ವಿಶ್ವವಿಖ್ಯಾತ ಜಂಬೂಸವಾರಿಗೆ ಸಿಎಂ ಚಾಲನೆ

ಮೈಸೂರು: ರಾಜರ ಕಾಲದ ವೈಭವ ನೆನಪಿಸುವ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು.
ಅರಮನೆಯ ಬಲರಾಮ ದ್ವಾರದಲ್ಲಿನ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಬಳಿಕ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು ಗಜರಾಜ ಅರ್ಜುನ ಹೊತ್ತಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ತೆರೆದ ವಾಹನದಲ್ಲಿ ಸಿದ್ದರಾಮಯ್ಯ ಅವರು ಚಿನ್ನದ ಅಂಬಾರಿ ಇರುವ ಕಡೆಗೆ ಸಾಗಿದರು. ಈ ವೇಳೆ ಸಿದ್ದರಾಮಯ್ಯ ಅವರಿಗೆ ಸಚಿವರಾದ ಹೆಚ್.ಸಿ ಮಹದೇವಪ್ರಸಾದ್ ಹಾಗೂ ಸಚಿವ ಸಂಪುಟದ ಹಲವರು ಸಾಥ್ ನೀಡಿದರು.
ಮೆರುಗಿನ ಮೆರವಣಿಗೆ: ವೀರಗಾಸೆ, ನಾದಸ್ವರ, ಮಂಗಳ ವಾದ್ಯ, ನೌಪತ್, ನಿಶಾನೆ ಆನೆಗಳು, ವಾದ್ಯ ವೃಂದ, ಫಿರಂಗಿ ಗಾಡಿಗಳು ಒಂದರ ಹಿಂದೆ ಒಂದರಂತೆ ಸಾಗಿದವು. ನಡುವೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಪ್ರಗತಿಯನ್ನು ಪ್ರತಿಬಿಂಬಿಸುವ ಜಾನಪದ ಕಲಾ ತಂಡಗಳು, ಸ್ತಬ್ಧ ಚಿತ್ರಗಳು ಸಾಗಿದವು. ಕಲಾವಿದರು ಸ್ವಲ್ಪವೂ ಆಯಾಸ ತೋರಿಸಿಕೊಳ್ಳದೆ ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ತುಂಬಿದರು.
ಅವುಗಳ ಹಿಂದೆ ನಾದಸ್ವರ, ಆನೆ ಗಾಡಿ, ಅಡ್ಡಪಲ್ಲಕ್ಕಿ, ಪಂಚ ಕಳಸ, ಅರಮನೆಯ ಗೌರವ ನಿಶಾನೆಗಳು, ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆಗಳು, ಇಂಗ್ಲಿಷ್ ಬ್ಯಾಂಡ್, ಪೊಲೀಸ್ ಅಶ್ವದಳ ಮುನ್ನಡೆದವು. ಇವುಗಳ ಹಿಂದೆ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ವಿಗ್ರಹ ಹೊತ್ತು ಗಜರಾಜ ಅರ್ಜುನ ತನ್ನ ಸಂಗಾತಿಗಳಾದ ಕಾವೇರಿ, ಮೇರಿ ಮತ್ತು ವರಲಕ್ಷ್ಮಿಯೊಂದಿಗೆ ಗಂಭೀರವಾಗಿ ಸಾಗಿದ.
ಎಂದಿನಂತೆ ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 30 ಜಿಲ್ಲೆಗಳ ಸುಮಾರು 45ಕ್ಕೂ ಸ್ತಬ್ಧ ಚಿತ್ರಗಳನ್ನು ಕಾಣಬಹುದಾಗಿದೆ. ಆಯಾ ಜಿಲ್ಲೆಗಳ ಪ್ರಮುಖ ಆಕರ್ಷಣಿಯ ಪ್ರವಾಸಿ ಕ್ಷೇತ್ರಗಳ ವಿವಿಧ ಕಾಲಾಕೃತಿಯ ಚಿತ್ರಗಳು ಪ್ರದರ್ಶನಗೊಂಡವು. ನಾಡಿನ ಪ್ರಮುಖ ಕುಣಿತ ಪ್ರಕಾರಗಳಾದ ಡೊಳ್ಳು ಕುಣಿತ, ಕಂಸಾಳೆ ಕುಣಿತ, ಬೀಸೂ ಕಂಸಾಳೆ ಕುಣಿತ, ಗೊಂಬೆ ಕುಣಿತ, ವೀರಗಾಸೆ, ಗೀಗೀಪದ, ತಮಟೆ ನಗಾರಿ ಮತ್ತು ಲಂಬಾಣಿ ನೃತ್ಯಗಳು ಪ್ರದರ್ಶನಗೊಂಡವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


