ಪ್ರಧಾನ ಸುದ್ದಿ

ಬಾಂಬ್ ಸದ್ದಿನಲ್ಲಿ ಮಾತುಕತೆ ಫಲ ನೀಡದು, ಪಾಕಿಗೆ ಭಾರತದ ಎಚ್ಚರಿಕೆ

ಬಾಂಬ್ ಸದ್ದಿನಲ್ಲಿ ಮಾತುಕತೆ ಫಲ ನೀಡದು, ಪಾಕಿಗೆ ಭಾರತದ ಎಚ್ಚರಿಕೆ
Published On :

ಪಾಕಿಸ್ತಾನದಲ್ಲಿ ಪತ್ರಿಕಾಗೋಷ್ಠಿ ಮಾಡಿ ಮೋದಿ ಹೊಗಳಿದ ವಿದೇಶಾಂಗ ಕಾರ್ಯದರ್ಶಿ
ನವದೆಹಲಿ: ಬಾಂಬ್ ಸ್ಫೋಟಗಳ ಸದ್ದಿನಲ್ಲಿ ಉಭಯ ದೇಶಗಳ ನಡುವೆ ನಡೆಯುವ ಮಾತುಕತೆ ಯಾವುದೇ ಫಲ ನೀಡದು ಎನ್ನುವುದನ್ನು ಪಾಕಿಸ್ತಾನಕ್ಕೆ ಭಾರತ ಮನವರಿಕೆ ಮಾಡಿಕೊಟ್ಟಿದೆ. ಇನ್ನೊಂದೆಡೆ, ಭಾರತ ಜತೆಗಿನ ಇದುವರೆಗಿನ ಮಾತುಕತೆಗಳಲ್ಲಿ ಇದು ಅತ್ಯಂತ ರಚನಾತ್ಮಕ ಮಾತುಕತೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
'ಪಾಕ್ ಜತೆಗೆ ಸುಮಧುರ ಬಾಂಧವ್ಯ ಹೊಂದುವ, ಅದಕ್ಕಾಗಿ ಮಾತುಕತೆ ನಡೆಸುವ ಪ್ರಬಲ ಬಯಕೆ ನಮಗೂ ಇದೆ. ಆದರೆ ಪಾಕಿಸ್ತಾನ ನೆಲದಲ್ಲಿನ ಪ್ರೇರಣೆಯಿಂದ ಭಾರತದಲ್ಲಿ ನಡೆಯುವ ಬಾಂಬ್ ಸ್ಫೋಟಗಳು ನಿಂತರೆ ಮಾತ್ರ ನಾವು ಪರಸ್ಪರ ಮಾತನಾಡಲು ಸಾಧ್ಯ. ಇಲ್ಲದಿದ್ದರೆ ನಾವು ಏನು ಹೇಳಿಕೊಳ್ಳುತ್ತೇವೆ ಎನ್ನುವುದು ಬಾಂಬ್ ಸ್ಫೋಟಗಳ ಸದ್ದಿನಲ್ಲಿ ಕೇಳಿಸದೆ ಮಾತುಕತೆಯೇ ವ್ಯರ್ಥವಾಗುತ್ತದೆ' ಎನ್ನುವುದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಮಾತು.
ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಉಭಯ ಪ್ರಧಾನಿಗಳ ನಡುವಿನ ಮಾತುಕತೆ ವಿವರ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, '26/11 ದಾಳಿ ವಿಚಾರಣೆ ತೀವ್ರಗೊಳಿಸುವಂತೆಯೂ ಕೋರಲಾಗಿದ್ದು, ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದರು.
ನಿರೀಕ್ಷೆ ಮೀರಿದ ಫಲಿತಾಂಶ: ಇನ್ನೊಂದೆಡೆ, 'ಭಾರತ ಜತೆಗಿನ ಮಾತುಕತೆ ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಿದೆ' ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಮಾತುಕತೆಯನ್ನು ಮುಂದಿನ ಹಂತಕ್ಕೆ ಒಯ್ಯುವ ಸಂಬಂಧವಾಗಿ ಚರ್ಚಿಸಲು ಮತ್ತು ಆದ್ಯತೆ ವಿಚಾರಗಳನ್ನು ಪಟ್ಟಿ ಮಾಡಲು ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಸಭೆ ಸೇರಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಕುರಿತು ಪಾಕ್ ಪ್ರಧಾನಿ ಸಲಹೆಗಾರ ಸತ್ರಾಜ್ ಅಜೀಜ್ ಬುಧವಾರ ಹೇಳಿದ್ದಾರೆ.
ಭಯೋತ್ಪಾದನೆಯಿಂದ ಪಾಕಿಸ್ತಾನ ಭಾರಿ ನಷ್ಟ ಅನುಭವಿಸಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಮಾತ್ರವಲ್ಲ, ಜನತೆ ಕೂಡ ಬದ್ಧರಾಗಿದ್ದಾರೆ ಎಂಬುದನ್ನು ಷರೀಫ್ ಅವರು ಮೋದಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗೆಯೇ ಎರಡೂ ರಾಷ್ಟ್ರಗಳಿಗೂ ಭಯೋತ್ಪಾದನೆ ಕಳವಳಕಾರಿ ವಿಷಯ ಎನ್ನುವುದೂ ಷರೀಫ್ ಪ್ರತಿಪಾದನೆ ಎಂದಿದ್ದಾರೆ.

ಸಂಬಂಧಿಗಳನ್ನು ದೂರವಿಡಿ
ಸ್ವಚ್ಛ ಆಡಳಿತದ ಭರವಸೆ ಈಡೇರಿಸುವ

ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಆಪ್ತ ಸಿಬ್ಬಂದಿಯಾಗಿ ಕುಟುಂಬಸ್ಥರು, ಸಂಬಂಧಿಗಳನ್ನು ನೇಮಕ ಮಾಡಿಕೊಳ್ಳದಂತೆ ತಮ್ಮ ಸಂಪುಟದ ಸಚಿವರಿಗೆ ತಾಕೀತು ಮಾಡಿದ್ದಾರೆ. ಮಾತ್ರವಲ್ಲ, ಸಚಿವರ ಆಪ್ತ ಸಿಬ್ಬಂದಿ ನೇಮಕ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕ ನಿಯಮಗಳನ್ನೂ ರೂಪಿಸಲಾಗಿದೆ. ಈ ಮೂಲಕ ಸಚಿವಾಲಯವನ್ನು ಸಚಿವರು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುವುದನ್ನು ಮೋದಿ ಜಾಣತನದಿಂದ ತಪ್ಪಿಸಿದ್ದಾರೆ.

ಮಾರ್ಗದರ್ಶಿ ಸೂತ್ರ
ಸಂಬಂಧಿಗಳ ನೇಮಕ ಬೇಡ. ಕುಟುಂಬಸ್ಥರು/ಸಂಬಂಧಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಡಿ. ಸ್ವಜನಪಕ್ಷಪಾತಕ್ಕೆ ಅವಕಾಶ ನೀಡಬೇಡಿ. ಸಾರ್ವಜನಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಿ- ಇವು ಸಚಿವರಿಗೆ ಪ್ರಧಾನಿ ನೀಡಿರುವ ಮಾರ್ಗದರ್ಶಿ ಸೂತ್ರ.

ರಾಜ್ಯಗಳಿಗೆ ಆದ್ಯತೆ: ಪ್ರಧಾನಿ
ರಾಜ್ಯಗಳು ಪ್ರಸ್ತಾಪಿಸುವ ವಿಚಾರಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯಾಲಯದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಪ್ರಧಾನಿಗಳ ಕಾರ್ಯಾಲಯ (ಪಿಎಂಒ) ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಮೋದಿ, ದೇಶದ ಅಭಿವೃದ್ಧಿ ಕೀಲಿಕೈ ಇರುವುದು ರಾಜ್ಯಗಳ ಅಭಿವೃದ್ಧಿಯಲ್ಲಿ. ಅದಕ್ಕಾಗಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು.  ರಾಜ್ಯಗಳು ಪ್ರಸ್ತಾಪಿಸುವ ವಿಚಾರಗಳಿಗೆ ಆದ್ಯತೆ ನೀಡುವುದರ ಜತೆಗೆ ರಾಜ್ಯಗಳೊಂದಿಗೆ ಭಾವನಾತ್ಮಕ ನೆಲೆಗಟ್ಟಿನಲ್ಲಿ ವ್ಯವಹರಿಸಬೇಕು ಎಂದು ಸೂಚಿಸಿದರು. ಜನಪ್ರತಿನಿಧಿಗಳು ಪ್ರಸ್ತಾಪಿಸುವ ವಿಚಾರಗಳು, ಜನತೆಯ ಕುಂದುಕೊರತೆ ಕುರಿತು ತ್ವರಿತವಾಗಿ ಪ್ರತಿಕ್ರಿಯಿಸಬೇಕು ಎಂದು ತಿಳಿಸಿದರು.

ಭುಗಿಲೆದ್ದ 370ವಿವಾದ
ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ 370ನೇ ವಿಧಿ ರದ್ದುಗೊಳಿಸುವ ಕೇಂದ್ರದ ಪ್ರಸ್ತಾಪವೇ ಭಾರಿ ದಿಗಿಲು ಹುಟ್ಟಿಸಿದೆ. ಜತೆಗೆ ಬುಧವಾರವೂ ವಿರೋಧ ಮುಂದುವರಿದಿದೆ. ಕಣಿವೆ ರಾಜ್ಯದ ರಾಜಕೀಯ ಪಕ್ಷಗಳು ಪ್ರಸ್ತಾಪದ ಬಗ್ಗೆಯೇ ವಿರೋಧ ವ್ಯಕ್ತಪಡಿಸಿದ್ದರೆ, ಜಮ್ಮು-ಕಾಶ್ಮೀರ ಒಮರ್ ಅಬ್ದುಲ್ಲಾ
ಅವರ ಪೂರ್ವಜರ ಆಸ್ತಿಯೇ ಎಂದು ಆರ್‌ಎಸ್‌ಎಸ್ ಪ್ರಶ್ನಿಸಿದೆ.

ಸೋನಿಯಾ ವಿದ್ಯಾರ್ಹತೆ ಏನು?
ಸಚಿವೆ ಸ್ಮೃತಿ ಇರಾನಿ ವಿದ್ಯಾರ್ಹತೆ ಕುರಿತು ಕಾಂಗ್ರೆಸ್ ಮುಖಂಡ ಅಜಯ್ ಮಾಕೇನ್ ಮಾಡಿದ್ದ ಟೀಕೆಗೆ ಸರ್ಕಾರ ಮತ್ತು ಬಿಜೆಪಿ ಪ್ರತ್ಯುತ್ತುರ ನೀಡಿದ ಬೆನ್ನಲ್ಲಿಯೇ, ಕೈನಲ್ಲಿಯೂ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಆದರೆ ಸ್ಮೃತಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. 'ಯುಪಿಎ ಅನ್ನು ಮುನ್ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿದ್ಯಾರ್ಹತೆ ಏನು ಎನ್ನುವುದನ್ನು ಪಕ್ಷ ಮೊದಲು ಹೇಳಲಿ. ಅವರ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಿ. ನಂತರ ಇತರರ ಬಗ್ಗೆ ಟೀಕೆ ಮಾಡಲಿ' ಎಂದು ಸಚಿವೆ ಉಮಾ ಭಾರತಿ ಸವಾಲೆಸೆದರು. ಬಿಜೆಪಿ ವಕ್ತಾರ ಮುಖ್ತಾರ್ ಅಬ್ಬಾಸ್ ನಖ್ವಿ, ಜೆಡಿಯು ಅಧ್ಯಕ್ಷ ಶರದ್ ಯಾದವ್ ಸಹ ಸ್ಮೃತಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಮಾಕೆನ್ ಟೀಕೆಗೆ ಅವರದೇ ಪಕ್ಷದ ಮನೀಷ್ ತಿವಾರಿ, 'ಟೀಕೆಗಳು ರಚನಾತ್ಮಕವಾಗಿರಬೇಕೇ ವಿನಾ ಅಹಂಕಾರದ ಧ್ವನಿಯಿಂದ ಕೂಡಿರಬಾರದು' ಎಂದಿದ್ದಾರೆ.

ಬುಧವಾರ ಏನೇನಾಯ್ತು?
-ಲೋಕಸಭೆ ಹಂಗಾಮಿ ಸ್ಪೀಕರ್ ಹುದ್ದೆಗೆ ಕಮಲನಾಥ್ ಹೆಸರು ಶಿಫಾರಸು, ಜೂ.2ರಿಂದ 16ನೇ ಲೋಕಸಭೆ ಚೊಚ್ಚಲ ಅಧಿವೇಶನ ಸಾಧ್ಯತೆ
-ನೂತನ ಅಟಾರ್ನಿ ಜನರಲ್ ಆಗಿ ಮುಕುಲ್ ರೋಹಟಗಿ; ಪ್ರಧಾನಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೃಪೇಂದ್ರ ಮಿಶ್ರಾ ನೇಮಕ
-ಬೇರೆ ಖಾತೆಗೆ ಪಟ್ಟು ಹಿಡಿದಿದ್ದ ಶಿವಸೇನೆ ಮನವೊಲಿಸಿದ ಪ್ರಧಾನಿ
-ತಮ್ಮ ಉತ್ತರಾಧಿಕಾರಿ ನೇಮಕ ಕುರಿತು ಚರ್ಚಿಸಲು ಆರ್‌ಎಸ್‌ಎಸ್ ವರಿಷ್ಠರನ್ನು ಭೇಟಿ ಮಾಡಿದ ರಾಜನಾಥ ಸಿಂಗ್, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೋದಿ ಆಪ್ತ ಅಮಿತ್ ಶಾ, ಜೆ.ಪಿ.ನಡ್ಡಾ, ಓಂ ಮಾಥೂರ್ ಹೆಸರು ಪ್ರಸ್ತಾಪ
-ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್, ಜಲ ಸಂಪನ್ಮೂಲ ಸಚಿವೆ ಉಮಾಭಾರತಿ, ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅಧಿಕಾರ ಸ್ವೀಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.