ಬಗ್ಗು ಬಡಿತೇವೆ

ನವದೆಹಲಿ: 'ಪಾಕಿಸ್ತಾನ ತನ್ನ ದುಸ್ಸಾಹಸ ಮುಂದುವರಿಸಿದ್ದೇ ಆದಲ್ಲಿ, ಅವರಿಗೆ ತಡೆದುಕೊಳ್ಳಲಾರದಂಥ ಉತ್ತರ ನೀಡುತ್ತೇವೆ'.
ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಾ, ಭಾರತೀಯ ನಾಗರಿಕರ ಸಾವು-ನೋವಿಗೆ ಕಾರಣವಾಗುತ್ತಿರುವ ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ನೀಡಿದ ಖಡಕ್ ಎಚ್ಚರಿಕೆಯಿದು.
ಭಾರತೀಯ ಸೇನಾಪಡೆಯ ಸಹನೆಯನ್ನು ಕೆಣಕಿರುವ ಪಾಕ್ ಪಡೆಗೆ ಗುರುವಾರ ತಿರುಗೇಟು ನೀಡಿದ ಜೇಟ್ಲಿ, 'ಪಾಕಿಸ್ತಾನ ಸೇನಾಪಡೆಯು ಅಪ್ರಚೋದಿತ ಗುಂಡಿನ ದಾಳಿಯನ್ನು ನಿಲ್ಲಿಸದೇ ಹೋದರೆ, ಅದಕ್ಕೆ ಅವರು ಸರಿಯಾದ ಬೆಲೆ ತೆರಬೇಕಾಗುತ್ತದೆ. ಆ ಬೆಲೆ ಎಷ್ಟಿರುತ್ತದೆಂದರೆ ಅವರಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೂ ಇರಲಾರದು' ಎಂದಿದ್ದಾರೆ. ಜತೆಗೆ, ಭಾರತವು ಜವಾಬ್ದಾರಿಯುತ ರಾಷ್ಟ್ರ. ಅದು ಎಂದಿಗೂ ಆಕ್ರಮಣಕಾರಿ ಪ್ರವೃತ್ತಿ ಹೊಂದಿಲ್ಲ. ಆದರೆ ಪಾಕಿಸ್ತಾನವು ದುರಾಕ್ರಮಣಕಾರಿ ದೇಶ ಎಂದ ಜೇಟ್ಲಿ ತನ್ನ ನಾಗರಿಕರನ್ನು ಮತ್ತು ಗಡಿಯನ್ನು ರಕ್ಷಿಸುವುದು ಭಾರತದ ಪರಮ ಕರ್ತವ್ಯ ಎಂದೂ ಹೇಳಿದ್ದಾರೆ.
ಯೋಧರೇ ಉತ್ತರ ನೀಡುತ್ತಿದ್ದಾರೆ: ಇದಕ್ಕೂ ಮುನ್ನ ಮಾತನಾಡಿದ ಗೃಹ ಸಚಿವ ರಾಜನಾಥ್ಸಿಂಗ್, ಗಡಿಯಲ್ಲಿನ ವಿದ್ಯಮಾನಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಗಮನವಿಟ್ಟಿದ್ದಾರೆ. ಆದರೆ ಈ ವಿಚಾರವಾಗಿ ಪ್ರಧಾನಿ ಏನೂ ಮಾತನಾಡಬೇಕಾಗಿಲ್ಲ. ಏಕೆಂದರೆ ನಮ್ಮ ಬಿಎಸ್ಎಫ್ ಯೋಧರು ಪಾಕ್ಗೆ ಸರಿಯಾದ ಉತ್ತರವನ್ನು ನೀಡುತ್ತಿದ್ದಾರೆ. ಇವರ ಕಾರ್ಯ ಸರ್ಕಾರಕ್ಕೆ ನೆಮ್ಮದಿ ತಂದಿದೆ ಎಂದಿದ್ದಾರೆ.
ರಾಜಕೀಯ ಮಾಡಬೇಡಿ
ಕದನ ವಿರಾಮ ಉಲ್ಲಂಘನೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಈ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ. ಇದರಿಂದ ಯೋಧರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ಹೇಳಿದ್ದಾರೆ. ಈಗ ಸಮಯ ಬದಲಾಗಿದೆ. ಅವರ ಹಳೆಯ ಚಾಳಿಯನ್ನು ನಾವು ಸಹಿಸಿಕೊಳ್ಳುವುದಿಲ್ಲ ಎಂದು ಶತ್ರುಗಳಿಗೂ ಗೊತ್ತು. ಜನರಿಗೂ ನನ್ನ ಉದ್ದೇಶ ಗೊತ್ತು. ಅದನ್ನು ನಾನು ಹೇಳಬೇಕಾಗಿಲ್ಲ. ಅಲ್ಲಿ ಅವರು ಟ್ರಿಗರ್ ಮೇಲೆ ಬೆರಳುಗಳನ್ನಿಟ್ಟು ಮಾತನಾಡುತ್ತಿದ್ದಾರೆ. ಇನ್ನೂ ಹೀಗೇ ಮಾತಾಡುತ್ತಾರೆ ಎಂದಿದ್ದಾರೆ ಮೋದಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


