ಇನ್ಫಿ ಇಲ್ಲೇ ಇರುತ್ತೆ

ಇನ್ಫೋಸಿಸ್ ಸೇರಿದಂತೆ ಯಾವ ಕೈಗಾರಿಕೆಗಳೂ ರಾಜ್ಯವನ್ನು ಬಿಟ್ಟು ಹೋಗುವುದಕ್ಕೆ ತೀರ್ಮಾನಿಸಿಲ್ಲ ಎಂದು ಮುಖ್ಯಮಂತ್ರಿ...
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಇನ್ಫೋಸಿಸ್ ಸೇರಿದಂತೆ ಯಾವ ಕೈಗಾರಿಕೆಗಳೂ ರಾಜ್ಯವನ್ನು ಬಿಟ್ಟು ಹೋಗುವುದಕ್ಕೆ ತೀರ್ಮಾನಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೈಗಾರಿಕಾ ಇಲಾಖೆ ಉನ್ನತ ಮಟ್ಟದ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾಡತಾನಡಿದ ಅವರು ಈ ವಿಷಯ ತಿಳಿಸಿದ್ದು, ದೇವನಹಳ್ಳಿ ಸಮೀಪದ ಕೈಗಾರಿಕಾ ಹೂಡಿಕೆ ವಲಯ(ಐಟಿಐಆರ್)ದಲ್ಲಿ ಈ ಹಿಂದೆ ಇನ್ಫೋಸಿಸಿ ರೂ.72 ಕೋಟಿ ಹೂಡಿಕೆ ಮಾಡಿತ್ತು. ಆದರೆ ಮೂಲ ಸೌಕರ್ಯ, ನೀರು, ವಿದ್ಯುತ್ ಪೂರೈಕೆಯಲ್ಲಿ ವಿಳಂಬವಾಗಿದೆ ಎಂಬ ಕಾರಣ ನೀಡಿ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೊಮ್ಮಸಂದ್ರಕ್ಕೆ ಘಟಕವನ್ನು ಸ್ಥಳಾಂತರಿಸುವುದಾಗಿ ಕೈಗಾರಿಕಾ ಇಲಾಖೆಗೆ ಪತ್ರ ಬರೆದಿದ್ದರು. ಈ ಸಂಬಂಧ ಇನ್ಫೋಸಿಸ್ ಸಭೆ ನಡೆ ನಡೆಸಿದ್ದಾರೆ. ಅವರ ಬೇಡಿಕೆಗಳನ್ನು ಪೂರೈಸಲಾಗುವುದು ಎಂದರು.

ಕಾಮಗಾರಿ ಶೀಘ್ರ ಪೂರ್ಣ
ಇನ್ಫೋಸಿಸ್ ಪತ್ರದ ಹಿನ್ನೆಲೆಯಲ್ಲಿ ಐಟಿಐಆರ್‌ನಲ್ಲಿ ಚತುಷ್ಪಥ ರಸ್ತೆ ನಿರ್ಮಾಣವನ್ನು ಬೇಗ ಪೂರ್ಣಗೊಳಿಸಲಾಗುವುದು. ಶೇ.70 ಕಾಮಗಾರಿ ಮುಕ್ತಾಯಗೊಂಡಿದೆ. ಉಳಿದ ಶೇ.30 ರಷ್ಟು ಕೆಲಸ 3 ತಿಂಗಳೊಳಗೆ ಮುಗಿಸಲಾಗುವುದು. ರಸ್ತೆ, ನೀರು, ವಿದ್ಯುತ್ ವಿಳಂಬ ನಿವಾರಿಸಲಾಗುವುದು. ಇನ್ಫಿ ಜತೆ ಹೂಡಿಕೆ ಮಾಡುವ ಎಲ್ಲ ಸಂಸ್ಥೆಗಳಿಗೂ ಇದರಿಂದ ನೆರವಾಗುತ್ತದೆ. ಟಿಐಆರ್‌ನಲ್ಲಿ ಹೂಡಿಕೆ ಮಾಡಲು ಅನೇಕ ಸಂಸ್ಥೆಗಳು ಮುಂದಾಗಿವೆ ಎಂದರು.

ಸಿಲಿಕಾನ್ ಜತೆ ಪೈಪೋಟಿ
ನಾವು ಆಂಧ್ರಪ್ರದೇಶದ ಜತೆ ಸ್ಪರ್ಧೆ ಮಾಡುವುದಿಲ್ಲ. ನಮ್ಮದೇನಿದ್ದರೂ ಸಿಲಿಕಾನ್ ವ್ಯಾಲಿ ಜತೆ ಪೈಪೋಟಿ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರೋಡ್ ಶೋ ಮಾಡಿದ ತಕ್ಷಣಕ್ಕೆ ನಮ್ಮ ಕೈಗಾರಿಕೋದ್ಯಮಿಗಳು ಅಲ್ಲಿಗೆ ಸ್ಥಳಾಂತರ ಮಾಡುವುದಿಲ್ಲ. ನಮ್ಮ ಕೈಗಾರಿಕಾ ನೀತಿ ಹೇಗಿರಬೇಕೆಂಬುದನ್ನು ಚಂದ್ರಬಾಬು ನಾಯ್ಡು ಅವರನ್ನು ಕೇಳಿ ನಿರ್ಧರಿಸಬೇಕಿಲ್ಲ. ನಾವು ಅವರಿಗಿಂತ ಮುಂಚಿತವಾಗಿ ಸಾಕಷ್ಟು ಸಿದ್ದತೆ ಮಾಡಿದ್ದೇವೆ ಎಂದು ಹೇಳಿದರು.

ಆಂಧ್ರ ಹಾಗೂ ತೆಲಂಗಾಣ ಹೊಸದಾಗಿ ರಚನೆಗೊಂಡ ರಾಜ್ಯಗಳು. ಹೀಗಾಗಿ ಕೇಂದ್ರ ಸರ್ಕಾರ ಅನೇಕ ಸವಲತ್ತು ನೀಡುತ್ತಿದೆ. ಹೀರೋ ಸಂಸ್ಥೆ ಆಂಧ್ರಕ್ಕೆ ಸ್ಥಳಾಂತರಗೊಂಡಿದ್ದು ಈ ಕಾರಣಕ್ಕಾಗಿ. ನಾವು ಅವರಿಗೆ ಹಲವು ಸೌಲಭ್ಯ ನೀಡಿದ್ದೆವು. ತೆರಿಗೆ ವಿನಾಯಿತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ರಾಜ್ಯಗಳ ಮದ್ಯೆ ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗಬಹುದೆಂದು ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹನಿವೆಲ್‌ಗೆ ಒಪ್ಪಿಗೆ
ಗುರುವಾರ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಹನಿವೆಲ್ ಸಂಸ್ಥೆಯ ಹೂಡಿಕೆ ಪ್ರಸ್ತಾಪಕ್ಕೆ ಅನುಮತಿ ನೀಡಲಾಗಿದೆ. ರೂ.1373 ಕೋಟಿ ಹೂಡಿಕೆಗೆ ಮುಂದೆ ಬಂದಿದ್ದಾರೆ. 5 ಸಾವಿರ ಮಂದಿಗೆ ಇದರಿಂದ ನೇರ ಉದ್ಯೋಗ ದೊರಕಲಿದ್ದು, ವರ್ತೂರು ಹೋಬಳಿ ದೊಡ್ಡ ದೊಡ್ಡಕನ್ನಹಳ್ಳಿಯಲ್ಲಿ 5.4 ಎಕರೆ ಜಾಗ ನೀಡಲಾಗುವುದು ಎಂದರು. ಇದರ ಜತೆಗೆ ಸಭೆಯಲ್ಲಿ ರೂ.1070 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಏಕಗವಾಕ್ಷಿ ಒಪ್ಪಿಗೆ ನೀಡಲಾಗಿದೆ. ಶಾಹಿ ಎಕ್ಸ್‌ಪೋರ್ಟ್ ಸಂಸ್ಥೆಯ 5 ಯೋಜನೆ, ಎಸ್‌ಎಚ್‌ವಿ ಎನರ್ಜಿ, ಜೀವರಾಜ್ ಟೀ ಪ್ರೈ ಲೀ., ಸ್ಟೀವಿಯಾ ವರ್ಲ್ಡ್ ಆಗ್ರೋಟೆಕ್, ಇಲ್ಲಿಂಗ್ ಇಂಡಿಯಾ ಲಿಮಿಟೆಡ್, ಧನ್ಯತಾ ಇನ್ಪ್ರಾ ಪ್ರೈ ಲಿಮಿಟೆಡ್, ಎನ್‌ಟ್ರಾಕ್ ಒವರ್‌ಸೀಸ್ ಸಂಸ್ಥೆಗೆ ಬಂಡವಾಳ ಹೂಡಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.

ಪಕ್ಕದ ರಾಜ್ಯದವರು ಪಲ್ಟಿ ಹೊಡೆದರೂ ಏನೂ ಆಗಲ್ಲ
ಪಕ್ಕದ ರಾಜ್ಯದವರು ಜಂತರ್ ಲಾಗ(ಪಲ್ಟಿ) ಹೊಡೆದರೂ ನಮ್ಮ ಹೂಡಿಕೆದಾರರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಐಟಿ-ಬಿಟಿ ಸಚಿವ ಡಾ.ಎಸ್.ಆರ್.ಪಾಟೀಲ್ ಹೇಳಿದ್ದಾರೆ. ನಮ್ಮ ಹೂಡಿಕೆದಾರರು ಆಂಧ್ರಕ್ಕೆ ವಲಸೆ ಹೋಗುವುದಿಲ್ಲ. ನಮ್ಮ ಸ್ಪರ್ಧೆ ಸಿಲಿಕಾನ್ ವ್ಯಾಲಿ ಜತೆ ಹೊರತು ಆಂಧ್ರದೊಂದಿಗೆ ಅಲ್ಲ. ಇನ್ಫೋಸಿಸ್ ನಮ್ಮ ರಾಜ್ಯದ ಕೂಸು. ಅವರು ನೆರೆ ರಾಜ್ಯಕ್ಕೆ ಹೋಗುವುದಿಲ್ಲ. 2020ರ ವೇಳೆಗೆ ನಮ್ಮ ಐಟಿ ರಫ್ತು ರೂ.4000 ಕೋಟಿಗೆ ಹೆಚ್ಚಾಗಲಿದೆ ಎಂದರು. ಐಟಿಐಆರ್‌ಗೆ 2027 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ ಎಂದೂ ಅವರು ಹೇಳಿದರು.

ಶ್ರೀವತ್ಸ ಕೃಷ್ಣಗೆ ಸಿಎಂ ಬೆಂಡು
ನಾನು ಸ್ವಲ್ಪ ಬ್ಯುಸಿ ಇದ್ದೇನೆ. ಸಚಿವರನ್ನು ಸಂಪರ್ಕಿಸಿ. ಅವರು ಬೇರೆ ಪರ್ತಕರ್ತ ಸ್ನೇಹಿ. ಹಾಗಾಗಿ ಅವರನ್ನೇ ಮಾತನಾಡಿಸಿ. ಇದು ಮಾಹಿತಿ ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀವತ್ಸಕೃಷ್ಣ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ ಮಾತು. ಇಂತಹ ವರ್ತನೆಗೆ ಪ್ರಸಿದ್ದರಾಗಿದ್ದ ಶ್ರೀವತ್ಸ ಕೃಷ್ಣ ಅವರಿಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಕಾಯ ವೈಖರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಣ ವಿನಿಯೋಗಿಸಲು ಹೂಡಿಕೆದಾರರು ಮೀನಾಮೇಷ ಎಣಿಸುವಂಥ ಪರಿಸ್ಥಿತಿ ನಿರ್ಮಾಣವಾಗು ಎಣಿಸುವಂಥ ಪರಿಸ್ಥಿತಿ ನಿರ್ಮಾಣವಾಗುವುದಕ್ಕೆ ಐಟಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ವರ್ತನೆಯೇ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಐಟಿ ಬಿಟಿ ಸಚಿವ ಎಸ್.ಆರ್.ಪಾಟೀಲ್ ಇಬ್ಬರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದರ ಜತೆಗೆ ಕೈಗಾರಿಕಾ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳ ವಿರುದ್ದವೂ ಸಭೆಯಲ್ಲಿ ಅಸಮಾಧಾನ ಪ್ರಕಟವಾಗಿದ್ದು, ರಾಜ್ಯದಿಂದ ಕೈಗಾರಿಕೆಗಳು ಹೊರ ಹೋಗುವ ನಿರ್ಣಯ ತೆಗೆದುಕೊಳ್ಲುವಂಥ ಸನ್ನಿವೇಶ ಸೃಷ್ಟಿಸಬೇಡಿ. ಇದರಿಂದ ಅಭಿವೃದ್ದಿಗೆ ತೊಂದರೆಯಾಗುತ್ತದೆ. ಅತ್ಯಂತ ಪ್ರಗತಿಪರವಾದ ಕೈಗಾರಿಕಾ ನೀತಿಯನ್ನು ರಾಜ್ಯ ಸರ್ಕಾರ ಸಿದ್ದಪಡಿಸಿದ್ದರೂ, ಅಧಿಕಾರಿಗಳ ವರ್ತನೆಯಿಂದಾಗಿ ಹೂಡಿಕೆ ಕಡಿಮೆಯಾಗುವುದಕ್ಕೆ ಅವಕಾಶ ನೀಡಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ.

ಸಭೆ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸುದ್ದಿಗಾರರು ಶ್ರೀವತ್ಸಕೃಷ್ಣ ವರ್ತನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನ ಸೆಳೆದರು. ಈ ಅಧಿಕಾಯ ಒರಟು ವರ್ತನೆ ಬಗ್ಗೆ ಕೈಗಾರಿಕೋದ್ಯಮಿಗಳು ಬೇಸತ್ತಿದ್ದಾರೆ ಎಂಬ ಪ್ರಶ್ನೆಗೆ ಅಂಥ ಪರಿಸ್ಥಿತಿ ಇಲ್ಲ. ನಾನು ಅವರಿಗೆ ತಿಳುವಳಿಕೆ ಹೇಳುವುದಾಗಿ ಸಿದ್ದರಾಮಯ್ಯ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com