸದ್ಯದಲ್ಲೇ ಸಿದ್ಧಪಡಿಸುತ್ತೇನೆ. ರೇಲ್ವೆ ಅಭಿವೃದ್ಧಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೊಂದು ಐಡಿಯಾಗಳನ್ನು ಹೊಂದಿದ್ದಾರೆ. ಅವರ ಸಲಹೆ ಪಡೆದು ಮುಂದಿನ ಹೆಜ್ಜೆಯಿಡುತ್ತೇನೆ ಎಂದೂ ಹೇಳಿದ್ದಾರೆ ಸಚಿವ ಡಿವಿಎಸ್. ಜತೆಗೆ ರೈಲು ದುರಂತ ನಡೆದ ಉತ್ತರಪ್ರದೇಶಕ್ಕೆ ಬುಧವಾರ ಭೇಟಿ ನೀಡುವುದಾಗಿಯೂ ಅವರು ಹೇಳಿದ್ದಾರೆ.
ರೇಲ್ವೆಗೆ ಸಂಬಂಧಿಸಿ ಅನೇಕ ಸವಾಲುಗಳು ನಮ್ಮ ಮುಂದಿವೆ. ಅವುಗಳನ್ನು ಅರಿತುಕೊಂಡು, ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು 10 ದಿನಗಳೊಳಗೆ ರೇಲ್ವೆಗೆ ಸಂಬಂಧಿಸಿದ ಮಾರ್ಗಸೂಚಿ ಸಿದ್ಧಪಡಿಸಿ ಆ ಬಗ್ಗೆ ವಿವರ ನೀಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ಇದೇ ವೇಳೆ, ಪ್ರಧಾನಿ ಮೋದಿ ಅವರು ಚುನಾವಣಾ ಭಾಷಣದಲ್ಲಿ ತಿಳಿಸಿರುವ ಬುಲೆಟ್ ರೈಲಿನ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಈ ಬಗ್ಗೆ ಪ್ರಧಾನಿ ಜತೆ ಚರ್ಚಿಸುತ್ತೇನೆ ಎಂದಷ್ಟೇ ನುಡಿದಿದ್ದಾರೆ.
2 ಲಕ್ಷ ಪರಿಹಾರ
ಈ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಗೋರಖ್ಧಾಮ್ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


